ಅಂಕಣ

ಹೀಗೊಂದು ಎಸಿಬಿ ದಾಳಿ...: ಆ ಕ್ಷಣ ಅಂಕಣ...

Webdesk - Ravikanth
ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಕಚೇರಿ ಅಧೀಕ್ಷಕನಾಗಿದ್ದ ರಮಾಕಾಂತ್ ತನ್ನ ಪತ್ನಿ ಉಮಾ ಹಾಗೂ ಮಕ್ಕಳಾದ ನವ್ಯಾ ಮತ್ತು ಶ್ರದ್ಧಾರೊಡನೆ ಸ್ವಂತಮನೆಯಲ್ಲಿ ವಾಸಿಸುತ್ತಿದ್ದ. ತನಗೆ ಗಂಡುಮಕ್ಕಳಿರದ ಕಾರಣ ಆತ ಪತ್ನಿಯ ಸೋದರನ ಮಗ ಪ್ರವೀಣ್​ನನ್ನು ಮಗನಂತೆಯೇ ಕಾಣುತ್ತಿದ್ದ.

ಪ್ರವೀಣ್ ಪದವೀಧರನಾದ ಬಳಿಕ ಒಂದು ದಿನ, ತಾನು ಬಿಸಿನೆಸ್ ಮಾಡಲು ಇಚ್ಛಿಸಿದ್ದು, ಇದಕ್ಕಾಗಿ ಜರೂರಾಗಿ 20 ಲಕ್ಷ ರೂಪಾಯಿಗಳು ಬೇಕಾಗಿವೆ ಎಂದು ಹೇಳಿ ಹಣವನ್ನು ಸಾಲವಾಗಿ ಕೊಡಲು ರಮಾಕಾಂತ್​ನನ್ನು ಕೋರಿದ. ‘ಪ್ರವೀಣ್, ನಮ್ಮ ನವ್ಯಳಿಗೆ ಒಳ್ಳೆಯ ಕುಟುಂಬದಿಂದ ಲಗ್ನದ ಪ್ರಸ್ತಾವನೆ ಬಂದಿದೆ. ಅವಳ ಮದುವೆ ನಿಶ್ಚಯವಾದರೆ ಬಹಳ ಖರ್ಚಿದೆ. ಅಲ್ಲದೆ ಶ್ರದ್ಧಾಳಿಗೂ ಬೇಗನೇ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳೋಣವೆಂದು ನಾವು ತೀರ್ವನಿಸಿದ್ದೇವೆ. ಹೀಗಾಗಿ ಸಾಲ ಕೊಡುವ ಸ್ಥಿತಿಯಲ್ಲಿಲ್ಲ. ನೀನು ಬೇರೆ ಯಾರಿಂದಲಾದರೂ ಸಾಲ ಪಡೆದುಕೋ’ ಎಂದ ರಮಾಕಾಂತ್. ಪ್ರವೀಣ್​ನ ಮುಖ ಪೆಚ್ಚಾಗಿ, ‘ಅಂಕಲ್, ನಿಮ್ಮ ಬಳಿಯಿರುವ ಹಣ ಈಗ ನನಗೆ ಕೊಡಿ, ನವ್ಯಳ ಮದುವೆ ಗೊತ್ತಾಗುವ ಮೊದಲೇ ತೀರಿಸುವೆ’ ಎಂದ. ರಮಾಕಾಂತ ಒಪ್ಪಲಿಲ್ಲ. ಪ್ರವೀಣ್ ಕೋಪಗೊಂಡು ಹೊರಟುಹೋದ.

ಏತನ್ಮಧ್ಯೆ, ಒಂದು ಮಧ್ಯಾಹ್ನ 4 ಗಂಟೆಗೆ ರಮಾಕಾಂತನ ಮನೆಯ ಬಾಗಿಲನ್ನು ಯಾರೋ ಬಡಿದರು. ಉಮಾ ಬಾಗಿಲನ್ನು ತೆರೆದಾಗ ಮನೆಯ ಹೊರಗೆ ದಷ್ಟಪುಷ್ಟವಾಗಿದ್ದ ನಾಲ್ಕು ಜನರು ನಿಂತಿದ್ದರು. ಎಲ್ಲರೂ ಖಾಕಿ ಪ್ಯಾಂಟು ಮತ್ತು ಬಿಳಿ ಷರ್ಟು ತೊಟ್ಟಿದ್ದರು. ಅವರಲ್ಲಿ ಒಬ್ಬ ಮುಂದೆ ಬಂದು ‘ನಾವು ಭ್ರಷಾ್ಟಚಾರ ನಿಗ್ರಹ ದಳದ ಅಧಿಕಾರಿಗಳು, ನಿಮ್ಮ ಯಜಮಾನರ ಮೇಲೆ ಲಂಚ ಪಡೆದ ಪ್ರಕರಣ ದಾಖಲಾಗಿದೆ. ನಾವು ಅವರ ಕಚೇರಿಗೆ ಹೋಗಿದ್ದೆವು, ಅವರು ಅಲ್ಲಿರಲಿಲ್ಲ. ನಿಮ್ಮ ಮನೆಯನ್ನು ಶೋಧನೆ ಮಾಡಲು ನಮಗೆ ಆಜ್ಞೆಯಾಗಿದೆ’ ಎಂದ. ಗಾಬರಿಗೊಂಡ ಉಮಾ, ‘ಪತಿ ಮನೆಗೆ ಬಂದ ನಂತರ ನೀವು ಬಂದು ಅವರೊಡನೆ ಮಾತನಾಡಿ’ ಎಂದು ಬಾಗಿಲು ಮುಚ್ಚಲು ಹೊರಟಾಗ ಆ ವ್ಯಕ್ತಿ, ‘ನಿಮ್ಮ ಪತಿಗೆ ಫೋನ್ ಮಾಡಿ ಕೂಡಲೇ ಬರಲು ತಿಳಿಸಿ. ಅವರು ಬರುವವವರೆಗೆ ನೀವು ಮತ್ತು ನಿಮ್ಮ ಮಗಳು ಮನೆಯಲ್ಲಿನ ಸಾಕ್ಷ್ಯಗಳನ್ನು ನಾಶಮಾಡುವ ಸಾಧ್ಯತೆಯಿರುವ ಕಾರಣ ನಾವು ಮನೆಯೊಳಗೆ ಕುಳಿತಿರುತ್ತೇವೆ. ನೀವಿಬ್ಬರೂ ನಮ್ಮ ಕಣ್ಗಾವಲಿನಲ್ಲಿಯೇ ಇರಬೇಕು’ ಎಂದು ಹೇಳುತ್ತ ಮನೆಯೊಳಗೆ ನುಗ್ಗಿ ಹಾಲ್​ನಲ್ಲಿದ್ದ ಕುರ್ಚಿಗಳ ಮೇಲೆ ಕುಳಿತೇ ಬಿಟ್ಟರು.

ಗಾಬರಿಯಾದ ಉಮಾ ರಮಾಕಾಂತನಿಗೆ ಕರೆ ಮಾಡಿದಳು. ಆತ ಅವಸರವಸರದಿಂದ ಬಂದ. ಆಗಂತುಕರು ಟೈಪ್ ಮಾಡಿದ್ದ ಕಾಗದವೊಂದನ್ನು ಅವನಿಗೆ ತೋರಿಸಿ ‘ನಿಮ್ಮ ಮೇಲೆ ಬಂದಿರುವ ದೂರು ಇದೇ’ ಎಂದರು. ಆ ಕಾಗದದಲ್ಲಿ ನಮೂದಿಸಿದ್ದ ಅವನ ಸ್ಥಿರಾಸ್ತಿಗಳ ಪಟ್ಟಿಯನ್ನು ಜೋರಾಗಿ ಓದಿ, ‘ಸಂಬಳಕ್ಕಿಂತ ಎರಡು ಪಟ್ಟು ಹೆಚ್ಚು ಆಸ್ತಿ ಮಾಡಿದ್ದೀರೆಂದು ಇದರಿಂದಲೇ ತಿಳಿಯುತ್ತಿದೆ, ನಿಮ್ಮ ಮನೆಯನ್ನು ಶೋಧ ಮಾಡಬೇಕು’ ಎಂದರು.

‘ನೀವು ಹೇಳಿದ ಎಲ್ಲ ಆಸ್ತಿಗಳೂ ನನ್ನದೇ ಎನ್ನುವುದು ನಿಜ, ಅವುಗಳಲ್ಲಿ ಕೆಲವು ಪಿತ್ರಾರ್ಜಿತವಾಗಿ ಬಂದಿದ್ದು ಮತ್ತು ಉಳಿದವನ್ನು ಖರೀದಿಸಿದ ಬಗ್ಗೆ ನಾನು ಸರ್ಕಾರಕ್ಕೆ ಕಾಲಕಾಲಕ್ಕೆ ವರದಿ ಸಲ್ಲಿಸುತ್ತ ಬಂದಿರುವೆ. ಇದರಲ್ಲಿ ಅಕ್ರಮ ಗಳಿಕೆ ಯಾವವೂ ಇಲ್ಲ’ ಎಂದ ರಮಾಕಾಂತ. ‘ನಿಜ ಏನು ಎನ್ನುವುದು ಮನೆಯನ್ನು ಶೋಧಿಸಿದ ನಂತರವೇ ಗೊತ್ತಾಗುತ್ತದೆ’ ಎಂದು ಹೇಳಿದ ಅವರು ಮನೆಯನ್ನು ಶೋಧಿಸತೊಡಗಿದರು. ರಮಾಕಾಂತ ಮನೆಯಲ್ಲಿಟ್ಟಿದ್ದ 19 ಲಕ್ಷ ರೂ. ನಗದು, ಅಲ್ಮೇರಾದಲ್ಲಿದ್ದ 500 ಗ್ರಾಂ ಚಿನ್ನಾಭರಣಗಳು ಅವರಿಗೆ ಸಿಕ್ಕವು. ‘ಇಷ್ಟು ನಗದನ್ನು ಮನೆಯಲ್ಲಿಟ್ಟುಕೊಂಡಿರಬೇಕಾದರೆ ಇದು ಲಂಚದ ಹಣವೇ ಆಗಿರಬೇಕು’ ಎಂದು ಅವರು ಹೇಳಿದಾಗ, ಇದು ಮಗಳ ಲಗ್ನಕ್ಕಾಗಿ ಕೂಡಿಟ್ಟ ಹಣವೆಂದು ರಮಾಕಾಂತ ಹೇಳಿದ. ಅವನ ಮಾತುಗಳನ್ನು ಅವರ್ಯಾರೂ ನಂಬಲಿಲ್ಲ. ಜಪ್ತು ಮಾಡಿದ ಹಣ ಮತ್ತು ಒಡವೆಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡ ಆಗಂತುಕರು, ‘ನಿಮ್ಮನ್ನು ಬಂಧಿಸಲಾಗುತ್ತಿದೆ, ನೀವು ನಮ್ಮ ಜೊತೆ ಕಚೇರಿಗೆ ಬರಬೇಕು. ಅಲ್ಲಿಂದ ನಿಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರುಮಾಡುತ್ತೇವೆ’ ಎಂದು ಹೇಳಿ ಅವನನ್ನು ದರದರನೆ ಎಳೆದುಕೊಂಡು ಮನೆಯ ಹೊರಗೆ ಹೊರಟರು.

‘ನಮ್ಮ ಇಲಾಖಾ ವಾಹನ ಪೆಟ್ರೋಲ್ ಹಾಕಿಸಲು ಹೋಗಿದೆ. ಅದು ಬರಲು ಇನ್ನು ಸ್ವಲ್ಪ ಹೊತ್ತಾಗುತ್ತದೆ, ನಿಮ್ಮ ಕಾರಿನಲ್ಲಿಯೇ ಹೋಗೋಣ’ ಎಂದು ಹೇಳಿದ ಆಗಂತುಕರು ರಮಾಕಾಂತನ ಕಾರಿನಲ್ಲಿಯೇ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಬಂದರು. ಕಚೇರಿಯ ಹೊರಗೆ ಅವರೆಲ್ಲರೂ ಕಾರಿನಿಂದ ಇಳಿದು, ‘ನೀವು ಇಲ್ಲೇ ಪಕ್ಕದಲ್ಲಿ ಕಾರ್ ನಿಲ್ಲಿಸಿ ಕಾರಿನಲ್ಲಿಯೇ ಕುಳಿತಿರಿ, ನಾವು ಮೇಲಾಧಿಕಾರಿಗಳಿಗೆ ನೀವು ಬಂದಿರುವುದನ್ನು ತಿಳಿಸುತ್ತೇವೆ. ನಾವು ಕರೆದ ನಂತರ ಒಳಗೆ ಬನ್ನಿ. ಆನಂತರ ಮೇಲಾಧಿಕಾರಿಗಳು ಸೂಚಿಸಿದಂತೆ ನಿಮ್ಮನ್ನು ನ್ಯಾಯಾಧೀಶರ ಮನೆಗೆ ಕರೆದುಕೊಂಡು ಹೋಗುತ್ತೇವೆ’ ಎಂದು ಹೇಳಿ ಕಟ್ಟಡದ ಒಳಗೆ ಹೋದರು. ರಮಾಕಾಂತ್ ಕಾರನ್ನು ರ್ಪಾಂಗ್​ನಲ್ಲಿ ನಿಲ್ಲಿಸಿ ಕಾಯುತ್ತ ಕುಳಿತ.

ಸ್ವಲ್ಪ ಹೊತ್ತಿನ ನಂತರ ಕಾವಲುಗಾರನೊಬ್ಬ, ‘ಈ ಕಟ್ಟಡದಲ್ಲಿನ ಕಚೇರಿಗಳೆಲ್ಲ ಬಂದ್ ಆದವಲ್ಲಾ. ನೀವು ಯಾರಿಗಾಗಿ ಕಾಯುತ್ತಿರುವಿರಿ?’ ಎಂದು ಕೇಳಿದಾಗ, ರಮಾಕಾಂತ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ. ‘ಈ ಇಡೀ ಕಟ್ಟಡದಲ್ಲಿ ಈಗ ಯಾರೂ ಇಲ್ಲ, ನೀವು ನಾಳೆ ಬನ್ನಿ’ ಎಂದ ಆ ಕಾವಲುಗಾರ. ತನ್ನನ್ನು ಕರೆದುಕೊಂಡು ಬಂದಿದ್ದ ಅಧಿಕಾರಿಗಳು ತಮ್ಮ ಕಚೇರಿಗೆ ಹೋದದ್ದಾಗಿ ತಿಳಿಸಿದ ರಮಾಕಾಂತ ಕಾವಲುಗಾರನ ಜತೆಗೆ ಅಲ್ಲಿಗೆ ಹೋದ. ಕಚೇರಿಗೆ ಬೀಗ ಹಾಕಿತ್ತು. ರಮಾಕಾಂತನ ಮನೆಗೆ ಬಂದಿದ್ದವರು ಯಾರೂ ಅಲ್ಲಿರಲಿಲ್ಲ.

ತಬ್ಬಿಬ್ಬಾದ ರಮಾಕಾಂತ ಮಾರನೆಯ ದಿನ ಆ ಕಚೇರಿಗೆ ಹೋಗಿ ಅಧಿಕಾರಿಗಳನ್ನು ಭೇಟಿ ಮಾಡಿ ಹಿಂದಿನ ಸಂಜೆ ತನ್ನ ಮನೆಯ ಮೇಲೆ ದಾಳಿ ನಡೆದಿದ್ದ ವಿಷಯವನ್ನು ತಿಳಿಸಿದ. ‘ನಿನ್ನೆ ನಮ್ಮ ಕಚೇರಿಯಿಂದ ಯಾರ ಮನೆಯ ಮೇಲೆಯೂ ದಾಳಿ ನಡೆಸಿಲ್ಲವಲ್ಲ’ ಎಂದು ಅವರು ಹೇಳಿದಾಗ ರಮಾಕಾಂತ್​ನ ಮನೆಗೆ ಬಂದಿದ್ದವರು ನಕಲಿ ಅಧಿಕಾರಿಗಳೆಂದು ತಿಳಿಯಿತು. ಎಸಿಬಿ ಅಧಿಕಾರಿಗಳ ಸೂಚನೆಯ ಮೇರೆಗೆ ಆತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ.

ಮನೆ ಅತಿಕ್ರಮಿಸಿ ಕಳ್ಳತನ ಮಾಡಿದ ದೂರನ್ನು ದಾಖಲಿಸಿದ ಪೊಲೀಸರು ರಮಾಕಾಂತನ ಮನೆಯ ಹೊರಗೆ ಇದ್ದ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ನಾಲ್ಕು ಮಂದಿ ಒಂದೇ ಆಟೋರಿಕ್ಷಾದಲ್ಲಿ ಮಧ್ಯಾಹ್ನ 3.30ಕ್ಕೆ ಬಂದದ್ದು ಅದರಲ್ಲಿ ದಾಖಲಾಗಿತ್ತು. ಅವರು ರಮಾಕಾಂತನ ಜತೆ ಅವನ ಕಾರಿನಲ್ಲಿ ಹೋದದ್ದೂ ದಾಖಲಾಗಿತ್ತು. ಆದರೆ ಅವರ ಮುಖಗಳು ಅಸ್ಪಷ್ಟವಾಗಿದ್ದವು. ಮನೆಯಲ್ಲಿನ ವಸ್ತುಗಳ ಮೇಲೆ ಮೂಡಿದ್ದ ಆಗಂತುಕರ ಬೆರಳಚ್ಚುಗಳನ್ನು ತೆಗೆಯಲಾಯಿತು. ಯಾವ ಸುಳಿವೂ ಸಿಗಲಿಲ್ಲ.

ಮನೆಯಲ್ಲಿ ಹಣವಿದ್ದ ವಿಷಯ ಕುಟುಂಬದವರಿಗಲ್ಲದೇ ಬೇರಾರಿಗೆ ತಿಳಿದಿತ್ತು ಎಂದು ರಮಾಕಾಂತ ರ್ತಸಿದಾಗ ಈ ಮಾಹಿತಿ ಪ್ರವೀಣನಿಗಷ್ಟೇ ತಿಳಿದಿತ್ತು ಎನ್ನುವುದು ಹೊರಬಿತ್ತು. ಮನೆ ಕಳ್ಳತನದಲ್ಲಿ ಆತನ ಕೈವಾಡ ಇರಬಹುದು ಎಂದು ಅನುಮಾನ ಬಂದು ರಮಾಕಾಂತ ಪ್ರವೀಣನಿಗೆ ಫೋನ್ ಮಾಡಿ, ಎರಡು ದಿನಗಳಿಂದ ಏಕೆ ಮನೆಯತ್ತ ಬರಲಿಲ್ಲ ಎಂದು ಕೇಳಿದಾಗ ಆತ ಹಾರಿಕೆಯ ಉತ್ತರ ಕೊಟ್ಟ.

ರಮಾಕಾಂತ್ ತನಗೆ ಪ್ರವೀಣನ ಮೇಲೆ ಸಂಶಯವಿರುವುದಾಗಿ ಪೊಲೀಸರಿಗೆ ತಿಳಿಸಿದ. ಪೊಲೀಸರು ಪ್ರವೀಣ್​ನನ್ನು ಠಾಣೆಗೆ ಕರೆಸಿದರು. ಆತ ಹೀಗೆಂದ: ‘ನನಗೆ ತುರ್ತಾಗಿ 20 ಲಕ್ಷ ರೂ. ಬೇಕಾಗಿತ್ತು. ರಮಾಕಾಂತ್ ಭಾರೀ ಮೊತ್ತದ ಹಣವನ್ನು ತಂದು ಮನೆಯಲ್ಲಿಟ್ಟಿದ್ದ ವಿಷಯ ನನಗೆ ತಿಳಿಯಿತು. ಸಾಲ ಕೇಳಿದಾಗ ಆತ ನಿರಾಕರಿಸಿದ. ಬೇರೆ ಎಲ್ಲಿಂದಲೂ ಸಾಲ ಸಿಗಲಿಲ್ಲ. ನನಗೆ ಕೃಷ್ಣಮೂರ್ತಿ ಎಂಬ ಕಾನ್​ಸ್ಟೆಬಲ್​ನ ಪರಿಚಯವಿತ್ತು. ಆತನಲ್ಲಿ ನನ್ನ ತೊಂದರೆಯನ್ನು ಹೇಳಿಕೊಂಡೆ. ಆತ ತಾನು ಸಹಚರರ ಮೂಲಕ ರಮಾಕಾಂತನ ಮನೆಯ ಮೇಲೆ ದಾಳಿ ಮಾಡಿ ಅಲ್ಲಿದ್ದ ಹಣವನ್ನು ದೋಚುತ್ತೇನೆಂದು ತಿಳಿಸಿ ಈ ಕೆಲಸ ಮಾಡಲು 5 ಲಕ್ಷ ರೂ ಕೇಳಿದ. ನಾನು ಒಪ್ಪಿದೆ. ಆತ ಕೆಲವು ರೌಡಿಗಳ ಸಹಾಯದಿಂದ ಮನೆಯಲ್ಲಿದ್ದ 19 ಲಕ್ಷ ರೂ. ಮತ್ತು 500 ಗ್ರಾಂ ಚಿನ್ನಾಭರಣಗಳನ್ನು ಎಗರಿಸಿಕೊಂಡು ಬಂದ. ಅವನಿಗೆ 5 ಲಕ್ಷ ರೂ. ಕೊಟ್ಟು ಉಳಿದ ಹಣ ಮತ್ತು ಆಭರಣಗಳನ್ನು ನಾನೇ ಇಟ್ಟುಕೊಂಡೆ.’ ಪ್ರವೀಣನ ಹೇಳಿಕೆಯ ಮೇರೆಗೆ ಪೋಲಿಸರು ಇತರರನ್ನು ಬಂಧಿಸಿ, 16 ಲಕ್ಷ ರೂ ನಗದು ಮತ್ತು ಆಭರಣಗಳನ್ನು ಜಪ್ತಿಮಾಡಿಕೊಂಡರು. ಕೃಷ್ಣಮೂರ್ತಿಯನ್ನು ಕೆಲಸದಿಂದ ವಜಾ ಮಾಡಲಾಯಿತು. ಕಳವಿನ ಪ್ರಕರಣ ನ್ಯಾಯಾಂಗ ವಿಚಾರಣೆಯಲ್ಲಿದೆ. ‘ಬೇರೊಬ್ಬರು ನಿಮಗೆ ತೊಂದರೆಯುಂಟುಮಾಡಬಹುದೆಂದು ತಿಳಿದೂ ಅವರು ಹಾಗೆ ಮಾಡುವುದಿಲ್ಲವೆಂಬ ನಂಬಿಕೆಯಿಂದ ನೀವು ಅವರಿಗೆ ಕೊಡುವ ಶಕ್ತಿಯೇ ಪ್ರೀತಿ’ ಎಂದು ಅನಾಮಿಕನೊಬ್ಬ ಬರೆದಂತೆ, ಪ್ರವೀಣನಿಗಿತ್ತ ಪ್ರೀತಿಯೇ ರಮಾಕಾಂತನಿಗೆ ಮುಳುವಾಯಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)