ಕೃತಕ ಬುದ್ಧಿಮತ್ತೆ (ಎಐ) ಬಳಸಿ ಈಗ ಹೇಗೆ ಬೇಕೋ ಹಾಗೇ ಫೋಟೋ, ವಿಡಿಯೋಗಳನ್ನು ಎಡಿಟ್ ಮಾಡಲಾಗುತ್ತಿದೆ. ಈ ಪೈಕಿ ಕೆಲವು ತಮಾಷೆಗೆ, ಮತ್ತೆ ಕೆಲವು ಟೀಕೆ ಟಿಪ್ಪಣಿಗೆಂದೇ ರೂಪಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಬಗ್ಗೆ ಕಾಂಗ್ರೆಸ್ ಇತ್ತೀಚೆಗೆ ಸೃಷ್ಟಿಸಿದ್ದ ಎಐ ವಿಡಿಯೋ ಬಿಹಾರ ರಾಜಕಾರಣದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಕೋರ್ಟ್ ಸೂಚನೆಯ ಬಳಿಕ ಅದನ್ನು ಡಿಲೀಟ್ ಮಾಡಲಾಯಿತು ಎಂಬುದು ಬೇರೆ ವಿಷಯ. ಆದರೆ, ಈ ಬಗೆಯ ಫೋಟೋ, ವಿಡಿಯೋಗಳು ಚಾರಿತ್ರ್ಯವಧೆ ಸೇರಿದಂತೆ ಹಲವು ಬಗೆಯ ಅಪಾಯಗಳನ್ನು ತಂದೊಡ್ಡಿದ್ದು, ಇದನ್ನು ತಡೆಯಲು ಎಐ ಕಂಪನಿಗಳ ಬಳಿ ಸೂಕ್ತ ಸಾಧನಗಳಿಲ್ಲ ಎಂಬುದು ಆತಂಕ ಹೆಚ್ಚಿಸಿದೆ.
ಸಾಮಾಜಿಕ ಮಾಧ್ಯಮಗಳು ಈಗಿನ ದಿನಗಳಲ್ಲಿ ಶಕ್ತಿಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ತಂತ್ರಜ್ಞಾನದ ಭರಾಟೆಯಲ್ಲಿ ಈ ಸಾಮಾಜಿಕ ಜಾಲತಾಣಗಳು ಟ್ರೆಂಡ್ ಹೆಸರಿನಲ್ಲಿ ಅಪಾಯದ ಅಲೆಗಳನ್ನು ಸೃಷ್ಟಿಸುತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕೆ ನಿಜಕ್ಕೂ ಮಾರಕ. ಸಾಮಾಜಿಕ ಮಾಧ್ಯಮಗಳ ಸ್ವರೂಪಕ್ಕೆ ಕೃತಕ ಬುದ್ಧಿಮತ್ತೆ ಹೊಸ ಆಯಾಮವನ್ನು ಜೋಡಿಸಿರುವುದು ಹೌದಾದರೂ, ಅದು ಬಳಕೆಯಾಗುತ್ತಿರುವ ಪರಿ ಆತಂಕಕ್ಕೆ ಕಾರಣವಾಗಿದೆ.
ಮುಗ್ಧರನ್ನು ವಂಚಿಸುವ, ಬೆದರಿಕೆ ಹಾಕುವ ಅಥವಾ ಚಾರಿತ್ರ್ಯವಧೆ ಮಾಡುವ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಫೋಟೋಗಳು, ರೀಲ್ಸ್ಗಳು, ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಆದರೆ, ಈ ಲಕ್ಷಾಂತರ ಫೋಟೋ, ವಿಡಿಯೋಗಳಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಸುಲಭಕ್ಕೆ ಪತ್ತೆ ಹಚ್ಚಲಾಗದಂಥ ಸ್ಥಿತಿ ಇದೆ. ಎಐ ಕರಾಮತ್ತಿನಿಂದ ಸೃಷ್ಟಿಸುವ ಚಿತ್ರ ಮತ್ತು ವಿಡಿಯೋಗಳು ನೈಜ ಫೋಟೋ, ವಿಡಿಯೋಗಳ ಥರವೇ ಇರುವುದರಿಂದ, ಬಳಕೆದಾರರು ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಡೀಪ್ಫೇಕ್ ವಿಡಿಯೋಗಳಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸಂತ್ರಸ್ತರು ಮುಂದೆ ಬಂದು, ‘ಅದು ನಕಲಿ ವಿಡಿಯೋ. ಅದರಲ್ಲಿನ ಸಂಗತಿಗಳನ್ನು ನಂಬಬೇಡಿ’ ಎಂದು ಸ್ಪಷ್ಟನೆ ಕೊಡುವಷ್ಟರ ಹೊತ್ತಿಗೆ ನಕಲಿ ಫೋಟೋ ಅಥವಾ ವಿಡಿಯೋ ಎಲ್ಲ ಕಡೆ ವೈರಲ್ ಆಗಿ, ಎಡವಟ್ಟು ಸೃಷ್ಟಿಸಿರುತ್ತದೆ.
ಟ್ರೆಂಡ್ ಹೆಸರಲ್ಲಿ ಅವಾಂತರ: ಮೂರು ಆಯಾಮಗಳಲ್ಲಿ (ಥ್ರೀ ಡಿ) ಚಿತ್ರ ನೀಡುವ ತಂತ್ರಜ್ಞಾನದಿಂದ ಜೆಮಿನಿ ಎಐನ ನ್ಯಾನೋ ಬನಾನಾ ವಿನ್ಯಾಸ ಇನ್ನಿಲ್ಲದಂತೆ ಸದ್ದು ಮಾಡಿತು. ನಂತರ ಎರಡು ಆಯಾಮಗಳ ( 2 ಡಿ) ಚಿತ್ರ ಮತ್ತು ಪೋಟ್ರೖೆಟ್ ಸೀರೆ ತೊಟ್ಟು, ಗುಲಾಬಿ ಮುಡಿದ ಚಿತ್ರ ಗಮನ ಸೆಳೆಯಿತು. ಆದರೆ, ನ್ಯಾನೋ ಬನಾನಾ ಟೂಲ್ ಮೂಲಕ ರೆಟ್ರೊ ಲುಕ್ನ ಸೀರೆ ತೊಟ್ಟ ಚಿತ್ರಗಳನ್ನು ಮಹಿಳೆಯರು ವ್ಯಾಪಕವಾಗಿ ‘ಟ್ರೆಂಡ್’ ಎಂಬ ಭರಾಟೆಯಲ್ಲಿ ಹಂಚಿಕೊಂಡರು.
ಆದರೆ, ಇದು ಖಾಸಗಿತನಕ್ಕೆ ಧಕ್ಕೆ ತರಬಹುದು ಅಥವಾ ಇಂಥ ಚಿತ್ರಗಳನ್ನು ಸೈಬರ್ ಅಪರಾಧಿಗಳು ತಿರುಚಬಹುದು, ವಿರೂಪಗೊಳಿಸಬಹುದು ಎಂಬ ಅಪಾಯವನ್ನು ಲೆಕ್ಕಿಸಲೇ ಇಲ್ಲ. ಈ ಟ್ರೆಂಡ್ ಬಗ್ಗೆ ಟಾಟಾ ಮೋಟರ್ಸ್ ಜನರಲ್ ಮ್ಯಾನೇಜರ್ ಶಾಂತನು ತಿಳಿಹಾಸ್ಯದ ಧಾಟಿಯಲ್ಲೇ ಮಹತ್ವದ ಸಂಗತಿಯನ್ನು ಹಂಚಿಕೊಂಡರು. ‘ಭಾರತದ ಮಹಿಳೆಯರ ಕಪಾಟಿನಲ್ಲಿ ಹಲವಾರು ಸೀರೆಗಳು ಇರುತ್ತವೆ. ಹೀಗಿರುವಾಗ ಎಐ ಅಗತ್ಯವೇ?’ ಎಂದು ಪ್ರಶ್ನಿಸಿದ ಶಾಂತನು, ‘ನೀವೆಲ್ಲರೂ ಅಮೆರಿಕದಲ್ಲಿಲ್ಲ. ಭಾರತದಲ್ಲಿದ್ದೀರಿ. ಇದು ಸೀರೆಯುಡುವ ಸಂಸ್ಕೃತಿಯ ದೇಶ. ನಿಮ್ಮ ಕಪಾಟಿನಲ್ಲಿ ಕನಿಷ್ಠ 15 ಸೀರೆಗಳಾದರೂ ಇರುತ್ತವೆ.
ನೀವು ಏಕೆ ಇಷ್ಟು ಸೋಮಾರಿಗಳಾದಿರಿ... ಕಪಾಟಿನಲ್ಲಿ ನಿಮ್ಮದೇ ಸೀರೆ ಇರುವಾಗಲೂ ಎಐಗೆ ಚಿತ್ರ ರಚಿಸಲು ಕೇಳಿದ್ದೀರಲ್ಲ..’ ಎಂದು ಪ್ರಶ್ನಿಸಿದರು. ನಿಜ, ಎಐ ಟೂಲ್ಗೆ ಕಣ್ಮುಚ್ಚಿ ನಮ್ಮ ವೈಯಕ್ತಿಕ ಮಾಹಿತಿ, ಚಿತ್ರಗಳನ್ನು ಕೊಡುವ ಮುಂಚೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಚಿಂತಿಸಬೇಕು. ಇಂಥ ಸಂದರ್ಭಗಳಲ್ಲಿ ಸೆಲ್ಪಿ ಫೋಟೋಗಳನ್ನು ಯಾವುದೇ ಎಐ ಟೂಲ್ಗೆ ಅಪ್ಲೋಡ್ ಮಾಡುವಾಗ ಮುಖಗುರುತು (ಫೇಸಿಯಲ್ ಡೇಟಾ), ಲೋಕೇಶನ್, ಡಿವೈಸ್ ವಿವರಗಳು (ಮೆಟಾಡೇಟಾ) ಎಐ ಕಂಪನಿಗೆ ಶೇರ್ ಆಗುತ್ತವೆ. ಇದು ಡೇಟಾ ಲೀಕ್ ಅಥವಾ ಅನಧಿಕೃತ ಬಳಕೆಗೆ ಕಾರಣವಾಗಬಹುದು. ಜೆಮಿನಿ ಟ್ರೆಂಡ್ ವ್ಯಾಪಕವಾಗುತ್ತಿದ್ದಂತೆ ಈ ಬಗ್ಗೆ ತೆಲಂಗಾಣ ಮತ್ತು ಜಲಂಧರ್ ಪೊಲೀಸರು ಎಚ್ಚರಿಕೆ ನೀಡಿ, ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ನಿಗಾವಹಿಸಿ ಎಂದಿದ್ದರು.
ರೊನಾಲ್ಡೊ ಜತೆ ಶಾರುಕ್!: ಬಾಲಿವುಡ್ ನಟ ಶಾರುಕ್ ಖಾನ್ ಅವರು ಮೆಕ್ಕಾದಲ್ಲಿನ ಹರಮ್ ಶರೀಫ್ನಲ್ಲಿ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಜತೆಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೇ ಆಗಸ್ಟ್ 4-5ರಂದು ವೈರಲ್ ಆಯಿತು. ಜನರು ಹಿಂದೆಮುಂದೆ ನೋಡದೆ ‘ಇದು ಶಾರುಕ್ ಖಾನ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಜತೆಗಿರುವ ಚಿತ್ರ’ ಎಂದು ಹಂಚಿ ಕೊಂಡರು. ಆದರೆ, ಇವರಿಬ್ಬರೂ ಮೆಕ್ಕಾಕ್ಕೆ ಭೇಟಿ ನೀಡಿರಲಿಲ್ಲ ಅಥವಾ ಪರಸ್ಪರ ಭೇಟಿಯಾಗಿರ ಲಿಲ್ಲ. ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಲವು ವ್ಯತ್ಯಾಸಗಳು ಕಂಡುಬಂದವು. ಚಿತ್ರವನ್ನು ಹೈವ್ ಮಾಡರೇಷನ್ ಮತ್ತು ಸೈಟ್ ಇಂಜಿನ್ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದಾಗ, ಇದು ಎಐ ನಿರ್ವಿುತ ಚಿತ್ರ ಎನ್ನುವುದು ಖಚಿತವಾಯಿತು. ನಕಲಿ ಚಿತ್ರ ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ತನ್ನ ಫ್ಯಾಕ್ಟ್ ಚೆಕ್ನಲ್ಲಿ ತಿಳಿಸಿತು.
ಎಐ ಟೂಲ್ಗಳು ಫೋಟೋಗಳನ್ನು ಎಡಿಟ್ ಮಾಡಿ, ಅವುಗಳನ್ನು ಅತ್ಯಾಕರ್ಷಕವಾಗಿಸುತ್ತವೆ ನಿಜ. ಆದರೆ, ಇಂತಹ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸೈಬರ್ ಸ್ಕಾ್ಯಮ್ಳಿಗೆ ಬಳಕೆದಾರರೇ ಆಹ್ವಾನ ನೀಡಿದಂತಾಗುತ್ತದೆ. ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡಿರುವ ನಿದರ್ಶನಗಳಿಗೆ ಕೊರತೆ ಇಲ್ಲ. ಇದೇ ಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಮಾರ್ಪಡಿಸಿ, ಹರಿಬಿಡುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವುದು ಕೂಡ ಸುಲಭದ ಕೆಲಸವಲ್ಲ. ರಾಜಕೀಯ, ಸಾಮಾಜಿಕ ದುರುದ್ದೇಶ, ಅಪಪ್ರಚಾರಕ್ಕೂ ಬಳಸಬಹುದು. ಎಐ ಟೂಲ್ಗಳಲ್ಲಿ ಡಿಜಿಟಲ್ ವಾಟರ್ವಾರ್ಕ್ (ಸಿಂಥ್ಐಡಿ) ಹಾಗೂ ಮೇಟಾಡೇಟಾ ಟ್ಯಾಗ್ಗಳನ್ನು ಅಳವಡಿಸಿರುವುದು ಹೌದಾದರೂ, ಈ ವಾಟರ್ವಾರ್ಕ್ನ್ನು ಸುಲಭವಾಗಿ ಕ್ರಾಪ್ ಮಾಡಬಹುದಾಗಿದೆ ಇಲ್ಲವೆ ಅಳಿಸಿ ಹಾಕಬಹುದಾಗಿದೆ.
ಫೇಕ್ ಫೋಟೋ ಹಾಗೂ ವಿಡಿಯೋಗಳ ಹಾವಳಿ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಚುನಾವಣೆ ಸಮಯದಲ್ಲಿ ನಾಯಕರ ನಕಲಿ ಭಾಷಣ ಮತ್ತು ವಿಡಿಯೋಗಳನ್ನು ಮಾಡಿ, ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಅಥವಾ ವಿಡಿಯೋವನ್ನು ತಿರುಚಿ ಇಲ್ಲವೆ ತಪು್ಪ ಅರ್ಥ ಬರುವಂತೆ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲೂ ಸಿನಿನಟ, ನಟಿಯರ ನಕಲಿ ಕಂಟೆಂಟ್ಗಳನ್ನು ತಯಾರಿಸಿ ಹರಿಬಿಡಲಾಗುತ್ತಿದೆ. ಜನಸಾಮಾನ್ಯರಿಗೂ ಈ ಹಾವಳಿ ತಪ್ಪಿಲ್ಲ. ವ್ಯಕ್ತಿಯೊಬ್ಬನ ಫೋಟೋ ಎಡಿಟ್ ಮಾಡಿ, ಅದನ್ನು ತಪು್ಪ ಸಂದರ್ಭದಲ್ಲಿ ವೈರಲ್ ಮಾಡಲಾಗುತ್ತದೆ.
ಎಐ ಬಳಸಿ ತಪು್ಪ ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಹಾಗೂ ತಂತ್ರಜ್ಞಾನದ ಪರಿಹಾರ ಕಂಡುಹಿಡಿಯಬೇಕು ಎಂದು ಸರ್ಕಾರಕ್ಕೆ ಸೆ.12ರಂದು ಶಿಫಾರಸು ಮಾಡಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸ್ಥಾಯಿ ಸಮಿತಿ ತನ್ನ ಕರಡು ವರದಿಯಲ್ಲಿ, ಎಐ ಆಧಾರಿತ ನಕಲಿ ಸುದ್ದಿಯನ್ನು ತಡೆಯಲು, ತಪು್ಪ ಮಾಹಿತಿ ಪತ್ತೆ ಹಚ್ಚಲು ತಂತ್ರಜ್ಞಾನ ಅಳವಡಿಕೆ ಮಾಡಬೇಕು ಎಂದು ಹೇಳಿದೆ. ಈ ವರದಿಯನ್ನು ಸಮಿತಿಯು ಈಗಾಗಲೇ ಲೋಕಸಭಾಧ್ಯಕ್ಷ ಓಂ ಬಿರ್ಲಾಗೆ ಸಲ್ಲಿಸಿದೆ. ಮುಂದಿನ ಅಧಿವೇಶನದಲ್ಲಿ ಇದು ಮಂಡನೆಯಾಗಲಿದೆ.
2024-25ನೇ ಸಾಲಿನ ಆದಾಯ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿರುವ ಬಗ್ಗೆ ಕೇಂದ್ರ ಪರೋಕ್ಷ ತೆರಿಗೆ ಮಂಡಳಿಯು (ಸಿಬಿಡಿಟಿ) ಹೊರಡಿಸಿದೆ ಎನ್ನಲಾದ ಸುತ್ತೋಲೆಯನ್ನು ಹಲವರು ಸಾಮಾಜಿಕ ಜಾಲತಣದಲ್ಲಿ ಸೆ.15ರಂದು ಹಂಚಿಕೊಂಡ ಪರಿಣಾಮ, ಎಷ್ಟೋ ಜನರು ಇದನ್ನು ನಿಜವೆಂದು ಭಾವಿಸಿದ್ದರು. ತೆರಿಗೆ ಮಂಡಳಿಯ ಈ ಹಿಂದಿನ ಸುತ್ತೋಲೆಯನ್ನು ತಿರುಚಿ ಕಿಡಿಗೇಡಿಗಳು ಈ ಸುಳ್ಳುಸುದ್ದಿಯನ್ನು ಹರಡಿದ್ದರು.
ಮೈಸೂರಿನ ಬಿ.ಎಂ.ಹ್ಯಾಬಿಟ್ಯಾಟ್ ಮಾಲ್ನಲ್ಲಿ ಹಲವು ಎಸ್ಕಲೇಟರ್ ಏಕಕಾಲಕ್ಕೆ ಕುಸಿದು, ಅವಘಡದಲ್ಲಿ ಹಲವರು ಮೃತಪಟ್ಟಿದ್ದಾರೆ ಎಂಬ ವಿಡಿಯೋವನ್ನು ಸೆ.17ರಂದು ಹರಿಬಿಡಲಾಗಿತ್ತು. ಆದರೆ, ಫ್ಯಾಕ್ಟ್ ಚೆಕ್ನಲ್ಲಿ ‘ಡಿಸಾಸ್ಟರ್ ಸ್ಟ್ರಕ್ಸ್’ ಎಂಬ ಯೂ ಟ್ಯೂಬ್ ಚಾನೆಲ್ ಜೂನ್ 10ರಂದು ಎಐ ನಿರ್ವಿುತ ವಿಡಿಯೋ ಅಪ್ಲೋಡ್ ಮಾಡಿದ್ದು ಸ್ಪಷ್ಟಗೊಂಡಿತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನಾಪಡೆಯ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರ ನಡುವೆ ತೀವ್ರ ಮನಸ್ತಾಪ ಉಂಟಾಗಿದೆ. ದೇಶದ ಸೇನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಅಗತ್ಯವಿದೆ. ಅಲ್ಲಿಯವರೆಗೂ ಪಾಕಿಸ್ತಾನದೊಂದಿಗೆ ಸಂಘರ್ಷಕ್ಕೆ ಇಳಿಯಲು ಸೇನೆಯು ಆಸಕ್ತಿ ತೋರುವುದಿಲ್ಲ ಎಂದೂ ಸೇನಾ ಮುಖ್ಯಸ್ಥರು ಅಭಿಪ್ರಾಯ ಹೊಂದಿದ್ದಾರೆ ಎಂಬ ಪೋಸ್ಟ್ಗಳನ್ನು ಫೇಸ್ಬುಕ್ ಮತ್ತು ಎಕ್ಸ್ ನಲ್ಲಿ ಸೆ.12ರಂದು ಹರಿಬಿಟ್ಟಿದ್ದರಿಂದ ಗೊಂದಲ ಮತ್ತು ಆತಂಕದ ಸ್ಥಿತಿ ನಿರ್ವಣವಾಗಿತ್ತು. ಆದರೆ, ಇದೊಂದು ಸುಳ್ಳು ಸುದ್ದಿ. ಪಾಕಿಸ್ತಾನ ಮೂಲದ ಅಕೌಂಟ್ಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಸೇನಾ ಮುಖ್ಯಸ್ತರ ನಡುವೆ ಮನಸ್ತಾಪವಿದೆ ಎನ್ನುವಂತೆ ಸುಳ್ಳು ಕಥನ ಕಟ್ಟುತ್ತಿವೆ. ಈ ಮೂಲಕ ಭಾರತೀಯರ ದಾರಿ ತಪ್ಪಿಸಲು, ಜನರ ನಂಬಿಕೆ ಯನ್ನು ಹಾಳು ಮಾಡಲು ಯತ್ನಿಸಿವೆ ಎಂದು ಪಿಐಬಿ ಫ್ಯಾಕ್ಟ್ಚೆಕ್ ಸ್ಪಷ್ಟಪಡಿಸಿದೆ.
ಟ್ರೆಂಡ್ನ ಹಿಂದೆ ಹೋಗದೆ ನಾವು ಬಳಸುತ್ತಿರುವ ಎಐ ಉಪಕರಣ ಎಷ್ಟು ಸುರಕ್ಷಿತ ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಿ.
ಸಂದೇದನಾಶೀಲ ಫೋಟೋ, ವಿಡಿಯೋ ಅಪ್ಲೋಡ್ ಮಾಡುವುದು ಬೇಡ.
ಎಐ ಕಂಪನಿಗಳ ಅಥವಾ ಟೂಲ್ಗಳ ಪಾಲಿಸಿಗಳನ್ನು ಓದಿ, ಸುರಕ್ಷಿತ ಟೂಲ್ ಬಳಕೆಗೆ ಆದ್ಯತೆ ನೀಡುವುದು ಅವಶ್ಯ.
ಪೋಟೋ/ವಿಡಿಯೋ ಅಪ್ಲೋಡ್ ಮಾಡುವ ಮೊದಲು ಟ್ಯಾಗ್ಗಳು, ಅದನ್ನು ಎಲ್ಲಿಂದ ಮಾಡಲಾಗಿದೆ ಎಂಬಂಥ ವಿವರಗಳನ್ನು ಅಳಿಸಿ ಹಾಕುವುದು ಸುರಕ್ಷತೆ ದೃಷ್ಟಿಯಲ್ಲಿ ಸೂಕ್ತ.
ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಗೌಪ್ಯತೆ ಕಾಯ್ದಿಟ್ಟುಕೊಳ್ಳುವ ಸೆಟ್ಟಿಂಗ್ಗಳನ್ನು ಸುರಕ್ಷತೆ ದೃಷ್ಟಿಯಿಂದ ಬಳಸುವುದು ಪೂರಕ.