ಅಂಕಣ

ಸೂಪರಾಗಿದ್ದ ಲೈಫಿಗೆ ಹರ್ಷಿಕಾ ಪೂಣಚ್ಚ ರೆಡಿ

lakshmihegde

ಬೆಂಗಳೂರು: ವರ್ಷಗಳ ಹಿಂದೆಯೇ ‘ರೆಡಿ’ ಎಂದಿದ್ದ ನಟಿ ಹರ್ಷಿಕಾ ಪೂಣಚ್ಚ ಇದೀಗ ‘ಸೂಪರ್ರಾಗಿದ್ದ ಲೈಫು’ ಎನ್ನುತ್ತಿದ್ದಾರೆ. ಅಂದರೆ, ಅವರು ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ‘ರೆಡಿ’ ಎಂಬ ಸಿನಿಮಾದ ಶೀರ್ಷಿಕೆ ಬದಲಾಗಿದ್ದು, ಇದೀಗ ‘ಸೂಪರಾ›ಗಿದ್ದ ಲೈಫು’ ಎಂಬ ಟೈಟಲ್ ಅಂತಿಮಗೊಳಿಸಲಾಗಿದೆ.

‘ಶ್ರೀ ಹರಿ ಪ್ರೊಡಕ್ಷನ್ಸ್’ ಹಾಗೂ ‘ಎಸ್ ಪ್ರೊಡಕ್ಷನ್ಸ್ ಬ್ಯಾನರ್’ನಲ್ಲಿ ಎನ್. ಮಂಜುನಾಥ್ ಹಾಗೂ ಸಿ. ಸಂಪಂಗಿ ಅವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಕೆಲವರ್ಷಗಳಿಂದ ಕೆಲಸ ಮಾಡುತ್ತಿರುವ ಇವರಿಗೆ ಇದು ಮೊದಲ ನಿರ್ದೇಶನ. ಈ ಚಿತ್ರದ ಮೂಲಕ ರಾಕಿ ಆದೇಶ್ ಎಂಬ ಹೊಸ ಪ್ರತಿಭೆ ನಾಯಕರಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದು, ನಾಯಕಿ ಆಗಿ ಹರ್ಷಿಕಾ ಪೂಣಚ್ಚ ಅಭಿನಯಿಸಿದ್ದಾರೆ. ವಿಶೇಷವೆಂದರೆ ನಾಯಕ-ನಾಯಕಿ ಇಬ್ಬರೂ ಇಲ್ಲಿ ಕಾಲೇಜ್ ಸ್ಟುಡೆಂಟ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ಈ ಚಿತ್ರದಲ್ಲಿ ನನ್ನದು ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಅದರಲ್ಲೂ ಊರಗೌಡರ ಮಗಳಾಗಿ ಹುಬ್ಬಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಈ ಚಿತ್ರದ ಮೂಲಕ ಹುಚ್ಚು ಪ್ರೀತಿಯೊಂದನ್ನು ನಿರ್ದೇಶಕರು ತೋರಿಸಲಿದ್ದಾರೆ. ಪ್ರೀತಿಯಲ್ಲಿ ಹೀಗೂ ಇರುತ್ತಾ ಎಂಬಂಥ ರೀತಿಯಲ್ಲಿ ಪಾತ್ರಗಳನ್ನು ರಚಿಸಲಾಗಿದೆ’ ಎನ್ನುತ್ತ ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ ಹರ್ಷಿಕಾ.

ಅಂದಹಾಗೆ, ಈ ಸಿನಿಮಾ ಆರಂಭಗೊಂಡಿದ್ದು ಎರಡು ವರ್ಷಗಳ ಹಿಂದೆ. ಆದರೆ, ಕಾರಣಾಂತರಗಳಿಂದ ಸಿನಿಮಾ ನಿರ್ಮಾಣ ವಿಳಂಬವಾಗಿದ್ದು, ಇದೀಗ ಮತ್ತೆ ಟೇಕಾಫ್ ಆಗಿದೆ. ‘ಚಿತ್ರೀಕರಣ ಶುರುವಾಗಿ ಎರಡು ವರ್ಷಗಳು ಕಳೆದಿವೆ. ಈ ಮಧ್ಯೆ ಸಾಕಷ್ಟು ಅಡೆ-ತಡೆಗಳು ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ಹಾಗೂ ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ‘ರೆಡಿ’ ಎಂದಿದ್ದ ಶೀರ್ಷಿಕೆಯನ್ನು ಬದಲಿಸಿ ‘ಸೂಪರಾ›ಗಿದ್ದ ಲೈಫು’ ಎಂದಿಡಲಾಗಿದೆ. ಚಿತ್ರದಲ್ಲಿ ಒಂದು ಹಾಡಿನಲ್ಲಿ ಬರುವ ಸಾಲು ಕಥೆಗೆ ಸೂಕ್ತ ಅನಿಸಿದ್ದರಿಂದ ಈ ಟೈಟಲ್ ಫಿಕ್ಸ್ ಮಾಡಲಾಗಿದೆ’ ಎನ್ನುತ್ತಾರೆ ನಿರ್ದೇಶಕರು. ‘ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ನಾಲ್ಕು ಸಾಂಗ್ಸ್ ಇರಲಿದ್ದು, ಎರಡನ್ನು ಗೋವಾದಲಿ, ಒಂದನ್ನು ಬೆಂಗಳೂರು ಹೊರವಲಯದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಇನ್ನೊಂದರ ಲೊಕೇಷನ್ ಇನ್ನೂ ನಿಗದಿ ಆಗಿಲ್ಲ. ಗೋವಾದಲ್ಲಿ ಮಾರ್ಚ್ 3ರಿಂದ ಸಾಂಗ್ ಶೂಟಿಂಗ್ ನಡೆಯಲಿದೆ’ ಎಂದಿದ್ದಾರೆ ಅರವಿಂದ್. ಚಿತ್ರದಲ್ಲಿ ರವಿ ಕಾಳೆ ಖಳನಾಯಕರಾಗಿ ಅಭಿನಯಿಸುತ್ತಿದ್ದು. ಶರತ್ ಲೋಹಿತಾಶ್ವ, ಸಂಗೀತಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್-ಮೇನಲ್ಲಿ ಸಿನಿಮಾ ತೆರೆ ಕಾಣಿಸುವ ತಯಾರಿಯಲ್ಲಿದೆ ಚಿತ್ರತಂಡ.