ಅಂಕಣ

ಒಬ್ಬ ಬೆಲೆವೆಣ್ಣಿನ ಆತ್ಮಕಥೆ..; ಆ ಕ್ಷಣ..

Webdesk - Ravikanth
‘ನನ್ನ ಹೆಸರು ಮುಮ್ತಾಜ್. ಜನಿಸಿದ್ದು ಬಾಂಗ್ಲಾದೇಶದ ಢಾಕಾದಲ್ಲಿ. ತಂದೆ ಶಹನವಾಜ್, ಹಣ್ಣಿನ ಜ್ಯೂಸ್ ಅಂಗಡಿಯಿಟ್ಟುಕೊಂಡಿದ್ದರು. ಅವರಿಗೆ ನಾವು ಮೂರು ಮಕ್ಕಳು-ಅಣ್ಣ, ನಾನು ಮತ್ತು ತಂಗಿ. ನನಗೀಗ 20 ವರ್ಷ ವಯಸ್ಸು. ಏಳು ವರ್ಷಗಳ ಹಿಂದೆ, ನಾನು ಐದನೆಯ ತರಗತಿಯಲ್ಲಿದ್ದಾಗ, ಅಪ್ಪನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಖಾದರ್ ಎನ್ನುವ ಯುವಕ ಪ್ರೀತಿಸುವ ನಾಟಕ ಮಾಡಿ ನನ್ನ ಮೇಲೆ ಬಲಾತ್ಕಾರ ಮಾಡಿದ. ನಾನು ಹೆದರಿ ಆ ವಿಷಯವನ್ನು ಗುಟ್ಟಾಗಿಟ್ಟೆ. ಆದರೆ, ನಾನು ಗರ್ಭಿಣಿಯಾದಾಗ ಎಲ್ಲವೂ ಜಾಹೀರಾಯಿತು. ತಂದೆ ನನ್ನನ್ನು ಶಾಲೆಯಿಂದ ಬಿಡಿಸಿ ಖಾದರ್ ಜತೆಗೇ ಮದುವೆ ಮಾಡಿದ. ಖಾದರ್​ನದ್ದು ತೀರಾ ಬಡಕುಟುಂಬವಾದ ಕಾರಣ ಆತ ನನ್ನನ್ನು ತವರುಮನೆಯಿಂದ ತನ್ನ ಮನೆಗೆ ಕರೆದೊಯ್ಯಲೇ ಇಲ್ಲ. 2015ರಲ್ಲಿ ಕುವೈತ್​ನಲ್ಲಿ ಕೆಲಸ ಸಿಕ್ಕಿತೆಂದು ಅಲ್ಲಿಗೆ ಹೊರಟು ಹೋದ. ನಾನು ಹೆಣ್ಣುಮಗುವಿಗೆ ಜನ್ಮನೀಡಿದೆ. ಒಂದು ವರ್ಷದ ನಂತರ ನಮ್ಮಿಬ್ಬರನ್ನೂ ಕುವೈತ್​ಗೆ ಕರೆಸಿಕೊಳ್ಳುವುದಾಗಿ ತಿಳಿಸಿದ್ದರೂ ಕೆಲವೇ ತಿಂಗಳಲ್ಲಿ ಖಾದರ್ ಸಂಪರ್ಕ ಕಡಿದುಕೊಂಡ.

ಇತ್ತ, ತಂದೆಯ ವ್ಯಾಪಾರ ಕುಸಿಯತೊಡಗಿತ್ತು. ನನ್ನನ್ನು ಹಾಗೂ ನನ್ನ ಮಗಳನ್ನು ಸಾಕುವುದು ಅವರಿಗೆ ಹೊರೆಯಾಗುತ್ತಿತ್ತು. ಮದುವೆಯಾಗಿದ್ದ ನನ್ನ ತಂಗಿ ನನ್ನ ಮಗಳನ್ನು ತನ್ನ ಮನೆಗೆ ಕರೆದೊಯ್ದು ಸಾಕತೊಡಗಿದಳು. ‘ಮದುವೆಯಾಗಿ ಇಷ್ಟು ವರ್ಷವಾದರೂ ನಿನಗೆ ಅನ್ನ ಹಾಕಬೇಕಾದ ಪರಿಸ್ಥಿತಿ ಬಂದಿದೆ, ಜೀವನಪೂರ್ತಿ ನಮ್ಮನ್ನೇ ಅವಲಂಬಿಸುವೆಯಾ?’ ಎಂದು ಅಬ್ಬಾ ಮೂದಲಿಸತೊಡಗಿದ. ಮನನೊಂದ ನಾನು ಮನೆ ಬಿಟ್ಟು ಕಾಲೇಜೊಂದರ ಹಾಸ್ಟೆಲಿನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಂಡೆ. ಅಲ್ಲೇ ವಾಸಿಸಲು ಕೋಣೆಯೂ ಸಿಕ್ಕಿತು. ‘ಬಾಂಗ್ಲಾದೇಶದಲ್ಲಿ ಕಡಿಮೆ ಸಂಬಳಕ್ಕೆ ದುಡಿಯಬೇಕಾಗುತ್ತದೆ, ನೀನೇಕೆ ಸೌದಿ ಅರೇಬಿಯಾಕ್ಕೆ ಹೋಗಬಾರದು?’ ಎಂದು ಸಹೋದ್ಯೋಗಿಯೊಬ್ಬಳು ಸೂಚಿಸಿದಳು. ಹೀಗಾಗಿ, ನಾನು ಪಾಸ್​ಪೋರ್ಟ್ ಮಾಡಿಸಿಕೊಂಡಿದ್ದಲ್ಲದೆ, ಅರಬ್ಬಿ ಭಾಷೆ ಕಲಿಸುವ ತರಬೇತಿ ಕೇಂದ್ರ ಸೇರಿದೆ. ಅಲ್ಲಿನ ಶಿಕ್ಷಕಿ, ಸೌದಿಯ ಬದಲು ದುಬೈಗೆ ಹೋದರೆ ಹೆಚ್ಚು ಸಂಬಳ ಗಳಿಸಬಹುದೆಂದಳು. ಆಕೆಯ ಸಹಾಯದಿಂದ ನಾನು ದುಬೈನಲ್ಲಿ ಕೆಲಸವೊಂದನ್ನು ಗಳಿಸಿ ಅಲ್ಲಿಗೆ ಹೋದೆ. ಅಲ್ಲಿ ಯಹೂದಿಯೊಬ್ಬರ ಮನೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದೆ. ಅವರ ಮನೆಯಲ್ಲಿ ಕಿರುಕುಳ ಹೆಚ್ಚಾದ್ದರಿಂದ ಬಾಂಗ್ಲಾಕ್ಕೆ ಮರಳಿಸಲು ಮನೆ ಮಾಲೀಕನನ್ನು ಕೋರಿದೆ. ಅತ ಒಪ್ಪಲಿಲ್ಲ. ಆಗ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದೆ. ದುಬೈ ಪೊಲೀಸರು ಮನೆ ಮಾಲೀಕನ ಮೇಲೆ ಪ್ರಕರಣ ದಾಖಲು ಮಾಡಿ ನನ್ನನ್ನು ರಿಮಾಂಡ್ ಹೋಂಗೆ ಕಳುಹಿಸಿದರು. 20 ದಿನ ಅಲ್ಲಿ ಕಳೆದ ನಂತರ ಬಾಂಗ್ಲಾದೇಶದ ದೂತಾವಾಸದವರು ನನ್ನನ್ನು ಢಾಕಾಗೆ ಮರಳಿ ಕಳುಹಿಸಿದರು.

2020ರಲ್ಲಿ ಸ್ವದೇಶಕ್ಕೆ ವಾಪಸ್ಸಾದ ನಂತರ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿದೆ. ಸಂಜೆ ವೇಳೆ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ರಿಯಾ ಎನ್ನುವವಳ ಪರಿಚಯವಾಯಿತು. ಆಕೆ ತಾನು ಬೆಂಗಳೂರಿನಲ್ಲಿ ಕೆಲಸ ಮಾಡಲು ಹೋಗುತ್ತಿರುವುದಾಗಿ ತಿಳಿಸಿ ನನಗೂ ಕೆಲಸ ಕೊಡಿಸುತ್ತೇನೆ ಎಂದಳು. ನನ್ನ ವೈಯಕ್ತಿಕ ವಿವರಗಳು ಮತ್ತು ಫೋಟೋವನ್ನು ವಾಟ್ಸಪ್​ನಲ್ಲಿ ಕಳುಹಿಸಿಕೊಡಲು ತಿಳಿಸಿದಳು. ನಾನು ಕಳುಹಿಸಿಕೊಟ್ಟೆ. ನಂತರ ನನಗೆ ಬೆಂಗಳೂರಿನಿಂದ ಪಿಂಕಿ ಎನ್ನುವವಳು ಕರೆಮಾಡಿ, ಬ್ಯೂಟಿ ಪಾರ್ಲರಿನಲ್ಲಿ ಕೆಲಸ ಕೊಡುವುದಾಗಿ ಹೇಳಿ ಒಬ್ಬ ವ್ಯಕ್ತಿಯ ನಂಬರನ್ನು ಕೊಟ್ಟು ಸಂರ್ಪಸಲು ತಿಳಿಸಿದಳು. ಢಾಕಾದಲ್ಲಿಯೇ ಇದ್ದ ಆತನನ್ನು ಸಂರ್ಪಸಿದಾಗ ಆತ ನಮ್ಮಿಬ್ಬರಿಗೂ ಬಾಂಗ್ಲಾದೇಶ ಹಾಗೂ ಭಾರತದ ಗಡಿಯಲ್ಲಿರುವ ಪಟ್ಟಣಕ್ಕೆ ಹೋಗಲು ತಿಳಿಸಿ, ಅಲ್ಲಿ ಸಂರ್ಪಸಲು ಇನ್ನೊಬ್ಬ ವ್ಯಕ್ತಿಯ ನಂಬರನ್ನು ಕೊಟ್ಟ. ನಾನು ಹಾಗೂ ರಿಯಾ ಅಲ್ಲಿಗೆ ಹೋಗಿ ಆ ವ್ಯಕ್ತಿಯನ್ನು ಸಂರ್ಪಸಿದೆವು. ಆತ ರಾತ್ರಿ ನಮ್ಮನ್ನು ಗಡಿ ದಾಟಿಸಿ ಕೊಲ್ಕತಾಗೆ ಕರೆದುಕೊಂಡು ಹೋಗಿ ಒಂದು ಹೋಟೆಲ್​ನಲ್ಲಿ ಇಳಿಸಿದ. ನಮ್ಮಿಬ್ಬರಿಗೂ ಪಶ್ಚಿಮ ಬಂಗಾಳದ ವಿಳಾಸವಿರುವ ಭಾರತದ ಆಧಾರ್ ಕಾರ್ಡ್​ಗಳನ್ನು ಕೊಟ್ಟ. ಅದರಲ್ಲಿ ನನ್ನ ಹೆಸರನ್ನು ‘ಜಾಸ್ಮಿನ್ ಮಂಡಲ್’ ಎಂದು ನಮೂದಿಸಲಾಗಿತ್ತು. ಮಾರನೆಯ ದಿನ ಅವನೇ ನಮಗೆ ಭಾರತದ ಒಂದು ಹೊಸ ಸಿಮ್ ಕಾರ್ಡ್ ನೀಡಿ, ನಮ್ಮಿಬ್ಬರಿಗೂ ಬೆಂಗಳೂರಿಗೆ ಹೋಗಲು ವಿಮಾನದ ಟಿಕೆಟ್ ಕೊಟ್ಟ. ಕೊಲ್ಕತಾದಿಂದ ಬೆಂಗಳೂರಿಗೆ ಬಂದೆವು. ಬೆಂಗಳೂರಿಗೆ ಬಂದಿಳಿದ ಕೂಡಲೇ ಫೋನಿನಲ್ಲಿ ನಮ್ಮಿಬ್ಬರನ್ನು ಸಂರ್ಪಸಿದ ಪಿಂಕಿ ಕ್ಯಾಬ್ ಮಾಡಿಕೊಂಡು ತನ್ನ ಮನೆಗೆ ಬರಲು ಹೇಳಿ ಚಾಲಕನಿಗೆ ವಿಳಾಸ ಕೊಟ್ಟಳು. ಬಾಂಗ್ಲಾದೇಶೀಯಳೇ ಆಗಿದ್ದ ಪಿಂಕಿ ತನ್ನ ಮನೆಯಲ್ಲಿಯೇ ನಮ್ಮಿಬ್ಬರನ್ನೂ ಇರಿಸಿಕೊಂಡಳು. ಮಾರನೆಯ ದಿನ ಪಿಂಕಿ ನಮಗೆ ಹೊಸ ಬಟ್ಟೆಗಳನ್ನು ಕೊಡಿಸಿದಳು.

10 ದಿನಗಳ ನಂತರದ ಒಂದು ಸಂಜೆ ಪಿಂಕಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಳ್ಳಲು ನನಗೆ ಹೇಳಿ, ತನ್ನ ಸಹಾಯಕನೊಬ್ಬನ ಜತೆಗೆ ಹೋಟೆಲ್​ಗೆ ಕಳುಹಿಸಿಕೊಟ್ಟಳು. ಅಲ್ಲಿ ತನ್ನ ಹೆಸರಿನಲ್ಲಿ ರೂಮೊಂದನ್ನು ಬುಕ್ ಮಾಡಿದ ಆ ಸಹಾಯಕ, ‘ನಾನು ಇಲ್ಲಿಗೆ ಕರೆತರುವ ವ್ಯಕ್ತಿಗಳನ್ನು ನೀನು ತೃಪ್ತಿಪಡಿಸಬೇಕು’ ಎಂದ. ನಾನು ಆಘಾತಗೊಂಡೆ. ನಾನು ವೇಶ್ಯೆಯಾಗಲಾರೆ ಎಂದು ಪ್ರತಿಭಟಿಸಿದೆ. ಆತ ಕೂಡಲೇ ಪಿಂಕಿಗೆ ಫೋನ್ ಮಾಡಿ ನನ್ನ ಕೈಗೆ ಕೊಟ್ಟ. ‘ನಿನ್ನ ಮೇಲೆ ಸಾಕಷ್ಟು ಹಣ ಖರ್ಚು ಮಾಡಿ ಇಲ್ಲಿಗೆ ಕರೆಸಿಕೊಂಡಿದ್ದೇನೆ. ನಾನು ಹೇಳಿದಂತೆ ನಡೆದುಕೊಂಡರೆ ನೀನು ರಾಣಿಯಂತೆ ಜೀವಿಸಬಹುದು. ನಿನ್ನ ಊಟ-ವಸತಿಯನ್ನು ನಾನೇ ನೋಡಿಕೊಂಡು ತಿಂಗಳಿಗೆ 50,000 ರೂ. ಸಂಬಳ ಕೊಡುವೆ. ನೀನು ನಕಲಿ ಆಧಾರ್ ಕಾರ್ಡನ್ನು ಹೊಂದಿರುವುದರಿಂದ ಪೊಲೀಸರ ಬಳಿ ದೂರು ನೀಡಲು ಹೋದರೆ ನೀನೇ ಜೈಲಿಗೆ ಹೋಗುವೆ. ಕಳ್ಳದಾರಿಯಲ್ಲಿ ಭಾರತಕ್ಕೆ ಬಂದಿರುವುದರಿಂದ ಬಾಂಗ್ಲಾದೇಶದ ಸರ್ಕಾರ ನಿನ್ನನ್ನೇನೂ ಢಾಕಾಗೆ ಕರೆಸಿಕೊಳ್ಳುವುದಿಲ್ಲ’ ಎಂದಳು. ನನಗೆ ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದ್ದರಿಂದ ವೇಶ್ಯಾವೃತ್ತಿ ಮಾಡಲೊಪ್ಪಿದೆ. 10 ದಿನ ಅದೇ ಹೊಟೇಲ್​ನಲ್ಲಿದ್ದು ಹಲವಾರು ಗ್ರಾಹಕರನ್ನು ತೃಪ್ತಿಪಡಿಸಿದೆ. ನಂತರ ನನ್ನನ್ನು ರಿಯಾ ಜತೆಗೆ ಹೈದರಾಬಾದ್​ಗೆ ಕಳುಹಿಸಿದರು. ಅಲ್ಲೊಬ್ಬ ದಳ್ಳಾಳಿ ನಮ್ಮನ್ನು ಬರಮಾಡಿಕೊಂಡು ತನ್ನ ಮನೆಯಲ್ಲಿಯೇ ಇಟ್ಟುಕೊಂಡು ನಮ್ಮಿಬ್ಬರನ್ನು ಗ್ರಾಹಕರು ಹೇಳಿದ ಜಾಗಕ್ಕೆ ಕಳುಹಿಸುತ್ತಿದ್ದ. ಒಮ್ಮೆ ಶಾಪಿಂಗ್​ಗೆ ಹೋಗಿದ್ದಾಗ ಮಾಲ್​ವೊಂದರಲ್ಲಿ ಶ್ಯಾಮ್ ಎಂಬಾತನ ಪರಿಚಯವಾಯಿತು. ಆತ ಕಲ್ಲಿಕೋಟೆಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿರುವುದಾಗಿ ತಿಳಿಸಿ ವ್ಯಾಪಾರಕ್ಕೆಂದು ಹೈದರಾಬಾದಿಗೆ ಬಂದಿದ್ದೇನೆಂದ. ಅವನಿಗೆ ನಾನು ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡೆ. ಬೆಳಗಿನ ಸಮಯದಲ್ಲಿ ಬಿಡುವಾಗಿರುತ್ತಿದ್ದ ಕಾರಣ ನಾವಿಬ್ಬರೂ ಹಲವಾರು ದಿನ ಭೇಟಿಯಾದೆವು. ಪರಸ್ಪರ ಪ್ರೇಮವುಂಟಾಗಿ ಫೋನ್ ನಂಬರುಗಳನ್ನು ಹಂಚಿಕೊಂಡೆವು. ಅವನನ್ನು ಮದುವೆಯಾಗಿ ವೇಶ್ಯಾಜೀವನಕ್ಕೆ ವಿದಾಯ ಹೇಳಲು ತೀರ್ವನಿಸಿದೆ.

ಹೈದರಾಬಾದಿನಿಂದ ಬೆಂಗಳೂರಿಗೆ ಬಂದ ನಂತರ, ಪಿಂಕಿಗೆ ನನ್ನ ತಿಂಗಳ ಸಂಬಳ ಕೊಡಲು ಕೋರಿದೆ. ‘ನಿನ್ನನ್ನು ಢಾಕಾದಿಂದ ಇಲ್ಲಿಗೆ ಕಳ್ಳಸಾಗಾಣಿಕೆ ಮಾಡಲು ಏಜೆಂಟನಿಗೆ ಎರಡು ಲಕ್ಷ ರೂ. ಕೊಟ್ಟೆ. ನಕಲಿ ಆಧಾರ್ ಕಾರ್ಡ್​ಗೆ ಒಂದು ಲಕ್ಷ ರೂ. ಖರ್ಚಾಯಿತು. ಬಟ್ಟೆಬರೆಗಾಗಿ 50,000 ರೂ. ಕೊಟ್ಟೆ. ಆ ಹಣವನ್ನು ನಿನ್ನ ಸಂಬಳದಿಂದ ಕಂತಿನ ಮೇಲೆ ಮುರಿದುಕೊಳ್ಳುವೆ’ ಎಂದು ಹೇಳಿ ಕೇವಲ 5,000 ರೂ. ಕೈಗಿತ್ತಳು. ಅಷ್ಟರಲ್ಲಿ ರಿಯಾ ನಾನು ಹೈದರಾಬಾದ್​ನಲ್ಲಿ ಕೇರಳ ಮೂಲದ ವ್ಯಕ್ತಿಯೊಡನೆ ಸಂಪರ್ಕ ಮಾಡಿದ್ದಾಗಿ ಚಾಡಿ ಹೇಳಿದಳು. ಆಕ್ರೋಶಗೊಂಡ ಪಿಂಕಿ ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ಬೇರೊಂದು ಫೋನನ್ನು ಕೊಟ್ಟಳು. ‘ನೀನು ಯಾವ ಭಾರತೀಯನನ್ನೂ ಸಂರ್ಪಸುವಂತಿಲ್ಲ’ ಎಂದು ತಾಕೀತು ಮಾಡಿದಳು.

ಮುಂದಿನ ವಾರ ಕೇರಳದ ಕಲ್ಲಿಕೋಟೆಯಿಂದಲೇ ಹುಡುಗಿಯರನ್ನು ಕಳಿಸಲು ಪಿಂಕಿಗೆ ಬೇಡಿಕೆ ಬಂದ ಕಾರಣ ಅವಳು ನನ್ನನ್ನೂ ಸೇರಿ ಮೂವರನ್ನು ಅಲ್ಲಿಗೆ ಬಸ್ಸಿನಲ್ಲಿ ಕಳುಹಿಸಿದಳು. ನನಗೆ ಪಾಯಸ ಕುಡಿದಷ್ಟೇ ಸಂತಸವಾಗಿತ್ತು. ಏಕೆಂದರೆ ಕಲ್ಲಿಕೋಟೆಯಲ್ಲಿಯೇ ಶ್ಯಾಮ್ ವಾಸವಿದ್ದದ್ದು. ಅಲ್ಲಿ್ಲೆ ತಲುಪಿದ ನಂತರ ನಮ್ಮನ್ನು ಯಾರದೋ ಮನೆಯಲ್ಲಿಟ್ಟರು. ನಾನು ಅಂಗಡಿಗೆ ಹೋಗುವುದಾಗಿ ಹೇಳಿ ಹತ್ತಿರದ ಮಾಲ್​ಗೆ ಹೋದೆ. ಶ್ಯಾಮ್ ಫೋನ್ ನಂಬರ್ ಬಾಯಿಪಾಠವಾದದ್ದರಿಂದ ಅವನಿಗೆ ಕರೆ ಮಾಡಿ, ಕಲ್ಲಿಕೋಟೆಗೆ ಬಂದಿರುವುದನ್ನು ತಿಳಿಸಿದೆ. ಆತ ತನ್ನ ಸ್ನೇಹಿತನ ಜೊತೆ ಬಂದು ನನ್ನನ್ನು ಭೇಟಿಯಾದ. ನಾನು ಕೇರಳದಲ್ಲಿದ್ದ 20 ದಿನಗಳ ಕಾಲವೂ ಬೆಳಿಗ್ಗೆ ಶ್ಯಾಮ್ನ್ನು ಭೇಟಿಯಾಗುತ್ತಿದ್ದೆ. ಆದರೆ, ಆತನೊಡನೆ ಲೈಂಗಿಕ ಸಂಪರ್ಕ ಮಾಡಲಿಲ್ಲ. ನಾವು ಎಷ್ಟು ದಿನ ಹೀಗೆಯೇ ಕಾಲ ಕಳೆಯುವುದು, ಬೇಗನೇ ಲಗ್ನವಾಗಬೇಕಲ್ಲ, ಎಂದು ಅವನನ್ನು ಕೇಳಿದಾಗ, ‘ಆಗುತ್ತೇನೆ, ಕಾಲ ಕೂಡಿ ಬರಬೇಕು’ ಎಂದು ಹೇಳಿದ.

(ಮುಂದುವರಿಯುವುದು)

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)