ಪರೀಕ್ಷೆಗೆ ಇನ್ನು ಕೆಲವೇ ವಾರಗಳು ಉಳಿದಿವೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಆತಂಕ ಸಹಜ. ಮೊದಲು ಓದುವ ಆತಂಕವಾದರೆ, ಪರೀಕ್ಷೆಯ ಸಮಯದಲ್ಲಿ ಶಾಲೆಗೆ ಹೋಗುವ ಗಡಿಬಿಡಿ. ಅಂಥ ಆತಂಕ, ಗಡಿಬಿಡಿಗಳಿಂದ ಮುಕ್ತಗೊಳ್ಳಲು ಏನು ಮಾಡಬೇಕು? ಇಲ್ಲಿವೆ ನಿಮಗಾಗಿ ಕೆಲವು ಟಿಪ್ಸ್.
ಈಗಿನ್ನೂ ಪರೀಕ್ಷೆಗೆ 2-3 ವಾರಗಳಿವೆಯಲ್ಲವೆ? ಈ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ಮೊದಲು ನೋಡೋಣ.
- ಪ್ರತಿ ವಿಷಯವನ್ನು ಎಳೆಎಳೆಯಾಗಿ ಅಭ್ಯಸಿಸಬೇಕು. ಅನೇಕ ಬಾರಿ ಅದನ್ನು ಪುನರಾವರ್ತನೆ ಮಾಡುತ್ತಿರಬೇಕು. ಪುನರಾವರ್ತನೆಯ ಸಮಯದಲ್ಲಿ ಅತ್ಯಂತ ಮಹತ್ವದ ಅಂಶಗಳಿಗೆ ಹೆಚ್ಚು ಒತ್ತು ಕೊಡುವುದು ಸೂಕ್ತ.
- ಈ ಹಿಂದೆ ನಡೆದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ, ಪರೀಕ್ಷಾ ನಿಯಮದಂತೆ ಅವಕ್ಕೆ ಉತ್ತರ ಬರೆಯಿರಿ. ಆಗ ಆಗುವ ಅನುಭವದ ಆಧಾರದ ಮೇಲೆ ಉತ್ತರ ಬರೆವ ವಿಧಾನವನ್ನು ಬೇಕಾದಂತೆ ಬದಲಾಯಿಸಿ ಕೊಳ್ಳಬಹುದು.
- ಪಠ್ಯಕ್ಕೆ ಮಾತ್ರ ಮೀಸಲಾಗಿರದೆ ಇತರ ಪತ್ರಿಕೆಗಳನ್ನು ಗಮನಿಸಬೇಕು. ಅವುಗಳಲ್ಲಿ ಪಠ್ಯಕ್ಕೆ ಪೂರಕವಾದ ನೂತನ ಮಾಹಿತಿಗಳು, ಸಂಶೋಧನೆಗಳು ಬಂದಿದ್ದಲ್ಲಿ ಟಿಪ್ಪಣಿ ಮಾಡಿಕೊಳ್ಳಬೇಕು. ಅಂಥ ಅಂಶಗಳನ್ನು ಪರೀಕ್ಷೆಯಲ್ಲಿ ಬಳಸಿದರೆ ಹೆಚ್ಚು ಪ್ರಭಾವ ಬೀರಬಹುದು.
ಪರೀಕ್ಷೆಯ ಹಿಂದಿನ ದಿನ ಹೀಗಿರಲಿ
- ಮಾರನೆಯ ದಿನ ನಡೆಯುವ ಪರೀಕ್ಷೆಯ ವಿಷಯದ ನೋಟ್ಸ್ ಅನ್ನು ಅವಲೋಕನ ಮಾಡಿಕೊಳ್ಳಬೇಕು. ಅದರಲ್ಲಿನ ಕೀ ಪಾಯಿಂಟ್ಸ್ಗಳತ್ತ ಹೆಚ್ಚು ಗಮನಹರಿಸಿರಿ.
- ಹಿಂದಿನ ದಿನ ವಿಷಯವನ್ನು ಆಳವಾಗಿ ಓದುವುದು ಒಳ್ಳೆಯದಲ್ಲ. ಅದರಿಂದ ಸಮಯ ಬೇಗ ಮುಗಿದುಹೋಗುತ್ತದೆ. ಸೂತ್ರದಂತಹ ಬಹು ಮುಖ್ಯ ಎನಿಸುವ ಅಂಶಗಳನ್ನು ಗುರುತುಹಾಕಿಕೊಳ್ಳಬೇಕು. ಅವನ್ನು ಸಾಧ್ಯವಾದಷ್ಟು ವೇಗವಾಗಿ ನೋಟ್ಸ್ ಮಾಡಲು ಪ್ರಯತ್ನಿಸುವುದು.
- ಗ್ರಾಫ್, ನಕ್ಷೆ ಯಂತಹ ಅಂಶಗಳಿದ್ದರೆ ಅವುಗಳನ್ನು ಎಚ್ಚರಿಕೆಯಿಂದ ಗಮನಿಸಿರಿ. ಸಾಧ್ಯವಾದಷ್ಟು ಮುಖ್ಯಾಂಶಗಳನ್ನು ಅವಲೋಕನ ಮಾಡಿಕೊಳ್ಳಬೇಕು.
- ಪುನರಾವರ್ತನೆಯು ಆತ್ಮಶಕ್ತಿಯನ್ನು ಹೆಚ್ಚಿಸುತ್ತದೆ. ನನಗೆ ಇಷ್ಟು ಅಂಶಗಳು ಗೊತ್ತಿವೆ ಜತೆಗೆ ಅರ್ಥಮಾಡಿಕೊಂಡಿದ್ದೇನೆ ಎಂಬ ನಂಬಿಕೆ ಬಂದರೆ ಸಾಕು.
- ಪ್ರತಿ ಪ್ರಶ್ನೆಗೆ ಎಷ್ಟು ಮತ್ತು ಹೇಗೆ ಉತ್ತರ ಬರೆದರೆ ಸೂಕ್ತ ಎಂಬುದನ್ನು ಅಳೆದು-ತೂಗಿ ನೋಡಿಕೊಳ್ಳಿರಿ.
- ನಾಳೆಗೆ ಬೇಕಾದ ಉಡುಪು ಮತ್ತು ಪರೀಕ್ಷಾ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಏನು ಬೇಕೋ ಅದನ್ನು ತಿಂದು ಹೊಟ್ಟೆ ಕೆಡಿಸಿಕೊಳ್ಳದೆ, ಉತ್ತಮವಾದ ಮಿತ ಆಹಾರ ಸೇವನೆ ಆರೋಗ್ಯಕರ.
- ಪರೀಕ್ಷೆಗೆ ಸಾವಕಾಶವಾಗಿ ಸಿದ್ಧಗೊಳ್ಳಲು ಬೇಕಾದ ಸಮಯವನ್ನು ಗುರುತಿಸಿ, ಅದಕ್ಕೆ ತಕ್ಕನಾಗಿ ಗಡಿಯಾರದಲ್ಲಿ ಎಚ್ಚರಿಕೆ ಗಂಟೆ ನಿಗದಿಮಾಡಿರಿ.
- ನಾಳೆ ಪರೀಕ್ಷೆ ಎಂದು ಮಧ್ಯರಾತ್ರಿವರೆಗೂ ಓದದೇ ಸರಿಯಾದ ಸಮಯಕ್ಕೆ ಹಾಸಿಗೆಯತ್ತ ಸಾಗಿರಿ.
- ಮುಂಜಾನೆ ಬೇಗನೇ ಎದ್ದು, ದೈನಂದಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಿದ್ಧರಾಗಬೇಕು.
- ಮನೆ ಬಿಡುವ ಮುಂಚೆ ಪರೀಕ್ಷಾ ಸಾಮಗ್ರಿ ಮತ್ತು ನೋಂದಣಿ ಪತ್ರಗಳನ್ನು ಜತೆಯಲ್ಲಿಟ್ಟುಕೊಳ್ಳುವುದನ್ನು ಮರೆಯಬಾರದು.
- ಪರೀಕ್ಷಾ ಕೇಂದ್ರವನ್ನು ಸರಿಯಾಗಿ ನೋಡಿಕೊಂಡು, ಅದನ್ನು ತಲುಪುವ ವೇಳೆಯನ್ನು ಗಮನಿಸಿ, ಸಾಧ್ಯವಾದಷ್ಟು ಮುಂಚಿತವಾಗಿ ಹೊರಡಬೇಕು.
- ಪರೀಕ್ಷೆ ಆರಂಭಕ್ಕೆ ಸಾಕಷ್ಟು ಸಮಯವಿರುವಾಗಲೇ ಪರೀಕ್ಷಾ ಕೇಂದ್ರ ತಲುಪಬೇಕು. ಸ್ವಲ್ಪ ತಡವಾದರೆ ಎಡವಟ್ಟಾಗುತ್ತದೆ. ಒಂದರಿಂದ ಮತ್ತೊಂದು ಎಡವಟ್ಟಾದರೆ ಅಲ್ಲಿಗೆ ಆ ವರ್ಷದ ಪರೀಕ್ಷಾ ಕಥೆ ಮುಗಿದಂತೆ ನೆನಪಿರಲಿ!
- ಪ್ರಶ್ನೆಪತ್ರಿಕೆಯನ್ನು ಒಂದು ಸಾರಿ ಸಂಪೂರ್ಣವಾಗಿ ಓದಬೇಕು.
- ಉತ್ತರ ಬರೆವ ಮುಂಚೆ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು.
- ಉತ್ತರ ಬರೆಯಲು ಆರಂಭಿಸುವುದಕ್ಕಿಂತ ಮುಂಚೆ ಏನು ಬರೆಯುತ್ತೇನೆ ಎಂಬುದನ್ನು ಒಂದು ಕ್ಷಣ ಯೋಚಿಸಿ. ಪ್ರಶ್ನೆಯ ಮಾದರಿಗೆ ಅನುಗುಣವಾಗಿ ಅಂದರೆ ದೀರ್ಘ ಉತ್ತರ, ಕಿರು ಉತ್ತರ ಮುಂತಾದವುಗಳಿಗೆ ಬೇಕಾದಷ್ಟು ಸಮಯ ಬಳಸಿಕೊಳ್ಳುವುದು. ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಾಗದಿದ್ದರೆ ತಕ್ಷಣ ಆತಂಕಗೊಳ್ಳಬಾರದು. ಆ ಪ್ರಶ್ನೆ ಬಿಟ್ಟು ಮುಂದೆ ಸಾಗುವುದು. ಕೊನೆಗೆ ಮತ್ತೆ ಆ ಪ್ರಶ್ನೆಯನ್ನು ಗಮನಿಸಿ. ಸರಿಯಾಗಿ ನೆನಪು ಮಾಡಿಕೊಂಡರೆ ಅದರ ಉತ್ತರ ಹೊಳೆಯುತ್ತದೆ.
- ಪರೀಕ್ಷೆಯಲ್ಲಿ ಉತ್ತರಗಳನ್ನು ಸುಂದರವಾಗಿ ಮತ್ತು ಸ್ಪಷ್ಟವಾಗಿ ಬರೆಯಬೇಕು. ಅದು ಮೌಲ್ಯಮಾಪಕರನ್ನು ಆಕರ್ಷಿಸುತ್ತದೆ. ಅದರ ಫಲವಾಗಿ ಉತ್ತಮ ಅಂಕಗಳು ನಿಮಗೆ ಸಿಗುತ್ತವೆ.
- ಸಕಾರಾತ್ಮಕ ಯೋಚನೆಗಳು ಸಾಮರ್ಥ್ಯವನ್ನು ಹೆಚ್ಚಿಸುತ್ತ, ಸಮಸ್ಯೆಯನ್ನು ಬಿಡಿಸುವ ಶಕ್ತಿ ವೃದ್ಧಿಸುತ್ತವೆ. ಆ ನಿಟ್ಟಿನತ್ತ ನೀವು ಸಾಗಿನೋಡಿ.
| ಪರಮೇಶ್ವರಯ್ಯ ಸೊಪ್ಪಿಮಠ ಶಿಕ್ಷಕರು