ಅಂಕಣ

ಜೈಲಿಗೆ ಹೋದರೂ ಬುದ್ಧಿ ಬರಲಿಲ್ಲ...

Webdesk - Ravikanth
ಮಹಾನಗರವೊಂದರಲ್ಲಿ ಸಾಫ್ಟ್​ವೇರ್ ಕಂಪನಿಯ ಉದ್ಯೋಗಿಯಾಗಿದ್ದ ಶಶಿಧರ ತನ್ನ ಹಳೆಯ ಬೈಕನ್ನು ಮಾರಲು ಉದ್ದೇಶಿಸಿದಾಗ ಸ್ನೇಹಿತರು, ‘ಒಎಲ್​ಎಕ್ಸ್ ಮಾರಾಟ-ಖರೀದಿ ಜಾಲತಾಣದಲ್ಲಿ ಬೈಕ್​ನ ಫೋಟೋ ಮತ್ತು ವಿವರಗಳನ್ನು ಹಾಕಿದರೆ ಹೆಚ್ಚಿನ ಬೆಲೆ ಬರಬಹುದು, ಇಲ್ಲವಾದರೆ ದಲ್ಲಾಳಿಗಳು ತಮ್ಮ ಕಮಿಷನ್ ಹಿಡಿದುಕೊಂಡು ನಿನಗೆ ಸಿಗಬೇಕಾದ ಬೆಲೆ ಸಿಗುವುದಿಲ್ಲ’ ಎಂದರು. ಆತ ಒಎಲ್​ಎಕ್ಸ್​ನಲ್ಲಿ ಬೈಕ್​ನ ಫೋಟೋ ಮತ್ತಿತರ ವಿವರ ಹಾಕಿದ. ಇದಾದ ಕೆಲವೇ ಗಂಟೆಗಳಲ್ಲಿ ರಂಗನಾಥ್ ಎನ್ನುವವನಿಂದ ಅವನಿಗೆ ಕರೆಬಂದಿತು. ‘ನಾನು ನಿಮ್ಮ ಜಾಹೀರಾತನ್ನು ನೋಡಿದೆ. ನಾನು ಈ ಬೈಕ್ ಕೊಳ್ಳಬೇಕೆಂದಿದ್ದೇನೆ. ನಿಮ್ಮ ಮನೆಗೆ ಬಂದು ವಾಹನವನ್ನು ನೋಡಬಹುದೇ?’ ಎಂದಾತ ಕೇಳಿದಾಗ ಶಶಿಧರ ಒಪ್ಪಿದ.

ಮುಂದಿನ ಭಾನುವಾರ ನಿಗದಿತ ಸಮಯಕ್ಕೆ ಬಂದ ರಂಗನಾಥ್, ಮಾರಾಟಕ್ಕಿಟ್ಟಿದ್ದ ಬೈಕ್ ಪರೀಕ್ಷಿಸಿದ. ಬೆಲೆಯ ಬಗ್ಗೆ ಸ್ವಲ್ಪ ಚೌಕಾಸಿ ಮಾಡಿದ. ಕಡೆಗೆ ಇಬ್ಬರೂ ಒಂದು ಒಪ್ಪಂದಕ್ಕೆ ಬಂದ ನಂತರ ಆತ ವಾಹನದ ದಾಖಲೆಗಳನ್ನು ನೋಡಬೇಕೆಂದ. ಶಶಿಧರ ಬೈಕ್​ನ ಮೂಲ ದಾಖಲೆ ಪತ್ರಗಳನ್ನು ನೋಡಲು ಕೊಟ್ಟ. ಆತ ಅದನ್ನು ತನ್ನ ಬಳಿ ಇಟ್ಟುಕೊಂಡು, ‘ಸರ್, ವಾಹನವನ್ನು ಸ್ವಲ್ಪ ದೂರ ಓಡಿಸಿ ಟೆಸ್ಟ್ ಡ್ರೈವ್ ಮಾಡಲೇ?’ ಎಂದ.

‘ಸ್ವಾಮಿ, ನೀವು ಯಾರೆಂದೇ ನನಗೆ ಗೊತ್ತಿಲ್ಲ. ನೀವು ವಾಹನವನ್ನು ತೆಗೆದುಕೊಂಡು ಓಡಿಹೋದರೆ ನಾನೇನು ಮಾಡಲಿ?’ ಎಂದು ಶಶಿಧರ ಕೇಳಿದಾಗ, ‘ನೀವು ಈ ಬೈಕ್​ಗೆ 25,000 ರೂಪಾಯಿ ನಿಗದಿ ಮಾಡಿದ್ದೀರಿ. ನಾನು ಈಗ ಕೊಡುವ 10,000 ರೂ. ನಗದನ್ನು ಸೆಕ್ಯೂರಿಟಿಯಾಗಿ ಇಟ್ಟುಕೊಳ್ಳಿ, ಟೆಸ್ಟ್ ಡ್ರೈವ್ ಮಾಡಿಕೊಂಡು ಬಂದ ನಂತರ ಮೆಚ್ಚುಗೆಯಾದರೆ ಉಳಿದ ಹಣ ಕೊಟ್ಟು ಬೈಕ್ ಅನ್ನು ನನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತೇನೆ. ನಿಮಗೆ ಅನುಮಾನವಿದ್ದರೆ ನಾನು ಟೆಸ್ಟ್ ಮಾಡುವಾಗ ನನ್ನ ಹಿಂದೆ ಕುಳಿತುಕೊಳ್ಳಿ’ ಎಂದ. ಶಶಿಧರ ಅವನಿಂದ ಹಣ ತೆಗೆದುಕೊಳ್ಳಲಿಲ್ಲ. ಆದರೆ, ಅವನಿಗೆ ಬೈಕ್ ಓಡಿಸಲು ಕೊಟ್ಟು ತಾನು ಹಿಂದೆ ಕುಳಿತ. ರಂಗನಾಥ ವಾಹನವನ್ನು ಪಕ್ಕದ ಬಡಾವಣೆಯೊಂದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ್ಲ್ದ ಒಂದು ಮನೆಯ ಮುಂದೆ ನಿಲ್ಲಿಸಿ, ‘ಇದೇ ನನ್ನ ಮನೆ, ನೀವು ಇಳಿಯಿರಿ’ ಎಂದ. ಶಶಿಧರ ಇಳಿದಕೂಡಲೇ ಆತ ಭರ್ರೆಂದು ಮುಂದಕ್ಕೆ ಹೊರಟುಹೋದ. ಅರ್ಧ ಗಂಟೆಯಾದರೂ ಅವನು ವಾಪಸಾಗದಿದ್ದಾಗ ಶಶಿಧರ, ರಂಗನಾಥ ತನಗೆ ಕರೆ ಮಾಡಿದ್ದ ನಂಬರಿಗೆ ಕರೆ ಮಾಡಿದ. ಆತ ಉತ್ತರಿಸಲಿಲ್ಲ. ಅವನು ತೋರಿಸಿದ್ದ ಮನೆಗೆ ಹೋದ. ಅದು ಬೇರೆಯವರದ್ದೆಂದು ತಿಳಿಯಿತು. ಶಶಿಧರ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ತನಗೆ ರಂಗನಾಥ ಮೋಸ ಮಾಡಿ ಬೈಕನ್ನು ಮತ್ತು ಡಾಕ್ಯುಮೆಂಟುಗಳನ್ನು ತೆಗೆದುಕೊಂಡು ಹೋದ ಬಗ್ಗೆ ದೂರನ್ನು ನೀಡಿದ. ಪ್ರಕರಣ ದಾಖಲಾಯಿತು. ಬೈಕಿನ ನೋಂದಣಿ ಸಂಖ್ಯೆಯನ್ನು ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಿ ಅದು ಕಂಡರೆ ನಿಲ್ಲಿಸಲು ಸೂಚಿಸಲಾಯಿತು.

ಮಾರನೆಯ ದಿನ ಅದೇ ಬೈಕ್ ಬೆಂಗಳೂರಿನ ಒಂದು ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದಾಗ, ಚಾಣಾಕ್ಷ ಕಾನ್​ಸ್ಟೆಬಲ್ ಒಬ್ಬ ಅದನ್ನು ಕಳವಾದ ವಾಹನವೆಂದು ಗುರುತಿಸಿ ಅದನ್ನೋಡಿಸುತ್ತಿದ್ದ ವ್ಯಕ್ತಿಯನ್ನು ಠಾಣೆಗೆ ಕರೆತಂದ. ಆತ ತನ್ನ ಹೆಸರನ್ನು ಬೋರೇಗೌಡ ಎಂದು ಹೇಳಿ ವಾಹನದ ಒರಿಜಿನಲ್ ದಾಖಲೆಗಳನ್ನು ತೋರಿಸಿದ. ‘ನಾನು ನಿನ್ನೆಯಷ್ಟೇ ಇದನ್ನು ಖರೀದಿಸಿರುವೆ, ವಾಹನವನ್ನು ನನ್ನ ಹೆಸರಿಗೆ ವರ್ಗಾಯಿಸಬೇಕಷ್ಟೇ’ ಎಂದ. ಶಶಿಧರನ ಹೆಸರಿನಲ್ಲಿ ವಾಹನವಿದ್ದ ಕಾರಣ ಅವನ ಮಾತನ್ನು ನಂಬದ ಪೊಲೀಸರು ಮೋಸದ ಕೇಸು ದಾಖಲಾಗಿದ್ದ ಸ್ಟೇಷನ್ನಿನ ಅಧಿಕಾರಿಗಳನ್ನು ಸಂರ್ಪಸಿ ಸ್ಥಳಕ್ಕೆ ಬರಲು ಹೇಳಿದರು. ಅವರು ತಮ್ಮೊಡನೆ ಶಶಿಧರನನ್ನೂ ಕರೆತಂದರು. ಆಗ ರಂಗನಾಥ್ ಅಲಿಯಾಸ್ ಬೋರೇಗೌಡ ಹೀಗೆ ಹೇಳಿದ: ‘ನಾನು ಪಿಯುಸಿ ಪಾಸಾದ ನಂತರ ನೌಕರಿ ಅರಸಿಕೊಂಡು ಮಹಾನಗರಕ್ಕೆ ಬಂದು ರೂಮೊಂದನ್ನು ಪಡೆದು ವಾಸಿಸತೊಡಗಿದೆ. ಅಂಗಡಿಯೊಂದರಲ್ಲಿ ಸೇಲ್ಸ್​ಮ್ಯಾನ್ ನೌಕರಿ ದೊರಕಿತು. ಏತನ್ಮಧ್ಯೆ ನನ್ನ ತಾಯಿಗೆ ಕ್ಯಾನ್ಸರ್ ರೋಗವು ಬಂದಿತು. ನಮ್ಮ ಊರಿನಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದ ಕಾರಣ ಅವರನ್ನೂ ನಗರಕ್ಕೆ ಕರೆದುಕೊಂಡು ಬಂದೆ. ಚಿಕಿತ್ಸೆ ದುಬಾರಿಯಾಗಿತ್ತು. ಅವರ ಔಷಧ ಉಪಚಾರಗಳಿಗೆ ನನ್ನ ಸಂಬಳ ಏನೇನೂ ಸಾಕಾಗುತ್ತಿರಲಿಲ್ಲ. ಹೀಗಾಗಿ ರಾತ್ರಿ ವಾಚ್​ವುನ್ ಕೆಲಸಕ್ಕೆ ಸೇರಿದೆ. ಆದರೂ ಗಳಿಕೆ ಸಾಲದೆ ಸಾಲಮಾಡಬೇಕಾಗಿ ಬರುತ್ತಿತ್ತು. ಒಂದು ರಾತ್ರಿ ನಾನು ಕೆಲಸ ಮಾಡುತ್ತಿದ್ದ ಜಾಗದ ಮುಂದಿನ ರೋಡಿನಲ್ಲಿ ಒಬ್ಬ ವ್ಯಕ್ತಿ ತನ್ನ ಬೈಕ್ ತಂದು ನಿಲ್ಲಿಸಿ ಬೆಳಗಾದರೂ ಬರಲಿಲ್ಲ. ಆತ ಬೈಕಿನಲ್ಲಿಯೇ ಕೀಲಿಕೈ ಬಿಟ್ಟಿದ್ದ ಕಾರಣ ನಾನು ಅದನ್ನು ಕಳ್ಳತನ ಮಾಡಿಕೊಂಡು ಹೋಗಿ ಮೆಕ್ಯಾನಿಕ್ ಒಬ್ಬನಿಗೆ ಮಾರಿದೆ. ಆತ ಕೇವಲ 5000 ರೂ ಕೊಟ್ಟ. ನಂತರ, ಬೈಕ್ ಕಳ್ಳತನ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ನಕಲಿ ಕೀಗಳನ್ನು ಮಾಡಿಸಿ ಮೋಟರ್ ಸೈಕಲ್​ಗಳನ್ನು ಕಳವು ಮಾಡಿ ಅವುಗಳನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದೆ. ಹೀಗೆ ಸುಮಾರು ಐದಾರು ಬೈಕ್​ಗಳನ್ನು ಕದ್ದರೂ ನಾನು ಸಿಕ್ಕಿಬೀಳಲಿಲ್ಲ. ದಾಖಲಾತಿಗಳ ಸಹಿತ ಬೈಕನ್ನು ಮಾರಿದರೆ ಮಾತ್ರ ಹೆಚ್ಚಿನ ಹಣ ಕೊಡುವೆನೆಂದು ವ್ಯಾಪಾರಿಯೊಬ್ಬ ಹೇಳಿದಾಗ ಕಳ್ಳತನ ಮಾಡುವ ಬದಲು ಮೋಸದಿಂದ ಬೈಕನ್ನು ನನ್ನದಾಗಿಸಿಕೊಂಡರೆ ಸಮಸ್ಯೆಯಿರುವುದಿಲ್ಲ ಎಂದು ತೀರ್ವನಿಸಿದೆ. ಏತನ್ಮಧ್ಯೆ ಒಂದು ಬೈಕನ್ನು ಕದಿಯುತ್ತಿರುವಾಗ ಸಿಕ್ಕಿಬಿದ್ದು ಮೂರು ವರ್ಷಗಳ ಕಾಲ ಜೈಲಿಗೆ ಹೋದೆ. ಅಲ್ಲೊಬ್ಬ ಕೈದಿ ಯಾವ ರೀತಿ ವಾಹನಗಳ ದಾಖಲೆಗಳನ್ನು ಅವುಗಳ ಮಾಲೀಕರಿಂದ ಲಭಿಸಿಕೊಳ್ಳಬೇಕೆಂಬ ಟ್ರಿಕ್​ಗಳನ್ನು ಹೇಳಿಕೊಟ್ಟ. ನಾನು ಜೈಲಿನಿಂದ ವಾಪಸ್ ಆಗುವಷ್ಟರಲ್ಲಿ ತಾಯಿ ತೀರಿಕೊಂಡಿದ್ದರು. ನಾನು ಮರ್ಯಾದೆಯ ಜೀವನ ಸಾಗಿಸಬೇಕೆಂದು ಮನಸ್ಸು ಮಾಡಿದೆ. ಕೆಲಸಕ್ಕಾಗಿ ಹಲವಾರು ಕಡೆ ಅರ್ಜಿ ಹಾಕಿದೆ. ಆದರೆ, ಜೈಲಿನಲ್ಲಿ ಇದ್ದವನೆಂದು ಯಾರೂ ಕೆಲಸ ಕೊಡಲಿಲ್ಲ. ಕಡೆಗೆ ನನಗೆ ವಾಹನಗಳ ಬಗ್ಗೆ ಹೆಚ್ಚಿನ ಜ್ಞಾನವಿದ್ದುದರಿಂದ ವಾಹನ ದಲ್ಲಾಳಿಯೊಬ್ಬರು ಕೆಲಸ ಕೊಟ್ಟರು. ಆಗ ನನಗೆ ಒಎಲ್​ಎಕ್ಸ್ ಮಾರಾಟ-ಖರೀದಿಯ ಜಾಲತಾಣದ ಬಗ್ಗೆ ಮಾಹಿತಿ ಸಿಕ್ಕಿತು.

ನನ್ನ ಹೆಸರಿನಲ್ಲಿ ಖಾತೆ ತೆರೆದರೆ ಮುಂದೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಹೆದರಿಕೆಯಿಂದ ಬೇರೆ ಬೇರೆ ಹೆಸರುಗಳಲ್ಲಿ ವ್ಯವಹರಿಸಲು ಯೋಚಿಸಿದೆ. ನಾನು ಈ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದಾಗ ಪರಿಚಯವಾಗಿದ್ದ ಗಾರ್ಡ್​ಗಳು, ಮನೆಕೆಲಸದವರು, ಧೋಬಿ ಮುಂತಾದವರನ್ನು ಭೇಟಿಯಾಗಿ ಅವರಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಅವರ ಆಧಾರ ಕಾರ್ಡ್ ಪಡೆದು ಝೆರಾಕ್ಸ್ ಮಾಡಿಸಿ ಹಿಂದಿರುಗಿಸುತ್ತಿದ್ದೆ. ಅದೇ ಝೆರಾಕ್ಸ್ ಕಾರ್ಡಗಳನ್ನು ಬಳಸಿ ಎರಡು ಮೂರು ಸಿಮ್ ಹಾಗೂ ಎರಡು ಹಳೆಯ ಹ್ಯಾಂಡ್​ಸೆಟ್ ಖರೀದಿಸಿದೆ. ಅವುಗಳನ್ನು ಉಪಯೋಗಿಸಿ ಒಎಲ್​ಎಕ್ಸ್​ನಲ್ಲಿ ಎರಡು ಮೂರು ಅಕೌಂಟುಗಳನ್ನು ತೆರೆದು ವ್ಯವಹಾರ ಮಾಡತೊಡಗಿದೆ.

ಒಎಲ್​ಎಕ್ಸ್​ನಲ್ಲಿ ಯಾವುದಾದರೂ ಬೈಕ್​ಗಳು, ಕಾರುಗಳು, ಸ್ಕೂಟರ್​ಗಳು ಮಾರಾಟಕ್ಕೆ ಬಂದಿವೆಯೇ ಎಂದು ನಿತ್ಯವೂ ನೋಡತೊಡಗಿದೆ. ಬಹುಬೇಡಿಕೆಯಲ್ಲಿರುವ ವಾಹನಗಳನ್ನು ಮಾರಾಟಕ್ಕೆ ಹಾಕಿದ್ದನ್ನು ಕಂಡಾಗ, ಆ ಮಾರಾಟಗಾರರನ್ನು ಸಂರ್ಪಸಿ, ನಾನೊಬ್ಬ ವಾಹನಗಳ ಡೀಲರ್ ಎಂದು ಹೇಳಿ ಒಎಲ್​ಎಕ್ಸ್ ನಲ್ಲಿ ಬರುವ ಹಣಕ್ಕಿಂತ ಹೆಚ್ಚು ಹಣ ಕೊಡಿಸುತ್ತೇನೆ ಎಂದು ನಂಬಿಸಿ ವಾಹನವನ್ನು ನೋಡಲು ಹೋಗುತ್ತಿದ್ದೆ. ಅವರ ವಾಹನದ ದಾಖಲೆಗಳ ನಕಲುಗಳನ್ನು ಪಡೆದು ಅವುಗಳ ಫೋಟೋ ತೆಗೆದಿಟ್ಟುಕೊಳ್ಳುತಿದ್ದೆ. ಆ ವಾಹನದ ನೋಂದಣಿ ಸಂಖ್ಯೆ ಕಾಣದಂತೆ ಫೋಟೋ ತೆಗೆಯುತ್ತಿದ್ದೆ. ಆನಂತರ ಮರಳಿ ಬರುವೆನೆಂದು ಅವರಿಗೆ ಹೇಳಿ ವಾಪಸಾಗುತ್ತಿದ್ದೆ. ನಂತರ ನಾನೇ ಆ ವಾಹನದ ಮಾಲೀಕನಂತೆ ಒಎಲ್​ಎಕ್ಸ್​ನಲ್ಲಿ ಜಾಹೀರಾತನ್ನು ಹಾಕಿ ಖರೀದಿಗೆ ಜನರು ಬಂದಾಗ ಆ ವಾಹನಗಳ ಡೂಪ್ಲಿಕೇಟ್ ದಾಖಲಾತಿಗಳನ್ನು ತೋರಿಸಿ ಮುಂಗಡ ಹಣ ಪಡೆಯುತ್ತಿದ್ದೆ. ಆನಂತರ ಮೂಲ ಮಾಲೀಕನ ಬಳಿಗೆ ಹೋಗಿ ಟೆಸ್ಟ್ ಮಾಡುವೆನೆಂದು ಹೇಳಿ ಆ ವಾಹನ ಪಡೆದು ಪರಾರಿಯಾಗುತ್ತಿದ್ದೆ, ಇಲ್ಲವೇ ಅವನು ವಾಹನವನ್ನು ಎಲ್ಲಿ ನಿಲ್ಲಿಸುತ್ತಾನೆಂದು ಗುರುತಿಸಿ ಅದೇ ರಾತ್ರಿ ಅಲ್ಲಿಗೆ ಹೋಗಿ ನಕಲಿ ಕೀಲಿಕೈ ಉಪಯೋಗಿಸಿ ವಾಹನವನ್ನು ಕದಿಯುತ್ತಿದ್ದೆ. ವಾಹನ ಲಭ್ಯವಾದಾಗ ಅದನ್ನೇ ನನಗೆ ಅಡ್ವಾನ್ಸ್ ಕೊಟ್ಟವರಿಗೆ ಮಾರಾಟ ಮಾಡಿ ಪರಾರಿಯಾಗುತ್ತಿದ್ದೆ.

ಒಮ್ಮೆ ಉಪಯೋಗ ಮಾಡಿದ ಒಎಲ್​ಎಕ್ಸ್ ಅಕೌಂಟನ್ನು ನಾನು ಮತ್ತೆ ಉಪಯೋಗ ಮಾಡುತ್ತಿರಲಿಲ್ಲ. ಈ ರೀತಿ ಸುಮಾರು 15 ಕಾರು, 10 ಬೈಕ್ ಮತ್ತು 3 ಸ್ಕೂಟರ್​ಗಳನ್ನು ಕದ್ದಿರುವೆ. ಕೆಲವೊಮ್ಮೆ ಕದ್ದ ವಾಹನದ ದಾಖಲಾತಿಗಳನ್ನು ತಿದ್ದಿ ನಂಬರ್ ಪ್ಲೇಟ್ ಬದಲಿಸಿ ಬೇರೆ ರಾಜ್ಯಗಳಲ್ಲಿ ಮಾರಿದ್ದೇನೆ. ಇನ್ನು ಕೆಲ ವಾಹನಗಳ ಭಾಗಗಳನ್ನು ಬಿಡಿಸಿ ಸ್ಪೇರ್ ಪಾರ್ಟುಗಳನ್ನೇ ಮಾರಾಟ ಮಾಡಿದ್ದೂ ಇದೆ. ಆದರೂ ಈ ವ್ಯವಹಾರದಿಂದ ನನಗೆ ಬಂದ ಹಣ ಕಡಿಮೆಯೇ’. ಪೊಲೀಸರು ಆತ ಕದ್ದ ಸರಿಸುಮಾರು ಎಲ್ಲಾ ವಾಹನಗಳನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಿದರು. ನ್ಯಾಯಾಲಯ ಅವನಿಗೆ ಏಳು ವರ್ಷಗಳ ಜೈಲುವಾಸ ವಿಧಿಸಿತು. ‘ಸರಿಯಾಗದಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ, ಕೊರೆಯಾದೊಡೇನೊಂದು? ನೆರೆದೊಡೇ ನಿನ್ನೊಂದು ಒರಟು ಕೆಲಸವೊ ಬದುಕು ಮಂಕುತಿಮ್ಮ’ ಎನ್ನುವ ನುಡಿಯನ್ನು ರಂಗನಾಥ ಪಾಲಿಸಿ ಜೈಲಿನಿಂದ ಮರಳಿದ ಬಳಿಕ ವಾಹನ ದಲ್ಲಾಳಿಯ ಕಚೇರಿಯಲ್ಲಿಯೇ ಮುಂದುವರಿದಿದ್ದರೆ ಮತ್ತೊಮ್ಮೆ ಜೈಲುವಾಸದ ಪ್ರಮೇಯ ಬರುತ್ತಿರಲಿಲ್ಲ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)