ಅಂಕಣ

ಸಂಪಾದಕೀಯ: ಎಐ ಫೇಕ್​ಗೆ ಕಡಿವಾಣ

ಕಳೆದ ಕೆಲವು ವರ್ಷಗಳಿಂದೀಚೆಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಫೋಟೋಗಳು, ವಿಡಿಯೋಗಳು ಇಡೀ ದೇಶದಲ್ಲಿ ಹಾವಳಿ ಎಬ್ಬಿಸಿವೆ. ಉಚಿತವಾಗಿ ಅಥವಾ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಐ ಆಪ್​ಗಳಿಂದಾಗಿ ಯಾರು ಬೇಕಾದರೂ ಎಷ್ಟು ಬೇಕಾದರೂ ವಿಡಿಯೋಗಳನ್ನು, ಫೋಟೋಗಳನ್ನು ಮತ್ತು ಧ್ವನಿಯನ್ನು ಸೃಷ್ಟಿ ಮಾಡಿ ಇಂಟರ್​ನೆಟ್​ನಲ್ಲಿ ಅಪ್​ಲೋಡ್ ಮಾಡುವುದು ಸುಲಭವಾಗಿದೆ.

ಯೂಟ್ಯೂಬ್, ಇನ್​ಸ್ಟಾಗ್ರಾಂ, ಫೇಸ್​ಬುಕ್ ಮುಂತಾದ ಸಾಮಾಜಿಕ ವೇದಿಕೆಗಳಲ್ಲಿ ಖಾತೆಗಳ ಸಂಖ್ಯೆ, ಕಂಟೆಂಟ್​ನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಹಲವರಿಗೆ ಇದು ವ್ಯಾಪಾರ ವೃದ್ಧಿಗೆ ಮಾರ್ಗ ತೋರಿಸಿದೆ. ಜೀವನೋಪಾಯಕ್ಕೂ ದಾರಿ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಇನ್ನೊಂದು ಕರಾಳ ಮುಖವೂ ಇರುವುದು ಎಲ್ಲರನ್ನು ಚಿಂತೆಗೀಡು ಮಾಡಿದೆ.

ಎಐನಿಂದ ರೂಪಿಸಿದ ಡೀಪ್​ಫೇಕ್ ಫೋಟೋ-ವಿಡಿಯೋ-ಧ್ವನಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಆರ್ಥಿಕ ವಂಚನೆಗೆ, ಸುಳ್ಳು ಮಾಹಿತಿಯ ಪ್ರಸರಣಕ್ಕೆ ಕಾರಣವಾಗುತ್ತಿವೆ. ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಇತ್ತೀಚೆಗೆ ಈ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿರುವುದು ಶ್ಲಾಘನೀಯವಾಗಿದೆ. ಕಳೆದ ವಾರ ಕೇಂದ್ರ ಸರ್ಕಾರ ಈ ಸಂಬಂಧ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಐ ಜನರೇಟೆಡ್ ಕಂಟೆಂಟ್​ಗೆ ಲೇಬೆಲಿಂಗ್ ಮಾಡುವುದನ್ನು ಅದು ಕಡ್ಡಾಯಗೊಳಿಸಿದೆ.

ಇದರಿಂದ ಜನರಿಗೆ ಇದು ನೈಜ ಮಾಹಿತಿಯೋ, ಕೃತಕವಾಗಿ ಎಐನಿಂದ ತಯಾರಿಸಿರುವ ಮಾಹಿತಿಯೋ ಎಂಬುದು ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಫೋಟೋ-ವಿಡಿಯೋದಲ್ಲಿ ಆ ಲೇಬೆಲ್ ಎಲ್ಲೋ ಮೂಲೆಯಲ್ಲಿದ್ದರೆ ಆಗುವುದಿಲ್ಲ. ಇಡೀ ಕಂಟೆಂಟ್ ವಿಸ್ತೀರ್ಣದ ಶೇ. 10ರಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡಿರಬೇಕು. ಆಡಿಯೋ ಆಗಿದ್ದರೆ ಅದರ ಆರಂಭಿಕ ಶೇ. 10ರಷ್ಟು ಭಾಗದಲ್ಲಿ ಲೇಬೆಲಿಂಗ್ ಇರಬೇಕು. ಇದರಿಂದ ಸಾಮಾಜಿಕ ಜಾಲತಾಣಗಳು ಮತ್ತು ಕಂಟೆಂಟ್ ಕ್ರಿಯೇಟರ್​ಗಳಲ್ಲಿ ಹೊಣೆಗಾರಿಕೆ ಬೆಳೆಯುತ್ತದೆ. ಎಷ್ಟೇ ದೊಡ್ಡ ಕಂಪನಿಯಾದರೂ ಅದಕ್ಕೆ ಉತ್ತರದಾಯಿತ್ವ ಇರಬೇಕಾದದ್ದು ಅಗತ್ಯ. ಇದೇ ವೇಳೆ, ಯಾವುದಾದರೂ ಕಂಟೆಂಟ್​ಗಳು ಕಾನೂನಿಗೆ ವಿರುದ್ಧವಾಗಿದ್ದರೆ, ಮಾನಹಾನಿಕರವಾಗಿದ್ದರೆ ಅವುಗಳನ್ನು ತೆಗೆದುಹಾಕುವಂತೆ ಆದೇಶಿಸುವ ಅಧಿಕಾರ ಸಂಬಂಧಪಟ್ಟ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಇರಬೇಕಾಗುತ್ತದೆ.

ಇಲ್ಲದಿದ್ದರೆ ಇದೊಂದು ಅರಾಜಕತೆಯ, ಅಶಿಸ್ತಿನ ತಾಣವಾಗಿ ಮಾರ್ಪಾಡಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಆದರೆ ಲಕ್ಷಾಂತರ ವಿಡಿಯೋಗಳು, ಫೋಟೋಗಳ ಮೇಲೆ ನಿಗಾ ಇಡುವುದು ಮನುಷ್ಯಮಾತ್ರರಿಂದ ಸಾಧ್ಯವಿಲ್ಲ. ಈ ಕೆಲಸಕ್ಕೆ ಎಐ ಸೇರಿದಂತೆ ವಿವಿಧ ಆಧುನಿಕ ತಂತ್ರಜ್ಞಾನಗಳನ್ನೇ ಬಳಸಿಕೊಳ್ಳಬಹುದು. ಇದೆಲ್ಲದರ ನಿಗಾ ವಹಿಸುವ ಕಾರ್ಯವನ್ನು ರಾಷ್ಟ್ರ ಮಟ್ಟದ ನಿರ್ದಿಷ್ಟ ಸಂಸ್ಥೆಯೊಂದಕ್ಕೆ ವಹಿಸಬಹುದು. ತಪ್ಪಿತಸ್ಥರನ್ನು ಎಚ್ಚರಿಸುವ, ಪದೇಪದೆ ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಕಂಟೆಂಟ್ ಅಪ್​ಲೋಡ್ ಮಾಡುವವರನ್ನು ಶಿಕ್ಷಿಸುವ ವ್ಯವಸ್ಥೆ ಜಾರಿಯಾಗಬೇಕು.

ಈಗಾಗಲೇ ಎಐ ಡೀಪ್​ಫೇಕ್​ಗಳಿಂದ ಭಾರಿ ಅವಮಾನ ಅನುಭವಿಸಿರುವ ಹಲವಾರು ಗಣ್ಯ ವ್ಯಕ್ತಿಗಳು, ಸಾಮಾನ್ಯ ಜನರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ. ಸೂಕ್ತ ಮಾರ್ಗದರ್ಶನ ಸಿಗುವ ನಿರೀಕ್ಷೆಯೂ ಇದೆ. ಈ ಮಧ್ಯೆ, ಸರ್ಕಾರಗಳು ಕೂಡ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹವಾಗಿದೆ. ಎಐ ಎಂಬ ಅಸ್ತ್ರವು ನೈಜ, ಉಪಯುಕ್ತ, ಶೈಕ್ಷಣಿಕ, ಮನರಂಜನಾತ್ಮಕ ಕಂಟೆಂಟ್​ಗಳನ್ನೇ ಜನರಿಗೆ ನೀಡುವುದನ್ನು ಎಲ್ಲರೂ ಸೇರಿ ಖಚಿತಪಡಿಸಿಕೊಳ್ಳಬೇಕಾಗಿದೆ.