ಇಂದು ಕಾಂಗ್ರೆಸ್ಸು ಮೋದಿಯ ಅನೇಕ ಕೆಲಸಗಳನ್ನು ತಾವೇ ಆರಂಭಿಸಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ. ಹೌದು, ಅನೇಕ ಯೋಜನೆಗಳು ಕಾಂಗ್ರೆಸ್ಸಿನಿಂದಲೇ ಆರಂಭಗೊಂಡವು. ಆದರೆ ಹಣವಿಲ್ಲದೇ ಆ ಯೋಜನೆಗಳೆಲ್ಲ ಸೊರಗಿದ್ದವು ಅಥವಾ ನಿಂತೇಹೋಗಿದ್ದವು. 9.25 ಕಿ.ಮೀ ಉದ್ದದ ಅಸ್ಸಾಂನ ಭೂಪೇನ್ ಹಜಾರಿಕಾ ಸೇತುವೆ 2003ರಲ್ಲಿ ಘೊಷಣೆಯಾಗಿದ್ದರೂ ಮುಗಿಸಿದ್ದು ಮೋದಿಯೇ. ದೆಹಲಿ-ಮೀರತ್ 96 ಕಿಮೀ ಎಕ್ಸ್ಪ್ರೆಸ್ವೇ 2006ರಲ್ಲಿ ಘೊಷಣೆಯಾಗಿದ್ದರೂ ಮುಗಿಸಿದ್ದು ಮೋದಿಯೇ. 1997ರಲ್ಲಿ ಘೊಷಣೆಯಾದ ಐದು ಕಿಮೀಗಳಿಗಿಂತಲೂ ಕಡಿಮೆಯ ಬೋಗಿಬೀಲ್ ಸೇತುವೆ ಪೂರ್ಣಗೊಳಿಸಿದ್ದು ಮೋದಿಯೇ. 2011ರಲ್ಲಿ ಘೊಷಣೆಯಾದ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ವೇಗವಾಗಿ ಮುನ್ನಡೆಯುತ್ತಾ ಮುಗಿಯುವ ಭರವಸೆ ಬಂದಿರುವುದು ಮೋದಿ ಅವಧಿಯಲ್ಲಿಯೇ.
ರಸ್ತೆಯಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿನದ್ದು ಇದೇ ಕಥೆ. 40 ವರ್ಷಗಳ ಹಿಂದೆ ಸರಯೂ ನೀರಾವರಿ ಯೋಜನೆ ರೂಪುಗೊಂಡಿತ್ತು. ಅದನ್ನು ಪೂರ್ಣಗೊಳಿಸಿ ಉದ್ಘಾಟಿಸಲು ನರೇಂದ್ರ ಮೋದಿಯೇ ಬರಬೇಕಾಯ್ತು. ಅಂದು ಮಾತನಾಡುತ್ತಾ, ಯೋಜನೆಗಳನ್ನು ಪೂರೈಸದೇ ಬಿಡುವುದರಿಂದ ಸಾರ್ವಜನಿಕರ ಹಣವನ್ನು ಪೋಲು ಮಾಡಿದಂತೆ ಎಂದು ಕಾಂಗ್ರೆಸ್ಸಿಗೆ ಛಾಟಿ ಏಟು ಕೊಟ್ಟಿದ್ದರು. ಇದು ಕಾಂಗ್ರೆಸ್ಸಿಗೆ ಗೊತ್ತಿರಲಿಲ್ಲವೆಂದೇನಲ್ಲ. 2011ರಿಂದ 14ರ ಅವಧಿಯಲ್ಲಿ ತಮ್ಮ ಯೋಜನೆಗಳೆಲ್ಲ ಮೂಲೆಗುಂಪಾಗುತ್ತಿರುವುದನ್ನು ಗಮನಿಸಿದ ಮನಮೋಹನ್ ಸಿಂಗರು ಹಳ್ಳಹಿಡಿದ 18 ಲಕ್ಷ ಕೋಟಿ ರೂಪಾಯಿಯಷ್ಟು ಯೋಜನೆಯನ್ನು ಚುರುಕುಗೊಳಿಸಲೆಂದೇ ಐಎಎಸ್ ಅಧಿಕಾರಿ ಅನಿಲ್ ಸ್ವರೂಪ್ ನೇತೃತ್ವದಲ್ಲಿ ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ರೂಪಿಸಿದರು. ಆನಂತರವೇ ಯೋಜನೆಗಳಲ್ಲಿ ಸ್ವಲ್ಪ ಚೈತನ್ಯ ಕಂಡಿದ್ದು.
ಆದರೀಗ ಹಾಗಿಲ್ಲ. ಪ್ರತೀ ಯೋಜನೆಯನ್ನೂ ಮುತುವರ್ಜಿಯಿಂದ ಗಮನಿಸಲಾಗುತ್ತದೆ. ವಿನಾಯಕ್ ಚಟರ್ಜಿ ಇನ್ಪಾ›ಸ್ಟ್ರಕ್ಚರ್ ಕನ್ಸಲ್ಟೆನ್ಸಿಯ ಮುಖ್ಯಸ್ಥರಾಗಿದ್ದು ಮೋದಿ ಕಾರ್ಯಶೈಲಿ ಕುರಿತಂತೆ ವಿವರಿಸಿದ್ದಾರೆ. ಮೊದಲ ಹಂತದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮತ್ತು ಲೆಕ್ಕಾಚಾರಗಳ ಸಚಿವಾಲಯ, ನಿಂತುಹೋದ ಯೋಜನೆಗಳ ಇಂದಿನ ಖರ್ಚು ವೆಚ್ಚಗಳ ಲೆಕ್ಕ ಹಾಕುತ್ತದಂತೆ. ಆನಂತರ ‘ಪ್ರಗತಿ’ ಎಂಬ ಮೋದಿ ತಂದ ಆಡಳಿತಾತ್ಮಕ ಸುಧಾರಣೆಯ ಪ್ರಯತ್ನದ ಫಲವಾಗಿ ಹುಟ್ಟಿಕೊಂಡ ಸಂಸ್ಥೆ, ಈ ಯೋಜನೆಗಿರಬಹುದಾದ ಅಡೆ-ತಡೆಗಳ ನಿವಾರಣೆಗೆ ಕ್ರಿಯಾಶೀಲವಾಗುತ್ತದಂತೆ. ‘ಪ್ರಗತಿ’ಯ ಸಭೆಯನ್ನು ಸ್ವತಃ ಮೋದಿಯವರೇ ನಿರ್ವಹಿಸುತ್ತಾರಲ್ಲದೇ ಅಗತ್ಯವಿದ್ದ ಸಲಹೆ, ಮಾರ್ಗದರ್ಶನಗಳನ್ನೂ ನೀಡುತ್ತಾರೆ. ಮೋದಿ ಈವರೆಗೆ ಸುಮಾರು 50 ಸಭೆಗಳನ್ನು ನಡೆಸಿದ್ದಾರೆ. ಮೂರನೇ ಹಂತದಲ್ಲಿ ಮನಮೋಹನ್ ಸಿಂಗ್ ರೂಪಿಸಿದ ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ಗಮನಿಸುತ್ತದೆ ಮತ್ತು ಯೋಜನೆಗಳು ಎಲ್ಲೂ ನಿಲ್ಲದಂತೆ ಅದನ್ನು ಮುಂದಕ್ಕೆ ತಳ್ಳುತ್ತದೆ. ಕೊನೆಯ ಹಂತದಲ್ಲಿ ನೀತಿ ಆಯೋಗ ಇಡಿಯ ಯೋಜನೆಯನ್ನು ಪರಿಪೂರ್ಣವಾಗಿ ಗಮನಿಸಿ ಸ್ವತಃ ಪ್ರಧಾನಮಂತ್ರಿಗೆ ವರದಿ ಕೊಡುತ್ತದಲ್ಲದೇ ಏನಾದರೂ ಸಮಸ್ಯೆ ಉಂಟಾಗಿ ಯಾವುದಾದರೂ ಯೋಜನೆಯನ್ನು ತಡೆಹಿಡಿಯಬೇಕಾದರೆ ಸಲಹೆ ನೀಡುತ್ತದೆ. ಕಾಂಗ್ರೆಸ್ನ ಡಾಟಾ ಅನಾಲಿಟಿಕ್ ವಿಂಗ್ನ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಸೂಕ್ಷ್ಮವಾಗಿ ಒಂದು ಮಾತು ಹೇಳುತ್ತಾರೆ. ಮೋದಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವುದು ನಿಜ. ಆದರೆ ಶ್ರೇಯದಲ್ಲಿ ಸ್ವಲ್ಪ ಪಾಲನ್ನು ನಮಗೂ ಕೊಡಬೇಕು. ಏಕೆಂದರೆ, ಈ ಯೋಜನೆಗಳ ಕನಸು ಕಟ್ಟಿದವರಲ್ಲಿ ನಾವೂ ಇದ್ದೆವಲ್ಲ ಎನ್ನುತ್ತಾರೆ. ಸುದೀರ್ಘಕಾಲ ಆಳ್ವಿಕೆ ನಡೆಸಿದ ಪಕ್ಷವೊಂದಕ್ಕೆ ಎಂತಹ ದೈನೇಸಿ ಸ್ಥಿತಿ ನೋಡಿ.
ರಸ್ತೆಗಳ ಅಭಿವೃದ್ಧಿಗೆಂದೇ ನರೇಂದ್ರಮೋದಿ 2021ರ ಅಕ್ಟೋಬರ್ನಲ್ಲಿ ಗತಿಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ (ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ) ರೂಪಿಸಿದರು. ಈ ಯೋಜನೆಯನ್ವಯ 16 ಕೇಂದ್ರ ಸಚಿವಾಲಯಗಳನ್ನು ಒಂದೆಡೆ ಕೂಡಿಸಿ ಸಮನ್ವಯ ಪ್ರಯತ್ನ ಮಾಡಲಾಗುತ್ತದೆ. ರೈಲ್ವೆ, ರಸ್ತೆ ಮತ್ತು ಹೆದ್ದಾರಿ, ಪೆಟ್ರೋಲಿಯಂ ಮತ್ತು ಗ್ಯಾಸ್, ವಿದ್ಯುತ್ತು, ಸಂಪರ್ಕ, ಸಮುದ್ರಯಾನ, ವಿಮಾನಯಾನ ಇವೆಲ್ಲಕ್ಕೂ ಸಂಬಂಧಪಟ್ಟ ಸಚಿವಾಲಯಗಳನ್ನು ಪರಸ್ಪರ ಸಂಪರ್ಕದಲ್ಲಿರುವಂತೆ ಮಾಡಿ ಏಕಕಾಲಕ್ಕೆ ಭಾರತ್ವಾಲಾ, ಸಾಗರ್ವಾಲಾ, ಉಡಾನ್, ರೈಲು ಜಾಲ ಮತ್ತು ಜಲಮಾರ್ಗ ಅಭಿವೃದ್ಧಿ ಇವೆಲ್ಲದರ ಕುರಿತಂತೆ ಗಮನವೀಯಲಾಗುತ್ತದೆ. ಒಂದು ಸಚಿವಾಲಯಕ್ಕೆ ಮತ್ತೊಂದು ಸಚಿವಾಲಯದಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಒಂದೇ ಛತ್ರದಡಿ ಪರಿಹರಿಸಲು ಇದು ಸಹಕರಿಸುತ್ತದೆ ಕೂಡ. ಮೋದಿ ಪ್ರತೀ ಸಚಿವಾಲಯಕ್ಕೂ ನಿಶ್ಚಿತ ಗುರಿ ನೀಡಿದ್ದಾರೆ. ರಸ್ತೆಗಳು 2025ರ ವೇಳೆಗೆ ಎರಡು ಲಕ್ಷ ಕಿ.ಮೀ ಗುರಿ ಮುಟ್ಟಿರಬೇಕು. 200 ಹೊಸ ವಿಮಾನ ನಿಲ್ದಾಣಗಳು ಸಿದ್ಧಗೊಳ್ಳಬೇಕು. ರೈಲಿನ ಮೂಲಕ ಸಾಗಿಸುವ ವಸ್ತುಗಳ ಪ್ರಮಾಣ 1600 ಟನ್ಗೆ ಏರಲ್ಪಡಬೇಕು. ವಿದ್ಯುತ್ ಜಾಲ ನಾಲ್ಕೂವರೆ ಲಕ್ಷ ಸರ್ಕ್ಯೂಟ್ ಕಿ.ಮೀಗಳಷ್ಟಾಗಬೇಕು. 20 ಹೊಸ ಫುಡ್ಪಾರ್ಕ್, 11 ಇಂಡಸ್ಟ್ರಿಯಲ್ ಕಾರಿಡಾರ್ಗಳು, ಇವಲ್ಲದೇ ಇನ್ನೂ ಅನೇಕ ಗುರಿಯನ್ನು ಹಾಕಿಕೊಂಡು ಈ ಗತಿಶಕ್ತಿ ಕೆಲಸ ಮಾಡುತ್ತಿದೆ. ಒಟ್ಟಾರೆ ಇದಕ್ಕಾಗಿ 100 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಾಗಿಡಬೇಕು ಎಂದು ಪ್ರಧಾನಮಂತ್ರಿ ನಿಶ್ಚಯಿಸಿದ್ದಾರೆ. ಮುಂದಿನ ಅವಧಿಗೆ ಬರುವ ವೇಳೆಗೆ ಭಾರತದಲ್ಲಿ ಉತ್ಪಾದನೆಗೊಂಡ ವಸ್ತುಗಳು ಮಾರುಕಟ್ಟೆ ತಲುಪುವಲ್ಲಿ ಸಾಗಾಣಿಕೆಯ ವೆಚ್ಚ ಅಂತಾರಾಷ್ಟ್ರೀಯ ಮಟ್ಟದ ಸಮಸಮಕ್ಕೆ ಬರಬೇಕು ಎಂಬುದು ಅವರ ಕನಸು. ಈಗ ಭಾರತದಲ್ಲಿ ಈ ವೆಚ್ಚ ಜಿಡಿಪಿಯ ಶೇಕಡಾ 12ರಷ್ಟಿದೆ. ಇದನ್ನು ಶೇಕಡಾ 8ಕ್ಕಿಳಿಸುವುದು ಬಲುದೊಡ್ಡ ಗುರಿ. ಈ ಗತಿಶಕ್ತಿಯ ಚಾಲನೆಗೆಂದು ಮೋದಿ ಸಮರ್ಥ ತಂಡವನ್ನು ನಿರ್ವಿುಸಿದ್ದಾರೆ. ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳು ಸೇರಿರುವ ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದ ತಂಡ ಮೇಲ್ಮಟ್ಟದಲ್ಲಿದ್ದು ಅದರಡಿಯಲ್ಲಿ ನೆಟ್ವರ್ಕ್ ಪ್ಲಾನಿಂಗ್ ಗ್ರೂಪ್ ಮತ್ತು ಟೆಕ್ನಿಕಲ್ ಸಪೋರ್ಟ್ ಯುನಿಟ್ಗಳಿವೆ. ಮತ್ತು ಅವರೆಲ್ಲ ನೇರ ಮೋದಿಯವರಿಗೇ ವರದಿ ಒಪ್ಪಿಸಬೇಕು. ಸ್ವತಃ ಅವರೇ ಈ ಸಭೆಗಳ ಅಧ್ಯಕ್ಷತೆ ವಹಿಸುವುದರಿಂದ ಸಣ್ಣ ವಿವರವೂ ಅವರ ಕಣ್ತಪ್ಪಿ ಹೋಗಲಾಗದು. ಇದರಿಂದಾಗಿಯೇ ದೇಶದಾದ್ಯಂತ ರಸ್ತೆಗಳಲ್ಲದೇ ರೈಲು ಹಳಿಗಳ ಕೆಲಸ, ಏರ್ಪೋರ್ಟ್ಗಳ ನಿರ್ಮಾಣ ಇವೆಲ್ಲವೂ ಭರದಿಂದಲೇ ಸಾಗುತ್ತಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರಲ್ಲಿ ಸುಮಾರು 25,000 ಕಿ.ಮೀನಷ್ಟು ರಾಷ್ಟ್ರೀಯ ಹೆದ್ದಾರಿ ರಾಷ್ಟ್ರದ ಉದ್ದಗಲಕ್ಕೂ ಹರಡಿಕೊಳ್ಳಲಿದೆ ಎಂದಿದ್ದಾರೆ. ದೇಶದ ಯಾವ ರಾಜ್ಯಕ್ಕೆ ಹೋದರೂ ಅಲ್ಲೀಗ ರಸ್ತೆಗಳ ಕೆಲಸ ಭರದಿಂದ ನಡೆಯುತ್ತಿದೆ. ಅದು ಎಕ್ಸ್ಪ್ರೆಸ್ವೇ ಇರಲಿ, ರಾಷ್ಟ್ರೀಯ ಹೆದ್ದಾರಿಯೇ ಇರಲಿ, ಅಥವಾ ಹಳ್ಳಿಗಳನ್ನು ಮುಖ್ಯರಸ್ತೆಗೆ ಬೆಸೆಯುವ ಕಾರ್ಯವೇ ಇರಲಿ, ಭಾರತ ಪರ್ವಕಾಲದ ಮೂಲಕ ಹಾದುಹೋಗುತ್ತಿದೆ. ನರೇಂದ್ರಮೋದಿ ‘ಅಮೃತಕಾಲ’ವೆಂದು ಸುಮ್ಮಸುಮ್ಮನೆ ಕರೆದಿಲ್ಲ.
ಇದನ್ನೂ ಓದಿ: ಬಾಯ್ಬಿಟ್ಟು ಕೆಟ್ಟಳು ಕಿಡ್ನ್ಯಾಪ್ ಮಾಡಿದ್ದ ಮಹಿಳೆ; ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತು ‘ಹಾಲು-ಉಪ್ಪಿಟ್ಟು’!
ಯೋಜನೆಗಳನ್ನೇನೋ ಘೊಷಿಸಿಬಿಡುತ್ತಾರೆ. ಆದರೆ ಹಣ ಎಲ್ಲಿಂದ ತರಬೇಕು? ಮೋದಿಯವರು ಜಾಗತಿಕ ಮಟ್ಟದಲ್ಲಿ ಮೂಡಿಸಿರುವ ವಿಶ್ವಾಸ ಮತ್ತು ತಮ್ಮ ಚಾತುರ್ಯವನ್ನು ಬಳಸಿಕೊಂಡ ನಿತಿನ್ ಗಡ್ಕರಿ ಹೊಸ ಹೊಸ ಮಾರ್ಗಗಳನ್ನು ಬಳಸಿ ರಸ್ತೆಗಳ ಅಭಿವೃದ್ಧಿಗೆ ಹಣ ತಂದರು. 2017ರ ಮೇ ತಿಂಗಳಲ್ಲಿ ಲಂಡನ್ನಿನ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಭಾರತದ ಹೈವೇ ಅಥಾರಿಟಿ ಮಸಾಲಾ ಬಾಂಡ್ಗಳನ್ನು ಬಿಡುಗಡೆ ಮಾಡಿತು. ಇದರಿಂದ 1500 ಕೋಟಿ ರೂಪಾಯಿ ಸಂಗ್ರಹದ ಗುರಿ ಹೊಂದಿದ್ದರೆ ಸಂಗ್ರಹಗೊಂಡ ಹಣ 3000 ಕೋಟಿಯನ್ನು ದಾಟಿತು. ಏಷ್ಯಾದ ರಾಷ್ಟ್ರಗಳೇ ಶೇಕಡಾ 60ರಷ್ಟು ಹೂಡಿಕೆ ಮಾಡಿದ್ದವು. ಇದಲ್ಲದೇ ರಸ್ತೆಗಳನ್ನು ಟೋಲ್-ಆಪರೇಟ್-ಟ್ರಾನ್ಸ್ಫರ್ ಅಂದರೆ ಟೋಲ್ ಬೂತುಗಳನ್ನು ಹಾಕಿ, ಹಣ ಸಂಗ್ರಹಿಸಿ, ಆನಂತರ ರಸ್ತೆಗಳನ್ನು ರಾಷ್ಟ್ರಕ್ಕೆ ಮರಳಿ ಕೊಡುವ ಯೋಜನೆ ರೂಪಿಸಲಾಯ್ತು. ಮೊದಲ ಹಂತದಲ್ಲಿ ಆಂಧ್ರ ಮತ್ತು ಗುಜರಾತುಗಳಲ್ಲಿನ ಒಂಬತ್ತು ಯೋಜನೆಗಳನ್ನು ಮ್ಯಾಕರಿ ಕಂಪನಿಗೆ 9681 ಕೋಟಿಗೆ ಮಾರಲಾಯ್ತು. ಇದು ನಮ್ಮ ಹೈವೇ ಅಥಾರಿಟಿ ಅಂದುಕೊಂಡದ್ದಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿತ್ತು. ಹೈವೇ ಅಥಾರಿಟಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಳು ಒಪ್ಪಂದ ಮಾಡಿಕೊಂಡು ಹತ್ತು ವರ್ಷಗಳಿಗೆ 25 ಸಾವಿರ ಕೋಟಿ ರೂಪಾಯಿಯನ್ನು ಸಾಲವಾಗಿ ಪಡೆಯಿತು. ದುಡ್ಡಿನ ಬಳಕೆ ಸೂಕ್ತವಾಗಿ ಆಗಬೇಕಲ್ಲದೇ, ವೇಗವಾಗಿ ಹೆದ್ದಾರಿ ಕೆಲಸಗಳೂ ನಡೆಯಬೇಕು. ಅದಕ್ಕಾಗಿ ರಸ್ತೆ ನಿರ್ಮಾಣ ಸಚಿವಾಲಯಕ್ಕೆ ಒಂದು ಸಾವಿರ ಕೋಟಿ ರೂಪಾಯಿವರೆಗಿನ ನಿರ್ಣಯವನ್ನು ನೇರವಾಗಿ ಕೈಗೊಳ್ಳಬಹುದಾದ ಅನುಮತಿ ನೀಡಲಾಯ್ತು. ಹಿಂದೆ ಅದು 500 ಕೋಟಿಯಷ್ಟಿತ್ತು. ಸಚಿವಾಲಯವು ಹೈವೇ ಅಥಾರಿಟಿಗೂ ಇದೇ ರೀತಿ ಅಧಿಕಾರವನ್ನು ವಿಸ್ತರಿಸಿದ್ದರಿಂದ ನಿರ್ಣಯ ತೆಗೆದುಕೊಳ್ಳಲು ಕಾಯಬೇಕಾದ ಪ್ರಸಂಗವಿರಲಿಲ್ಲ. ಭಿನ್ನ-ಭಿನ್ನ ಸಚಿವಾಲಯಗಳ ನಡುವೆ ಸಮನ್ವಯದಿಂದ ಅನೇಕ ಅಡೆತಡೆಗಳು ಆಗಿಂದಾಗ್ಯೆ ನಿವಾರಣೆಯಾಗುತ್ತಿದ್ದವು.
ಭಾರತ್ವಾಲಾ ಯೋಜನೆಯಡಿ ಶೇ. 10ರಷ್ಟು ಹಣವನ್ನು ರಾಜ್ಯ ಸರ್ಕಾರಗಳಿಗೆಂದು ಮೀಸಲಾಗಿಟ್ಟು ಭೂಸ್ವಾಧೀನ ಕೆಲಸಕ್ಕೆ ವೇಗ ತುಂಬಿದ್ದರಿಂದ ಅತ್ಯಂತ ಪ್ರಮುಖವಾದ ಕೆಲಸವನ್ನು ಬೇಗಮಾಡಿ ಮುಗಿಸುವಲ್ಲಿ ಸಹಕಾರಿಯಾಯ್ತು. ‘ಭೂಮಿರಾಶಿ’ ಎಂಬ ಅಂತರ್ಜಾಲ ವ್ಯವಸ್ಥೆ ರೂಪಿಸಿ ಎಲ್ಲವನ್ನೂ ತಂತ್ರಜ್ಞಾನದ ಅಡಿಯಲ್ಲಿ ಬೆಸೆಯಲಾಯ್ತು. 2015-16ರಲ್ಲಿ ರಸ್ತೆ ನಿರ್ವಣಕ್ಕೆಂದು 6432 ಹೆಕ್ಟೇರ್ಗಳಷ್ಟು ಭೂಮಿಯನ್ನು ಸರ್ಕಾರ ತೆಕ್ಕೆಗೆ ತೆಗೆದುಕೊಂಡಿದ್ದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಈ ಪ್ರಮಾಣ 2,63,000 ಹೆಕ್ಟೇರ್ಗಳನ್ನು ದಾಟಿತು. ಭೂಮಿಯನ್ನು ಗುರುತಿಸಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಮೊದಲು ಮೂರ್ನಾಲ್ಕು ತಿಂಗಳು ತಾಕುತ್ತಿತ್ತು, ಈಗ ಅದು ಎರಡು ದಿನಕ್ಕೆ ಬಂದಿದೆ. ಬಿಡ್ಡರ್ ಇನ್ಪರ್ಮೇಶನ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಜಾರಿಗೆ ತಂದ ನಂತರ ಗುತ್ತಿಗೆ ಸೇರಿ ಒಟ್ಟಾರೆ ಪ್ರಕ್ರಿಯೆ ಬಲು ಪಾರದರ್ಶಕವಾಗಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳ ನಿರ್ವಣದ ಮುನ್ನೆಚ್ಚರಿಕೆಗಳ ಕುರಿತಂತೆ ಸೂಕ್ತಮಾರ್ಗದರ್ಶನವನ್ನು ಗೊಂದಲಕ್ಕೆಡೆಯಿಲ್ಲದಂತೆ ರೂಪಿಸಲಾಗಿದೆ.
ಚುನಾವಣೆ ಹತ್ತಿರ ಬಂತು. ಮತಹಾಕುವ ಮುನ್ನ ಒಮ್ಮೆ ಉಚಿತ ಭಾಗ್ಯಗಳನ್ನು ನೀಡುತ್ತ ಜನರ ದುಡ್ಡನ್ನು ಪೋಲು ಮಾಡುವ ಮಂದಿಯನ್ನೂ, ಅಭಿವೃದ್ಧಿಯ ಮೂಲಕ ಜನರ ಭಾಗ್ಯದ ಬಾಗಿಲನ್ನು ತೆರೆಯುವ ಮೋದಿಯನ್ನೂ ಒಮ್ಮೆ ನೆನಪಿಸಿಕೊಳ್ಳಿ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)