ಆಸುಪಾಸಿನ ಜನ ಮನೆಯೊಳಗೆ ಹೋದಾಗ ಕಂಡ ದೃಶ್ಯ ಭಯಾನಕವಾಗಿತ್ತು. ಒಂದೇ ರೂಮಿನ ಆ ಮನೆಯ ಬೆಡ್ರೂಮಿನಿಂದ ರಕ್ತದ ಕೋಡಿ ಹರಿದು ಬಂದಿದ್ದು ಹಜಾರವು ರಕ್ತದ ಕೆರೆಯಂತಾಗಿತ್ತು. ರೂಮಿನಲ್ಲಿ ಲಕ್ಷ್ಮಿಯ ಸಹಿತ ಅವಳ ಮೂರು ಮಕ್ಕಳು ಹಾಗೂ ಸುಮಾರು 13 ವರ್ಷದ ಇನ್ನೊಬ್ಬ ಬಾಲಕ ಶವವಾಗಿ ಬಿದ್ದಿದ್ದರು. ಆ ಬಾಲಕ ಯಾರೆಂದು ತಿಳಿಯಲಿಲ್ಲ. ಕೂಡಲೇ ಪೊಲೀಸರಿಗೆ ಕರೆ ಹೋಯಿತು. ಲಕ್ಷ್ಮಿಯ ಗಂಡ ಅರ್ಜುನ ಅಲ್ಲಿರಲಿಲ್ಲ. ಅವನನ್ನು ಸಂರ್ಪಸಲು ಪೊಲೀಸರು ಪ್ರಯತ್ನಿಸಿದರೂ ಅವನ ಫೋನ್ ನಂಬರ್ ಯಾರಿಗೂ ಗೊತ್ತಿರಲಿಲ್ಲ. ಮನೆಯ ಕಪಾಟಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಕಂಡು ಸ್ವತ್ತಿಗಾಗಿ ಕೊಲೆ ನಡೆದಿರಬಹುದೆಂದು ಶಂಕಿಸಲಾಯಿತು. ಲಭ್ಯವಿದ್ದ ಬೆರಳಚ್ಚು ಗುರುತುಗಳನ್ನು ಪಡೆಯಲಾಯಿತು. ಶವಗಳ ಮೇಲೆ ಪಂಚನಾಮೆ ಮಾಡಿದಾಗ ಪ್ರತಿಯೊಬ್ಬರ ಎದೆ ಮತ್ತು ಕುತ್ತಿಗೆಗೆ ಹರಿತವಾದ ಆಯುಧದಿಂದ ಎರಡು ಮೂರು ಬಾರಿ ಕೊಚ್ಚಿ ಕೊಲೆಮಾಡಿದ್ದು ತಿಳಿಯಿತು. ಆ ಆಯುಧ ಸ್ಥಳದಲ್ಲಿ ಸಿಕ್ಕಲಿಲ್ಲ.
ಅಂತೂ ಅರ್ಜುನನ ಸೆಲ್ ನಂಬರನ್ನು ಹುಡುಕಿದ ಪೊಲೀಸರು ಆತನನ್ನು ಸಂರ್ಪಸಿದರು. ಆತ ಕೆಲಸದ ನಿಮಿತ್ತ ಆಂಧ್ರಪ್ರದೇಶದ ವಿಜಯವಾಡಕ್ಕೆ ಬಂದಿರುವೆನೆಂದು ತಿಳಿಸಿ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಲ್ಲದೇ ತನ್ನ ಸೋದರನ ಪುತ್ರ ಗೋವಿಂದನೂ ಇದ್ದ ಎಂದ. ತಾನು ಕೂಡಲೇ ಊರಿಗೆ ವಾಪಸಾಗುವುದಾಗಿ ತಿಳಿಸಿದ. ಏತನ್ಮಧ್ಯೆ ಪೊಲೀಸರು ಅರ್ಜುನ ಕಳೆದ ಎರಡು ದಿನಗಳು ಎಲ್ಲೆಲ್ಲಿ ಇದ್ದನೆಂದು ತಿಳಿಯಲು ಅವನ ಫೋನನ್ನು ಲೊಕೇಷನ್ ಸರ್ಚ್ಗೆ ಹಾಕಿದರು. ಅದೇ ರಾತ್ರಿ ಊರಿಗೆ ವಾಪಸಾದ ಅರ್ಜುನ ಎಲ್ಲ ಮೃತದೇಹಗಳನ್ನೂ ಗುರುತಿಸಿ ತನಗೆ ಯಾರೂ ಶತ್ರುಗಳಿಲ್ಲ, ಯಾರೊಡನೆಯೂ ಯಾವ ರೀತಿಯ ವ್ಯಾಜ್ಯವೂ ಇಲ್ಲ, ಕೊಲೆಗೆ ಕಾರಣ ಗೊತ್ತಿಲ್ಲ ಎಂದು ಹೇಳಿ ಅಳಲಾರಂಭಿಸಿದ. ಮನೆಯಲ್ಲಿ ಹೆಂಡತಿ ಧರಿಸುತ್ತಿದ್ದ ಒಂದು ಜೊತೆ ಚಿನ್ನದ ಬಳೆ ಮತ್ತು ಒಂದು ಸರದ ಹೊರತಾಗಿ ಬೇರೇನೂ ಕಳುವಾಗಿಲ್ಲ ಎಂದ. ಲಕ್ಷ್ಮಿ ಮೊಬೈಲ್ ಹೊಂದಿರಲಿಲ್ಲ ಎಂದ.
ಅರ್ಜುನನ ಮೊಬೈಲ್ ಫೋನಿನ ರೆಕಾರ್ಡನ್ನು ಪರಿಶೀಲಿಸಿದಾಗ ಆತ ಆಂಧ್ರಕ್ಕೆ ಹೋದದ್ದು ಖಾತ್ರಿಯಾಯಿತಲ್ಲದೆ ಆತನ ಬಗ್ಗೆ ಸಂಶಯಪಡುವ ಬೇರಾವುದೇ ವಿವರಗಳು ಸಿಗಲಿಲ್ಲ. ನಂತರ ತನಿಖಾಧಿಕಾರಿ ಅರ್ಜುನನ ಮನೆಯ ರಸ್ತೆಯಲ್ಲಿ ಯಾವುದಾದರೂ ಸಿಸಿಟಿವಿ ಕ್ಯಾಮರಾ ಇದೆಯೇ ಎಂದು ಪರಿಶೀಲಿಸಿದಾಗ ಹತ್ತಿರದಲ್ಲಿದ್ದ ಚಿನ್ನಾಭರಣ ಅಂಗಡಿಯೊಂದರ ಹೊರಗೆ ಒಂದು ಕ್ಯಾಮರಾ ಕಂಡಿತು. ಅದರ ರೆಕಾರ್ಡಿಂಗ್ ಫುಟೇಜ್ ಪರಿಶೀಲಿಸಿದಾಗ ಒಬ್ಬ ಹೆಣ್ಣು ಮಗಳು ಶನಿವಾರ ರಾತ್ರಿ 7 ಗಂಟೆಗೆ ಲಕ್ಷ್ಮಿಯ ಮನೆಗೆ ಬಂದಿದ್ದು ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದು ದಾಖಲಾಗಿತ್ತು.
ಅದನ್ನು ಅರ್ಜುನನಿಗೆ ತೋರಿಸಿದಾಗ ಆ ಹೆಣ್ಣುಮಗಳು ತನ್ನ ಸಂಬಂಧಿಕ ಶಿವಕುಮಾರ್ನ ಪತ್ನಿ ಪಾರ್ವತಿ, ಸಮೀಪದ ಪಟ್ಟಣದಲ್ಲಿ ವಾಸಿಸುತ್ತಿದ್ದಾಳೆಂದ. ಪಾರ್ವತಿಯನ್ನು ಅವಳ ಗಂಡನ ಜತೆಗೇ ಪೊಲೀಸ್ ಠಾಣೆಗೆ ಕರೆಸಲಾಯಿತು. ಆಕೆ ಲಕ್ಷ್ಮಿಯನ್ನು ಭೇಟಿಯಾಗಲು ಊರಿನಿಂದ ಬಸ್ಸಿನಲ್ಲಿ ಬಂದದ್ದಾಗಿ ತಿಳಿಸಿ ತಾವಿಬ್ಬರೂ ಲೋಕಾಭಿರಾಮವಾಗಿ ಮಾತನಾಡಿ ಊಟಮಾಡಿದೆವೆಂದು ಹೇಳಿದಳು. ರಾತ್ರಿ 10 ಗಂಟೆಗೆ ಲಕ್ಷ್ಮಿಯ ಮನೆಯಿಂದ ಹೊರಟು ಬಸ್ಸಿನಲ್ಲಿ ಊರಿಗೆ ವಾಪಸಾದೆ ಎಂದಳು. ಕೊಲೆಯಾದ ವಿಷಯ ತಿಳಿದ ಕೂಡಲೇ ತಾನು ಅಲ್ಲಿಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಿಯೂ, ಕೊಲೆಯ ಬಗ್ಗೆ ತನಗೆ ಏನೂ ತಿಳಿಯದೆಂದೂ ಹೇಳಿದಳು.
ಪಾರ್ವತಿಯ ಉತ್ತರಗಳಿಂದ ಸಂಶಯಗೊಂಡ ಪೊಲೀಸರು ಅವಳು ಮೊಬೈಲ್ ಬಳಸುತ್ತಾಳೆಯೇ ಎಂದು ಪರಿಶೀಲಿಸಿದಾಗ ಆಕೆಯ ಹೆಸರಿನಲ್ಲಿ ಯಾವುದೇ ಮೊಬೈಲ್ ಇರಲಿಲ್ಲ. ತನಿಖಾ ತಂಡದ ಒಬ್ಬ ಕಾನ್ಸ್ಟೆಬಲ್ ಹಲವಾರು ಬಾರಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪಾರ್ವತಿ ಲಕ್ಷ್ಮಿಯ ಮನೆಗೆ ಬರುವಾಗ ಉಟ್ಟಿದ್ದ ಸೀರೆಗೂ ಹೋಗುವಾಗ ಉಟ್ಟಿದ್ದ ಸೀರೆಗೂ ವ್ಯತ್ಯಾಸವಿರುವುದನ್ನು ಕಂಡರು. ಅವಳನ್ನು ಮತ್ತೊಮ್ಮೆ ಠಾಣೆಗೆ ಕರೆಯಿಸಿ ಕೂಲಂಕಷವಾಗಿ ಪ್ರಶ್ನಿಸಿದಾಗ ಆಕೆ ಹೀಗೆಂದಳು: ‘ನಾನು ಮತ್ತು ಅರ್ಜುನ ಒಂದೇ ಗ್ರಾಮದವರು. ಆತ ಮದುವೆಯಾಗಿ ಕರ್ನಾಟಕಕ್ಕೆ ಹೋದ ನಂತರ ನನ್ನನ್ನೂ ಗಂಡನ ಜತೆ ತನ್ನೂರಿಗೇ ಬರಲು ತಿಳಿಸಿದ. ಅವನ ಸಹಾಯದಿಂದಲೇ ನನ್ನ ಗಂಡ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ಮನ್ ಕೆಲಸವನ್ನು ಪಡೆದ. ನಾವು ಹತ್ತಿರದ ಊರಿನಲ್ಲಿಯೇ ವಾಸಿಸತೊಡಗಿ ಕಾಲಕಾಲಕ್ಕೆ ಭೇಟಿಯಾಗುತ್ತಿದ್ದೆವು. ಕೆಲಕಾಲದ ನಂತರ ನನಗೆ ಅರ್ಜುನನ ಜೊತೆ ಅನೈತಿಕ ಸಂಬಂಧ ಬೆಳೆಯಿತು. ಈ ವಿಷಯ ಲಕ್ಷ್ಮಿಗೆ ತಿಳಿದಾಗ ಆಕೆ ರಂಪಾಟ ಮಾಡಿದಳು. ಹೀಗಾಗಿ ಅರ್ಜುನ ನನ್ನೊಡನೆ ಸಂಪರ್ಕ ಕಡಿತಗೊಳಿಸಿದ. ನನಗೆ ಅರ್ಜುನನನ್ನು ಬಿಡಲು ಸಾಧ್ಯವಾಗಲಿಲ್ಲ. ಆಗ ನಾನು ಮೊಬೈಲ್ ಖರೀದಿಸಿ ನಮ್ಮ ಪಕ್ಕದ ಮನೆಯವರ ಆಧಾರ್ ಕಾರ್ಡ್ ನಕಲನ್ನು ಬಳಸಿ ಒಂದು ಸಿಮ್ ಖರೀದಿಸಿದೆ. ಅದನ್ನು ಬಳಸಿ ಅರ್ಜುನನನ್ನು ಸಂರ್ಪಸತೊಡಗಿದೆ. ನಾವಿಬ್ಬರೂ ಗುಟ್ಟಾಗಿ ತಿಂಗಳಿಗೆರಡು ಬಾರಿ ಕೂಡುತ್ತಿದ್ದೆವು. ಲಕ್ಷ್ಮಿಯನ್ನು ಬಿಟ್ಟು ನನ್ನನ್ನು ಮದುವೆಯಾಗಲು ಅರ್ಜುನನನ್ನು ಕೋರಿದಾಗ, ಆತ ಖಡಾಖಂಡಿತವಾಗಿ ತಿರಸ್ಕರಿಸಿದ. ತನ್ನ ಮೂರು ಮಕ್ಕಳ ಬೆಳವಣಿಗೆಗಾಗಿ ಲಕ್ಷ್ಮಿ ತನ್ನ ಪತ್ನಿಯಾಗಿರಬೇಕಾದ್ದು ಅನಿವಾರ್ಯ ಎಂದದ್ದಲ್ಲದೇ ನಾನೂ ಗಂಡನನ್ನು ಬಿಡದಿರಲು ಸೂಚಿಸಿದ. ನಾವು ಹೀಗೆ ಅನೈತಿಕ ಸಂಪರ್ಕದಲ್ಲಿಯೇ ಇರೋಣವೆಂದ.
ಹೇಗಾದರೂ ಮಾಡಿ ಲಕ್ಷ್ಮಿಯನ್ನು ಇಲ್ಲದಂತೆ ಮಾಡಿದರೆ ಅರ್ಜುನ ನನ್ನನ್ನು ಮದುವೆಯಾಗಿಯೇ ತೀರುತ್ತಾನೆ ಎಂದು ರ್ತಸಿದೆ. ಅರ್ಜುನ ಎರಡು ದಿನ ಊರಿಗೆ ಹೋಗುವುದಾಗಿ ಹೇಳಿದಾಗ ಆ ಸಮಯವನ್ನುಪಯೋಗಿಸಿ ಲಕ್ಷ್ಮಿಯನ್ನು ಕೊಲೆಮಾಡಲು ತೀರ್ವನಿಸಿದೆ. ನನ್ನ ಮನೆಯ ಬಳಿಯಿದ್ದ ಕಟುಕನ ಅಂಗಡಿಯಿಂದ ದೊಡ್ಡ ಚಾಕುವನ್ನು ಪಡೆದು ಅದನ್ನು ಸೀರೆಯಲ್ಲಿ ಅಡಗಿಸಿಕೊಂಡಿದ್ದೆ. ಲಕ್ಷ್ಮಿಯ ಜೊತೆ ಊಟ ಮಾಡಿದ ಬಳಿಕ ಆಕೆ ನನಗೆ ಅಲ್ಲಿಯೇ ಮಲಗಲು ಹೇಳಿದಳು. ನಾವೆಲ್ಲರೂ ಸಾಲಾಗಿ ಚಾಪೆಯ ಮೇಲೆ ಮಲಗಿದ್ದೆವು, ಎಲ್ಲ ಮಕ್ಕಳೂ ನಿದ್ರೆಗೆ ಜಾರಿದ ನಂತರ ನಾನು ಲಕ್ಷ್ಮಿಗೆ ಅರ್ಜುನನನ್ನು ಬಿಟ್ಟುಬಿಡಲು ತಾಕೀತು ಮಾಡಿದೆ. ಆಕೆ ಸುತರಾಂ ಒಪ್ಪಲಿಲ್ಲ. ಆಗ ನಾನು ಸೀರೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕುವಿನಿಂದ ಅವಳ ಕುತ್ತಿಗೆಗೆ ಹೊಡೆದೆ. ಅವಳು ಸತ್ತಳು. ಅದೇ ಸಮಯಕ್ಕೆ ಅಲ್ಲಿ ಮಲಗಿದ್ದ ಅರ್ಜುನನ ಅಣ್ಣನ ಮಗ ಶೌಚಾಲಯಕ್ಕೆ ಹೋಗಲು ಮೇಲೆದ್ದು ನನ್ನ ಕೃತ್ಯವನ್ನು ನೋಡಿಬಿಟ್ಟ. ಆಗ ಗಾಬರಿಗೊಂಡು ಅವನನ್ನೂ ತಿವಿದು ಕೊಂದೆ. ಆನಂತರ ಲಕ್ಷ್ಮಿಯ ಇತರ ಮಕ್ಕಳು ಎಚ್ಚರಗೊಂಡು ರೋದಿಸತೊಡಗಿದರು. ಅವರು ಬದುಕಿದ್ದರೆ ನನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡುತ್ತಾರೆ ಎಂದು ಅವರನ್ನೂ ತಿವಿದು ಕೊಂದೆ. ನನ್ನ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಅವನ್ನು ತೆಗೆದು ಲಕ್ಷ್ಮಿಯ ಕಪಾಟಿನಲ್ಲಿದ್ದ ಅವಳ ಸೀರೆ, ಬ್ಲೌಸ್ ಧರಿಸಿದೆ. ರಕ್ತಸಿಕ್ತ ಚಾಕು ಮತ್ತು ಬಟ್ಟೆಗಳನ್ನು ಬ್ಯಾಗ್ನಲ್ಲಿ ತುಂಬಿ ಮನೆಯಿಂದ ಹೊರಬಂದೆ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಕೆರೆಯಲ್ಲಿ ಬ್ಯಾಗಿನಲ್ಲಿದ್ದ ಬಟ್ಟೆಗಳು ಮತ್ತು ಚಾಕುವನ್ನು ಎಸೆದೆ. ನಂತರ ಬಸ್ಸ್ಟಾ್ಯಂಡಿಗೆ ಬಂದು ರಿಕ್ಷಾದಲ್ಲಿ ನನ್ನ ಮನೆಗೆ ವಾಪಸ್ಸಾದೆ’.
ನೀನು ಲಕ್ಷ್ಮಿಯ ಬಳೆ ಮತ್ತು ಸರವನ್ನು ಏಕೆ ತೆಗೆದುಕೊಂಡೆ? ಎಂದು ಪೊಲೀಸರು ಕೇಳಿದಾಗ, ‘ಕೊಲೆಗಳನ್ನು ಯಾರೋ ದರೋಡೆಕೋರರು ಮಾಡಿದ್ದಾರೆ ಎಂದು ಬಿಂಬಿಸಲು ಹಾಗೆ ಮಾಡಿದೆ. ನನ್ನ ಉದ್ದೇಶ ಲಕ್ಷ್ಮಿಯನ್ನು ಮಾತ್ರ ಸಾಯಿಸುವುದಾಗಿತ್ತು. ಆದರೆ ಮಕ್ಕಳು ಆ ಕೊಲೆಯನ್ನು ನೋಡಿದ್ದರಿಂದ ಅವರನ್ನೂ ಸಾಯಿಸಬೇಕಾಯಿತು. ಅರ್ಜುನನನ್ನು ಮದುವೆಯಾಗಿ ನನ್ನವನನ್ನಾಗಿಸಿಕೊಳ್ಳಬೇಕೆಂಬುದೇ ಏಕೈಕ ಉದ್ದೇಶವಾಗಿತ್ತು’ ಎಂದಳು. ಪಾರ್ವತಿ ಬಳಸುತ್ತಿದ್ದ ಸೆಲ್ ಫೋನನ್ನು ಜಪ್ತಿ ಮಾಡಿ ಅದರ ಲೊಕೇಷನ್ ನೋಡಿದಾಗ ಆಕೆ ಹೇಳಿದ್ದೆಲ್ಲವೂ ಸಾಬೀತಾಯಿತು. ಕೆರೆಯೊಳಗಿಂದ ಕೊಲೆಗೆ ಉಪಯೋಗಿಸಿದ ಚಾಕು ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಹೊರತೆಗೆಯಲಾಯಿತಲ್ಲದೇ ಪಾರ್ವತಿಯ ಮನೆಯಿಂದ ಲಕ್ಷ್ಮಿಯ ಆಭರಣಗಳನ್ನೂ ವಶಪಡಿಸಿಕೊಳ್ಳಲಾಯಿತು. ಪಾರ್ವತಿಯ ಬೆರಳಚ್ಚು ಗುರುತುಗಳು ಲಕ್ಷ್ಮಿಯ ಮನೆಯಲ್ಲಿ ಸಿಕ್ಕ ಗುರ್ತಗಳಿಗೆ ಹೋಲಿಕೆಯಾದವು.
ಪಾರ್ವತಿಯನ್ನು ಬಂಧಿಸಿ ಅವಳ ಮೇಲೆ ಮೊಕದ್ದಮೆ ಹೂಡಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಅಮಾಯಕ ಮಕ್ಕಳೂ ಸೇರಿ ಐವರ ಕೊಲೆಗೈದ ಪಾರ್ವತಿಗೆ ಮರಣದಂಡನೆಯಾಗುವುದು ಬಹುತೇಕ ಖಚಿತ. ‘ಭಾವಾವೇಶದ ಆನಂದಗಳಿಗೆ ಹಿಂಸಾತ್ಮಕ ಅಂತ್ಯಗಳೇ ಇರುತ್ತವೆ’ಎಂದು ಷೇಕ್ಸ್ಪಿಯರ್ ‘ರೋಮಿಯೋ ಜೂಲಿಯಟ್’ ನಾಟಕದಲ್ಲಿ ಹೇಳಿದ್ದು ಎಷ್ಟು ನಿಜವಲ್ಲವೇ?
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)