ಅಂಕಣ

ತಾನೊಂದು ಬಗೆದರೆ...: ಆ ಕ್ಷಣ..

ಮಹಾನಗರದ ಬಾಡಿಗೆ ಮನೆಯೊಂದರಲ್ಲಿ 37 ವರ್ಷದ ಅನುರಾಧಾ ಪತಿ ಅಭಿಷೇಕ್ ಜೊತೆ ವಾಸಮಾಡುತ್ತಿದ್ದಳು. ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ಮಕ್ಕಳಾಗದ್ದರಿಂದ ನಿಯಮಿತವಾಗಿ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದಳು. ಒಂದು ದಿನ ದೇವಸ್ಥಾನದಲ್ಲಿ ಅರ್ಚನಾ ಎನ್ನುವ ಮಧ್ಯವಯಸ್ಕ ಮಹಿಳೆಯ ಪರಿಚಯವಾಯಿತು. ಅರ್ಚನಾ ತಾನು ವಿಧವೆಯೆಂದೂ, ತನ್ನ ಒಬ್ಬನೇ ಮಗ 27 ವರ್ಷದವನಾಗಿ ಅವಿವಾಹಿತನಾಗಿದ್ದು ತಾವಿಬ್ಬರೇ ಪಕ್ಕದ ಬಡಾವಣೆಯಲ್ಲಿ ವಾಸಿಸುತ್ತಿದ್ದೇವೆ ಎಂದಳು. ಮಗ ರೈಲ್ವೆ ಇಲಾಖೆಯಲ್ಲಿ ಟಿಟಿಯಾಗಿದ್ದು ವಾರಕ್ಕೆ ಮೂರು-ನಾಲ್ಕು ದಿನ ಮನೆಯಿಂದ ಹೊರಗಡೆಯೇ ಇರುತ್ತಾನೆ ಎಂದಳು. ‘ನಾನು ಸಂಸಾರವನ್ನು ಸರಿದೂಗಿಸಲು ಕೇಟರಿಂಗ್ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಮನೆಯದೇನಾದರೂ ಸಭೆ, ಸಮಾರಂಭವಿದ್ದರೆ ತಿಳಿಸಿ, ಅಡುಗೆ-ತಿಂಡಿಯನ್ನು ಕಡಿಮೆ ವೆಚ್ಚದಲ್ಲಿ ಮಾಡಿಕೊಡುತ್ತೇನೆ’ ಎಂದಳು.

ಮುಂದಿನ ಕೆಲವು ವಾರಗಳು ಅರ್ಚನಾ ಮತ್ತು ಅನುರಾಧಾ ಅದೇ ದೇವಸ್ಥಾನದಲ್ಲಿ ಭೇಟಿ ಮಾಡುತ್ತ ಹತ್ತಿರವಾದರು. ಇಬ್ಬರೂ ಪರಸ್ಪರರ ಮನೆಗಳಿಗೆ ಹೋಗಿ ಬರಲಾರಂಭಿಸಿದರು. ಸಮಯ ಸಿಕ್ಕಾಗ ಷಾಪಿಂಗ್, ಸಿನಿಮಾ, ರೆಸ್ಟೋರೆಂಟ್​ಗೆ ಒಟ್ಟಿಗೆ ಹೋಗುತ್ತಿದ್ದರು. ಒಂದು ದಿನ ಇಬ್ಬರೂ ಪರಸ್ಪರ ಪರಿಚಯವಿದ್ದ ಒಬ್ಬರ ಮನೆಗೆ ಪೂಜೆಗೆಂದು ಹೋದರು. ಆ ದಿನ ಅನುರಾಧಾ ಹೊಸ ಚಿನ್ನದ ಒಡವೆ ಧರಿಸಿದ್ದಳು. ಇದನ್ನು ಕಂಡಕೂಡಲೇ ಅರ್ಚನಾ ಅವನ್ನು ಎಲ್ಲಿ ಖರೀದಿಸಿದ್ದು, ಎಷ್ಟು ಹಣವಾಯಿತು, ಎಂದು ಕೇಳಿದಾಗ, ‘ಮದುವೆ ವಾರ್ಷಿಕೋತ್ಸವಕ್ಕೆಂದು ಯಜಮಾನರು ಕೊಡಿಸಿದ್ದು, ಎಷ್ಟು ಹಣವೆಂದು ಹೇಳಲಿಲ್ಲ’ ಎಂದಳು ಅನುರಾಧಾ.

ಇಷ್ಟರಲ್ಲಿ ಅನುರಾಧಾಳ ಮೈದುನ ಆನಂದನಿಗೂ ಅದೇ ನಗರದಲ್ಲಿ ಕೆಲಸ ದೊರೆತು, ಅವಳ ಮನೆಯಲ್ಲಿ ಬಂದು ವಾಸಿಸತೊಡಗಿದ. ಅವನ ಬರುವಿಕೆ ಅನುರಾಧಾಳಿಗೆ ಇಷ್ಟವಾಗದಿದ್ದರೂ ಅಭಿಷೇಕ್​ನಿಗೆ ತಮ್ಮನನ್ನು ಕಂಡರೆ ವಾತ್ಸಲ್ಯವಿದ್ದ ಕಾರಣ ಆಕೆ ತನ್ನ ಭಾವನೆ ವ್ಯಕ್ತಪಡಿಸಲಿಲ್ಲ. ಮೂರು ತಿಂಗಳ ನಂತರವೂ ಆತ ಬೇರೆ ಮನೆ ಮಾಡಿ ಹೋಗದಿದ್ದಾಗ ಅನುರಾಧಾ ಗಂಡನೊಡನೆ ಈ ಬಗ್ಗೆ ಮಾತನಾಡಿ, ‘ನಮ್ಮದು ಚಿಕ್ಕಮನೆ, ಇದರಲ್ಲಿಯೇ ಆನಂದನೂ ಇರುವುದು ನನಗೆ ಮುಜುಗರವಾಗುತ್ತಿದೆ. ಆತನೋ ನಿಮ್ಮಂತೆ ಸರ್ಕಾರಿ ಕಚೇರಿಯಲ್ಲಿರದ ಕಾರಣ ಅವೇಳೆಯಲ್ಲಿ ಬರುತ್ತಾನೆ, ಅವೇಳೆಯಲ್ಲಿ ಹೋಗುತ್ತಾನೆ, ಅವನ ಊಟ-ತಿಂಡಿಗಳನ್ನು ಪೂರೈಸುವುದರಲ್ಲೇ ಸಾಕಾಗಿದೆ’ ಎಂದಳು. ಈ ಮಾತುಗಳಿಂದ ಕೋಪಗೊಂಡ ಅಭಿಷೇಕ್, ‘ಇನ್ನು ಮುಂದೆ ಹೀಗೆ ಮಾತನಾಡಿದರೆ ನಿನ್ನನ್ನೇ ಮನೆಯಿಂದ ಹೊರಹಾಕುತ್ತೇನೆ, ಹುಷಾರ್’ ಎಂದು ಗದರಿದ.

ಇದಾದ ಮೂರು ತಿಂಗಳ ನಂತರದ ಒಂದು ದಿನ ಅಭಿಷೇಕ್ ಕಚೇರಿ ಮುಗಿಸಿ ಮನೆಗೆ ಬಂದು ಮನೆಯ ಕರೆಗಂಟೆಯನ್ನು ಹಲವಾರು ಬಾರಿ ಬಾರಿಸಿದ. ಬಾಗಿಲು ತೆರೆಯದಿದ್ದಾಗ ಅನುರಾಧಾ ಮನೆಯಲ್ಲಿರದೇ ಎಲ್ಲಿಯೋ ಹೊರಗೆ ಹೋಗಿರಬೇಕೆಂದು ಯೋಚಿಸಿ ತನ್ನಲ್ಲಿದ್ದ ಡೂಪ್ಲಿಕೇಟ್ ಕೀನಿಂದ ಬಾಗಿಲು ತೆಗೆದು ಮನೆಯೊಳಗೆ ಹೋದ. ಎದುರಿಗೆ ಕಂಡ ದೃಶ್ಯ ಅವನಿಗೆ ಆಘಾತ ತರಿಸಿತು. ಹಾಲ್​ನಲ್ಲಿ ಒಂದು ಕುರ್ಚಿ ಮೇಲೆ ಅನುರಾಧಾ ಹಿಂದಕ್ಕೆ ಒರಗಿಕೊಂಡು ಕುಳಿತಿದ್ದಂತೆ ಕಂಡಿತು. ಆಕೆಯ ಕುತ್ತಿಗೆ ದೊಡ್ಡದಾಗಿ ಹರಿದಿದ್ದು ಅದರಿಂದ ರಕ್ತ ಸೋರಿ ನೆಲವೆಲ್ಲ ರಕ್ತಮಯವಾಗಿತ್ತು. ಆಕೆಯ ಬಲಕೈಯಲ್ಲಿ ಅಡುಗೆಮನೆಯಲ್ಲಿ ಉಪಯೋಗಿಸುವ ಚಾಕುವಿದ್ದು ಅದು ರಕ್ತಸಿಕ್ತವಾಗಿತ್ತು. ಗಾಬರಿಯಾದ ಅಭಿಷೇಕ್ ಕೂಡಲೇ ಪೊಲೀಸರಿಗೆ ಕರೆ ಮಾಡಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿ ಕೂಡಲೇ ಬರಹೇಳಿದ.

ಮನೆಗೆ ಬಂದ ಪೊಲೀಸರು ಅನುರಾಧಾ ಏಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಕೇಳಿದಾಗ, ‘ನನ್ನ ತಮ್ಮ ಮನೆಯಲ್ಲಿರುವ ಬಗ್ಗೆ ಕೆಲವು ವಾರಗಳ ಹಿಂದೆ ನಮ್ಮಿಬ್ಬರಿಗೂ ಜಗಳವಾಗಿತ್ತು, ಅದರಿಂದ ನೊಂದು ಹೀಗೆ ಮಾಡಿರಬಹುದು’ ಎಂದ ಅಭಿಷೇಕ್. ಬೆಡ್​ರೂಮಿನಲ್ಲೇನಾದರೂ ಡೆತ್​ನೋಟ್ ಇರಬಹುದೇ ಎಂದು ನೋಡಲು ಪೊಲೀಸರು ಒಳಗೆ ಹೊದಾಗ ಅಲ್ಲಿನ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಮನೆಯ ಆಲ್ಮೇರಾ ಬಾಗಿಲುಗಳು ತೆರೆದಿದ್ದವು. ಬೆಡ್​ರೂಮಿಗೆ ಹೊಂದಿಕೊಂಡ ಬಾತ್​ರೂಮಿನ ವಾಷ್​ಬೇಸಿನ್ ಕೆಂಪಾಗಿದ್ದಂತೆ ಕಂಡು ಅಲ್ಲಿ ನೋಡಿದಾಗ ಕತ್ತರಿಸಿದ ಕಿವಿಯೊಂದು ಅದರೊಳಗೆ ಬಿದ್ದಿತ್ತು.

ಅನುರಾಧಾಳ ಶವದ ಬಳಿ ಬಂದು ಗಮನಿಸಿದಾಗ ವಾಷ್​ಬೇಸಿನ್​ನಲ್ಲಿ ಬಿದ್ದದ್ದು ಅವಳದೇ ಎಡಕಿವಿ ಎನ್ನುವುದು ತಿಳಿಯಿತು. ಅನುರಾಧಾ ಬಲಕಿವಿಯಲ್ಲಿದ್ದ ಬೆಂಡೋಲೆ, ಕುತ್ತಿಗೆಯಲ್ಲಿದ್ದ ಸರ, ಮಂಗಳಸೂತ್ರ, ಕೈಯ ಬಳೆ ಇವೆಲ್ಲವೂ ಮಾಯವಾಗಿದ್ದವು. ಹೀಗಾಗಿ ಇದು ಸ್ವತ್ತಿಗಾಗಿ ನಡೆದ ಕೊಲೆ ಎನ್ನುವುದು ಖಚಿತವಾಯಿತು. ಶವದ ಪಂಚನಾಮೆ ಮಾಡುವಾಗ ಕುತ್ತಿಗೆಯ ಗಾಯದ ಹೊರತು ಬೇರಾವುದೇ ಗಾಯ ಕಾಣಲಿಲ್ಲ. ಅಭಿಷೇಕ ಇಲ್ಲವೇ ಆನಂದನೇ ಅನುರಾಧಾಳ ಕೊಲೆ ಮಾಡಿ ದರೋಡೆಗಾದ ಕೊಲೆ ಎಂದು ಬಿಂಬಿಸಿರಬಹುದು ಎಂದು ಯೋಚಿಸಿದ ಪೊಲೀಸರು ಅವರಿಬ್ಬರ ಚಲನವಲನಗಳನ್ನು ಕೂಲಂಕಶವಾಗಿ ಗಮನಿಸಿದರು. ಅಪರಾಧ ನಡೆದ ದಿನ ಮತ್ತು ವೇಳೆಯಲ್ಲಿ ಅವರಿಬ್ಬರೂ ಮನೆಯಿಂದ ದೂರವೇ ಇದ್ದರು ಎಂದು ಅವರ ಸೆಲ್​ಫೋನ್ ಲೊಕೇಷನ್​ಗಳ ಮೂಲಕ ತಿಳಿಯಿತು.

ಅನುರಾಧಾಳ ಮೊಬೈಲ್ ಫೋನನ್ನು ಪರೀಕ್ಷಿಸಿದರೆ ಯಾವುದಾದರೂ ಕುರುಹು ಸಿಗಬಹುದೇನೋ ಎಂದು ಭಾವಿಸಿ ಅವಳ ಫೋನನ್ನು ಪರೀಕ್ಷಿಸಲಾಯಿತು. ಆಕೆ ಮೂರು ನಂಬರ್​ಗಳ ಜತೆಗೆ ಸಂಪರ್ಕ ಮಾಡುತ್ತಿದ್ದು ಅವುಗಳಲ್ಲೆರಡು ಗಂಡ ಮತ್ತು ತಾಯಿಯದಾಗಿದ್ದವು. ಮೂರನೆಯ ಫೋನು ಕೇಟರಿಂಗ್ ಏಜೆನ್ಸಿಯೊಂದಕ್ಕೆ ಸೇರಿತ್ತು. ಘಟನೆಯಾದ ಮಧ್ಯಾಹ್ನ ಊಟದ ಸಮಯಕ್ಕೆ ಆ ಫೋನಿನಿಂದ ಅನುರಾಧಾಳ ಫೋನಿಗೆ ಕರೆಯೊಂದು ಬಂದಿತ್ತು. ಆ ಫೋನನ್ನು ಅರ್ಚನಾ ಎನ್ನುವವಳು ಉಪಯೋಗಿಸುತ್ತಿದ್ದಾಳೆ ಎಂದು ತಿಳಿದ ತನಿಖಾಧಿಕಾರಿ ಅವಳ ಮನೆಗೆ ಹೋದರು. ಪೊಲೀಸರನ್ನು ಕಂಡಕೂಡಲೇ ಗಾಬರಿಗೊಂಡ ಅರ್ಚನಾ ಅಳತೊಡಗಿದಳು. ಆಕೆಯನ್ನು ಸಮಾಧಾನಗೊಳಿಸಿ ಪ್ರಶ್ನಿಸಿದಾಗ ಆಕೆ ಹೀಗೆಂದಳು:

‘ನನ್ನ ಮಗ ಹಲವಾರು ದಿನಗಳು ಮನೆಯಿಂದ ದೂರದಲ್ಲಿರುತ್ತಿದ್ದ ಕಾರಣ ಒಬ್ಬಂಟಿಯಾದ ನಾನು ಸಣ್ಣಪ್ರಮಾಣದಲ್ಲಿ ಕೇಟರಿಂಗ್ ವ್ಯವಹಾರ ಆರಂಭಿಸಿದೆ. ನನಗೆ ಸಹಾಯಮಾಡಲು ಶೇಖರ್ ಎನ್ನುವವನನ್ನು ಪಾಲುದಾರನನ್ನಾಗಿ ಮಾಡಿಕೊಂಡೆ. ಕೆಲವು ವರ್ಷ ಲಾಭದಲ್ಲಿಯೇ ನಡೆದ ಬಿಜಿನೆಸ್ ಕಳೆದ ಆರು ತಿಂಗಳಿಂದ ನಷ್ಟ ಅನುಭವಿಸಲಾರಂಬಿಸಿತು. ವ್ಯವಹಾರ ಮುಂದುವರಿಸಲು ಸಾಲ ಮಾಡಬೇಕಾಯಿತು. ಮಗನಿಗೆ ಬೇರೆ ಊರಿಗೆ ವರ್ಗಾವಣೆಯಾದ ಕಾರಣ ಆತ ಗಳಿಸಿದ ಸಂಬಳದಲ್ಲಿ ಕಾಲು ಭಾಗದಷ್ಟು ಮಾತ್ರ ಕೊಡಲಾರಂಭಿಸಿದ. ಸಾಲಗಾರರು ಕಾಟ ಕೊಡಲು ಆರಂಭಿಸಿದರು. ಮುಂದೇನು ಮಾಡುವುದೆಂದು ಶೇಖರನನ್ನು ಕೇಳಿದೆ. ‘ನಿನ್ನ ಸ್ನೇಹಿತೆ ಅನುರಾಧಾ ಶ್ರೀಮಂತ ಕುಟುಂಬದಿಂದ ಬಂದಂತೆ ತೋರುತ್ತದೆ. ಅವಳನ್ನು ಒಮ್ಮೆ ಕೇಳಿ ನೋಡು’ ಎಂದ. ಒಂದು ದಿನ ನಾನು ಅನುರಾಧಾ ಜತೆ ಯಾರದೋ ಮನೆಗೆ ಪೂಜೆಗೆ ಹೋದಾಗ ಆಕೆ ಮೈತುಂಬ ಒಡವೆ ಹಾಕಿದ್ದನ್ನು ಗಮನಿಸಿದ್ದೆ. ಅವಳನ್ನು ಸಾಲ ಕೇಳಿದಾಗ ಆಕೆ ತನ್ನ ಬಳಿ ಹಣವಿಲ್ಲವೆಂದಳು. ಆನಂತರ ಶೇಖರನೊಡನೆ ರ್ಚಚಿಸಿದಾಗ ಆತ ಅನುರಾಧಾ ಸುಳ್ಳು ಹೇಳುತ್ತಿರುವುದಾಗಿ ತಿಳಿಸಿ ಅವಳ ಮನೆಯನ್ನು ದರೋಡೆ ಮಾಡಿದರೆ ಸಾಕಷ್ಟು ಹಣ ಸಿಗಬಹುದು ಎಂದ. ನಾನು ಆ ದಿನ ಅವಳಿಗೆ ಫೋನ್ ಮಾಡಿ ಅವಳು ಮನೆಯಲ್ಲಿರುವುದನ್ನು ಖಾತ್ರಿ ಮಾಡಿಕೊಂಡು ಮಧ್ಯಾಹ್ನ ನಾಲ್ಕೂವರೆಗೆ ಅವಳ ಮನೆಗೆ ಹೋದೆ. ನಾವಿಬ್ಬರೂ ಮಾತನಾಡುತ್ತ ಕುಳಿತಿರುವಾಗ ಶೇಖರ್ ಅವಳ ಮನೆಯ ಕರೆಗಂಟೆ ಬಾರಿಸಿದ, ಅನುರಾಧಾ ಬಾಗಿಲು ತೆರೆದಾಗ ಶೇಖರ ಅವಳನ್ನು ನೂಕಿ ಬಲವಂತವಾಗಿ ಅವಳನ್ನು ಕುರ್ಚಿಯ ಮೇಲೆ ಕೂರಿಸಿದ. ನಾನು ಅನುರಾಧಾ ಏಳದಂತೆ ಅವಳನ್ನು ಹಿಡಿದೆ. ಶೇಖರ್ ಅಡುಗೆಮನೆಗೆ ಹೋಗಿ ಚಾಕು ತೆಗೆದುಕೊಂಡು ಬಂದು ಒಂದೇ ಏಟಿಗೆ ಅವಳ ಕುತ್ತಿಗೆ ಕುಯ್ದ. ಅವಳು ಆತ್ಮಹತ್ಯೆ ಮಾಡಿಕೊಂಡಳೆಂದು ಬಿಂಬಿಸಲು ಆ ಚಾಕುವನ್ನು ಅವಳ ಕೈಯಲ್ಲೇ ಇಟ್ಟೆವು. ಅವಳ ಮೈಮೇಲಿದ್ದ ಆಭರಣಗಳನ್ನು ದೋಚಿದೆವು. ಅವಳ ಒಂದು ಕಿವಿಯಲ್ಲಿದ್ದ ಓಲೆ ಸುಲಭವಾಗಿ ಹೊರಗೆ ಬರಲಿಲ್ಲ. ಹೀಗಾಗಿ ಕಿವಿಯನ್ನೇ ಕತ್ತರಿಸಿ ಓಲೆ ಬಿಡಿಸಿಕೊಂಡೆವು. ಕತ್ತರಿಸಿದ ಕಿವಿಯನ್ನು ಬಾತ್​ರೂಂನಲ್ಲಿ ಬಿಸಾಕಿದೆವು. ಆನಂತರ ಅವಳ ಮನೆಯ ಬೀರು ತೆಗೆದು ಅದರಲ್ಲಿ ನಾನು ನೋಡಿದ್ದ ಅವಳ ಹೊಸ ನೆಕ್​ಲೇಸ್ ಸೆಟ್ ಮತ್ತಿತರ ಆಭರಣಗಳನ್ನು ತೆಗೆದುಕೊಂಡೆವು. ಶೇಖರನ ಬಟ್ಟೆಗೆ ರಕ್ತ ಹತ್ತಿದ್ದ ಕಾರಣ ಆತ ಮನೆಯಲ್ಲಿದ್ದ ಇನ್ನೊಂದು ಷರ್ಟನ್ನು ತೆಗೆದುಕೊಂಡು ತನ್ನ ಷರ್ಟಿನ ಮೇಲೆ ತೊಟ್ಟ. ನಂತರ ಇಬ್ಬರೂ ಮುಂಬಾಗಿಲನ್ನು ಹಾಕಿಕೊಂಡು ಬಂದೆವು’ ಎಂದಳು.

ಕದ್ದ ಆಭರಣಗಳನ್ನು ಮರಳಿಸಲು ಪೊಲೀಸರು ಸೂಚಿಸಿದಾಗ, ಅರ್ಚನಾ ಅವುಗಳನ್ನು ಹೊರಗೆ ತಂದು, ‘ನನ್ನ ಹಣೆಬರಹ ನೋಡಿ, ಇವುಗಳನ್ನು ಮಾರಲು ಅಂಗಡಿಗೆ ಹೋದಾಗ ಮಂಗಳಸೂತ್ರ ಹಾಗೂ ಬೆಂಡೋಲೆ ಹೊರತಾಗಿ ಉಳಿದೆಲ್ಲವೂ ಗೋಲ್ಡ್​ಕವರಿಂಗ್ ಆಭರಣಗಳು ಎಂದು ತಿಳಿಯಿತು’ ಎಂದಳು. ರಾಬರಿ ಮತ್ತು ಕೊಲೆ ಆರೋಪದ ಮೇಲೆ ಅರ್ಚನಾ ಮತ್ತು ಶೇಖರನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇಬ್ಬರಿಗೂ ಜೀವಾವಧಿ ಶಿಕ್ಷೆಯಾಯಿತು.

‘ಆವ ಋಣಕೋಸುಗವೋ ಆರ ಹಿತಕೋಸುಗವೋ ಆವಾವ ಕಾರಣಕೊ ಆವ ಯೋಜನೆಗೋ ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? ದೈವ ಕುರುಡೆನ್ನದಿರು ಮಂಕುತಿಮ್ಮ’ ಎನ್ನುವ ಸಾಲುಗಳು ಅನುರಾಧಾ, ಅರ್ಚನಾ ಇಬ್ಬರಿಗೂ ಅನ್ವಯವಾಯಿತಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)