ಅಂಕಣ

ಬೆಂಕಿಯ ಹಿಂದೆ ಅನುಮಾನದ ಹೊಗೆ; ತಂದೂರ್ ರಹಸ್ಯ: ಭಾಗ-1

Webdesk - Ravikanth
ಅದು 1995ರ ಜುಲೈ 2ರ ರಾತ್ರಿ 11 ಗಂಟೆ. ಕಾನ್​ಸ್ಟೆಬಲ್ ಅಬ್ದುಲ್ ನಜೀರ್ ಕುಂಜು ತನ್ನ ಜೊತೆಗಾರ ಹೋಂಗಾರ್ಡ್ ಚಂದ್ರಪಾಲ್ ಜತೆಗೆ ದೆಹಲಿಯ ಕನಾಟ್ ಪ್ಲೇಸ್ ಠಾಣೆಯಿಂದ ರಾತ್ರಿಯ ಗಸ್ತಿಗೆ ಹೊರಟ. ಸುಮಾರು 11.25 ಕ್ಕೆ ಅವರಿಬ್ಬರೂ ಅಶೋಕ್ ಯಾತ್ರಿನಿವಾಸ್ ಹೋಟೆಲ್​ನ ವಿಶಾಲವಾದ ಗೇಟ್ ಬಳಿ ಬಂದಾಗ ಅದೇ ಹೋಟೆಲಿನ ಹೊರ ಆವರಣದಲ್ಲಿದ್ದ ಬಗಿಯಾ ರೆಸ್ಟೊರೆಂಟ್​ನ ಚಿಮಣಿಯಿಂದ ಬೆಂಕಿಯ ಜ್ವಾಲೆಗಳು ಮುಗಿಲಿಗೇರುತ್ತಿರುವುದನ್ನು ಕಂಡರು. ಗಾಬರಿಗೊಂಡ ಕುಂಜು ಕೂಡಲೇ ಬೆಂಕಿಯನ್ನು ನಂದಿಸದಿದ್ದರೆ ಭಾರಿ ಅನಾಹುತವಾಗಬಹುದೆಂದು ರೆಸ್ಟೋರೆಂಟಿನತ್ತ ಧಾವಿಸಿದ. ಆದರೆ, ಬಾಗಿಲಲ್ಲೇ ತಡೆದ ಕೆಲವರು, ‘ನಾವು ಹಳೆಯ ಪೋಸ್ಟರ್​ಗಳು, ಕಾರ್ಡ್​ಬೋರ್ಡ್ ಡಬ್ಬಗಳು ಮುಂತಾದವನ್ನು ಸುಡುತ್ತಿದ್ದೇವಷ್ಟೇ, ಬೆಂಕಿ ನಿಯಂತ್ರಣದಲ್ಲಿದೆ, ನೀವೇನೂ ಚಿಂತೆ ಮಾಡಬೇಕಾಗಿಲ್ಲ’ ಎನ್ನುತ್ತಾ ಅವನನ್ನು ಒಳಹೋಗಲು ಬಿಡಲಿಲ್ಲ.

ಆದರೂ ಸುಮ್ಮನಿರದ ಕುಂಜು ಹತ್ತಿರದಲ್ಲಿದ್ದ ಪೊಲೀಸ್ ಔಟ್​ಪೋಸ್ಟ್​ಗೆ ಹೋಗಿ ಮಾಹಿತಿ ನೀಡಿದ. ದೆಹಲಿಯ ಅಗ್ನಿ ಶಾಮಕ ದಳಕ್ಕೂ ಫೋನ್ ಮಾಡಿ ಕೂಡಲೇ ಸ್ಥಳಕ್ಕೆ ಆಗಮಿಸಲು ತಿಳಿಸಿದ. ಬಳಿಕ ಆತ ಮತ್ತೆ ಹೋಟೆಲ್ಲಿನ ಹಿಂಬದಿಗೆ ಹೋಗಿ ಸುಮಾರು ಏಳು ಅಡಿ ಎತ್ತರದ ಕಾಂಪೌಂಡ್ ಜಿಗಿದು ಯಾತ್ರಿನಿವಾಸ್ ಆವರಣವನ್ನು ಪ್ರವೇಶಿಸಿದ. ಅವನಿಗೆ ಆಗ ಎದುರಾಗಿದ್ದೇ ಬಗಿಯಾ ರೆಸ್ಟೊರೆಂಟಿನ ಅಡುಗೆ ಕೋಣೆ.

ಅಲ್ಲಿ ಒಂದು ಮೂಲೆಯಲ್ಲಿದ್ದ ತಂದೂರ್ ಎಂದು ಕರೆಯುವ ಮುಚ್ಚಿದ ಒಲೆಯ ಬಾಯಿಯ ಮೇಲೆ ಕಟ್ಟಿಗೆಗಳು, ಕಾಗದಗಳು, ಪೋಸ್ಟರ್​ಗಳು ಮುಂತಾದವುಗಳನ್ನು ಹಾಕಿ ಬೆಂಕಿಹಚ್ಚಿದ್ದು ಗೋಚರಿಸಿತು. ಒಬ್ಬ ತೆಳ್ಳಗಿನ ವ್ಯಕ್ತಿ ಬಿದಿರಿನ ಗಳದ ಮೂಲಕ ಬೆಂಕಿಯನ್ನು ಕೆದಕುತ್ತಿದ್ದ. ರೆಸ್ಟೋರೆಂಟಿನ ಪ್ರವೇಶ ದ್ವಾರದ ಬಳಿ ಸುಮಾರು 5 ಅಡಿ 10 ಇಂಚು ಎತ್ತರದ, ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದ ವ್ಯಕ್ತಿ ನಿಂತಿದ್ದ. ಎಲ್ಲೆಡೆಯಲ್ಲಿಯೂ ಕೆಟ್ಟ ವಾಸನೆ ಆವರಿಸಿದ್ದರಿಂದ ಕುಂಜು ಮೂಗಿಗೆ ಕರ್ಚೀಫ್ ಕಟ್ಟಿಕೊಂಡು ಬೆಂಕಿಯನ್ನು ಕೆದಕುತ್ತಿದ್ದ ವ್ಯಕ್ತಿಯತ್ತ ಧಾವಿಸಿ, ‘ನೀನೇನು ಮಾಡುತ್ತಿರುವೆಯೆಂದು ಅರಿವಿಲ್ಲವೇ? ಇಡೀ ಹೋಟೆಲ್ಲನ್ನೇ ಸುಡಲು ಹೊರಟಿರುವೆಯಾ?’ ಎಂದು ಗದರಿದ. ಆ ವ್ಯಕ್ತಿ, ‘ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ನಮ್ಮ ಪಕ್ಷದ ಹಳೆಯ ಪೋಸ್ಟರ್, ಬ್ಯಾನರ್​ಗಳನ್ನು ಸುಡುತ್ತಿದ್ದೇನಷ್ಟೇ. ನೀವು ನಿಮ್ಮ ದಾರಿ ನೋಡಿಕೊಳ್ಳಿ’ ಎಂದು ಗದರಿದ.

ಅವನ ಮಾತುಗಳಿಗೆ ಕಿವಿಗೊಡದ ಕುಂಜು ಅಲ್ಲೇ ಇದ್ದ ನಲ್ಲಿಗೆಯಿಂದ ಬಕೆಟ್ಟೊಂದರಲ್ಲಿ ನೀರನ್ನು ಹಿಡಿದು ತಂದು ಬೆಂಕಿಯ ಮೇಲೆ ಸುರಿದ. ಕುಂಜುವಿನ ಹಿಂದೆಯೇ ಆಗಮಿಸಿದ್ದ ಚಂದ್ರಪಾಲ್ ಸಹ ಅವನನ್ನು ಅನುಕರಿಸಿದ. ಅವರಿಬ್ಬರೂ ಬೆಂಕಿಯನ್ನು ಆರಿಸತೊಡಗಿದಂತೆ ಪೊಲೀಸ್ ಕಂಟ್ರೋಲ್ ರೂಂನ ಇನ್​ಸ್ಪೆಕ್ಟರ್ ರಾಜೇಶ್ ಕುಮಾರ್, ಇಬ್ಬರು ಕಾನ್​ಸ್ಟೆಬಲ್​ಗಳ ಜೊತೆಗೆ ಅಲ್ಲಿಗಾಗಮಿಸಿದರು. ಅವರ ಜತೆ ಅಲ್ಲಿಗೆ ಬಂದ ಹೋಟೆಲಿನ ಇಬ್ಬರು ಸೆಕ್ಯೂರಿಟಿ ಗಾರ್ಡಗಳೂ ಬೆಂಕಿಯನ್ನು ಆರಿಸತೊಡಗಿದರು. ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿತು.

ತಂದೂರ್​ನಿಂದ ಕೆಟ್ಟ ವಾಸನೆಯೇಕೆ ಬರುತ್ತಿದೆ ಎಂದು ನೋಡಲು ಕುಂಜು ತಂದೂರ್​ನ ಬಾಯಿಯತ್ತಲೇ ದಿಟ್ಟಿಸಿದ. ಕರಕಲಾದ ಮಾಂಸದ ಮುದ್ದೆಯೊಂದು ತಂದೂರಿಯ ಮೇಲ್ಭಾಗದ ಅಂಚಿನಲ್ಲಿ ಕಂಡಿತು. ಅದೇನೆಂಬುದನ್ನು ಪರೀಕ್ಷಿಸಲು ಕುಂಜು ಕೆಂಡವನ್ನು ಕೆದಕುತ್ತಿದ್ದ ಬಿದಿರು ಗಳದಿಂದ ಅದನ್ನು ಅತ್ತಿಂದಿತ್ತ ತಿರುಗಿಸಿದ. ಆ ಮಾಂಸದ ಮುದ್ದೆ ಮಾನವ ದೇಹವಾಗಿತ್ತು. ಕುಂಜು ಗಾಬರಿಯಾಗಿ ಅರಚಿದ. ಅಷ್ಟರಲ್ಲಿ ಬೆಂಕಿಯನ್ನು ಕೆದಕುತ್ತಿದ್ದು ಅಲ್ಲಿಂದ ಕಾಣೆಯಾಗಿದ್ದ ಸಣ್ಣಗಿನ ವ್ಯಕ್ತಿ ಅಲ್ಲಿಗೆ ಬಂದ. ಕುಂಜು ಓಡಿಹೋಗಿ ಅವನನ್ನು ಬಿಗಿಯಾಗಿ ಹಿಡಿದುಕೊಂಡು ಅವನ್ಯಾರೆಂದು ವಿಚಾರಿಸಿದಾಗ, ‘ನಾನೇ ಈ ರೆಸ್ಟೊರೆಂಟಿನ ಮ್ಯಾನೇಜರ್ ಕೇಶವ ಕುಮಾರ್’ ಎಂದಾತ ಉತ್ತರಿಸಿದ.

ತಂದೂರಿ ಒಲೆಯಲ್ಲಿ ಮಾನವ ದೇಹವೊಂದನ್ನು ಸುಡಲಾಗುತ್ತಿದೆ ಎಂದು ತಿಳಿದ ಕೂಡಲೇ ಕನಾಟ್ ಪ್ಲೇಸ್ ಠಾಣೆಯ ಇನ್​ಸ್ಪೆಕ್ಟರ್ ನಿರಂಜನ್ ಸಿಂಗ್ ಅಲ್ಲಿಗೆ ಧಾವಿಸಿದರು. ದೇಹವನ್ನು ಒಲೆಯಿಂದ ಕೆಳಗಿಳಿಸಲು ಸೂಚಿಸಿ ಮೃತದೇಹವನ್ನು ಸೂಕ್ಷ್ಮವಾಗಿ ಗಮನಿಸಿದರು. ದೇಹದ ಎಲ್ಲಾ ಭಾಗಗಳು ಕರಕಲಾಗಿದ್ದು, ಬೆಂಕಿಯ ಶಾಖಕ್ಕೆ ಹೊಟ್ಟೆ ಬಿರಿದು ಕರುಳುಗಳು ಹೊರಗೆ ಬಂದಿದ್ದವು. ತುಟಿಗಳು ಸುಟ್ಟು ಹೋಗಿದ್ದು ಹಲ್ಲುಗಳು ಹೊರಗೆ ಕಾಣಿಸುತ್ತಿದ್ದವು. ಎರಡೂ ಕಣ್ಣುಗಳು ಸುಟ್ಟುಹೋಗಿ ಕಣ್ಣುಗಳ ಗುಂಡಿಗಳು ಆಕಾಶ ದೃಷ್ಟಿಸುತ್ತ ನಗುತ್ತಿರುವಂತೆ ಕಂಡಿತು. ಒಂದು ಕಾಲು ಮೊಣಕಾಲಿನವರೆಗೆ ಸುಟ್ಟಿದ್ದರೆ, ಇನ್ನೊಂದು ಕಾಲು ಪಾದದವರೆಗೆ ಸುಟ್ಟಿತ್ತು. ಒಂದು ಕೈ ದೇಹದಿಂದ ಹೊರಗೆ ಬಂದಿತ್ತು. ಇನ್ನೊಂದು ಮೊಣಕೈವರೆಗೆ ಸುಟ್ಟು ಹೋಗಿತ್ತು.

ಕೈ ಬೆರಳಿನ ಮೂಳೆಗಳು ಸುಟ್ಟುಹೋಗಿದ್ದವು. ದೇಹದ ಹೊರಚರ್ಮ ಸಂಪೂರ್ಣವಾಗಿ ಸುಟ್ಟು ಹೋಗಿದ್ದರೂ ಆ ದೇಹವು ಸ್ತ್ರೀಯದು ಎನ್ನುವುದು ನಿರ್ವಿವಾದವಾಗಿತ್ತು. ಮೃತಳ ವಯಸ್ಸು 25 ರಿಂದ 35 ವರ್ಷಗಳಾಗಿರಬಹುದು ಎಂದು ನಿರಂಜನ್ ಅಂದಾಜಿಸಿದರು. ಮೃತಳ ತಲೆಗೂದಲು ಬನ್ ಮಾದರಿಯಲ್ಲಿ ಕಟ್ಟಲ್ಪಟ್ಟಿದ್ದು ಅದಕ್ಕೆ ಸಿಕ್ಕಿಸಿದ್ದ ಕ್ಲಿಪ್ ಸುಡದೇ ಹಾಗೆಯೇ ಉಳಿದಿತ್ತು. ಆಕೆ ಧರಿಸಿದ್ದ ಬಟ್ಟೆಯ ಕೆಲವು ತುಂಡುಗಳು ದೇಹಕ್ಕೆ ಅಂಟಿಕೊಂಡಿದ್ದವು. ಇದೊಂದು ಭಯಾನಕ ದೃಶ್ಯವಾಗಿತ್ತು.

ತಂದೂರ್ ಒಲೆಯನ್ನು ಪೊಲೀಸರು ಸಂಪೂರ್ಣವಾಗಿ ಖಾಲಿ ಮಾಡಿ ಅದರಲ್ಲಿ ಸಿಕ್ಕ ಎಲ್ಲಾ ವಸ್ತುಗಳನ್ನೂ ಬೇರ್ಪಡಿಸಿ ಒಂದೊಂದಾಗಿ ಜೋಡಿಸಿದರು. ಅವುಗಳಲ್ಲಿ ಹಲವಾರು ಮುರಿದ ಮೂಳೆಗಳ ಜತೆಗೆ ಎರಡು ಬೆಳ್ಳಿಯ ಕಾಲು ಚೈನ್​ಗಳೂ ಸಿಕ್ಕವು. ಕಾನ್​ಸ್ಟೆಬಲ್ ಕುಂಜುವಿನಿಂದ ದೂರನ್ನು ಪಡೆದ ಇನ್​ಸ್ಪೆಕ್ಟರ್ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಿಸಿದರು. ಕೇಶವ್ ಕುಮಾರ್​ನನ್ನು ಬಂಧಿಸಿ ಪ್ರಶ್ನಿಸಿದಾಗ ಆತ ಬಗಿಯಾ ರೆಸ್ಟೊರೆಂಟ್ ದೆಹಲಿ ಪ್ರದೇಶ ಯುವ ಕಾಂಗ್ರೆಸ್​ನ ಅಧ್ಯಕ್ಷ ಸುಶೀಲ್ ಶರ್ವನಿಗೆ ಸೇರಿದ್ದೆಂದು ತಿಳಿಸಿದ.

ಸುಶೀಲ್ ಶರ್ಮಾ ಕುಖ್ಯಾತ ರೌಡಿಯೆಂದು ದೆಹಲಿ ಪೊಲೀಸಿನ ಅಧಿಕಾರಿಗಳಿಗೆ ಈಗಾಗಲೇ ತಿಳಿದಿತ್ತು. ಕಾಲೇಜಿನಲ್ಲಿ ಆತ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾದ ಸದಸ್ಯನಾಗಿದ್ದು ತನ್ನ ರೌಡಿತನದಿಂದ ವಿಶ್ವವಿದ್ಯಾಲಯಕ್ಕೆ ಕುಖ್ಯಾತನಾಗಿದ್ದ. ಕ್ಷುಲ್ಲಕ ಕಾರಣಗಳಿಗಾಗಿ ಚಾಕುವಿನಿಂದ ಎದುರಾಳಿಗಳಿಗೆ ಇರಿಯುತ್ತಿದ್ದ ಕಾರಣಕ್ಕಾಗಿ ಆತನಿಗೆ ‘ಚಾಕು ಮಾರ್’ ಎಂಬ ಹೆಸರು ಬಂದಿತ್ತು. 1981 ರಿಂದ 83ರ ವರೆವಿಗೆ ಸುಶೀಲ್ ಎನ್​ಎಸ್​ಯುುಐನ ದೆಹಲಿ ಘಟಕದ ಅಧ್ಯಕ್ಷನಾದ. 1985ರಲ್ಲಿ ಆತ ದೆಹಲಿಯಲ್ಲಿ ವಾಹನ ರ್ಪಾಂಗ್ ನಿರ್ಬಂಧದ ಬಗ್ಗೆ ಪ್ರತಿಭಟಿಸಲು ತನ್ನ 15 ಅನುಯಾಯಿಗಳ ಜೊತೆ ಪೊಲೀಸರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ದೆಹಲಿ ಡಿಸಿಪಿ ಕಚೇರಿಗೆ ನುಗ್ಗಿದ. ಕಚೇರಿಯ ಕಾವಲುಗಾರನಿಗೆ ಥಳಿಸಿ, ಹೆಡ್​ಕಾನ್​ಸ್ಟೆಬಲ್ ಒಬ್ಬನ ಸಮವಸ್ತ್ರ ಹರಿದು ಕ್ರಿಮಿನಲ್ ಪ್ರಕರಣದ ಆರೋಪಿಯಾದ.

1988ರ ಮಾರ್ಚ್ 15ರಂದು ಭಾರತ ಬಂದ್​ಗೆ ಕರೆಕೊಟ್ಟಿದ್ದ ಬಿಜೆಪಿ ಕಾರ್ಯಕರ್ತರಿಗೆ ಸುಶೀಲ್ ಶರ್ಮಾ ಪಿಸ್ತೂಲ್ ಮತ್ತು ಚಾಕುಗಳನ್ನು ತೋರಿಸಿ ಬೆದರಿಸಿದ್ದ. ಇದಾದ ಕೆಲ ದಿನಗಳ ನಂತರ ಸುಶೀಲ್, ತನ್ನ ವೈರಿಯೊಬ್ಬನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ್ದ. ಆದರೆ, ಅವನ ವಿರುದ್ಧ ಯಾರೂ ಹೇಳಿಕೆ ಕೊಡದಿದ್ದರಿಂದ ಬಚಾವಾಗಿದ್ದ.

1989ರಲ್ಲಿ ಸುಶೀಲ್ ಯುವ ಕಾಂಗ್ರೆಸ್​ನ ದೆಹಲಿ ಘಟಕದ ಅಧ್ಯಕ್ಷನಾದ. ಆ ಸ್ಥಾನಕ್ಕೆ ಇಂತಹ ರೌಡಿ ಆಯ್ಕೆಗೊಂಡಿದ್ದು ಪಕ್ಷದ ಹಿರಿಯರಿಗೆ ಅಚ್ಚರಿ ಮತ್ತು ಬೇಸರ ತಂದರೂ ಅವರು ಏನೂ ಮಾಡಲಿಲ್ಲ. 1991ರ ಲೋಕಸಭೆ ಚುನಾವಣೆಗೆ ದೆಹಲಿಯಿಂದ ಸ್ಪರ್ಧಿಸಲು ತನಗೆ ಟಿಕೆಟ್ ಕೊಡಬೇಕೆಂದು ರಾಜೀವ್ ಗಾಂಧಿ ಬಳಿ ಹೋದ ಸುಶೀಲ್, ಒಂದು ವೇಳೆ ತನ್ನನ್ನು ಚುನಾವಣೆಗೆ ನಿಲ್ಲಿಸದಿದ್ದರೆ ಕಾಂಗೆಸ್​ನ ಅಧಿಕೃತ ಅಭ್ಯರ್ಥಿ ಸೋಲುವಂತೆ ಮಾಡುತ್ತೇನೆ ಎಂದು ಬೆದರಿಸಿದ್ದ. ಇದರಿಂದ ಕೋಪಗೊಂಡ ರಾಜೀವ್ ಆತನನ್ನು ತಮ್ಮ ಕಚೇರಿಯಿಂದ ಹೊರಕ್ಕೆ ದಬ್ಬಿಸಿ ಅವನನ್ನು ಪಕ್ಷದಿಂದ ಹೊರಹಾಕಲು ಆದೇಶಿಸಿದರು. ಆದರೆ, ಅದೇ ವರ್ಷ ರಾಜೀವ್ ಗಾಂಧಿ ಹತ್ಯೆಯಾದ ಕಾರಣ ಸುಶೀಲ್ ಪಕ್ಷದಲ್ಲಿ ಮುಂದುವರಿದ.

ಬಗಿಯಾ ರೆಸ್ಟೊರೆಂಟಿನಲ್ಲಿ ಕಳೆದ ರಾತ್ರಿ ನಡೆದ ವಿದ್ಯಮಾನಗಳ ಬಗ್ಗೆ ಮ್ಯಾನೇಜರ್ ಕೇಶವ್ ಕುಮಾರ್ ಹೀಗೆ ಹೇಳಿದ: ‘ಸುಶೀಲ್ ಶರ್ಮಾ ತನ್ನ ಮಾರುತಿ ಕಾರಿನಲ್ಲಿ ರಾತ್ರಿ ಮೂಟೆಯೊಂದನ್ನು ಅಶೋಕ್ ಯಾತ್ರಿನಿವಾಸ್ ಆವರಣಕ್ಕೆ ತಂದು ಕಾರಿನ ಬಳಿ ಬರಲು ನನಗೆ ಆದೇಶಿಸಿದ. ನಾನು ಹೋದಾಗ ರೆಸ್ಟೋರೆಂಟ್​ನಲ್ಲಿದ್ದ ಗ್ರಾಹಕರಿಗೆ ರೆಸ್ಟೋರೆಂಟನ್ನು ಮುಚ್ಚಲಾಗುತ್ತಿರುವುದರಿಂದ ಊಟವನ್ನು ಬೇಗ ಮುಗಿಸಿ ನಿರ್ಗಮಿಸಲು ಹೇಳುವಂತೆ ನನಗೆ ಸೂಚಿಸಿದ. ರೆಸ್ಟೋರೆಂಟಿನ ಉದ್ಯೋಗಿಗಳೆಲ್ಲರನ್ನೂ ಬೇಗನೇ ಮನೆಗೆ ಕಳಿಸಲು ಸೂಚಿಸಿದ. ಸುಮಾರು ಅರ್ಧ ಗಂಟೆಯಲ್ಲಿ ರೆಸ್ಟೋರೆಂಟ್ ಖಾಲಿಯಾಯಿತು.

ನಂತರ ಸುಶೀಲ್ ಶರ್ಮಾ ತನ್ನ ಕಾರನ್ನು ರಿವರ್ಸ್ ಮಾಡಿಕೊಂಡು ರೆಸ್ಟೋರೆಂಟ್​ನ ಮುಂಭಾಗಕ್ಕೆ ಬಂದ. ಕಾರಿನ ಡಿಕ್ಕಿಯಲ್ಲಿದ್ದ ಮೂಟೆಯನ್ನು ಕೆಳಗಿಳಿಸಲು ನನ್ನನ್ನು ಕೋರಿದ. ಅಂತೆಯೇ ನಾವಿಬ್ಬರೂ ಪ್ಲಾಸ್ಟಿಕ್ ಶೀಟಿನಲ್ಲಿ ಮುಚ್ಚಿದ್ದ ಮೂಟೆಯನ್ನು ಹೊರಕ್ಕೆ ತೆಗೆದು ಅದನ್ನು ತಂದೂರ್ ಒಲೆಯ ಬಳಿಗೆ ಎಳೆದುಕೊಂಡು ಬಂದೆವು. ಸುಶೀಲ್ ಶರ್ವನ ಸೂಚನೆಯಂತೆ ತಂದೂರ್ ಒಲೆಯ ಮೇಲೆ ಕಟ್ಟಿಗೆಯ ತುಂಡುಗಳು, ಪ್ಲೈವುಡ್ ಹಲಗೆಗಳು ಮುಂತಾದುವನ್ನು ಜೋಡಿಸಿದೆವು.

ಆನಂತರ ಮೂಟೆಯನ್ನು ಬಿಚ್ಚಿದಾಗ ಅದರಲ್ಲಿ ಸುಶೀಲ್​ನ ಪತ್ನಿ ನೈನಾ ಸಾಹನಿಯ ಶವವಿದ್ದುದನ್ನು ನೋಡಿ ನಾನು ಗಾಬರಿಗೊಂಡೆ. ಆದರೂ ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. ಸುಶೀಲ್ ಶರ್ಮಾ ನನ್ನ ಮಾಲೀಕನಾಗಿದ್ದಲ್ಲದೆ, ನನಗೆ ನಾನಾ ಬಗೆಯ ಸಹಾಯಗಳನ್ನು ಮಾಡಿರುವ ಕಾರಣದಿಂದ ಬಾಯಿಗೆ ಬೀಗಹಾಕಿಕೊಂಡೆ. ನಂತರ ಇಬ್ಬರೂ ಶವವನ್ನು ಗರ್ಭದಲ್ಲಿರುವ ಭ್ರೂಣದ ಆಕಾರದಲ್ಲಿ ತಂದೂರಿಯ ಮೇಲೆ ಜೋಡಿಸಿದ್ದ ಹಲಗೆಗಳ ಮೇಲೆ ಮಲಗಿಸಿದೆವು. ಕಾಂಗ್ರೆಸ್ ಪಕ್ಷದ ಹಳೆಯ ಪೋಸ್ಟರ್​ಗಳು, ಬ್ಯಾನರ್​ಗಳು ಮುಂತಾದುವು ನಮ್ಮ ಉಗ್ರಾಣದಲ್ಲಿದ್ದವು. ಅವನ್ನು ತಂದು ಶವದ ಮೇಲೆ ಪೇರಿಸಿದೆವು. ನಂತರ ಸುಶೀಲ್ ಹೋಟೆಲಿನಲ್ಲಿದ್ದ ಅಮುಲ್ ಬೆಣ್ಣೆಯ ಪ್ಯಾಕೆಟ್​ಗಳನ್ನು ತರಿಸಿ ಅವನ್ನು ಚಿತೆಯ ಮೇಲೆ ಹಾಕಿ ಬೆಂಕಿ ಹಚ್ಚಿದ.

(ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)