ಅಂಕಣ

ಭಿಕ್ಷುಕಿಯ ಕೂಸಿನ ಅಪಹರಣದ ಗುಟ್ಟೇನು?: ಡಾ.ಡಿ.ವಿ. ಗುರುಪ್ರಸಾದ್ ಅವರ ಆ ಕ್ಷಣ...

2016ರ ಏಪ್ರಿಲ್ 21. ತಡರಾತ್ರಿ ಸುಮಾರು 2 ಗಂಟೆ. ಪ್ರಖ್ಯಾತ ದೇವಸ್ಥಾನವೊಂದರ ಹೊರ ಆವರಣದಲ್ಲಿ ಪಾರ್ವತಿ ಎನ್ನುವ 20 ವರ್ಷ ವಯಸ್ಸಿನ ಭಿಕ್ಷುಕಿ ತನ್ನ ತಾಯಿ ಶಾಂತಾ, ನಾಲ್ಕು ವರ್ಷದ ಮಗಳು ಅನಿತಾ ಮತ್ತು ಎರಡು ತಿಂಗಳ ಬಾಲಕ ರಾಜುವಿನ ಜತೆಗೆ ಮಲಗಿದ್ದಳು. ರಾಜು ಹಾಲಿಗಾಗಿ ಅಳಲಾರಂಭಿಸಿದಾಗ ಪಾರ್ವತಿ ನಿದ್ರೆಯಿಂದ ಎಚ್ಚರಗೊಂಡು ಮಗುವಿಗೆ ಎದೆಹಾಲು ಉಣಿಸುತ್ತಿದ್ದಳು. ಅದೇ ಸಮಯಕ್ಕೆ ಅವಳಿದ್ದ ಜಾಗದ ಮುಂದೆ ಕಾರೊಂದು ಬಂದು ನಿಂತಿತು.

ಕಾರಿಂದ ಇಳಿದ ಒಬ್ಬ ವ್ಯಕ್ತಿ ಪಾರ್ವತಿಯ ಬಳಿ ಬಂದು ಅವಳ ತೊಡೆಯ ಮೇಲಿದ್ದ ಮಗುವನ್ನು ಏಕಾಏಕಿ ಕಸಿದುಕೊಂಡವನೇ ಬಿರಬಿರನೆ ಕಾರನ್ನೇರಿದ. ಕಾರು ಭರ್ರೆಂದು ಹೊರಟೇಹೋಯಿತು. ಅನಿರೀಕ್ಷಿತವಾದ ಈ ಘಟನೆಯಿಂದ ಗಾಬರಿಗೊಂಡ ಪಾರ್ವತಿ ಕೆಲಕ್ಷಣಗಳಲ್ಲಿ ಸುಧಾರಿಸಿಕೊಂಡು ತನ್ನ ಮಗುವನ್ನು ಯಾರೋ ಕಸಿದುಕೊಂಡು ಹೋದರೆಂದು ಅರಚತೊಡಗಿದಳು. ಹತ್ತಿರದಲ್ಲಿಯೇ ಕೆಲ ಯುವಕರು ಸಮಾರಂಭವೊಂದಕ್ಕೆ ಸಂಬಂಧಿಸಿದಂತೆ ಬ್ಯಾನರ್​ಗಳನ್ನು ಕಟ್ಟುತ್ತಿದ್ದರು. ಪಾರ್ವತಿಯ ರೋದನಕ್ಕೆ ಸ್ಪಂದಿಸಿದ ಅವರು ಎರಡು ಮೋಟರ್ ಸೈಕಲ್​ಗಳಲ್ಲಿ ಕಾರು ಹೋದ ದಿಕ್ಕಿನತ್ತ ಧಾವಿಸಿದರು. ಸುಮಾರು ಒಂದು ಗಂಟೆಯ ನಂತರ ವಾಪಸಾದ ಆ ಯುವಕರು ಕಾರು ವೇಗವಾಗಿ ಹೊರಟು ತಪ್ಪಿಸಿಕೊಂಡಿತೆಂದು ಪಾರ್ವತಿಗೆ ತಿಳಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಪರಿಚಿತ ವ್ಯಕ್ತಿಗಳು ಶಿಶುವನ್ನು ಅಪಹರಿಸಿದ ಬಗ್ಗೆ ಪ್ರಕರಣ ದಾಖಲಾಯಿತು.

ಅಪಹರಣಕಾರರು ಬಂದಿದ್ದ ಕಾರು ಬೂದು ಬಣ್ಣದ ಮಾರುತಿ ಸ್ವಿಫ್ಟ್ ಆಗಿತ್ತು. ಕತ್ತಲಲ್ಲಿ ಆ ಕಾರಿನ ನೋಂದಣಿ ಸಂಖ್ಯೆ ಗುರುತಿಸಲು ಸಾಧ್ಯವಾಗದಿದ್ದರೂ ಕಾರಿನ ಕಡೆಯ ಎರಡು ಸಂಖ್ಯೆಗಳನ್ನು ನೋಟ್ ಮಾಡಿಕೊಂಡಿದ್ದೇವೆ. ಆ ಸಂಖ್ಯೆ 57 ಎಂದು ಯುವಕರು ಪೊಲೀಸರಿಗೆ ತಿಳಿಸಿದರು. ಕಾರಿನಲ್ಲಿ ಮೂರರಿಂದ ನಾಲ್ಕು ಜನರಿದ್ದರು ಎಂದು ಹೇಳಿ ಕಾರು ಹೋದ ದಿಕ್ಕನ್ನೂ ತಿಳಿಸಿದರು. ಕೂಡಲೇ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ ಠಾಣಾಧಿಕಾರಿ ಆ ಕಾರನ್ನು ಹುಡುಕಲು ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಆದೇಶಿಸಲು ವಿನಂತಿಸಿದರು.

ಮಾರನೆಯ ದಿನ ಪೊಲೀಸರು ಪಾರ್ವತಿಯನ್ನು ಮತ್ತೊಮ್ಮೆ ವಿಚಾರಿಸಿದಾಗ, ಎರಡು ಮಕ್ಕಳಾದ ನಂತರ ಗಂಡ ತನ್ನನ್ನು ಬಿಟ್ಟು ಹೊರಟುಹೋಗಿರುವ ಕಾರಣ ನಿರ್ಗತಿಕಳಾದ ತಾನು ತಾಯಿಯ ಜತೆಗೆ ದೇವಸ್ಥಾನದ ಆವರಣದಲ್ಲಿ ಭಿಕ್ಷೆ ಬೇಡಿಕೊಂಡು ಜೀವಿಸುತ್ತಿರುವುದಾಗಿ ಹೇಳಿದಳು. ಎರಡು ದಿನಗಳ ಹಿಂದೆ ಸುಮಾರು 20-25 ವರ್ಷ ವಯಸ್ಸಿನ ಯುವಕ ಬಂದು ನನ್ನ ಮಗು ತುಂಬಾ ಮುದ್ದಾಗಿದೆಯೆಂದು ಹೇಳಿ, ‘ನೀನು ಭಿಕ್ಷೆ ಬೇಡಿಕೊಂಡು ಈ ಮಗುವನ್ನು ಸಾಕುವುದು ಕಷ್ಟ. ನನಗೆ ಕೊಡು, ಮಕ್ಕಳಿರದ ನನ್ನ ಪರಿಚಯಸ್ಥರೊಬ್ಬರು ನಿನ್ನ ಮಗುವನ್ನು ಚೆನ್ನಾಗಿ ಸಾಕುತ್ತಾರೆ, ನಿನಗೂ ಕೈತುಂಬಾ ಹಣ ನೀಡುತ್ತಾರೆ’ ಎಂದು ತಿಳಿಸಿದ ನಾನು ಒಪ್ಪಲಿಲ್ಲ. ಬೇಸರಗೊಂಡ ಯುವಕ ಹೊರಟು ಹೋದ ಎಂದು ತಿಳಿಸಿದ ಪಾರ್ವತಿ, ಆ ಯುವಕನ ಚಹರೆಪಟ್ಟಿಯನ್ನು ಪೊಲೀಸರಿಗೆ ನೀಡಿದಳು. ಅದರಂತೆ ಕಂಪ್ಯೂಟರ್ ಚಿತ್ರವೊಂದನ್ನು ತಯಾರಿಸಲಾಯಿತು.

ಅದೇ ವ್ಯಕ್ತಿಯೇ ರಾಜುವನ್ನು ಅಪಹರಣ ಮಾಡಿರಬಹುದು ಎಂಬ ಸಂಶಯ ಬಲವಾದರೂ ಆ ಪಟ್ಟಣಕ್ಕೆ ಬೇರೆ ಬೇರೆ ಊರುಗಳಿಂದ ಪ್ರತಿದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕಾರಣ ಈ ಕುರುಹಿನಿಂದ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನುಳಿದ ಕುರುಹೆಂದರೆ ಕಾರಿನ ನೋಂದಣಿ ಸಂಖ್ಯೆ. ಎರಡೇ ಅಂಕಿಗಳು ಲಭ್ಯವಿದ್ದ ಕಾರಣ ಇದರ ಆಧಾರದ ಮೇಲೆ ಕಾರನ್ನು ಹುಡುಕುವುದೆಂದರೆ ಹುಲ್ಲಿನ ಮೆದೆಯಲ್ಲಿ ಸೂಜಿ ಹುಡುಕುವಂತೆಯೇ ಆಗಿತ್ತು. ಆದರೂ ಧೃತಿಗೆಡದ ಪೊಲೀಸರು ಸ್ಥಳೀಯ ಆರ್.ಟಿ.ಓ ಕಚೇರಿಯಿಂದ ಆ ಜಿಲ್ಲೆಯಲ್ಲಿ ದಾಖಲಾಗಿರುವ ಎಲ್ಲಾ ಸ್ವಿಫ್ಟ್ ವಾಹನಗಳ ನೋಂದಣಿ ಸಂಖ್ಯೆಯನ್ನು ಕಲೆಹಾಕಿದರು. ಘಟನೆಯಾದ ವೇಳೆಯಲ್ಲಿ ಆ ಸ್ಥಳದಲ್ಲಿ ಕಾರ್ಯನಿರತವಾಗಿದ್ದ ಸೆಲ್ ಫೋನ್​ಗಳ ಪಟ್ಟಿಯನ್ನು ಸೆಲ್​ಟವರ್​ಗಳ ಮೂಲಕ ತರಿಸಿಕೊಳ್ಳಲಾಯಿತು. ಕಾರುಗಳ ನೋಂದಣಿ ಮತ್ತು ಫೋನುಗಳ ಪಟ್ಟಿಯನ್ನು ಒಂದೊಂದಾಗಿ ವಿಶ್ಲೇಷಿಸುತ್ತಾ ಬರಲಾಯಿತು. 2016ರ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಒಂದು ಸ್ವಿಫ್ಟ್ ಕಾರಿನ ನೋಂದಣಿ ಸಂಖ್ಯೆಯ ಕೊನೆಯ ಎರಡು ಅಂಕಿಗಳು ತಮ್ಮಲ್ಲಿದ್ದ ಎರಡು ಅಂಕಿಗಳಿಗೆ ಹೊಂದಾಣಿಕೆಯಾದಾಗ ಪೊಲೀಸರು ಆ ಕಾರಿನ ಮಾಲೀಕನನ್ನು ಸಂರ್ಪಸಿದರು. ತನ್ನ ಕಾರು ಬಿಳಿಯ ಬಣ್ಣದ್ದೆಂದು ಅವರು ಹೇಳಿದಾಗ ತನಿಖಾಧಿಕಾರಿ ವಿಚಲಿತರಾದರು. ನಿಮ್ಮ ವಾಹನ ಆರು ತಿಂಗಳ ಹಿಂದೆ ದೇವಸ್ಥಾನದ ಬಳಿ ರಾತ್ರಿ ವೇಳೆಯಲ್ಲೇನಾದರೂ ಬಂದಿತ್ತೇ ಎಂದು ಕೇಳಿದಾಗ ಇಲ್ಲವೆಂದು ಹೇಳಿದ ಆತ ತಾನು ಕಾರನ್ನು ಓಡಿಸುವುದಿಲ್ಲವೆಂದೂ ತನ್ನ ಚಾಲಕ ಕಾರನ್ನು ತೆಗೆದುಕೊಂಡು ಹೋಗಿರಬಹುದೆಂದು ಹೇಳಿ ಚಾಲಕ ರಮೇಶನ ವಿವರಗಳನ್ನು ನೀಡಿದರು. ಅಪಹರಣವಾದ ರಾತ್ರಿ ಆ ಸ್ಥಳದಲ್ಲಿ ಆತನ ಮೊಬೈಲ್ ಫೋನ್ ಕಾರ್ಯನಿರತವಾದ್ದರಿಂದ ಅವನನ್ನು ಕೂಲಂಕಷವಾಗಿ ವಿಚಾರಣೆ ಮಾಡಲಾಯಿತು. ಆತ ಸ್ನೇಹಿತ ಸುನೀಲನ ವಿನಂತಿಯ ಮೇರೆಗೆ ಆ ರಾತ್ರಿ ಕಾರನ್ನು ತಾನೇ ತಂದಿದ್ದಾಗಿ ಒಪ್ಪಿ ಸುನೀಲನೇ ಭಿಕ್ಷುಕಿಯ ಮಗುವನ್ನು ಅಪಹರಿಸಿದನೆಂದು ತಿಳಿಸಿದ.

ಸುನೀಲನ ಚಿಕ್ಕಮ್ಮನಿಗೆ ಒಂದು ಗಂಡು ಮಗು ಅರ್ಜೆಂಟಾಗಿ ಬೇಕಾಗಿದ್ದು ಆಕೆ ಮಗುವಿಗಾಗಿ ಒಂದೂವರೆ ಲಕ್ಷ ರೂ. ಕೊಡಲು ಸಿದ್ಧಳಾಗಿರುವುದರಿಂದ, ದೇವಸ್ಥಾನದ ಹೊರಗೆ ಕೂಡುವ ಭಿಕ್ಷುಕಿಯ ಬಳಿಯಿರುವ ಗಂಡು ಮಗುವನ್ನು ಅಪಹರಿಸುವ ಯೋಜನೆಯನ್ನು ಸುನೀಲ್ ಹಾಕಿದ. ಸುಲಭವಾಗಿ ಹಣವನ್ನು ಗಳಿಸಬಹುದೆಂಬ ಉದ್ದೇಶದಿಂದ ರಾತ್ರಿ ದೇವಸ್ಥಾನದ ಬಳಿಗೆ ಬಂದು ಮಗುವನ್ನು ಅಪಹರಿಸಿದೆವೆಂದು ರಮೇಶ್ ಒಪ್ಪಿಕೊಂಡ. ತನ್ನ ಜತೆಗೆ ಸುನೀಲ್ ಅಲ್ಲದೆ ಅರುಣ ಎನ್ನುವ ಗೆಳೆಯನೂ ಇದ್ದ. ಆ ಮಗುವನ್ನು ಅದೇ ರಾತ್ರಿಯೇ ಸುನೀಲ್ ತನ್ನ ಚಿಕ್ಕಮ್ಮನಿಗೆ ಕೊಟ್ಟ. ಮಾರನೆಯ ದಿನವೇ ಸುನೀಲ್ ಹಣವನ್ನು ತಮ್ಮೆಲ್ಲರಿಗೂ ಹಂಚಿದ. ಅಪಹರಣದಲ್ಲಿ ಪಾಲ್ಗೊಂಡಿದ್ದ ಅರುಣ ಕುಖ್ಯಾತ ಕಳ್ಳ ಎಂದು ರಮೇಶ ಮಾಹಿತಿಯಿತ್ತ. ಅರುಣನನ್ನು ಬಂಧಿಸಿದಾಗ, ಆತ ತನ್ನ ಇನ್ನೊಬ್ಬ ಸ್ನೇಹಿತ ರವಿಯೊಂದಿಗೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಕಳ್ಳತನ ಮತ್ತು ಸುಲಿಗೆಗಳನ್ನು ನಡೆಸಿರುವುದಾಗಿ ಹೇಳಿದ. ರವಿಯನ್ನೂ ಬಂಧಿಸಲಾಯಿತು. ಆನಂತರ ತಲೆಮರೆಸಿಕೊಂಡಿದ್ದ ಸುನೀಲನನ್ನು ಬಂಧಿಸಲಾಯಿತು. ಅವನನ್ನು ಪಾರ್ವತಿ ಗುರುತಿಸಿದಳು. ಆತ ತನ್ನ ಕೃತ್ಯ ಒಪ್ಪಿಕೊಂಡು ಪೊಲೀಸರನ್ನು ತನ್ನ ಚಿಕ್ಕಮ್ಮ ಶ್ರೀದೇವಿಯ ಮನೆಗೆ ಕರೆದೊಯ್ದ. ಆಕೆ ಖಾಸಗಿ ನರ್ಸಿಂಗ್ ಹೋಂನಲ್ಲಿ ದಾದಿಯಾಗಿದ್ದಾಗಿ ತಿಳಿಯಿತು. ಆಕೆಯನ್ನು ವಿಚಾರಿಸಿದಾಗ, ತಾನು ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ತೆಗೆದುಕೊಳ್ಳಲು ಮಕ್ಕಳನ್ನು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿ ಭಿಕ್ಷುಕಿಯಿಂದ ಅಪಹರಿಸಿದ ಮಗುವನ್ನು ಕಿಷನ್ ಎಂಬ ಬಟ್ಟೆ ವ್ಯಾಪಾರಿಗೆ ಮಾರಿರುವುದಾಗಿ ತಿಳಿಸಿದಳು.

ಕಿಷನ್ ಈ ಹಿಂದೆ ತನ್ನಿಂದಲೇ ಹೆಣ್ಣು ಮಗು ಖರೀದಿಸಿದ್ದ. ತುರ್ತಾಗಿ ಗಂಡು ಮಗುವೊಂದರ ಅವಶ್ಯಕತೆಯಿದ್ದು, ಎರಡೂವರೆ ಲಕ್ಷ ರೂ ಕೊಡುವೆನೆಂದು ಕಿಷನ್ ಹೇಳಿದಾಗ ತಾನು ಸುನೀಲನಿಗೆ ಗಂಡು ಮಗುವನ್ನು ತೆಗೆದುಕೊಂಡು ಬರಲು ಕೋರಿದೆ. ಮಗುವನ್ನು ಕೊಡುವಾಗ ಅದು ಕಸದತೊಟ್ಟಿಯಲ್ಲಿ ಸಿಕ್ಕಿತೆಂದು ಸುನೀಲ್ ಹೇಳಿದ. ಆದರೆ ಆ ಮಗು ಅಪಹರಣಗೊಂಡದ್ದೆಂದು ತನಗೆ ತಿಳಿದಿರಲಿಲ್ಲ ಎಂದು ಶ್ರೀದೇವಿ ಹೇಳಿದಳು.

ಅಪಹರಣಗೊಂಡಿದ್ದ ರಾಜುವಿನ ಪತ್ತೆಗಾಗಿ ಪೊಲೀಸರು ವ್ಯಾಪಾರಿ ಕಿಷನ್​ನ ಮನೆಗೆ ಹೋದಾಗ ಆತ ಹೀಗೆ ಹೇಳಿದ: ‘ನಾನು ರಾಜಸ್ಥಾನದಿಂದ ಇಲ್ಲಿಗೆ ವಲಸೆ ಬಂದು ಬಟ್ಟೆ ಅಂಗಡಿಯಿಟ್ಟುಕೊಂಡಿದ್ದೇನೆ. ನಾವು ಮಾರ್ವಾಡಿ ಜನಾಂಗಕ್ಕೆ ಸೇರಿದ್ದು ನನಗೆ ಮದುವೆಯಾಗಿ ಬಹಳ ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ವೈದ್ಯರಿಗೆ ತೋರಿಸಿದಾಗ ಪತ್ನಿಗೆ ಸೀರಿಯಸ್ ತೊಂದರೆಯಿದೆಯೆಂದು ತಿಳಿಸಿ ನಮಗೆ ಮಕ್ಕಳಾಗುವುದಿಲ್ಲವೆಂದೂ ನಾವು ಮಕ್ಕಳನ್ನು ದತ್ತಕ ತೆಗೆದುಕೊಳ್ಳುವುದೇ ಸೂಕ್ತವೆಂದೂ ಸೂಚಿಸಿದರು. ನರ್ಸ್ ಶ್ರೀದೇವಿ ಮಕ್ಕಳನ್ನು ಕೊಡಿಸುತ್ತಾಳೆಂದು ತಿಳಿಯಿತು. ಆಕೆಯನ್ನು ಮೂರು ವರ್ಷಗಳ ಹಿಂದೆ ಸಂರ್ಪಸಿದೆ. ಮೊದಲಿಗೆ ಆಕೆ ನಮಗೆ ಸಹಾಯಮಾಡಲು ನಿರಾಕರಿಸಿದಳು. ಮಗುವನ್ನು ಪಡೆಯಲು ಆಕೆ ಹೇಳಿದಷ್ಟು ಹಣ ಕೊಡುವುದಾಗಿ ತಿಳಿಸಿದೆ. ನಮಗೆ ಗಂಡು ಮಗುವೇ ಬೇಕೆಂದಾಗ ಆಕೆ ಕೆಲ ಸಮಯ ಕಾಯಲು ತಿಳಿಸಿದಳು. ಒಂದು ದಿನ ಆಕೆ ತಾನು ಕೆಲಸ ಮಾಡುತ್ತಿದ್ದ ನರ್ಸಿಂಗ್ ಹೋಂಗೆ ನನ್ನನ್ನು ಕರೆದುಕೊಂಡು ಹೋಗಿ ಅದರ ಮಾಲೀಕಳಾದ ಆಶಾಳನ್ನು ಪರಿಚಯಿಸಿದಳು. ಅದೇ ನರ್ಸಿಂಗ್ ಹೋಮಿನಲ್ಲಿ ಅವಿವಾಹಿತ ತರುಣಿಗೆ ಹೆಣ್ಣು ಮಗು ಜನಿಸಿರುವುದಾಗಿ ತಿಳಿಸಿದ ಆಶಾ, ನಮಗೆ ಬೇಕಾದಲ್ಲಿ ಆ ಮಗು ನನ್ನ ಪತ್ನಿಯ ಗರ್ಭದಿಂದಲೇ ಬಂದಿದೆ ಎಂದು ದಾಖಲೆಗಳನ್ನು ತಯಾರಿಸಿ ಕೊಡುವುದಾಗಿ ಹೇಳಿ ಮೂರು ಲಕ್ಷ ರೂಗಳನ್ನು ಕೇಳಿದಳು. ನಾನು ಒಪ್ಪಿದಾಗ ನನ್ನ ಪತ್ನಿಯನ್ನು ನರ್ಸಿಂಗ್ ಹೋಮಿಗೆ ಅಡ್ಮಿಟ್ ಮಾಡಲು ಹೇಳಿದರು. ಹತ್ತು ದಿನಗಳ ನಂತರ ಹೆಣ್ಣು ಮಗುವನ್ನು ತಂದು ನನ್ನ ಪತ್ನಿಯ ಪಕ್ಕದಲ್ಲಿ ಮಲಗಿಸಿ ಇದೇ ನಿನ್ನ ಕೂಸೆಂದು ತಿಳಿಸಿದರು. ಆ ನಂತರ ಆ ಮಗು ನನ್ನ ಹೆಂಡತಿಯದೇ ಎಂದು ಪ್ರಮಾಣಪತ್ರ ನೀಡಿ ಡಿಸ್ಚಾರ್ಜ್ ಮಾಡಿದರು. ಆ ಪತ್ರದ ಮೇರೆಗೆ ನಾನು ನಗರಪಾಲಿಕೆಯಲ್ಲಿ ಮಗುವಿನ ಜನನ ಪತ್ರಿಕೆಯನ್ನು ಪಡೆದಿದ್ದೇನೆ. ಆ ಬಾಲಕಿಯನ್ನು ನಾವು ಮೂರು ವರ್ಷಗಳಿಂದ ನಮ್ಮ ಮಗುವಿನಂತೆಯೇ ಸಾಕುತ್ತಿದ್ದೇವೆ’. (ಸಶೇಷ)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)