ಅಂಕಣ

ಬಾರ್ ಡಾನ್ಸರ್ ಕೊಲೆಯ ಸುತ್ತ..: ಆ ಕ್ಷಣ..

Webdesk - Ravikanth

ಜಿಲ್ಲಾ ಕೇಂದ್ರವೊಂದರಲ್ಲಿನ ಎಲ್​ಐಸಿ ಕಚೇರಿಯಲ್ಲಿ ಅಹ್ಮದ್ ವಿಮಾ ಅಧಿಕಾರಿಯಾಗಿದ್ದ. ಅವನಿಗೆ ನಾಲ್ವರು ಮಕ್ಕಳು- ರೋಷನಿ, ಜೀನತ್, ಮುಸ್ತಾಫ್ ಮತ್ತು ಅಲ್ತಾಫ್. ಹಿರಿಯಳಾಗಿದ್ದ ರೋಷನಿಗೆ ಸಿನಿಮಾ ನೃತ್ಯದಲ್ಲಿ ಆಸಕ್ತಿಯಿದ್ದು ಅಂತಹ ನೃತ್ಯ ಕಲಿಯುತ್ತಿದ್ದಳು. ಅವಳಿಗೆ 16 ವರ್ಷವಾಗಿದ್ದಾಗ ಮಾತಾಪಿತರಿಬ್ಬರೂ ಅಪಘಾತದಲ್ಲಿ ಮರಣಹೊಂದಿದರು. ಅನಾಥ ಮಕ್ಕಳನ್ನು ನೋಡಿಕೊಳ್ಳಲು ದೂರದ ಸಂಬಂಧಿಯೊಬ್ಬಳು ಬಂದಳು. ಎರಡು ವರ್ಷಗಳ ತರುವಾಯ ಆಕೆಯೂ ತೀರಿಕೊಂಡಾಗ, ಧೃತಿಗೆಡದ ರೋಷನಿ ಸಂಸಾರದ ಜವಾಬ್ದಾರಿ ಹೊತ್ತಳು. ಮಾತಾಪಿತರ ಸಾವಿನಿಂದಾಗಿ ಬಂದಿದ್ದ ಪರಿಹಾರ ಹಣದ ಬಡ್ಡಿ ಸಾಲದಾದಾಗ ಷೋ ರೂಂನಲ್ಲಿ ಸೇಲ್ಸ್ ಗರ್ಲ್ ಕೆಲಸಕ್ಕೆ ಸೇರಿ ಬೆನ್ನ ಹಿಂದಿದ್ದವರನ್ನು ಓದಿಸತೊಡಗಿದಳು.

ಗಳಿಸುತ್ತಿದ್ದ ಆದಾಯ ಕಾಲಕ್ರಮೇಣ ಸಂಸಾರಕ್ಕೆ ಸಾಲದಾಯಿತು. ರೋಷನಿ ಗೆಳತಿಯೊಬ್ಬಳ ಸಲಹೆಯ ಮೇರೆಗೆ ಕೆಲಸ ಹುಡುಕಿಕೊಂಡು ಒಡಹುಟ್ಟಿದವರೊಡನೆ ಬೆಂಗಳೂರಿಗೆ ಬಂದಳು. ಬಾಡಿಗೆ ಮನೆ ಪಡೆದು ನೌಕರಿ ಹುಡುಕತೊಡಗಿದಳು. ಸೋದರ ಸೋದರಿಯರು ಸಂಸಾರ ನಿಭಾಯಿಸಲು ತಾವೂ ಸಣ್ಣಪುಟ್ಟ ಕೆಲಸಗಳನ್ನು ಮಾಡತೊಡಗಿದರು.

ರೋಷನಿಯ ಗೆಳತಿಯೊಬ್ಬಳು, ‘ನೀನು ಉತ್ತಮ ನೃತ್ಯಗಾತಿಯಾಗಿರುವ ಕಾರಣ ಯಾವುದಾದರೂ ಡಾನ್ಸ್ ಬಾರ್​ನಲ್ಲಿ ಕೆಲಸಕ್ಕೆ ಸೇರಿಕೋ, ಸಂಜೆ 7ರಿಂದ ರಾತ್ರಿ 11ರವರೆಗೆ ಸಿನಿಮಾ ಹಾಡುಗಳಿಗೆ ನೃತ್ಯಮಾಡಿದರೆ ದಿನವೂ ಏನಿಲ್ಲೆಂದರೂ ಸಾವಿರ ರೂ. ಆದಾಯ ಗಳಿಸಬಹುದು’ ಎಂದಳು. ಇದಕ್ಕೊಪ್ಪಿದ ರೋಷನಿ ದೊಡ್ಡ ಬಾರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಳು. ಪ್ರತಿಸಂಜೆಯೂ ಆಕೆ ವ್ಯಾನ್​ನಲ್ಲಿ ಇತರ ನೃತ್ಯಗಾತಿಯರೊಡನೆ ಕೆಲಸಕ್ಕೆಂದು ಹೋಗಿ ಮಧ್ಯರಾತ್ರಿ ವೇಳೆಗೆ ಹಿಂದಿರುಗುತ್ತಿದ್ದಳು. ಗ್ರಾಹಕರು ನೃತ್ಯಗಾತಿಯರ ಮೈಮುಟ್ಟಬಾರದೆಂಬ ನಿಯಮವಿದ್ದ ಕಾರಣ ರೋಷನಿಗೆ ಹೊಸ ಕೆಲಸ ಹಿಂಸೆ ತರುತ್ತಿರಲಿಲ್ಲ. ಮೇಲಾಗಿ ಗ್ರಾಹಕರು ಡಾನ್ಸರ್​ಗಳಿಗೆ ಕೊಡುವ ಟಿಪ್ಸ್ ಹಣ ಸಂಬಳಕ್ಕಿಂತ ಹೆಚ್ಚೇ ಇರುತ್ತಿತ್ತು.

ವರ್ಷದ ಬಳಿಕ ರೋಷನಿಯ ಇಬ್ಬರೂ ಸೋದರರಿಗೆ ಕೊಲ್ಲಿ ದೇಶವೊಂದರಲ್ಲಿ ನೌಕರಿ ಸಿಕ್ಕ ಕಾರಣ ಅವರು ಅಲ್ಲಿಗೆ ಹೋದರು. ನಂತರದ ಒಂದು ದಿನ ಜೀನತ್​ಳು ರವೂಫ್ ಎನ್ನುವ ಯುವಕನನ್ನು ಮನೆಗೆ ಕರೆದುಕೊಂಡು ಬಂದು ತಾವು ಪ್ರೀತಿಸುತ್ತಿರುವುದಾಗಿ ಹೇಳಿ ಆತನನ್ನು ಲಗ್ನವಾಗಲು ಅಕ್ಕನ ಸಮ್ಮತಿ ಕೋರಿದಳು. ರವೂಫ್ ಕೊರಿಯರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಉತ್ತಮ ಕುಟುಂಬದಿಂದ ಬಂದಿದ್ದ. ಈ ಸಂಬಂಧಕ್ಕೆ ರೋಷನಿ ಒಪ್ಪಿಗೆ ಸೂಚಿಸಿದಳು.

‘ನೀನು ಮದುವೆಯಾಗದೇ ನಾನು ಹೇಗೆ ಮದುವೆಯಾಗಲಿ?’ ಎಂದು ಜೀನತ್ ಕೇಳಿದಾಗ, ‘ನೀವೆಲ್ಲರೂ ಜೀವನದಲ್ಲಿ ಸೆಟಲ್ ಆದನಂತರವೇ ನಾನು ಮದುವೆಯಾಗುವುದು’ ಎಂದುತ್ತರಿಸಿದ ರೋಷನಿ ಸೋದರಿಗೆ ಶೀಘ್ರದಲ್ಲಿಯೇ ಲಗ್ನ ಮಾಡಿಸಿದಳು. ಅವಳ ಲಗ್ನಕ್ಕೆ ಸೋದರರೂ ಕೊಲ್ಲಿಯಿಂದ ಬಂದು ಹಣಸಹಾಯ ಮಾಡಿ ವಾಪಸಾದರು. ಜೀನತ್ ಮನೆಯಿಂದ ಹೋದ ನಂತರ ರೋಷನಿಗೆ ಒಂಟಿತನ ಕಾಡತೊಡಗಿತು. ಅಷ್ಟರಲ್ಲಾಗಲೇ 36 ವರ್ಷಗಳಾಗಿದ್ದ ಕಾರಣ ಸೂಕ್ತ ವರ ಸಿಗುವುದಿಲ್ಲ ಎನ್ನುವ ಅರಿವು ಅವಳಿಗಿತ್ತು.

ಏತನ್ಮಧ್ಯೆ ಅವಳ ಡಾನ್ಸ್ ಬಾರಿಗೆ ಸುಮಾರು ಐವತ್ತು ವರ್ಷ ವಯಸ್ಸಿನ ವ್ಯಕ್ತಿ ಪ್ರತಿದಿನವೂ ಬಂದುಹೋಗುತ್ತಿದ್ದ. ರೋಷನಿಯ ನೃತ್ಯದ ನಂತರ ಅವಳ ಮೈಮೇಲೆ ನೋಟಿನ ಕಂತೆಗಳನ್ನೇ ಆತ ಎಸೆಯುತ್ತಿದ್ದ. ಇತರ ಬಾರ್ ಡಾನ್ಸರ್​ಗಳು ರೋಷನಿಯನ್ನು ಛೇಡಿಸತೊಡಗಿದ್ದರು. ‘ಆತ ನನ್ನ ಅಭಿಮಾನಿಯಷ್ಟೇ, ಅವನು ಯಾರೆಂಬುದನ್ನು ತಿಳಿದುಕೊಳ್ಳಲು ನನಗಿಷ್ಟವಿಲ್ಲ, ಈ ವಯಸ್ಸಿನಲ್ಲಿ ನನಗೆ ಯಾವುದೇ ಸಂಬಂಧ ಮಾಡಿಕೊಳ್ಳುವುದೂ ಇಷ್ಟವಿಲ್ಲ’ ಎಂದು ರೋಷನಿ ಅವರಿಗೆ ತಿಳಿಸಿದಳು.

ಒಂದು ರಾತ್ರಿ ಬಾರ್ ಮುಚ್ಚಿದ ನಂತರ ರೋಷನಿಯನ್ನು ಮನೆಗೆ ಬಿಡುತ್ತಿದ್ದ ವ್ಯಾನನ್ನು ಹಿಂಬಾಲಿಸಿದ ಆ ವ್ಯಕ್ತಿ, ರೋಷನಿ ಮನೆಯೊಳಗೆ ಹೋದ ನಂತರ ಕರೆಗಂಟೆ ಬಾರಿಸಿದ. ಬಾಗಿಲು ತೆರೆದು ಅವನನ್ನು ನೋಡಿ ಕೋಪಗೊಂಡ ರೋಷನಿ ಕೂಡಲೇ ಹೊರಟುಹೋಗಲು ಹೇಳಿದಳು. ಆದರೆ ಆತ ಅಲ್ಲೇ ನಿಂತು, ‘ನಾನೊಬ್ಬ ಕಟ್ಟಡದ ಕಾಂಟ್ರಾಕ್ಟರ್. ಹೆಸರು ವೆಂಕಟೇಶ್. ನನ್ನ ಹೆಂಡತಿ ಸತ್ತು ಐದು ವರ್ಷಗಳಾದವು, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತಾಯಿಯೊಬ್ಬಳ ಅವಶ್ಯಕತೆಯಿದೆ, ನೀನು ನನ್ನನ್ನು ಲಗ್ನಮಾಡಿಕೊಳ್ಳುವಿಯಾ?’ ಎಂದು ನೇರವಾಗಿಯೇ ಕೇಳಿದ. ರೋಷನಿಗೆ ಏನು ಉತ್ತರಿಸುವುದೆಂದು ತಿಳಿಯಲಿಲ್ಲ. ನಂತರ, ‘ನನಗೆ ಮದುವೆಯಾಗಲು ಇಷ್ಟವಿಲ್ಲ, ಮೇಲಾಗಿ ನಾನು ನಿನ್ನ ಧರ್ಮಕ್ಕೆ ಸೇರಿರದ ಕಾರಣ, ನಿನ್ನ ಕುಟುಂಬ ಈ ಲಗ್ನಕ್ಕೆ ಒಪ್ಪುವುದಿಲ್ಲ, ನನ್ನನ್ನು ಮುಂದೆ ಕಾಡಬೇಡ’ ಎಂದು ಹೇಳಿ ಅವನನ್ನು ಸಾಗಹಾಕಿದಳು.ರೋಷನಿಯನ್ನು ಪದೇಪದೆ ಒತ್ತಾಯಿಸತೊಡಗಿದ. ತನ್ನ ಒಂಟಿಜೀವಕ್ಕೆ ಒಂದು ಆಸರೆ ಸಿಗುವುದೆಂದು ರೋಷನಿ ಕೆಲಕಾಲಾನಂತರ ಒಪ್ಪಿದಳು. ತನ್ನ ನಿರ್ಧಾರವನ್ನು ಆಕೆ ಸೋದರ ಸೋದರಿಯರಿಗೆ ತಿಳಿಸಿದಾಗ ಅವರೆಲ್ಲರೂ, ‘ಅಕ್ಕಾ, ನೀನು ನಮಗಾಗಿ ಇಷ್ಟು ದಿನ ದೇಹ ಸವೆಸಿರುವೆ, ಮುಂದಾದರೂ ಸುಖವಾಗಿರು’ ಎಂದು ಮದುವೆಗೆ ಸಮ್ಮತಿಯನ್ನಿತ್ತರು. ಆದರೆ ಈ ಸುದ್ದಿ ಕೇಳಿದ ಜೀನತ್​ಳ ಗಂಡ ರವೂಫ್ ರೋಷಗೊಂಡು ರೋಷನಿಯ ಮನೆಗೆ ಬಂದು ಜಗಳ ತೆಗೆದ. ‘ಈ ಸಂಬಂಧವನ್ನು ಕೂಡಲೇ ಮುರಿದುಹಾಕು’ ಎಂದು ತಾಕೀತು ಮಾಡಿದ. ರೋಷನಿ ಇದಕ್ಕೊಪ್ಪದಿದ್ದಾಗ ಆತ ಅವಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ. ಆನಂತರ ಆತ ಜೀನತ್​ಳನ್ನು ರೋಷನಿಯ ಮನೆಗೆ ಕಳುಹಿಸುವುದನ್ನೇ ಬಿಟ್ಟ. ಒಂದು ದಿನ ರೋಷನಿಯನ್ನು ಕೆಲಸಕ್ಕೆ ಕರೆದೊಯ್ಯಲು ವ್ಯಾನ್ ಬಂದಾಗ ಮನೆಯ ಮುಂಬಾಗಿಲು ಮುಚ್ಚಿತ್ತು. ಕಾರಿನ ಚಾಲಕ ಮನೆಯ ಬೆಲ್ ಮಾಡಿದ, ಯಾರೂ ಬಾಗಿಲು ತೆರೆಯಲಿಲ್ಲ. ವ್ಯಾನಿನಲ್ಲಿದ್ದ ನರ್ತಕಿಯೊಬ್ಬಳು ಅವಳ ಮೊಬೈಲ್​ಗೆ ಕರೆ ಮಾಡಿದಳು. ಅದು ಮನೆಯೊಳಗಿನಿಂದ ರಿಂಗಾಗುತ್ತಿದ್ದುದು ಕೇಳಿಬಂದಿತಾದರೂ ರೋಷನಿ ಉತ್ತರಿಸಲಿಲ್ಲ. ಗಾಬರಿಯಾದ ವ್ಯಾನ್ ಚಾಲಕ ಮನೆಯ ಕಿಟಕಿಯ ಮೂಲಕ ಇಣುಕಿ ನೋಡಿದ. ಹಾಲ್​ನ ಸೋಫಾದ ಮೇಲೆ ರಕ್ತದ ಮಡುವಿನಲ್ಲಿ ರೋಷನಿ ಬಿದ್ದಿದ್ದಳು. ಕೂಡಲೇ ಆತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ರೋಷನಿಯ ಎದೆ, ಹೊಟ್ಟೆ ಹಾಗೂ ಕುತ್ತಿಗೆಯ ಮೇಲೆ ಹಲವಾರು ತಿವಿತದ ಗಾಯಗಳಾಗಿದ್ದವು. ಅತ್ಯಾಚಾರದ ಪ್ರಯತ್ನವೂ ನಡೆದಿತ್ತು. ಮನೆಯಲ್ಲಿದ್ದ ಅಲ್ಮೆರಾವನ್ನು ಜಾಲಾಡಲಾಗಿತ್ತು. ಹಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೇ ತಿಳಿಯುತ್ತಿತ್ತು. ಪೊಲೀಸರು ರೋಷನಿಯ ಮೊಬೈಲ್ ಫೋನ್ ಮೂಲಕ ಅವಳ ಸೋದರಿಯನ್ನು ಸಂರ್ಪಸಿ ಮಾಹಿತಿಯನ್ನಿತ್ತರು. ಜೀನತ್ ಪತಿ ರವೂಫ್​ನೊಡನೆ ಧಾವಿಸಿದಳು. ಆದರೆ ಈ ಕೊಲೆ ಹೇಗಾಯಿತೆಂದು ಅವರಿಬ್ಬರೂ ಮಾಹಿತಿ ಕೊಡದಾದರು.

ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವತ್ತಿಗಾಗಿ ಕೊಲೆಯಾಗಿರಬಹುದೆಂಬ ನಿಟ್ಟಿನಲ್ಲಿ ತನಿಖೆ ನಡೆಸಿದರು. ಆದರೆ ರೋಷನಿಯ ಅಲ್ಮೆರಾದಿಂದ ಯಾವುದೇ ವಸ್ತು ಕಳುವಾಗದಿದ್ದದು ನಂತರ ತಿಳಿಯಿತು. ರೋಷನಿ ಬಾರ್ ಡಾನ್ಸರ್ ಆಗಿದ್ದ ಕಾರಣ ಬಾರಿಗೆ ಬಂದುಹೋಗುತ್ತಿದ್ದ ಭಗ್ನಪ್ರೇಮಿ ಯಾರಾದರೂ ಹತ್ಯೆ ಮಾಡಿರಬಹುದೆಂಬ ಊಹೆಯಿಂದ ತನಿಖೆ ನಡೆಸಿದರು. ಇದರ ಮೇರೆಗೆ ಅವರು ವೆಂಕಟೇಶ್​ನನ್ನು ಕರೆಸಿ ವಿಚಾರಿಸಿದರು. ‘ನಾವಿಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದೆವು, ಆದರೆ ಈ ವಿಷಯವನ್ನು ರೋಷನಿ ಇತರ ಬಾರ್ ಡಾನ್ಸರ್​ಗಳಿಗೆ ತಿಳಿಸಿರಲಿಲ್ಲ. ನಮ್ಮ ಮದುವೆಗೆ ವಿರೋಧವಾಗಿದ್ದವನೆಂದರೆ ಜೀನತ್​ಳ ಗಂಡ ರವೂಫ್ ಮಾತ್ರ’ ಎಂದು ಆತ ಹೇಳಿದ. ಪೊಲೀಸರು ರವೂಫ್​ನನ್ನು ಕರೆಸಿ ತೀವ್ರವಾಗಿ ವಿಚಾರಣೆ ಮಾಡಿದಾಗ ಆತ ರೋಷನಿಯನ್ನು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಹೀಗೆ ಹೇಳಿದ: ‘ನಾನು ಜೀನತ್​ಳನ್ನು ಮದುವೆಯಾಗಿದ್ದರೂ ರೋಷನಿಯ ಮೇಲೆಯೇ ದೈಹಿಕ ಆಕರ್ಷಣೆ ಮೂಡಿತ್ತು. ದೈಹಿಕ ಸಂಪರ್ಕ ಮಾಡಬೇಕೆಂದು ಬಹಳ ಪ್ರಯತ್ನಪಟ್ಟರೂ ಆಕೆ ನನ್ನನ್ನು ದೂರ ಸರಿಸಿದ್ದಳು. ಆಕೆ ಮದುವೆ ಮಾಡಿಕೊಳ್ಳಲು ಹೊರಟಾಗ ಅವಳು ಬೇರೆಯವರ ಸ್ವತ್ತಾಗುತ್ತಾಳೆಂದು ಅಸೂಯೆಗೊಂಡು ವಿರೋಧಿಸಿದೆ. ಆಕೆ ಕ್ಯಾರೇ ಎನ್ನಲಿಲ್ಲ. ರೋಷನಿ ಮದುವೆಯಾಗುವ ಮೊದಲು ಒಮ್ಮೆಯಾದರೂ ಅವಳ ಜತೆ ಸೆಕ್ಸ್ ಮಾಡಬೇಕೆಂದು ಅವಳ ಮನೆಗೆ ಹೋದೆ. ಅವಳು ತುಚ್ಛವಾಗಿ ಮಾತನಾಡಿದಳು. ಸಿಟ್ಟಾದ ನಾನು ಅವಳ ಮೇಲೆರಗಿ ಅತ್ಯಾಚಾರ ಮಾಡಹೊರಟೆ. ಆಕೆ ಪ್ರತಿರೋಧವನ್ನೊಡ್ಡಿದಳು. ನನ್ನ ಕೈಯಲ್ಲಿದ್ದ ಚಾಕುವಿನಿಂದ ಅವಳನ್ನು ಪದೇಪದೆ ತಿವಿದೆ. ಅವಳು ಸತ್ತ ನಂತರ ಅಲ್ಮೆರಾವನ್ನು ತೆಗೆದು ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದೆ.’

ರವೂಫ್​ನನ್ನು ಬಂಧಿಸಿದ ಪೊಲೀಸರು ಆತ ಕೊಲೆಗೆ ಉಪಯೋಗಿಸಿದ್ದ ಚಾಕುವನ್ನು ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದರು. ಆದರೆ ಸೂಕ್ತ ಸಾಕ್ಷ್ಯಾಧಾರ ಇರದಿದ್ದ ಕಾರಣ ನ್ಯಾಯಾಲಯ ಅವನನ್ನು ಬಿಡುಗಡೆಗೊಳಿಸಿತು. ‘ಮನೆಯೆಲ್ಲಿ ಸತ್ಯಕ್ಕೆ ಶ್ರುತಿ ತರ್ಕಮಾತ್ರದೊಳೆ? ಅನುಭವಮುಮದರೊಂದು ನೆಲೆಯಾಗದಿಹುದೇಂ? ಮನುಜಹೃದಯಾಂಗಣದೊಳೆನಿತೆನಿತೊ ದನಿಯುದಿಸಿ ಅಣಕಿಪುವು ತರ್ಕವನು ಮಂಕುತಿಮ್ಮ’ ಎಂಬಂತೆ ಕೊಲೆಮಾಡಿಯೂ ರವೂಫ್ ಶಿಕ್ಷೆಗೆ ಒಳಗಾಗದಿದ್ದದ್ದು ತರ್ಕಕ್ಕೆ ದೂರವೇ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)