ಅಂಕಣ

ಸಿನಿಮಾ ಆಮಿಷ ತೋರಿಸಿ ಶೋಷಣೆ: ಆ ಕ್ಷಣ ಡಾ.ಡಿ.ವಿ.ಗುರುಪ್ರಸಾದ್ ಅಂಕಣ

ಡಾ. ಡಿ. ವಿ. ಗುರು ಪ್ರಸಾದ್
ಉತ್ತರ ಕರ್ನಾಟಕದ ಪಟ್ಟಣವೊಂದರ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಸೀಮಾ ಮೇಲ್ಮಧ್ಯಮವರ್ಗದ ಕುಟುಂಬಕ್ಕೆ ಸೇರಿದ್ದಳು. ಆಕೆಗೆ ಚಿಕ್ಕಂದಿನಿಂದಲೂ ನೃತ್ಯ ಹಾಗೂ ಅಭಿನಯದಲ್ಲಿ ಆಸಕ್ತಿಯಿದ್ದು ಶಾಲಾಕಾಲೇಜುಗಳಲ್ಲಿ ನೃತ್ಯ ಹಾಗೂ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಳು. ಸುಂದರವಾಗಿದ್ದು ಉತ್ತಮ ಮೈಕಟ್ಟನ್ನು ಹೊಂದಿದ್ದ ಸೀಮಾ ತಾನು ಸಿನಿಮಾ ತಾರೆಯಾಗಿ ಹೆಸರುವಾಸಿಯಾಗಬೇಕೆಂಬ ಕನಸನ್ನು ಕಾಣುತ್ತಿದ್ದಳು. ಅವಳ ಈ ಆಸೆಗೆ ಕುಟುಂಬದವರು ತಣ್ಣೀರೆರಚಿದ್ದರೂ ಗೆಳತಿಯರು ಪ್ರೋತ್ಸಾಹಿಸುತ್ತಾ ಅವಳ ಆಸೆಗಳನ್ನು ಜೀವಂತವಾಗಿಟ್ಟಿದ್ದರು.

‘ಸಿನಿಮಾ, ಟೆಲಿವಿಷನ್​ಗಳಲ್ಲಿ ಪಾತ್ರವಹಿಸಲು ಆಸೆಯಿರುವವರಿಗೆ ಮತ್ತು ಮಾಡೆಲ್ ಆಗಬಯಸುವವರಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ನೀಡಲಾಗುತ್ತದೆ’ ಎಂಬ ಶೀರ್ಷಿಕೆಯಲ್ಲಿ ವೃತ್ತಪತ್ರಿಕೆಯೊಂದರಲ್ಲಿ ಬಂದಿದ್ದ ಜಾಹೀರಾತು ಗಮನಿಸಿದ ಸೀಮಾ ಜಾಹೀರಾತಿನಲ್ಲಿದ್ದ ದೂರವಾಣಿ ಸಂಖ್ಯೆಯನ್ನು ಸಂರ್ಪಸಿದಳು. ಉತ್ತರಿಸಿದ ವ್ಯಕ್ತಿ ತಾನೊಬ್ಬ ಮಾಜಿ ಸಿನಿಮಾ ನಿರ್ದೇಶಕ, ಹೆಸರು ಶಿವಕುಮಾರ್ ಎಂದ. ತಾನು ಹಲವು ಯುವತಿಯರನ್ನು ಸಿನಿಮಾರಂಗಕ್ಕೆ ಪರಿಚಯಿಸಿರುವುದಾಗಿ ಹೇಳಿದ ಆತ ವಿವಿಧ ಭಂಗಿಗಳ ಛಾಯಾಚಿತ್ರಗಳನ್ನು ಕಳಿಸಲು ಸೀಮಾಗೆ ತಿಳಿಸಿದ.

ಎರಡು ದಿನದ ನಂತರ ಕರೆ ಮಾಡಿದ ಶಿವಕುಮಾರ್, ‘ಸೀಮಾ, ನಿನ್ನ ಫೋಟೋ ಮತ್ತು ವಿಡಿಯೋಗಳನ್ನು ನೋಡಿರುವೆ. ನಿನಗೆ ಸಿನಿಮಾ ತಾರೆಯಾಗುವ ಎಲ್ಲ ಅರ್ಹತೆಗಳಿವೆ, ಅದರೆ ಇದಕ್ಕಾಗಿ ತರಬೇತಿಯ ಅವಶ್ಯವಿರುವ ಕಾರಣ ನೀನು ಬೆಂಗಳೂರಿಗೆ ಬಂದು ನಾನೇ ನಡೆಸುವ ನಟನಾ ಶಾಲೆಗೆ ಸೇರಿಕೋ. ಮೂರು ತಿಂಗಳ ತರಬೇತಿಯ ನಂತರ ನಿನಗೆ ಚಾನ್ಸ್ ಕೊಡಿಸುತ್ತೇನೆ. ತರಬೇತಿ, ಊಟ, ವಸತಿಯ ಖರ್ಚನ್ನು ನೀನು ತಾರೆಯಾದ ನಂತರ ನನಗೆ ಕೊಡಬೇಕಾಗುತ್ತದೆ’ ಎಂದ.

ಅದೇ ರಾತ್ರಿಯೇ ಸೀಮಾ ತಾನು ಗೆಳತಿಯ ಮನೆಗೆ ಹೋಗುವುದಾಗಿ ಹೇಳಿ ತನ್ನೂರನ್ನು ಬಿಟ್ಟು ಬೆಂಗಳೂರನ್ನು ತಲುಪಿದಳು. ಏಜೆನ್ಸಿ ನೀಡಿದ್ದ ವಿಳಾಸವು ಒಂದು ಮನೆಯಾಗಿದ್ದು ಅದರಲ್ಲಿ ತಾರೆಯರಾಗುವ ಆಸೆಯಿಟ್ಟು ಬಂದಿದ್ದ ನಾಲ್ಕೈದು ಯುವತಿಯರಿದ್ದರು. ಶಿವಕುಮಾರ್ ಅವರ ಜತೆಗೇ ಸೀಮಾಗೂ ತಂಗಲು ವ್ಯವಸ್ಥೆ ಮಾಡಿದ. ಏತನ್ಮಧ್ಯೆ ಸೀಮಾ ಮನೆಗೆ ವಾಪಸಾಗದಿದ್ದಾಗ ಮಾತಾಪಿತರು ಆಕೆ ಕಾಣೆಯಾಗಿದ್ದಾಳೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರಿತ್ತರು. ಆಕೆಗಾಗಿ ಹುಡುಕಾಟ ಪ್ರಾರಂಭವಾಯಿತು.

ಶಿವಕುಮಾರ್ ತನ್ನ ಮನೆಯಲ್ಲಿಯೇ ಸ್ಟೂಡಿಯೋವನ್ನಿಟ್ಟುಕೊಂಡಿದ್ದು ಅಲ್ಲಿ ಮಾಡೆಲ್​ಗಳಾಗಲು ಬಯಸುವವರ ಫೋಟೋಶೂಟ್ ಮಾಡುತ್ತಿದ್ದ. ಮನೆಯಲ್ಲಿದ್ದ ಯುವತಿಯರಿಗೆ ಡಾನ್ಸ್ ಹಾಗೂ ನಟನೆಯ ತರಬೇತಿ ಕೊಡಿಸುತ್ತಿದ್ದ. ಅವರನ್ನು ಕಾಲಕಾಲಕ್ಕೆ ಕಿರುತೆರೆಯ ಧಾರಾವಾಹಿಗಳ ಶೂಟಿಂಗ್ ನೋಡಲು ಕರೆದೊಯ್ಯುತ್ತಿದ್ದ. ಶಿವಕುಮಾರನಿಗೆ ಸಿನಿಮಾರಂಗದ ಹಲವರ ಪರಿಚಯವಿದೆ ಎನ್ನುವುದು ಒಂದೇ ವಾರದಲ್ಲಿ ಸೀಮಾಳಿಗೆ ಮನದಟ್ಟಾದಾಗ ಆತನ ಸಹಾಯದಿಂದ ತಾನೂ ಒಂದು ದಿನ ದೊಡ್ಡ ನಟಿಯಾಗುತ್ತೇನೆ ಎಂದು ಭಾವಿಸಿದಳು.

ಬೆಂಗಳೂರಿಗೆ ಬಂದು ಎರಡು ತಿಂಗಳಾದ ನಂತರವೂ ನಟಿಸಲು ಯಾವುದೇ ಚಾನ್ಸ್ ಸಿಗದಿದ್ದಾಗ ಸೀಮಾ ಬೇಸರಗೊಂಡು ಊರಿಗೆ ಮರಳಲು ನಿರ್ಧರಿಸಿದಳು. ಆಕೆಯ ಜತೆಗಾರ್ತಿಯರು ತಾವು ಅವಳಿಗಿಂತ ಹೆಚ್ಚು ಸಮಯದಿಂದ ಕಾಯುತ್ತಿರುವುದಾಗಿ ತಿಳಿಸಿ ತಾಳ್ಮೆ ಕಳೆದುಕೊಳ್ಳದಿರಲು ಹೇಳಿದರು. ಕೆಲ ದಿನಗಳ ನಂತರ ಶಿವಕುಮಾರ್ ಎಲ್ಲ ಯುವತಿಯರನ್ನೂ ಕರೆದು, ‘ನಿಮ್ಮೆಲ್ಲರ ಭಾಗ್ಯದ ಬಾಗಿಲು ತೆರೆದಿದೆ. ದುಬೈನಲ್ಲಿ ನಡೆಯುವ ಒಂದು ದೊಡ್ಡ ಕಾರ್ಯಕ್ರಮದಲ್ಲಿ ನಿಮ್ಮ ನೃತ್ಯ ಪ್ರದರ್ಶನವನ್ನು ಮಾಡಿಸುವ ಅವಕಾಶ ಬಂದಿದೆ. ಈ ಕಾರ್ಯಕ್ರಮಕ್ಕೆ ಹೆಸರಾಂತ ನಿರ್ವಪಕರು, ನಿರ್ದೇಶಕರು, ನಟನಟಿಯರು ಬರುವುದರಿಂದ ನೀವು ಉತ್ತಮವಾಗಿ ಅಭಿನಯಿಸಿದರೆ ಸಿನಿಮಾಗಳಲ್ಲಿ ಚಾನ್ಸ್ ಸಿಗುತ್ತದೆ. ಹೋಗಿಬರುವ ಖರ್ಚಲ್ಲದೆ ಸೂಕ್ತ ಸಂಭಾವನೆಯೂ ಸಿಗುತ್ತದೆ, ಆದರೆ ನೀವು ಬರಲೇಬೇಕೆಂಬ ಬಲವಂತವಿಲ್ಲ’ಎಂದಾಗ ಇತರರೊಡನೆ ಸೀಮಾಳೂ ದುಬೈಗೆ ಹೋಗಲೊಪ್ಪಿದಳು.

ಶಿವಕುಮಾರ್ ತನಗೆ ಕೊಟ್ಟ ವಿಮಾನ ಟಿಕೇಟನ್ನು ಗಮನಿಸಿದ ಸೀಮಾ, ಇದರಲ್ಲಿ ಮರುಪ್ರಯಾಣದ ವಿವರಗಳೇ ಇಲ್ಲವಲ್ಲಾ ಎಂದು ಕೇಳಿದಳು. ದುಬೈನ ಕಾರ್ಯಕ್ರಮವಾದ ನಂತರ ನಮಗೆ ಕೊಲ್ಲಿಯ ಇತರ ದೇಶಗಳಲ್ಲಿಯೂ ಕಾರ್ಯಕ್ರಮಗಳನ್ನು ಕೊಡುತ್ತೇವೆಂದು ತಿಳಿಸಿರುವುದರಿಂದ ಕಟ್ಟಕಡೆಯ ಕಾರ್ಯಕ್ರಮ ನಡೆಯುವ ದೇಶದಿಂದ ನೀವು ವಾಪಸಾಗಬೇಕಾಗುತ್ತದೆ, ಹೀಗಾಗಿ ಅಲ್ಲಿಗೆ ಹೋದ ನಂತರವೇ ಮರುಪ್ರಯಾಣದ ಟಿಕೆಟ್ ಸಿಗುತ್ತದೆ ಎಂದು ಆತ ಸಮಜಾಯಿಷಿ ನೀಡಿದ.

ಮುಂದಿನ ವಾರವೇ ಐವರೂ ಯುವತಿಯರು ವಿದೇಶಕ್ಕೆ ಪ್ರಯಾಣ ಬೆಳೆಸಿದರು. ದುಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ಖನ್ನಾ ಎನ್ನುವವನು ಅವರನ್ನು ದೊಡ್ಡ ಹೋಟೆಲ್​ನಲ್ಲಿ ತಂಗುವ ವ್ಯವಸ್ಥೆ ಮಾಡಿದ. ಅವರಿಗೆ ಊರಿನ ಕೆಲವು ಪ್ರವಾಸಿ ತಾಣಗಳನ್ನು ತೋರಿಸಿ, ಕಾರ್ಯಕ್ರಮದಲ್ಲಿ ಧರಿಸಲೆಂದು ಉತ್ತಮ ಬಟ್ಟೆಬರೆಗಳನ್ನು ಕೊಡಿಸಿದ. ಕಾರ್ಯಕ್ರಮದ ಕಾಂಟ್ರಾಕ್ಟ್ ಎಂದು ಹಲವಾರು ಕಾಗದಪತ್ರಗಳಿಗೆ ಅವರೆಲ್ಲರ ಸಹಿಗಳನ್ನು ಪಡೆದ.

ಮಾರನೆಯ ರಾತ್ರಿ ರಿಹರ್ಸಲ್ ಎಂದು ಅವರನ್ನು ಒಂದು ಸ್ಟೂಡಿಯೋಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಕೆಲವು ಶೇಖ್​ಗಳ ಮುಂದೆ ನೃತ್ಯ ಮಾಡಲು ಸೂಚಿಸಲಾಯಿತು. ಅಲ್ಲಿ ಅವರಂತೆಯೇ ಬೇರೆ ಯುವತಿಯರೂ ಬಂದಿದ್ದರು. ನಂತರ ಖನ್ನಾ ‘ನೀವೆಲ್ಲರೂ ಆಯ್ಕೆಯಾಗಿದ್ದೀರಿ’ ಎಂದು ಹೇಳಿ ಎಲ್ಲರನ್ನೂ ಹೋಟೆಲ್​ನಲ್ಲಿ ಬಿಟ್ಟ.

ಬೆಳಗಾಗುತ್ತಿದ್ದಂತೆ ಹೋಟೆಲ್​ನ ರೂಮುಗಳನ್ನು ಖಾಲಿಮಾಡಿಸಿ ಎಲ್ಲರನ್ನೂ ತನ್ನ ಕಾರಿನಲ್ಲಿ ಹತ್ತಿಸಿಕೊಂಡ ಖನ್ನಾ ಮೊದಲಿಗೆ ಸೀಮಾಳನ್ನು ಒಬ್ಬ ಶೇಖ್​ನ ಮನೆಗೆ ಕರೆತಂದು, ‘ನೀನು ಇನ್ನು ಮುಂದೆ ಇಲ್ಲಿಯೇ ಇರಬೇಕು’ ಎಂದು ಹೇಳಿ ಹೊರಟೇಹೋದ. ಆಘಾತಗೊಂಡ ಸೀಮಾ ‘ನನ್ನನ್ನು ಇಲ್ಲಿಗೇಕೆ ಕರೆತರಲಾಗಿದೆ?’ ಎಂದು ಪ್ರಶ್ನಿಸಿದಾಗ ಆತ ‘ನಾನು ಭಾರೀ ಹಣವನ್ನು ನೀಡಿ ನಿನ್ನನ್ನು ಖರೀದಿಸಿದ್ದೇನೆ. ಇನ್ನು ಮುಂದೆ ನೀನು ನನ್ನ ಮನೆಯಲ್ಲಿ ಸೇವಕಿಯಾಗಿ ಕೆಲಸಮಾಡಬೇಕು’ ಎಂದ. ಅವನೊಡನೆ ಆಕೆ ಜಗಳವಾಡಲು ಹೋದಾಗ, ‘ನೀನು ಈ ಬಗ್ಗೆ ಕಾಂಟ್ರಾಕ್ಟಿಗೆ ಸಹಿ ಮಾಡಿರುವೆ’ ಎಂದುತ್ತರಿಸಿ ಆಕೆ ಸಹಿಮಾಡಿದ್ದ ಪತ್ರವನ್ನು ತೋರಿಸಿದ. ಸೀಮಾ ಆಘಾತಗೊಂಡು ಕುಸಿದುಬಿದ್ದಳು.

ಎಚ್ಚರವಾದಾಗ ತಾನು ಆ ಮನೆಯಲ್ಲಿ ಬಂದಿಯಾಗಿದ್ದುದು ಸೀಮಾಗೆ ವಿದಿತವಾಯಿತು. ಹಲವು ದಿನಗಳ ಕಾಲ ಶೇಖ್ ಅವಳ ಮೇಲೆ ಅತ್ಯಾಚಾರ ಮಾಡಿದ. ಆ ಮನೆಯ ಸೇವಕರು ಸೀಮಾಳಿಗೆ ‘ನಿನ್ನ ಪಾಸ್​ಪೋರ್ಟನ್ನು ನಮ್ಮ ಮಾಲೀಕ ತೆಗೆದುಕೊಂಡಿರುವ ಕಾರಣ ನೀನು ಈ ದೇಶದಿಂದ ನಿರ್ಗಮಿಸುವ ಹಾಗಿಲ್ಲ. ಮೂರು ವರ್ಷಗಳ ಕಾಲ ಪ್ರತಿಭಟಿಸದೆ ಕೆಲಸ ಮಾಡಿದರೆ ನಿನಗಾಗುವ ಕಿರುಕುಳ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು. ಸೀಮಾ ತನ್ನ ಅದೃಷ್ಟವನ್ನು ಹಳಿಯುತ್ತ ರೋದಿಸತೊಡಗಿದಳು. ಕಡೆಗೆ ವಿಧಿಯಿಲ್ಲದೆ ಶೇಖ್​ನ ಮನೆಗೆಲಸಗಳನ್ನು ಮಾಡತೊಡಗಿದಳು. ಅವಳಿಗೆ ಒಂದು ವರ್ಷದ ಮಗುವೊಂದನ್ನು ನೋಡಿಕೊಳ್ಳಲು ಆದೇಶಿಸಲಾಯಿತು. ಶೇಖನ ಲೈಂಗಿಕ ಕಿರುಕುಳ ಮುಂದುವರಿದೇ ಇತ್ತು.

ಕೆಲವು ತಿಂಗಳ ನಂತರ ಒಂದು ದಿನ ಸೀಮಾ ತಾನು ನೋಡಿಕೊಳ್ಳುತ್ತಿದ್ದ ಮಗುವನ್ನು ರ್ಪಾಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಗೆ ಹೋದಳು. ಅಲ್ಲಿ ಕಂಡ ಒಬ್ಬ ಭಾರತೀಯನಿಗೆ ತನ್ನ ಗೋಳಿನ ಕಥೆಯನ್ನು ವಿವರಿಸಿದಳು. ಮರುಕಗೊಂಡ ಆತ ಮಾರನೆಯ ದಿನ ಹೇಗಾದರೂ ಮಾಡಿ ಆ ಮನೆಯಿಂದ ಹೊರಬರಲು ಸೂಚಿಸಿದ. ಅಂತೆಯೇ ಮರುದಿನ ಆಕೆ ಹೊರಬಂದಾಗ ಆತ ಸೀಮಾಳನ್ನು ಭಾರತೀಯ ದೂತಾವಾಸದ ಕಚೇರಿಗೆ ಕರೆದುಕೊಂಡು ಹೋದ. ಅಲ್ಲಿ ಸೀಮಾ ತನ್ನ ಪರಿಸ್ಥಿತಿ ವಿವರಿಸಿದಳು. ಅಧಿಕಾರಿಗಳು ಅವಳಿಗೆ ಅಲ್ಲಿಯೇ ಆಶ್ರಯ ನೀಡಿ ಬದಲಿ ಪಾಸ್​ಪೋರ್ಟನ್ನು ನೀಡಿದರು. ಅವಳ ಜತೆಯಲ್ಲಿ ಬಂದಿದ್ದ ಇತರ ನಾಲ್ವರು ಯುವತಿಯರು ಡಾನ್ಸ್ ಬಾರುಗಳಲ್ಲಿ ನರ್ತಕಿಯರಾಗಿ ಕೆಲಸ ಮಾಡುತ್ತಿರುವುದನ್ನು ಪತ್ತೆಮಾಡಿ ಲೈಂಗಿಕ ಶೋಷಣೆಗೊಳಗೊಂಡಿದ್ದ ಅವರೆಲ್ಲರನ್ನೂ ರಕ್ಷಿಸಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿದ ಅಧಿಕಾರಿಗಳು ಪೊಲೀಸರನ್ನು ಸಂರ್ಪಸಿದರು. ಸೀಮಾ ಮತ್ತಿತರರು ಬೆಂಗಳೂರಿಗೆ ಬಂದ ಕೂಡಲೇ ಪೊಲೀಸರು ಅವರೆಲ್ಲರ ವಿಚಾರಣೆ ಮಾಡಿ ಶಿವಕುಮಾರ್ ವಿರುದ್ಧ ಅಪಹರಣದ ಪ್ರಕರಣ ದಾಖಲಿಸಿದರು.

ಅಷ್ಟರಲ್ಲಿ ಶಿವಕುಮಾರ್ ತಾನಿದ್ದ ಮನೆಯನ್ನು ಖಾಲಿ ಮಾಡಿ ಪರಾರಿಯಾಗಿದ್ದ. ಕೊನೆಗೆ ಹೈದರಾಬಾದಿನಲ್ಲಿ ಪತ್ತೆಯಾದ. ಅವನನ್ನು ಬಂಧಿಸಿ ಪ್ರಶ್ನಿಸಿದಾಗ, ‘ನಾನೂ ಈ ಹಿಂದೆ ನಟನಾಗಬೇಕೆಂಬ ಆಸೆಯಿಂದ ಚೆನ್ನೈಗೆ ಹೋಗಿದ್ದೆ. ಅಲ್ಲಿ ನಟಿಸುವ ಚಾನ್ಸ್ ಸಿಗದಿದ್ದಾಗ ಸಿನಿಮಾ ಸ್ಟುಡಿಯೋವೊಂದರಲ್ಲಿ ಚಹಾ ಸರಬರಾಜು ಮಾಡತೊಡಗಿದೆ. ಆನಂತರ ಒಬ್ಬ ಛಾಯಾಗ್ರಾಹಕನ ಸಂಪರ್ಕಕ್ಕೆ ಬಂದು ಅವನ ಅಸಿಸ್ಟೆಂಟ್ ಆದೆ. ಚೆನ್ನೈನಲ್ಲಿ ಸೂಕ್ತ ಅವಕಾಶಗಳು ದೊರೆಯದೇ ಹೋದಾಗ ಬೆಂಗಳೂರಿನಲ್ಲಿ ಸ್ಟುಡಿಯೋ ತೆಗೆದು ಛಾಯಾಗ್ರಹಣದ ಜತೆಜತೆಗೇ ಇವೆಂಟ್ ಮ್ಯಾನೇಜರ್ ಆಗಿದ್ದೆ. ಅದರಲ್ಲಿ ನಷ್ಟ ಅನುಭವಿಸಿದಾಗ ಮಾನವ ಕಳ್ಳಸಾಗಣೆ ಜಾಲವೊಂದರ ಸದಸ್ಯನೊಬ್ಬನ ಪರಿಚಯವಾಗಿ ಅವನ ಮೂಲಕ ಬೇರೆ ಬೇರೆ ದೇಶಗಳಿಗೆ ಮತ್ತು ನಮ್ಮ ದೇಶದ ಹಲವಾರು ವೇಶ್ಯಾವಾಟಿಕೆಗಳಿಗೆ ಯುವತಿಯರನ್ನು ಮಾರುತ್ತಿದ್ದೆ. ಸಿನಿಮಾ ತಾರೆಯನ್ನಾಗಿ ಮಾಡುಡುವ ಆಮಿಷವನ್ನು ಒಡ್ಡಿ ಅವರನ್ನು ಬಲೆಗೆ ಬೀಳಿಸುತ್ತಿದ್ದೆ’ ಎಂದು ವಿವರಿಸಿದ ಶಿವಕುಮಾರ್, ಈವರೆಗೆ 22 ಜನ ಯುವತಿಯರನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ.

ಶಿವಕುಮಾರ್​ನ ಹೇಳಿಕೆಯ ಮೇರೆಗೆ ಈ ಜಾಲದ ಇನ್ನೂ ಮೂವರು ಸದಸ್ಯರನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಯಿತು. ಎಲ್ಲರಿಗೂ ತಲಾ ಏಳು ವರ್ಷ ಕಾರಾಗೃಹವಾಸ ವಿಧಿಸಲಾಯಿತು. ‘ಸ್ವಇಚ್ಛೆಯಿಂದಲೇ ನೀನು ನಾಪತ್ತೆಯಾಗುವೆ, ಹುಡುಕಲ್ಪಡುವೆ, ಬಂಧಿಯಾಗುವೆ, ಹಾಗೂ ಬಿಡುಗಡೆಹೊಂದುವೆ’ ಎನ್ನುತ್ತಾನೆ ಜರ್ಮನ್ ಧರ್ಮಗುರು ಆಂಗೆಲಸ್ ಸ್ಯೆಲೇಸಿಯಸ್. ಈ ಮಾತುಗಳನ್ನು ಯುವಜನಾಂಗ ನೆನಪಿಟ್ಟರೆ ಮಾನವ ಕಳ್ಳಸಾಗಾಣಿಕೆಯ ನಿಗ್ರಹ ಸಾಧ್ಯ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)