ನಾವಿಂದು ನೀರನ್ನು ಕೇವಲ ಬಾಯಾರಿಕೆ ನೀಗಲು, ಜೀವನಾಧಾರ ದ್ರವವಾಗಿ ಸ್ವೀಕರಿಸುತ್ತೇವೆ. ಇಲ್ಲಿಂದ ಮುಂದಕ್ಕೆ ನಮ್ಮ ಆಲೋಚನೆ ಹೋಗುವುದೇ ಇಲ್ಲ. ಆದರೆ ನೀರನ್ನು ಸ್ವಾಸ್ಥ್ಯ ಪಾಲನೆಯ ಜೊತೆಗೆ ರೋಗನಿವಾರಕವಾಗಿಯೂ ಉಪಯೋಗಿಸುವ ಜಾಣ್ಮೆ ಪ್ರಾಚೀನ ವೈದ್ಯವಿಜ್ಞಾನಿ ಋಷಿಗಳಿಗೆ ಹಾಗೂ ಪೂರ್ವಜರಿಗೆ ಇತ್ತೆಂಬುದು ಅಚ್ಚರಿಯ ವಿಚಾರವೇ. ಸರಳವಾಗಿ ಹೇಳುವುದಾದರೆ ಬಿಸಿನೀರೆಂದರೆ ಸಂಸ್ಕೃತದಲ್ಲಿ ಉಷ್ಣೋದಕ. ನೀರನ್ನು ಅರ್ಧವಾಗುವ ತನಕ ಗುಳ್ಳೆಗಳು ಬಾರದಂತೆ ಸಣ್ಣ ಉರಿಯಲ್ಲಿ ನಿಧಾನವಾಗಿ ಕುದಿಸಿ ಬತ್ತಿಸಿದ ನಿರ್ಮಲ ನೀರಿಗೆ ಬಿಸಿನೀರು ಎನ್ನಲಾಗಿದೆ. ಇದು ಕಫ, ಕೊಬ್ಬು, ವಾತ ಕಡಿಮೆಗೊಳಿಸುವುದಲ್ಲದೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮೂತ್ರಾಶಯ, ಮೂತ್ರನಾಳಗಳನ್ನು ಶುದ್ಧವಾಗಿರಿಸಿ, ಕೆಮ್ಮು, ಅಸ್ತಮಾ, ಜ್ವರಗಳನ್ನು ಗುಣಪಡಿಸಲು ಶಕ್ತವಾಗಿರುವುದರಿಂದ ಸದಾ ಪಥ್ಯ ಎಂದು ಬಣ್ಣಿಸಲಾಗಿದೆ. ಕುದಿಸುವಾಗ ಕಾಲು ಭಾಗ ಆವಿಯಾಗಿ ಮುಕ್ಕಾಲು ಭಾಗ ಉಳಿಸಿದರೆ ನರಸಂಬಂಧೀ ವಾತರೋಗಗಳಲ್ಲಿ, ಅರ್ಧವಾಗುವ ತನಕ ಕುದಿಸಿದರೆ ಪಿತ್ತ ಹಾಗೂ ವಾತ ರೋಗಗಳಲ್ಲಿ, ಕಾಲು ಭಾಗ ಉಳಿಯುವ ತನಕ ಬತ್ತಿಸಿದರೆ ಮೂರೂ ದೋಷಗಳ ನಿವಾರಕವಾಗಿ ಕೆಲಸ ಮಾಡುತ್ತದೆ. ಬಿಸಿಯಾಗಿ ಕೆಂಪಾದ ಕಬ್ಬಿಣ ಅಥವಾ ಕಲ್ಲನ್ನು ನೀರಿನಲ್ಲಿ ಅದ್ದಿದಾಗ ಬೆಚ್ಚಗಾದ ನೀರು ಮೂರು ದೋಷಗಳ ವ್ಯತ್ಯಯವಾಗಿದ್ದಾಗ ಉಪಯುಕ್ತವಾಗಿದ್ದು ಶರೀರಕ್ಕೆ ಪಥ್ಯವಾಗಿರುತ್ತದೆ. ಒಣಶುಂಠಿಯೊಂದಿಗೆ ಕುದಿಸಿದ ನೀರು ಕಫಸಂಬಂಧೀ ರೋಗಗಳಲ್ಲಿ, ಓಮದೊಂದಿಗೆ ಕುದಿಸಿದ ನೀರು ವಾತ ರೋಗಗಳಲ್ಲಿ ಹಿತಕರವಾಗಿದೆ. ಪಿತ್ತದ ವ್ಯಾಧಿಗಳಲ್ಲಿ ಬಿಸಿನೀರಿಗಿಂತ ತಣ್ಣೀರೇ ಉಚಿತ. ಹಾಗೆಂದು ತಣ್ಣೀರು ಎಲ್ಲಾ ರೋಗಿಗಳಿಗೂ ಹಿತವಲ್ಲ. ಋತುಕಾಲಕ್ಕೆ ಅನುಗುಣವಾಗಿ ನೀರನ್ನು ಕುದಿಸುವುದೂ ಸ್ವಾಸ್ಥ್ಯಪಾಲನೆಗೆ ಸಹಾಯಕ.
ಮಳೆಗಾಲದಲ್ಲಿ ಹಾಗೂ ಅದು ಕಳೆದ ಬಳಿಕ ಬರುವ ಶರದ್ ಋತುವಿನಲ್ಲಿ ನೀರನ್ನು ಎಂಟನೇ ಒಂದಂಶಕ್ಕೆ ಬತ್ತಿಸಿ ಕುಡಿದರೆ ಒಳ್ಳೆಯದು. ಚಳಿಗಾಲದ ಪ್ರಾರಂಭದಲ್ಲಿ ಕಾಲು ಭಾಗ, ನಂತರ ಬರುವ ಶಿಶಿರ, ವಸಂತಋತು ಹಾಗೂ ಬೇಸಿಗೆಯಲ್ಲಿ ಅರ್ಧಭಾಗ ಆಗುವವರೆಗೆ ಕುದಿಸಿ ಸೇವಿಸುವುದು ಪ್ರಶಸ್ತವಾಗಿದೆ. ಹಗಲು ಕುದಿಸಿಟ್ಟ ನೀರು ರಾತ್ರಿ, ರಾತ್ರಿ ಕುದಿಸಿಟ್ಟ ನೀರು ಬೆಳಗಿನ ಜಾವಕ್ಕೆ ಜೀರ್ಣಕ್ಕೆ ಸ್ವಲ್ಪಕಷ್ಟಕರವಾಗುವ ಕಾರಣದಿಂದ ಅದನ್ನು ಕುಡಿಯಲು ಬಳಸಬಾರದು. ರಾತ್ರಿಯ ಸಮಯದಲ್ಲಿ ಬಿಸಿನೀರು ಸೇವಿಸಿದರೆ ಮಲಪ್ರವೃತ್ತಿಗೆ ಅನುಕೂಲ. ಅಲ್ಲದೆ ವಾತಕಡಿಮೆಗೊಳಿಸಿ ಅಜೀರ್ಣವನ್ನು ಬೇಗನೆ ಸರಿಪಡಿಸುತ್ತದೆ. ಹೊಟ್ಟೆಯ ಗಡ್ಡೆಗಳು, ಮೂಲವ್ಯಾಧಿ, ಅತಿಮಲ ಪ್ರವೃತ್ತಿಯ ಗ್ರಹಣೀರೋಗ, ಕ್ಷಯರೋಗ, ಯಕೃತ್, ಮೂತ್ರಪಿಂಡದ ರೋಗಗಳು, ಮಂದ ಜೀರ್ಣಶಕ್ತಿ, ಹೊಟ್ಟೆಯುಬ್ಬರ, ಶರೀರದ ಅಂಗಾಂಗಗಳಲ್ಲಿ ನೀರು ತುಂಬಿದಾಗ, ರಕ್ತಹೀನತೆ, ಗಂಟಲು ತೊಂದರೆ, ನೇತ್ರರೋಗಗಳು, ಗಾಯವಾಗಿದ್ದಾಗ, ಮೂತ್ರಸಂಬಂಧೀ ರೋಗಗಳು, ವಾತರೋಗ, ಬಾಯಿರುಚಿ ಇಲ್ಲದಾಗ, ಹೊಟ್ಟೆಯಲ್ಲಿ ಕಫ ತುಂಬಿದಾಗ, ಶೀತನೆಗಡಿಯಿದ್ದಾಗ ಕಾದಾರಿದ ಬಿಸಿನೀರನ್ನು ಅಲ್ಪಪ್ರಮಾಣದಲ್ಲಿ ಸೇವಿಸಬೇಕು. ತಣ್ಣೀರು ಜೀರ್ಣವಾಗಿ ಧಾತುಗತವಾಗಲು ಮೂರು ಘಂಟೆಗಳು ಬೇಕು, ಕುದಿಸಿ ಆರಿಸಿ ತಣ್ಣಗಾದ ನೀರಿಗೆ ಒಂದೂವರೆ ಘಂಟೆ ಬೇಕು, ಶುಂಠಿ ಮೊದಲಾದವುಗಳನ್ನು ಹಾಕಿ ತಯಾರಿಸಿದ ಬಿಸಿನೀರು ತಣ್ಣಗಾದಾಗ ಕುಡಿದರೆ ಪಚನವಾಗಲು ಮುಕ್ಕಾಲು ಘಂಟೆ ಸಾಕು. ಆರೋಗ್ಯಕ್ಕೆ ಒಳ್ಳೆಯದೆಂದು ಭಾವಿಸಿ ದಿನದಲ್ಲಿ ಮೂರ್ನಾಲ್ಕು ಲೀಟರ್ನಷ್ಟು ನೀರು ಕುಡಿಯುವವರೂ ಇದ್ದಾರೆ. ಅತಿಯಾಗಿ ನೀರನ್ನು ಸೇವಿಸಿದರೆ ಆಮ ಉಂಟಾಗಿ, ಜೀರ್ಣಶಕ್ತಿ ಕುಂದಿ ಅಜೀರ್ಣವಾಗಿ, ಅಜೀರ್ಣದಿಂದ ಜ್ವರ, ಜ್ವರದಿಂದ ದುರ್ಬಲ ಶರೀರ, ಪರಿಣಾಮವಾಗಿ ಶರೀರದ ಧಾತುಗಳು ಕ್ಷೀಣವಾಗುತ್ತವೆ. ಅಂತಿಮವಾಗಿ ಎಲ್ಲ ರೋಗಗಳಿಗೂ ಇದು ನಾಂದಿ ಹಾಡುತ್ತದೆ ಎಂಬುದಾಗಿ ಆಯುರ್ವೆದ ಎಚ್ಚರಿಸುತ್ತದೆ. ಆಯುರ್ವೆದದ ಯೋಗರತ್ನಾಕರ ಗ್ರಂಥದಲ್ಲಿ ಬಿಸಿನೀರಿನ ಕುರಿತಾಗಿರುವ ವಿವರವಾದ ವಿವರಣೆಗಳು ವಿದ್ವತ್ಪೂರ್ಣವಾಗಿದೆ.