ಅಂಕಣ

ಸಾಧನೆಗಿಲ್ಲ ವಯಸ್ಸಿನ ಬಂಧನ!; ಇದಕ್ಕೆ ಇಬ್ಬರು ಅಜ್ಜಿಯಂದಿರೇ ಸಾಕ್ಷಿ

ಸಾಧನೆಗೆ ವಯಸ್ಸು ಅಡ್ಡಿಯಾಗುವುದೇ ಇಲ್ಲ ಎನ್ನುವುದಕ್ಕೆ ಇಲ್ಲಿರುವ ಇಬ್ಬರು ಅಜ್ಜಿಯಂದಿರೇ ಸಾಕ್ಷಿ. ಒಬ್ಬರು 90ನೇ ವಯಸ್ಸಿನಲ್ಲಿ ಉದ್ಯಮ ಶುರು ಮಾಡಿ ಪ್ರಸಿದ್ಧರಾದರೆ, ಇನ್ನೊಬ್ಬರು 105ನೇ ವಯಸ್ಸಿನಲ್ಲಿ ಅಕ್ಷರಾಭ್ಯಾಸ ಮಾಡಿ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಈ ಇಬ್ಬರು ಅಜ್ಜಿಯಂದಿರ ಬಗ್ಗೆ ಇಲ್ಲಿದೆ ವಿವರ.

ಲಡ್ಡುವಿನಿಂದ ಸಿಹಿಯಾದ ಬದುಕು

ಇಳಿ ವಯಸ್ಸಿನಲ್ಲಿ ಯಾವುದೇ ಕೆಲಸ ಮಾಡದೇ ಹಾಯಾಗಿ ಇರಬೇಕು ಎನ್ನುವುದು ಬಹುತೇಕರ ಆಸೆ. ಆದರೆ ಪಂಜಾಬ್​ನ ಅಜ್ಜಿಯೊಬ್ಬರು 90ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ, ಇದೀಗ ಯಶಸ್ವಿ ಉದ್ಯಮಿ ಎನಿಸಿದ್ದಾರೆ.

ಇವರ ಹೆಸರು ಹರ್ಭಜನ್ ಕೌರ್. ಈಗ ಅವರ ವಯಸ್ಸು 94. ನಾಲ್ಕು ವರ್ಷಗಳಿಂದ ಬೇಸನ್ ಬರ್ಫಿ ತಯಾರಿಸಿ ಅದನ್ನು ಮಾರಾಟ ಮಾಡುವ ಮೂಲಕ ಚಿಕ್ಕದೊಂದು ಉದ್ಯಮ ಸ್ಥಾಪಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಹಣಕ್ಕಾಗಿ ಮಕ್ಕಳು, ಮೊಮ್ಮಕ್ಕಳ ಮೇಲೆ ಇವರು ಡಿಪೆಂಡ್ ಆಗಿಲ್ಲ.

‘ವಯಸ್ಸಾಗುತ್ತಿದ್ದಂತೆಯೇ ಸುಮ್ಮನೇ ಕುಳಿತುಕೊಳ್ಳಲು ಬೇಸರವಾಗತೊಡಗಿತು. ಜತೆಗೆ, ಹಣಕ್ಕಾಗಿ ಮಕ್ಕಳ ಮುಂದೆ ಕೈಚಾಚಬೇಕಿತ್ತು. ಆದ್ದರಿಂದ ನಾನೇ ಏಕೆ ದುಡಿಯಬಾರದು ಎಂದು ನಿರ್ಧರಿಸಿದೆ. ಈ ವಿಷಯವನ್ನು ನನ್ನ ಮಗಳಿಗೂ ತಿಳಿಸಿದೆ. ಅವಳು ಮೊದಮೊದಲು ಈ ವಯಸ್ಸಿನಲ್ಲಿ ಇವೆಲ್ಲಾ ಏಕೆ? ನೆಮ್ಮದಿಯಾಗಿ ಇರು ಎಂದಳು. ಆದರೆ ನನಗೆ ಏನಾದರೊಂದು ಐಡಿಯಾ ನೀಡುವಂತೆ ಆಕೆಗೆ ಒತ್ತಾಯಿಸಿದಾಗ ಲಡ್ಡುವನ್ನು ತಯಾರಿಸಿ ಮಾರಾಟ ಮಾಡಲು ಹೇಳಿದಳು.

ಮೊದಲಿನಿಂದಲೂ ನಾನು ಲಡ್ಡು ತಯಾರಿಸುವಲ್ಲಿ ಎಕ್ಸ್​ಪರ್ಟ್. ಆರಂಭದಲ್ಲಿ ಲಡ್ಡು ತಯಾರಿಸಿ ಸ್ಥಳೀಯರಿಗಷ್ಟೇ ನೀಡುತ್ತಿದ್ದೆ. ಇದರ ರುಚಿಯನ್ನು ಕಂಡು ದೂರದೂರದಿಂದ ಬೇಡಿಕೆ ಬರತೊಡಗಿತು. ನನ್ನ ಮಗಳ ನೆರವಿನೊಂದಿಗೆ ಚಿಕ್ಕ ಉದ್ಯಮವನ್ನೇ ಶುರು ಮಾಡಿದೆ. ಇದೀಗ ಬೃಹದಾಕಾರವಾಗಿ ಬೆಳೆದಿದೆ’ ಎನ್ನುವ ಹರ್ಭಜನ್ ಅವರಿಗೆ ಮಹೀಂದ್ರ ಸಂಸ್ಥೆಯ ಆನಂದ್ ಅವರು, ಕಳೆದ ವರ್ಷ, ‘ವರ್ಷದ ಉದ್ಯಮಿ’ ಎಂದು ಘೋಷಿಸಿದ್ದಾರೆ. ಇದೀಗ ದೇಶದ ಮೂಲೆಮೂಲೆಗಳಿಂದ ಇವರ ಲಡ್ಡುವಿಗೆ ಬೇಡಿಕೆ ಬರತೊಡಗಿದೆ.

ಪರೀಕ್ಷೆ ಪಾಸ್ ಮಾಡಿದ ಶತಾಯುಷಿ

ಕಲಿಯುವ ಉತ್ಸಾಹವಿದ್ದರೆ ವಯಸ್ಸು ಎನ್ನುವುದು ಒಂದು ನೆಪವಷ್ಟೇ ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಕೇರಳದ ವಯನಾಡಿನ 105 ವರ್ಷದ ಅಜ್ಜಿ ಕೆಂಬಿ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸುವ ಸಾಕ್ಷರತಾ ಪರೀಕ್ಷೆಯಲ್ಲಿ ಇವರು ಉತ್ತೀರ್ಣ ಆಗಿದ್ದಾರೆ (ಇದು ನಾಲ್ಕನೇ ಕ್ಲಾಸ್​ಗೆ ಸಮಾನವಾಗಿರುವ ಪರೀಕ್ಷೆ) ಈ ಮೂಲಕ ಐದು ವರ್ಷದವಳಿದ್ದಾಗಿನ ಕನಸನ್ನು ಈ ವಯಸ್ಸಿನಲ್ಲಿ ನನಸು ಮಾಡಿಕೊಂಡಿದ್ದಾರೆ.

ಕೆಂಬಿಯವರಿಗೆ ಚಿಕ್ಕಂದಿನಿಂದಲೂ ಅಕ್ಷರದ ವ್ಯಾಮೋಹ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ, ಹೆಣ್ಣುಮಕ್ಕಳು ಕಲಿಯುವುದು ಏಕೆ ಎಂಬ ಮನೋಭಾವ ಇನ್ನೊಂದೆಡೆ. ಶಾಲೆಗೆ ಹೋಗುವ ಮಕ್ಕಳನ್ನು ಆಸೆಕಣ್ಣುಗಳಿಂದ ನೋಡುತ್ತಾ ದೊಡ್ಡವಳಾದ ಕೆಂಬಿಗೆ ಅಕ್ಷರಾಭ್ಯಾಸ ಮಾಡಲು ಸಾಧ್ಯವಾಗಲೇ ಇಲ್ಲ.

ಶಿಕ್ಷಣದ ಆಸೆಯನ್ನು ಅದುಮಿಟ್ಟುಕೊಂಡು ವೃದ್ಧಾಪ್ಯಕ್ಕೆ ಕಾಲಿಟ್ಟ ಅವರಿಗೆ ವರದಾನವಾದದ್ದು ಸಾಕ್ಷರತಾ ಪರೀಕ್ಷೆ. ಈ ಬಗ್ಗೆ ತಿಳಿಯುತ್ತಲೇ ಕೆಂಬಿಯವರು ಅಧಿಕಾರಿಗಳನ್ನು ಸಂರ್ಪಸಿ ಮನದ ಇಂಗಿತವನ್ನು ತಿಳಿಸಿದರು. ಇವರ ವಯಸ್ಸನ್ನು ನೋಡಿ ಅಧಿಕಾರಿಗಳು ದಂಗಾದರೂ ಇವರ ಉತ್ಸಾಹಕ್ಕೆ ಮನಸೋತರು. ನಂತರ ಸಾಕ್ಷರತಾ ಪ್ರಚಾರಕಿಯರು ಮಾರ್ಗದರ್ಶನ ಮಾಡಿದರು. ಇದರಿಂದ ಪರೀಕ್ಷೆ ಬರೆದು ಅಜ್ಜಿ ತೇರ್ಗಡೆಯಾಗಿದ್ದಾರೆ.

‘ನನ್ನ ಇಬ್ಬರು ಮಕ್ಕಳೂ ಶಾಲೆ ಕಲಿತಿದ್ದಾರೆ. ಈ ವಯಸ್ಸಿನಲ್ಲಿ ನಾನು ಓದು, ಬರಹ ಕಲಿಯುತ್ತೇನೆ ಎಂದಾಗ ಮಕ್ಕಳೂ ಮೊದಲು ಅಚ್ಚರಿ ಪಟ್ಟಿದ್ದರು. ನಂತರ ಅಕ್ಷಾರಾಭ್ಯಾಸಕ್ಕೆ ಅವರೂ ನೆರವಾದರು. ಈಗ ಅವರಿಗೂ ತುಂಬಾ ಖುಷಿಯಾಗಿದೆ’ ಎಂದು ಕೆಂಬಿ ತಮ್ಮ ಬೊಚ್ಚುಬಾಯ್ತುಂಬಾ ನಗುತ್ತಾರೆ.