ಅಂಕಣ

ವೈವಾಹಿಕ ಕಿರುಕುಳದ ಈ ಪರಿ!

Webdesk - Ravikanth
ಇಪ್ಪತ್ತಾರು ವರ್ಷದ ನಿತ್ಯಾ ಹಳೆಯ ಮೈಸೂರಿನ ಜಿಲ್ಲೆಯೊಂದರ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು ಲೈಬ್ರರಿ ಸೈನ್ಸ್ ಪದವಿಯ ನಂತರ ಕಾಲೇಜೊಂದರಲ್ಲಿ ಗ್ರಂಥಪಾಲಕಿಯಾಗಿದ್ದಳು. ನೆರೆಯ ಜಿಲ್ಲಾ ಕೇಂದ್ರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಶ್ರೀಮಂತ ಕುಟುಂಬವೊಂದು ಆಕೆಗಾಗಿ ಪುತ್ರ ಸುಕುಮಾರ್​ನ ವಿವಾಹದ ಪ್ರಸ್ತಾಪವನ್ನು ತಂದಿತು. ಅದೊಂದು ಅವಿಭಕ್ತ ಕುಟುಂಬವಾಗಿದ್ದು ಆ ಮನೆಯಲ್ಲಿ ಸುಕುಮಾರನ ಮಾತಾಪಿತರಲ್ಲದೇ ಅವನ ಹಿರಿಯ ಸೋದರ ರಾಮಕುಮಾರ್ ಮತ್ತು ಕಿರಿಯ ಸೋದರ ಮೋಹನ್ ಕುಮಾರ್ ಸಹ ಇದ್ದರು. ರಾಮಕುಮಾರ್​ನ ಪತ್ನಿ ಶೀಲಾ. ಅವರಿಗೆ ಮಕ್ಕಳಿರಲಿಲ್ಲ. ಮೋಹನ್ ಕುಮಾರ್​ಗೆ ಇನ್ನೂ ಮದುವೆಯಾಗಿರಲಿಲ್ಲ.

‘ನಾವೆಲ್ಲರೂ ಅವಿಭಾಜ್ಯ ಕುಟುಂಬದಲ್ಲಿಯೇ ಇರುವುದು. ನಮ್ಮ ಕುಟುಂಬಕ್ಕೆ ಸೇರಲು ಒಪ್ಪಿಗೆ ಇದ್ದರೆ ಮಾತ್ರ ಮದುವೆ ಮಾಡಿಕೊಳ್ಳಬಹುದು, ಮದುವೆಯ ನಂತರ ನೀನು ನೌಕರಿ ಮಾಡಬಾರದು. ಮನೆಯಲ್ಲಿಯೇ ಅತ್ತೆ ಮತ್ತು ಅತ್ತಿಗೆಗೆ ಸಹಾಯಮಾಡಬೇಕು’ ಎಂದು ಸುಕುಮಾರ್ ನಿತ್ಯಾಳನ್ನು ನೋಡಲು ಬಂದಾಗ ಷರತ್ತನ್ನು ಹಾಕಿದ. ನಿತ್ಯಾಗೆ ಇದು ಇಷ್ಟವಿಲ್ಲದ ಕಾರಣ ಆಕೆ ಈ ಸಂಬಂಧಕ್ಕೆ ಒಪ್ಪಲಿಲ್ಲ. ಆದರೆ ಅವಳ ಮಾತಾಪಿತರು ಸುಕುಮಾರ್​ನದು ಹೆಸರುವಾಸಿ ಶ್ರೀಮಂತ ಕುಟುಂಬವಾದ್ದರಿಂದ ನಿತ್ಯಾಳ ಮೇಲೆ ಒತ್ತಡ ಹೇರಿದರು. ಒಲ್ಲದ ಮನಸ್ಸಿನಿಂದಲೇ ಆಕೆ ಲಗ್ನಕ್ಕೆ ಒಪ್ಪಿದಳು. ನವದಂಪತಿ ಮಧುಚಂದ್ರದಿಂದ ಹಿಂತಿರುಗಿದ ಕೂಡಲೇ ಅವಳ ಅತ್ತೆ ಪಾರ್ವತಮ್ಮ ಮನೆಯಲ್ಲಿ ಯಾವ ರೀತಿ ಸಂಸಾರ ಮಾಡಬೇಕೆಂದು ದೊಡ್ಡ ಲೆಕ್ಚರನ್ನೇ ಕೊಟ್ಟರು. ‘ನಿಮ್ಮ ಮಾವನಿಗೆ ಮನೆಯಲ್ಲಿ ಆಳುಗಳನ್ನು ಇಟ್ಟುಕೊಳ್ಳುವುದು ಇಷ್ಟವಿಲ್ಲ, ಅವರಿಗೆ ಕಳ್ಳರ ಭಯ, ಹೀಗಾಗಿ ಮನೆಗೆಲಸವನ್ನೆಲ್ಲ ಸೊಸೆಯಂದಿರೇ ಮಾಡಬೇಕು’ ಎಂದರು. ಕಾಲಕ್ರಮೇಣ ಓರಗಿತ್ತಿ ಶೀಲಾಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ನಿತ್ಯಾ ಕುಟುಂಬದ ನಿರ್ವಹಣೆಯಲ್ಲಿ ಸಹಾಯ ಮಾಡತೊಡಗಿದಳು. ಸುಕುಮಾರ್ ತಂದೆ ಮತ್ತು ಸೋದರನ ಜತೆಗೆ ಬೆಳಗಿನ ಉಪಾಹಾರ ಮಾಡಿ ಅಂಗಡಿಗೆ ಹೊರಟರೆ ಮನೆಗೆ ವಾಪಸಾಗುತ್ತಿದ್ದುದು ರಾತ್ರಿ 10ರ ತರುವಾಯ.

ವಾರಕ್ಕೆ ಎರಡು ಮೂರು ದಿನ ಮಧ್ಯರಾತ್ರಿಯ ನಂತರ ಸುಕುಮಾರ್ ಸಪ್ಪಳ ಮಾಡದೆ ಕೋಣೆಯಿಂದ ಹೊರಗೆ ಹೋಗುತ್ತಿದ್ದುದನ್ನು ಸುಮಾರು ನಾಲ್ಕು ತಿಂಗಳ ನಂತರ ಗಮನಿಸಿದ ನಿತ್ಯಾ ಕುತೂಹಲಗೊಂಡಳು. ಒಂದು ದಿನ ಅವನನ್ನು ಕೇಳಿದಾಗ, ‘ನನಗೆ ನಿದ್ರಾಹೀನತೆಯ ರೋಗವಿದೆ, ನಿದ್ರೆ ಬರದೆ ಹಾಸಿಗೆಯಲ್ಲಿಯೇ ಹೊರಳಾಡುತ್ತಿದ್ದರೆ ನಿನ್ನ ನಿದ್ರೆಗೂ ಭಂಗವಾಗುತ್ತದೆಂದು ಹೀಗೆ ಮಾಡುತ್ತಿರುವೆ, ನಾನು ಮನೆಯಲ್ಲಿನ ಟಿ.ವಿ ಕೋಣೆಯಲ್ಲಿ ಸಿನಿಮಾಗಳನ್ನು ನೋಡುತ್ತಿರುತ್ತೇನೆ’ ಎಂದ. ‘ಹೀಗೆ ನಿದ್ರೆಗೆಡುವುದು ಸರಿಯಲ್ಲ, ತಜ್ಞ ವೈದ್ಯರಿಗೆ ತೋರಿಸೋಣ’ ಎಂದು ನಿತ್ಯಾ ಸೂಚಿಸಿದಾಗ ಸುಕುಮಾರ್ ತಳ್ಳಿಹಾಕಿದ.

ಒಂದು ತಡರಾತ್ರಿ ನಿತ್ಯಾ ಎಚ್ಚರಗೊಂಡು ಸುಕುಮಾರ್ ಕೋಣೆಯಲ್ಲಿಲ್ಲದಿದ್ದುದನ್ನು ಕಂಡು ತಾನೂ ಟಿ.ವಿ.ಕೋಣೆಯಲ್ಲಿ ಅವನೊಡನೆ ಸಿನಿಮಾ ನೋಡೋಣವೆಂದು ಹೋದಾಗ ಆತ ಅಲ್ಲಿರಲಿಲ್ಲ. ಮನೆಯಲ್ಲಿ ಹುಡುಕಾಡಿದರೂ ಕಾಣಲಿಲ್ಲ. ಒಂದು ಗಂಟೆಯ ನಂತರ ಸುಕುಮಾರ್ ಕೋಣೆಗೆ ವಾಪಸಾದಾಗ, ಎಲ್ಲಿಗೆ ಹೋಗಿದ್ದೆ? ಎಂದು ನಿತ್ಯಾ ವಿಚಾರಿಸಿದಳು. ‘ಮನೆಯ ಹೊರಗಿನ ತೋಟದಲ್ಲಿ ಗಾಳಿ ಸೇವನೆ ಮಾಡುತ್ತಿದ್ದೆ’ ಎಂದ ಆತ.

ಒಂದು ತಿಂಗಳ ನಂತರ ಸುಕುಮಾರ್ ಮತ್ತೆ ಕೋಣೆಯಲ್ಲಿ ಕಾಣದಾದಾಗ, ನಿತ್ಯಾ ಟಿ.ವಿ ಕೋಣೆಗೆ ಹೋದರೆ ಅವನು ಅಲ್ಲಿರಲಿಲ್ಲ. ಮುಂಬಾಗಿಲನ್ನು ತೆರೆದು ಹೊರಗೆ ಬಂದು ನೋಡಿದರೆ ಅಲ್ಲಿಯೂ ಇರಲಿಲ್ಲ. ಗಂಡ ಯಾವುದೋ ಗುಟ್ಟನ್ನು ಮುಚ್ಚಿಡುತ್ತಿದ್ದಾನೆ ಎಂದು ಭಾವಿಸಿ ಆಕೆ ಕೋಣೆಗೆ ವಾಪಸಾಗುತ್ತಿರುವಾಗ ಸುಕುಮಾರ್ ಸೋದರ ರಾಮ್ುಮಾರನ ಕೋಣೆಯಿಂದ ಹೊರಬರುತ್ತಿರುವುದನ್ನು ಕಂಡಳು. ಅವಳನ್ನು ಕಂಡು ಬೆಚ್ಚಿಬಿದ್ದ ಸುಕುಮಾರ್ ಕೋಣೆಗೆ ವಾಪಸಾದ ನಂತರ, ‘ಅಣ್ಣನ ಜತೆ ಬಿಸಿನೆಸ್ ಬಗ್ಗೆ ಮಾತನಾಡಲು ಹೋಗಿದ್ದೆ’ ಎಂದು ಸಮಜಾಯಿಷಿ ನೀಡಿದ. ‘ಇಂತಹ ಅವೇಳೆಯಲ್ಲಿ ಅದೂ ಅತ್ತಿಗೆ ಅದೇ ರೂಮಿನಲ್ಲಿ ಮಲಗಿರುವಾಗ ಅದೆಂತಹ ಚರ್ಚೆ ನಡೆಸಿದಿರಿ?’ ಎಂದು ನಿತ್ಯಾ ಹೇಳಿದಾಗ, ಏನೋ ಗೊಣಗುಟ್ಟಿಕೊಂಡು ಸುಕುಮಾರ್ ಮಲಗಿಬಿಟ್ಟ. ಒಮ್ಮೆ ರಾಮ್ುಮಾರ್ ಕೆಲಸದ ನಿಮಿತ್ತ ವಾರದ ಅವಧಿಗೆ ಬೇರೆ ಊರಿಗೆ ಹೋದ. ಆಗಲೂ ಒಂದು ರಾತ್ರಿ ಸುಕುಮಾರ್ ಅಣ್ಣನ ಕೋಣೆಗೆ ಹೋಗಿ ಒಂದು ಗಂಟೆಯ ನಂತರ ವಾಪಸಾದಾಗ ಅವನನ್ನು ಅಡ್ಡಹಾಕಿದ ನಿತ್ಯಾ, ‘ಅಣ್ಣ ಊರಲ್ಲಿಲ್ಲದ ಸಮಯದಲ್ಲಿ ಅವರ ಕೋಣೆಯಲ್ಲಿ ಏನು ಮಾಡುತ್ತಿದ್ದೆ? ನಿಜ ಹೇಳು’ ಎಂದು ಗದರಿದಳು. ‘ನಾನು ಇಷ್ಟಬಂದದ್ದನ್ನು ಮಾಡುವೆ, ಕೇಳಲು ನೀನಾರು’ ಎನ್ನುತ್ತಾ ಆತ ಅವಳನ್ನು ಮನಬಂದಂತೆ ಥಳಿಸಿದ.

ಗಂಡ ಮತ್ತು ಅತ್ತಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ಖಾತ್ರಿಗೊಂಡ ನಿತ್ಯಾ ಅವನನ್ನು ನೇರವಾಗಿಯೇ ಪ್ರಶ್ನಿಸಿದಳು. ‘ಹೌದು, ಅತ್ತಿಗೆಯೊಡನೆ ಸಂಬಂಧ ಇಟ್ಟುಕೊಂಡಿದ್ದೇನೆ, ನೀನು ಏನು ಬೇಕಾದರೂ ಮಾಡಿಕೋ, ಬೇಕಾದರೆ ವಿಚ್ಛೇದನ ಕೊಟ್ಟು ಹೋಗು’ ಎಂದ. ಮನನೊಂದ ನಿತ್ಯಾ ಮಾರನೆಯ ದಿನವೇ ತವರಿಗೆ ಹೋಗಿ ಮಾತಾಪಿತರಿಗೆ ವಿಷಯವನ್ನು ತಿಳಿಸಿದಳು. ನಿತ್ಯಾಳ ತಾಯಿ, ‘ವಿಚ್ಛೇದನದ ಬಗ್ಗೆ ಈಗ ಮಾತನಾಡುವುದು ಬೇಡ, ನಿನ್ನ ಅತ್ತೆಗೆ ವಿಷಯ ತಿಳಿಸು’ ಎಂದರು. ನಿತ್ಯಾ ವಿಷಯವನ್ನು ಅತ್ತೆಗೆ ತಿಳಿಸಿದಳು. ಸ್ವಲ್ಪವೂ ವಿಚಲಿತರಾಗದ ಪಾರ್ವತಮ್ಮ, ‘ಕುಟುಂಬದ ಒಪ್ಪಿಗೆಯ ಮೇರೆಗೇ ಹೀಗೆ ನಡೆಯುತ್ತಿದೆ’ ಎಂದಾಗ ನಿತ್ಯಾ ಬೆಚ್ಚಿಬಿದ್ದಳು. ‘ಇದೇನು ಹೀಗೆ ಹೇಳುವಿರಿ? ಅತ್ತಿಗೆಯೆಂದರೆ ತಾಯಿಸ್ವರೂಪವಲ್ಲವೇ?’ ಎಂದು ಕೇಳಿದಳು. ‘ನಮ್ಮ ವಂಶವನ್ನು ಮುಂದುವರಿಸಲು ಹಿರಿಯ ಪುತ್ರ ರಾಮ್ುಮಾರ್​ಗೆ ಗಂಡು ಮಗುವೇ ಜನಿಸಬೇಕು, ಇಲ್ಲವಾದಲ್ಲಿ ನಮ್ಮ ವಂಶವೇ ಮುಗಿದುಹೋಗುತ್ತದೆ ಎನ್ನುವುದು ನಮ್ಮ ಕುಟುಂಬದ ನಂಬಿಕೆ. ಮದುವೆಯಾಗಿ ಎರಡು ವರ್ಷಗಳ ನಂತರವೂ ಶೀಲಾ ಗರ್ಭಿಣಿಯಾಗದಿದ್ದಾಗ ಪ್ರಸೂತಿ ತಜ್ಞರಿಗೆ ತೋರಿಸಲಾಯಿತು. ಆಕೆಯಲ್ಲಿ ಯಾವುದೇ ತೊಂದರೆಯಿಲ್ಲ, ಆದರೆ ನನ್ನ ಮಗನಲ್ಲಿಯೇ ತೊಂದರೆಯಿರುವುದೆಂದು ತಿಳಿದಾಗ ಮುಂದೇನು ಮಾಡಬೇಕೆಂದು ತೋಚದಾಯಿತು. ಶೀಲಾಳ ಗರ್ಭದಿಂದ ಬರುವ ಮಗು ನಮ್ಮ ವಂಶದ ಅಂಶದಿಂದಲೇ ಜನಿಸಬೇಕೆನ್ನುವುದು ನಮ್ಮ ಇರಾದೆಯಾದ ಕಾರಣ, ನಾವು ರಾಮ್ುಮಾರ್- ಶೀಲಾ ಇಬ್ಬರ ಒಪ್ಪಿಗೆ ಪಡೆದೇ, ಶೀಲಾಳೊಡನೆ ಸಂಪರ್ಕವನ್ನಿಡುವಂತೆ ಸುಕುಮಾರ್​ನಿಗೆ ಸೂಚಿಸಿದೆವು. ಆತ ಒಪ್ಪಿದ’ ಎಂದರು.

ಅವರ ತರ್ಕ ಕೇಳಿ ದಂಗಾದ ನಿತ್ಯಾ, ‘ನನ್ನನ್ನು ಸೊಸೆಯಾಗಿ ಮನೆಗೆ ಕರೆತಂದು ನನ್ನ ಜೀವನವನ್ನೇಕೆ ಹಾಳುಮಾಡಿದಿರಿ?’ ಎಂದು ಪ್ರಶ್ನಿಸಿದಳು. ಪಾರ್ವತಮ್ಮ ಮೌನಕ್ಕೆ ಶರಣಾದರು. ಇನ್ನು ಆ ಮನೆಯಲ್ಲಿರುವುದು ಸಾಧ್ಯವಿಲ್ಲ ಎಂದು ತೀರ್ವನಿಸಿದ ನಿತ್ಯಾ ತವರು ಮನೆಗೆ ವಾಪಸಾದಳು. ಒಂದು ತಿಂಗಳ ನಂತರ ನಿತ್ಯಾಳಿಗೆ ತಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿಯಿತು. ನವಮಾಸಗಳ ಬಳಿಕ ಆಕೆಗೆ ಮುದ್ದಾದ ಗಂಡು ಮಗು ಜನಿಸಿತು. ಇದನ್ನರಿತ ನಿತ್ಯಾಳ ಅತ್ತೆ ಮಾವ ಬಂದು, ‘ಹಿಂದೆ ಆದದ್ದನ್ನು ಮರೆತುಬಿಡು. ನಿನ್ನ ಮಗುವನ್ನೇ ನಾವು ವಂಶೋದ್ಧಾರಕನೆಂದು ಭಾವಿಸುತ್ತೇವೆ. ಇನ್ನು ಮುಂದೆ ಸುಕುಮಾರ್ ಕೆಟ್ಟ ಕೆಲಸ ಮಾಡುವುದಿಲ್ಲ, ಮಗುವಿನ ಜತೆಗೆ ನಮ್ಮ ಮನೆಗೆ ವಾಪಸಾಗು’ ಎಂದು ಕರೆದರು. ತನ್ನ ಗಂಡನಿಗೆ ಇನ್ನೊಂದು ಅವಕಾಶವನ್ನು ಕೊಡಬೇಕು ಎಂದು ಭಾವಿಸಿದ ನಿತ್ಯಾ ಮಗುವಿಗೆ ಆರು ತಿಂಗಳು ತುಂಬಿದ ನಂತರ ಗಂಡನ ಮನೆಗೆ ವಾಪಸಾದಳು.

ಕೆಲಕಾಲದ ನಂತರ ಶೀಲಾಳೂ ಗರ್ಭಿಣಿಯಾದಳು. ಮಗುವಿನ ತಂದೆ ಯಾರೆಂದು ನಿತ್ಯಾ ಕೇಳಿದಾಗ, ರಾಮ್ುಮಾರ್ ಎಂದೇ ಆಕೆ ಉತ್ತರಿಸಿದಳು. ಇದು ಸುಳ್ಳೆಂದು ತಿಳಿದ ನಿತ್ಯಾ ಹೆಚ್ಚಿನ ತನಿಖೆ ಮಾಡಿದಾಗ ತಾನು ತವರಿಗೆ ಹೋಗಿದ್ದಾಗ ಸುಕುಮಾರ್ ಆಕೆಯೊಡನೆ ಲೈಂಗಿಕ ಸಂಪರ್ಕ ಮುಂದುವರಿಸಿದ್ದು ತಿಳಿಯಿತು. ಇಂತಹ ಲಂಪಟ ಕುಟುಂಬದೊಡನೆ ಸಂಪರ್ಕ ಬೇಡವೆಂದು ನಿರ್ಧರಿಸಿದ ನಿತ್ಯಾ ಮತ್ತೊಮ್ಮೆ ತವರಿಗೆ ವಾಪಸಾಗಿ, ಗಂಡ ತನಗೆ ಕೌಟುಂಬಿಕ ಹಿಂಸೆ ಕೊಟ್ಟಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಲ್ಲದೇ ಸುಕುಮಾರನಿಂದ ವಿವಾಹ ವಿಚ್ಛೇದನ ಪಡೆಯಲು ನೋಟೀಸನ್ನೂ ದಾಖಲಿಸಿದಳು. ಸುಕುಮಾರನ ಕುಟುಂಬ ಕೋರ್ಟು ಕಚೇರಿಯ ವ್ಯವಹಾರ ಬೇಡವೆಂದು ರಾಜಿ ಸಂಧಾನಕ್ಕೆ ಬಂದಿತು. ನಿತ್ಯಾ ಹಾಗೂ ಆಕೆಯ ಮಗನ ಮುಂದಿನ ಜೀವನಕ್ಕೆಂದು ಮನೆಯೊಂದನ್ನು ಬರೆದುಕೊಟ್ಟಿದ್ದಲ್ಲದೆ, ಬಾಲಕನ ಲಾಲನೆಪೋಷಣೆಗೆಂದು 35 ಲಕ್ಷರೂಗಳನ್ನು ಕೊಟ್ಟಿತು. ನಿತ್ಯಾಳಿಗೆ ಇದು ಇಷ್ಟವಿರದಿದ್ದರೂ ಪರಸ್ಪರ ಒಪ್ಪಿಗೆಯ ಮೇರೆಗೆ ಅವರ ವಿವಾಹವು ಅಂತ್ಯಗೊಂಡಿತು. ‘ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು, ಪ್ರೇಯಸಿಯ ಕರೆಯಲಾತುರಪಡಿಪ ಬೆಡಗು, ಈಯೆರಡು ಸಮದ ರುಚಿ ನಿನ್ನನಿಬ್ಬಗೆಗೊಳಿಸೆ ಧ್ಯೇಯ ನಿನಗಾವುದೆಲೊ ಮಂಕುತಿಮ್ಮ’ ಎನ್ನುವಂತೆ ಅತ್ತಿಗೆ ಮತ್ತು ಪತ್ನಿಗಿರುವ ವ್ಯತ್ಯಾಸವನ್ನರಿಯದ ಅನೈತಿಕತೆಯನ್ನು ರೂಢಿಸಿಕೊಂಡಿರುವ ಕುಟುಂಬಗಳು ಇಂದಿಗೂ ಇರುವುದು ಸಮಾಜದ ದೌರ್ಭಾಗ್ಯವೇ ಸರಿ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)