ಅಂಕಣ

ಜಾಗತಿಕ ಇತಿಹಾಸದ ನಿರ್ದೇಶಕನ ಮೇಲೊಂದು ಕ್ಷಕಿರಣ

ನೀವು ಈ ಲೇಖನವನ್ನು ಓದುವ ಹೊತ್ತಿಗೆ ಅಮೆರಿಕದ ಹೊಸ ಅಧ್ಯಕ್ಷರು ಯಾರೆಂದು ನಿಮಗೆ ಗೊತ್ತಾಗಿಹೋಗಿರುತ್ತದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಾಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್​ರಲ್ಲಿ ಯಾರೊಬ್ಬರು ಆಯ್ಕೆಯಾದರೂ ಅವರು ಇತಿಹಾಸ ನಿರ್ವಿುಸುತ್ತಾರೆ.

ಒಂದಾದ ಮೇಲೊಂದರಂತೆ ಎರಡು ಅವಧಿಗಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ರಾಜ್ಯವಾಳಿಹೋದವರು ಅಮೆರಿಕದ ಇತಿಹಾಸದಲ್ಲಿ ಹಲವರಿದ್ದಾರೆ. ಪ್ರಾಂಲಿನ್ ಡಿಲಾನೋ ರೂಸ್​ವೆಲ್ಟ್ ಅವರಂತೂ 1932ರಿಂದ 1944ರವರೆಗೆ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಒಬ್ಬರೇ ಅಷ್ಟು ಕಾಲ ಅಧ್ಯಕ್ಷರಾಗುವುದು ಬೇಡ ಎಂದು ರ್ತಸಿದ ಆ ದೇಶ ಅಧ್ಯಕ್ಷಗಿರಿಯನ್ನು ಒಬ್ಬ ವ್ಯಕ್ತಿಗೆ ಎರಡೇ ಅವಧಿಗಳಿಗೆ ಮಿತಿಗೊಳಿಸುವ ನಿರ್ಧಾರವನ್ನು ಸಂವಿಧಾನಾತ್ಮಕವಾಗಿ ತೆಗೆದುಕೊಂಡಿತು. ನಂತರದ ವರ್ಷಗಳಲ್ಲಿ ಡ್ವೆ ೖಟ್ ಡಿ. ಐಸೆನ್​ಹೋವರ್, ರಿಚರ್ಡ್ ನಿಕ್ಸನ್, ರೊನಾಲ್ಡ್ ರೀಗನ್, ಜಾರ್ಜ್ ಬುಷ್ ಜ್ಯೂ ಮತ್ತು ಬರಾಕ್ ಒಬಾಮ ಸತತ ಎರಡು ಅವಧಿಗಳಿಗೆ ಆಯ್ಕೆಯಾಗಿ ಫ್ರಾಂಲಿನ್ ರೂಸ್​ವೆಲ್ಟ್​ರ ಹಿಂದೆ ಹಾಗೆ ಸತತ ಎರಡು ಅವಧಿಗಳಿಗೆ ಆಯ್ಕೆಯಾದ ಹಲವರ ಪಟ್ಟಿಗೆ ಸೇರಿಹೋದರು. ಆದರೆ ಇದುವರೆಗೆ ಆಗಿಹೋದ ನಲವತ್ತಾರು ಅಧ್ಯಕ್ಷರಲ್ಲಿ ಸ್ಟೀಫನ್ ಗ್ರೋವರ್ ಕ್ಲೀವ್​ಲ್ಯಾಂಡ್ ಅವರದು ಬೇರೆಯೇ ಹೆಗ್ಗಳಿಕೆ.

1884ರಲ್ಲಿ ಆಯ್ಕೆಯಾದ ಅವರು 1888ರಲ್ಲಿ ಎರಡನೆಯ ಅವಧಿಗೆ ಚುನಾಯಿತರಾಗುವುದರಲ್ಲಿ ವಿಫಲರಾದರು. ಆದರೆ ನಾಲ್ಕು ವರ್ಷಗಳ ನಂತರ 1892ರಲ್ಲಿ ಮತ್ತೆ ಸ್ಪರ್ಧಿಸಿ ವಿಜಯಿಯಾದರು ಮತ್ತು ಒಂದು ಅವಧಿಯ ಅಂತರದ ನಂತರ ಮತ್ತೆ ಆಯ್ಕೆಯಾಗಿ ಎರಡನೆಯ ಬಾರಿಗೆ ಶ್ವೇತಭವನದ ಅಧಿಪತಿಯಾದ ಏಕೈಕ ಅಧ್ಯಕ್ಷರಾಗಿ ಇತಿಹಾಸ ನಿರ್ವಿುಸಿದರು. ಆ ದಾಖಲೆ ಇನ್ನೂ ಅವರ ಹೆಸರಿನಲ್ಲೇ ಇದೆ. ಡೊನಾಲ್ಡ್ ಟ್ರಂಪ್ ನವೆಂಬರ್ 2016ರಲ್ಲಿ ಆಯ್ಕೆಯಾಗಿ 2017-21ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದವರು. ನವೆಂಬರ್ 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಜನವರಿ 2021ರಲ್ಲಿ ಅಧ್ಯಕ್ಷಗಿರಿಯನ್ನು ಪ್ರತಿಸ್ಪರ್ಧಿ ಜೋ ಬೈಡೆನ್ ಅವರಿಗೆ ಒಲ್ಲದ ಮನಸ್ಸಿನಿಂದ ಬಿಟ್ಟಿಕೊಟ್ಟ ನಂತರ ಈಗ ಮತ್ತೊಮ್ಮೆ ರಿಪಬ್ಲಿಕನ್ ಪಕ್ಷದ ಉಮೇದುವಾರಿಕೆಯನ್ನು ಪಡೆದುಕೊಂಡು ಕಣಕ್ಕಿಳಿದಿದ್ದಾರೆ. ಇಂದು ಅವರು ಆಯ್ಕೆಯಾದರೆ ಅಧ್ಯಕ್ಷ ಕ್ಲೀವ್​ಲ್ಯಾಂಡ್ ಅವರ ದಾಖಲೆಯನ್ನು ಸರಿಗಟ್ಟಿ ಇತಿಹಾಸ ನಿರ್ವಿುಸುತ್ತಾರೆ. ಇದರೊಂದಿಗೆ ಇನ್ನೂ ಒಂದು ವಿಶೇಷವೆಂದರೆ ಅವರು ಎರಡು ಬಾರಿಯೂ ಮಹಿಳಾ ಪ್ರತಿಸ್ಪರ್ಧಿಗಳನ್ನು ಮಣಿಸಿ ಶ್ವೇತಭವನ ಪ್ರವೇಶಿಸಿದಂತೆಯೂ ಆಗುತ್ತದೆ.

ಡೆಮೋಕ್ರಾಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಂತೂ ಒಂದಕ್ಕಿಂತ ಹೆಚ್ಚು ಐತಿಹಾಸಿಕ ದಾಖಲೆಗಳ ಹೊಸ್ತಿಲಲ್ಲಿ ನಿಂತಿದ್ದಾರೆ. ಇಂದು ಅಮೆರಿಕದ ಅಧ್ಯಕ್ಷರಾಗಿ ಅವರು ಆಯ್ಕೆಯಾದರೆ ಆ ದೇಶದ ಮೊಟ್ಟಮೊದಲ ಪೂರ್ಣ ಅಶ್ವೇತ ಹಾಗೂ ಮೊಟ್ಟಮೊದಲ ಮಹಿಳಾ ರಾಷ್ಟ್ರಪತಿಯೂ ಆಗುತ್ತಾರೆ. ಡಬಲ್ ಧಮಾಕಾ! ಅಧ್ಯಕ್ಷರಾಗಿ ಆಯ್ಕೆಯಾಗಿ ಶ್ವೇತಭವನವನ್ನು ಪ್ರವೇಶಿಸಿದ ಮೇಲೆ ಇವರು ಜಗತ್ತಿನ ಇತಿಹಾಸವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಾರೆ? ಇದು ಜಗತ್ತಿಗೇ ಮುಖ್ಯವೆನಿಸುವ ಪ್ರಶ್ನೆ. ಅಮೆರಿಕದ ಶಕ್ತಿ ಕ್ಷೀಣಿಸುತ್ತಿದೆ, ಇತರ ದೇಶಗಳು ಮುಂಚೂಣಿಗೆ ಬರುತ್ತಿವೆ, ಜಾಗತಿಕ ರಾಜಕಾರಣದಲ್ಲಿ ಅಮೆರಿಕದ ಮಾತುಗಳು ಬೆಲೆ ಕಳೆದುಕೊಳ್ಳುತ್ತಿವೆ ಎಂಬ ಅಭಿಪ್ರಾಯಗಳನ್ನು ಯಾರು ಎಷ್ಟೇ ಹೇಳಿದರೂ ಇಂದಿಗೂ ಜಗತ್ತಿನ ಆಗುಹೋಗುಗಳು ನಿರ್ಧಾರವಾಗುವುದು ಅಮೆರಿಕ ಅನುಸರಿಸುವ ನೀತಿಗಳಿಂದ. ಅದು ಈಗಲೂ ಜಗತ್ತಿನ ಅತಿ ದೊಡ್ಡ ಸೇನಾಶಕ್ತಿ ಮತ್ತು ಆರ್ಥಿಕ ದಿಗ್ಗಜ. ಜಗತ್ತಿನ ಎಲ್ಲೆಡೆ ಎಂಟುನೂರಕ್ಕೂ ಹೆಚ್ಚು ಸೇನಾ ನೆಲೆಗಳನ್ನು ಹೊಂದಿರುವ ಅಮೆರಿಕ ಎಲ್ಲಿ ಏನೇ ಆದರೂ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದೆ.

ರಷ್ಯಾ ಮತ್ತು ಚೀನಾಗೆ ಈ ಸಾಮರ್ಥ್ಯ ಇಲ್ಲ. ಜತೆಗೆ, ಸೇನಾಶಕ್ತಿಗಾಗಿ ಅಮೆರಿಕ ವಾರ್ಷಿಕವಾಗಿ ಬಳಸುವ ಎಂಟುನೂರು ಬಿಲಿಯನ್ ಡಾಲರ್​ಗಳ ಅಗಾಧ ಮೊತ್ತವನ್ನು ತಮ್ಮ ಸೇನಾಶಕ್ತಿಗಾಗಿ ವ್ಯಯಿಸುವ ಸಾಮರ್ಥ್ಯವೂ ಸದ್ಯಕ್ಕೆ ಅವುಗಳಿಗಿಲ್ಲ. ಈ ಕಾರಣಗಳಿಂದಾಗಿ ಅವುಗಳ ಸೇನಾಶಕ್ತಿಯ ಭೌಗೋಳಿಕ ವ್ಯಾಪ್ತಿ ಸೀಮಿತ. ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳು ಈ ಎರಡೂ ದೇಶಗಳಿಗೆ ತಮ್ಮ ಶಕ್ತಿಯ ಹಮ್ಮು ಮೂಡಿಸಿರಬಹುದು. ಆದರೆ ಆ ಶಕ್ತಿಯನ್ನು ಬಳಸಿ ಅವು ಅಮೆರಿಕವನ್ನು ಮಣಿಸಿ ಜಗತ್ತಿನ ಏಕಮೇವಾದ್ವಿತೀಯ ಶಕ್ತಿಯಾಗಿ ಮೆರೆಯಲು ಸಾಧ್ಯವಿಲ್ಲ. ತಾವು ಅಣ್ವಸ್ತ್ರ ಬಳಕೆಗೆ ಮುಂದಾದರೆ ಅಮೆರಿಕದಿಂದ ಅಷ್ಟೇ ಪ್ರಮಾಣದ ಅಥವಾ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ಬರುತ್ತದೆ ಎಂದು ಅವುಗಳಿಗೆ ಗೊತ್ತಿದೆ. ಅಣ್ವಸ್ತ್ರ ಯುದ್ಧವೆಂದರೆ Mutually Assured Destruction (MAD)

ಅಂದರೆ ‘ಪರಸ್ಪರರಿಗೆ ಕೊಟ್ಟುಕೊಂಡ ಸರ್ವನಾಶದ ವಾಗ್ದಾನ’ ಅಂತ! ಇದರರ್ಥ ಅಣ್ವಸ್ತ್ರ ಯುದ್ಧವನ್ನು ಯಾರೂ ಗೆಲ್ಲಲಾಗುವುದಿಲ್ಲ. ಹೀಗಾಗಿ ತಮ್ಮ ಅಣ್ವಸ್ತ್ರ ಸಂಗ್ರಹವನ್ನು ಅಮೆರಿಕದ ವಿರುದ್ಧ ಬಳಸಲು ರಷ್ಯಾ ಆಗಲಿ ಚೀನಾ ಆಗಲಿ ಎಂದೂ ಮುಂದಾಗುವುದಿಲ್ಲ. ಅಣ್ವಸ್ತ್ರ ಸಂಗ್ರಹದ ಉಪಯೋಗವೇನಿದ್ದರೂ ಬೆದುರುಬೊಂಬೆಯಾಗಷ್ಟೇ, ಅವುಗಳನ್ನು ಝುಳಪಿಸಿ ವಿರೋಧಿಗಳನ್ನು ದೂರ ಇಡುವುದಕ್ಕಷ್ಟೇ. ಹೆಚ್ಚೆಂದರೆ ಅಮೆರಿಕವನ್ನು ದೂರದಲ್ಲೇ ನಿಲ್ಲಿಸಿ ತಮ್ಮ ಅಕ್ಕಪಕ್ಕದ ಸಣ್ಣಪುಟ್ಟ ದೇಶಗಳು ತಮ್ಮ ಮಾತು ಕೇಳುವಂತೆ ಮಾಡಿಕೊಳ್ಳುವುದಕ್ಕಷ್ಟೇ ಅವುಗಳ ಅಣ್ವಸ್ತ್ರ ಶಕ್ತಿ ಸೀಮಿತ. ಅಮೆರಿಕವನ್ನು ಮಣಿಸಿ ಜಾಗತಿಕ ಶಕ್ತಿಯಾಗುವುದಕ್ಕಲ್ಲ.

ಅಮೆರಿಕ ಇಂದಿಗೂ ಆರ್ಥಿಕ ದಿಗ್ಗಜ. ಅದರ ನಂತರದ ಮೂರು ಜಾಗತಿಕ ಆರ್ಥಿಕ ಮಹಾಶಕ್ತಿಗಳ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆಯನ್ನು (ಜಿಡಿಪಿ) ಒಟ್ಟುಗೂಡಿಸಿದರೂ ಅದು ಅಮೆರಿಕದ ಇಪ್ಪತೆôದೂವರೆ ಟ್ರಿಲಿಯನ್ ಡಾಲರ್​ಗಳ ಭಾರಿ ಜಿಡಿಪಿಯನ್ನು ಸರಿಗಟ್ಟಲಾಗದು. ಚೀನಾ, ಜಪಾನ್ ಮತ್ತು ಜರ್ಮನಿಗಳ ಅರ್ಥವ್ಯವಸ್ಥೆ ಈಗ ಇಳಿದಿರುವ ಇಳಿಜಾರಿನ ಹಾದಿಯನ್ನು ಮತ್ತು ಕೋವಿಡ್ ಸಂಕ್ರಮಣದ ನಂತರ ಅಮೆರಿಕದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುತ್ತಿರುವುದನ್ನೂ ನೋಡಿದರೆ ಆ ದೇಶವನ್ನು ಆರ್ಥಿಕವಾಗಿ ಹಿಂದಕ್ಕೆ ಸರಿಸುವುದು ಯಾವ ದೇಶಕ್ಕಾದರೂ ಕನಸಿನ ಮಾತು. ಜತೆಗೆ ಅಮೆರಿಕನ್ ಡಾಲರ್​ಗೆ ಪರ್ಯಾಯವಾಗಿ ಬೇರೊಂದು ವಿನಿಮಯ ಮಾಧ್ಯಮವನ್ನು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಜಾರಿಗೆ ತರುವ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದ್ದರೂ ಅದಂತೂ ಸಧ್ಯಕ್ಕೆ ಸಾಧ್ಯವಾಗದ ಮಾತು. ಇತರ ಯಾವುದೇ ಕರೆನ್ಸಿ ದ್ವಿಪಕ್ಷೀಯ ಅಥವಾ ಕೆಲವೇ ದೇಶಗಳ ಗುಂಪಿನ ಆಮದು-ರಫ್ತು ವ್ಯವಹಾರಗಳಲ್ಲಿ ಬಳಕೆಯಾಗಬಹುದು, ಅದೂ ಸೀಮಿತವಾಗಿ.

ಆರ್ಥಿಕ ಹಾಗೂ ಸೇನಾಶಕ್ತಿಗಳ ಜತೆಗೆ ವಿವಿಧ ಜಾಗತಿಕ ಹಣಕಾಸು ಮತ್ತು ರಾಜತಾಂತ್ರಿಕ ಸಂಘಟನೆಗಳಲ್ಲಿ ಅಮೆರಿಕ ಹೊಂದಿರುವ ಪ್ರಭಾವಶಾಲಿ ಸ್ಥಾನಗಳಿಂದಾಗಿ ಇಂದಿಗೂ ಜಾಗತಿಕ ಇತಿಹಾಸವನ್ನು ನಿರ್ದೇಶಿಸುವುದರಲ್ಲಿ ಆ ದೇಶದ ಪಾತ್ರ ಪ್ರಮುಖವಾದುದು. ಜಾಗತಿಕ ರಾಜಕಾರಣದ ನಿರ್ವಹಣೆಯಲ್ಲಿ ಅಮೆರಿಕ ತನ್ನ ಇತರ ಪ್ರತಿಸ್ಪರ್ಧಿಗಳಿಗಿಂತಲೂ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಿರುವುದನ್ನು ಇತಿಹಾಸ ದಾಖಲಿಸಿದೆ. ಇದನ್ನು ಸಂಕ್ಷಿಪ್ತವಾಗಿಯಾದರೂ ಪರಿಶೀಲಿಸವುದು ನಮ್ಮ ಮುಂದಿನ ವಿಶ್ಲೇಷಣೆಗೆ ಅಗತ್ಯ. ಪ್ರಥಮ ಹಾಗೂ ದ್ವಿತೀಯ ಮಹಾಯದ್ಧಗಳೆರಡರಲ್ಲೂ ಅಮೆರಿಕದ ಪಾತ್ರ ನಿರ್ಣಾಯಕವಾಗಿತ್ತು. ಎರಡೂ ಸಂದರ್ಭಗಳಲ್ಲಿ ಬ್ರಿಟನ್ ಮತ್ತದರ ಸಹಯೋಗಿಗಳ ಪರವಾಗಿ ಅಮೆರಿಕ ನಿಲ್ಲದೇಹೋಗಿದ್ದರೆ ಜರ್ಮನಿ ಮತ್ತದರ ಸಹಯೋಗಿಗಳ ವಿಜಯ ನಿಶ್ಚಿತವಾಗಿತ್ತು. ಹಾಗೇನಾದರೂ ಆಗಿದ್ದರೆ ಜಾಗತಿಕ ಇತಿಹಾಸ ಯಾವ ದಾರಿ ಹಿಡಿಯುತ್ತಿತ್ತು?

ಪ್ರಥಮ ಮಹಾಯುದ್ಧದಲ್ಲಿ ಜರ್ಮನಿಯ ನಾಯಕತ್ವ ರಾಜಪ್ರಭುತ್ವದ ಕೈಯಲ್ಲಿದ್ದರೆ ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಅದು ಕ್ರೂರ ಸರ್ವಾಧಿಕಾರಿಯ ಕೈಯಲ್ಲಿತ್ತು. ಅದಕ್ಕೆ ತಕ್ಕಂತೆ ಜರ್ಮನಿಯ ಸಹಯೋಗಿಗಳೂ ಸಹ. ಪ್ರಥಮ ಮಹಾಯುದ್ಧದಲ್ಲಿ ಜರ್ಮನಿ ಮತ್ತದರ ಮಿತ್ರದೇಶಗಳು ಜಯಶಾಲಿಯಾಗಿದ್ದರೆ ಯೂರೋಪ್​ನಲ್ಲಿ ಜರ್ಮನಿಯ ಹೊಹೆನ್​ರೆೊಲೆರ್ನ್, ಆಸ್ಟ್ರಿಯಾದಲ್ಲಿ ಹಾಪ್ಸ್​ಬರ್ಗ್ ರಾಜಪ್ರಭುತ್ವಗಳು ಮತ್ತು ತುರ್ಕಿಯಲ್ಲಿ ಖಲಫರ ಆಳ್ವಿಕೆ ಅಪರಿಮಿತವಾಗಿ ಶಕ್ತಿವರ್ಧನೆ ಮಾಡಿಕೊಳ್ಳುತ್ತಿದ್ದವು ಮತ್ತು ಅವುಗಳ ಆಳ್ವಿಕೆ ದೀರ್ಘವಾಗುತ್ತಿತ್ತು. ಪರಿಣಾಮವಾಗಿ ಯೂರೋಪ್​ನ ಹೆಚ್ಚುಭಾಗ ಜರ್ಮನಿ ಮತ್ತು ಆಸ್ಟ್ರಿಯಾಗಳ ಪಾಲಾಗುತ್ತಿತ್ತು. ಇತಿಹಾಸ ಅ ತಿರುವು ತೆಗೆದುಕೊಂಡಿದ್ದರೆ ಭಾರತವೂ ಸೇರಿದಂತೆ ಪಶ್ಚಿಮ ಯೂರೋಪಿಯನ್ ವಸಾಹತುಗಳ ಕಥೆ ಏನಾಗುತ್ತಿತ್ತು ಎನ್ನುವುದನ್ನು ನಿಮ್ಮ ಊಹೆಗೇ ಬಿಡುತ್ತೇನೆ. ಹಾಗೆಯೇ ಆಗ್ನೇಯ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ಖಲೀಫರ ಆಳ್ವಿಕೆ ಇನ್ನಷ್ಟು ಬಿಗಿಯಾಗುತ್ತಿತ್ತು.

ಜತೆಗೆ, ಜರ್ಮನಿ ಮತ್ತು ಆಸ್ಟ್ರಿಯಾಗಳ ವಿಜಯ ರಷ್ಯಾದಲ್ಲಿ ಕಮ್ಯೂನಿಸ್ಟ್ ಪ್ರಯೋಗವನ್ನು ಮೊಳಕೆಯಲ್ಲೇ ಚಿವುಟಿಹಾಕಿಬಿಡುತ್ತಿತ್ತು. ನಂತರದ ಕಾಲದಲ್ಲಿ ಕಮ್ಯೂನಿಸ್ಟರು ಎಲ್ಲೆಡೆ ಎಸಗಿದ ಕುಕೃತ್ಯಗಳನ್ನು ನೋಡಿದರೆ ಇಂದು ಹಿನ್ನೋಟದಲ್ಲಿ ರಷ್ಯಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯ ಯಶಸ್ಸು ಮನುಕುಲದ ಒಂದು ದೊಡ್ಡ ತಪ್ಪುಹೆಜ್ಜೆಯಂತೆ ಕಾಣುವುದು ನಿಜ. ಆದರೆ ಅದರ ಬದಲಿಗೆ ರೋಮನೋವ್ ರಾಜಪ್ರಭುತ್ವ ಮುಂದುವರಿದಿದ್ದರೆ ಅಥವಾ ರಷ್ಯನ್ ಸಾಮ್ರಾಜ್ಯ ಜರ್ಮನಿ, ಆಸ್ಟ್ರಿಯಾ ಮತ್ತು ತುರ್ಕಿಗಳ ನಡುವೆ ಹರಿದು ಹಂಚಿಹೋಗಿದ್ದರೆ ಅದರ ರಾಜಕೀಯ, ಧಾರ್ವಿುಕ ಹಾಗೂ ಸೈದ್ಧಾಂತಿಕ ಪರಿಣಾಮಗಳು ಇನ್ನೂ ಕೆಟ್ಟದಾಗಿರುತ್ತಿದ್ದವು; ಇದರ ಆಧಾರದ ಮೇಲೆ ದ್ವಿತೀಯ ಮಹಾಯುದ್ಧದಲ್ಲಿ ನಾಝಿ ಜರ್ಮನಿ, ಫ್ಯಾಸಿಸ್ಟ್ ಇಟಲಿ ಮತ್ತು ವಿಸ್ತರಣಾವಾದಿ ಜಪಾನ್ ವಿಜಯಿಯಾಗಿದ್ದರೆ ಜಾಗತಿಕ ಇತಿಹಾಸ ಯಾವ ದಿಕ್ಕು ಹಿಡಿಯುತ್ತಿತ್ತು ಎನ್ನವುದನ್ನು ಊಹಿಸಿಕೊಳ್ಳಬಹುದು. ಅದೆಲ್ಲವೂ ಆಗದೇ ಹೋದದ್ದು ಎರಡು ಸಲವೂ ಬ್ರಿಟನ್​ನ ಪರವಾಗಿ ಅಮೆರಿಕ ಯುದ್ಧಕ್ಕಿಳಿದದ್ದರಿಂದ.

ದ್ವಿತೀಯ ಮಹಾಯುದ್ಧದ ತರುವಾಯ ಶೀತಲಸಮರ ಆರಂಭವಾದದ್ದು ಪೂರ್ವ ಯೂರೋಪಿಯನ್ ದೇಶಗಳಲ್ಲಿ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರಗಳನ್ನು ಕೂರಿಸಿದ ಸೋವಿಯತ್ ಯೂನಿಯನ್ ಅದೇ ಕೆಲಸವನ್ನು ಗ್ರೀಸ್ ಮತ್ತು ತುರ್ಕಿಗಳಲ್ಲೂ ಮಾಡಹೊರಟಿದ್ದರಿಂದಾಗಿ. ಪರಿಣಾಮವಾಗಿ ಆದದ್ದೇನೆಂದರೆ ಯುದ್ಧಾನಂತರದ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಸೇರಿದಂತೆ ಯೂರೋಪ್​ಗಳ ನಡುವೆ ಆರಂಭವಾಗಿದ್ದ ಆರ್ಥಿಕ ಸಹಕಾರದ ಯುಗ ಅಂತ್ಯಗೊಂಡಿತು, ಮತ್ತು ಭಯಾನಕ ಶಸ್ತ್ರಾಸ್ತ್ರ ಪೈಪೋಟಿ ಆರಂಭವಾಗಿ ಜಗತ್ತನ್ನು ಸರ್ವನಾಶದ ಪ್ರಪಾತಂಚಿನಲ್ಲಿ ನಿಂತಿತು. ನಂತರ ಶೀತಲಸಮರ ಕೊನೆಗೊಂಡದ್ದು ಸೋವಿಯತ್ ಯೂನಿಯನ್ ತನ್ನ ಸೀಮಿತ ಆದಾಯವನ್ನು ಜನತೆಯ ಕಲ್ಯಾಣಕ್ಕಾಗಿ ಬಳಸದೆ ಸೇನಾಶಕ್ತಿಯ ವೃದ್ಧಿಗಾಗಿ ಬಳಸಿದ್ದರಿಂದ ಎಂದು ಮಹಾನಾಯಕ ಮಿಖಾಯಿಲ್ ಗೋರ್ಬಚೆವ್ ಅರಿತುಕೊಂಡು ತನ್ನ ದೇಶಕ್ಕೆ ಹೊಸ ದಾರಿ ತೋರಿದಾಗ. ಒಂದುವೇಳೆ ಶೀತಲಸಮರದಲ್ಲಿ ಸೋವಿಯತ್ ಯೂನಿಯನ್ ಮೇಲುಗೈ ಸಾಧಿಸಿದ್ದರೆ ಏನಾಗುತ್ತಿತ್ತು?

ಇದಕ್ಕೆ ಉತ್ತರಕ್ಕಾಗಿ ನಾವು ಸಮಾಜವಾದಿ ಆರ್ಥಿಕ ನೀತಿಗಳಿಂದಾಗಿ ಸೋವಿಯತ್ ಯೂನಿಯನ್ ಎದುರಿಸಿದ ಆರ್ಥಿಕ ದುಃಸ್ಥಿತಿಯನ್ನೊಮ್ಮೆ ನೋಡಬೇಕು ಮತ್ತು ಅದೇ ನೀತಿಯನ್ನು ನಾವೂ ಅನುಸರಿಸಿದ್ದರಿಂದ ದಿವಾಳಿಯ ಅಂಚಿಗೆ ಬಂದು 1991ರಲ್ಲಿ ಅಗತ್ಯವಸ್ತುಗಳ ಆಮದುವೆಚ್ಚ ನಿಭಾಯಿಸುವುದ್ಕಾಗಿ ಟನ್​ಗಟ್ಟಲೆ ಚಿನ್ನವನ್ನು ಬ್ಯಾಂಕ್ ಆಫ್ ಬ್ರಿಟನ್ ಮತ್ತು ಸ್ವಿಸ್ ಬ್ಯಾಂಕ್​ಗಳಲ್ಲಿ ಅಡವಿಟ್ಟು ನಾನೂರು ಮಿಲಿಯನ್ ಡಾಲರ್​ಗಳನ್ನು ಸಾಲವಾಗಿ ತರಬೇಕಾಯಿತು. ಇಂದು ಆರ್ಥಿಕ ದಿಗ್ಬಂಧನಗಳ ನಡುವೆಯೂ ರಷ್ಯಾ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿದ್ದು ಮತ್ತು ನಾವು ಏಳುನೂರು ಬಿಲಿಯನ್ ಡಾಲರ್​ಗಳ ಅಗಾಧ ವಿದೇಶಿ ವಿನಿಮಯವನ್ನು ಕೂಡಿಟ್ಟು ಕೊಂಡಿರುವುದು ಹಾಗೂ ಇತರ ದೇಶಗಳಿಗೇ ಸಾಲ ನೀಡುವಂಥ ಹಂತಕ್ಕೆ ತಲುಪಿರುವುದು ಆ ಅರ್ಥಹೀನ ಆರ್ಥಿಕ ನೀತಿಗಳನ್ನು ತೊರೆದ ನಂತರವೇ. ಕಳೆದ ಕಾಲು ಶತಮಾನದಲ್ಲಿ ಯೂರೋಪ್ ಮತ್ತು ರಷ್ಯಾಗಳ ನಡುವೆ ಏಕಪ್ರಕಾರವಾಗಿ ವೃದ್ಧಿಸಿದ ಆರ್ಥಿಕ ಕೊಡುಕೊಳ್ಳುವಿಕೆ ಹಾಗೂ ಪಶ್ಚಿಮದಿಂದ ನಮ್ಮ ಅರ್ಥವ್ಯವಸ್ಥೆಗೆ ಹರಿಯತೊಡಗಿದ ಬಂಡವಾಳವನ್ನೂ ನಾನು ಗುರುತಿಸಿದರೆ ಚಿತ್ರ ಪೂರ್ಣಗೊಳ್ಳುತ್ತದೆ.

ಪ್ರಸಕ್ತ ಜಗತ್ತಿನಲ್ಲಿ ಚೀನಾ ತನ್ನ ಸಾಲಸಂಕೋಲೆಯ ಬಲೆಯಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳನ್ನು ಸಿಕ್ಕಿಸಿಕೊಂಡು ನವವಸಾಹತುಶಾಹಿಗೆ ಇಳಿದಿದೆ. ಈ ಋಣಾತ್ಮಕ ಬೆಳವಣಿಗೆಯನ್ನು ತಡೆಗಟ್ಟಲು ಸಹಾಯಕವಾಗುತ್ತಿರುವುದು ಡೊನಾಲ್ಡ್ ಟ್ರಂಪ್ ಆರಂಭಿಸಿದ ಮತ್ತು ಜೋ ಬೈಡೆನ್ ಮುಂದುವರಿಸುತ್ತಿರುವ ಆರ್ಥಿಕ ಕ್ರಮಗಳು. ಇದು ಜಾಗತಿಕ ಇತಿಹಾಸವನ್ನು ನಿರ್ದೇಶಿಸುವಲ್ಲಿ ಅಮೆರಿಕ ಪ್ರದರ್ಶಿಸುವ ಧನಾತ್ಮಕ ನಡೆಗಳ ಸ್ಥೂಲ ಚಿತ್ರಣ. ಇದನ್ನು ಮತ್ತು ಇತರ ಅನೇಕ ಸಣ್ಣಪುಟ್ಟ ಪ್ರಕರಣಗಳನ್ನು ಬಿಡಿಬಿಡಿಯಾಗಿ ನೋಡಿದರೆ ಅಮೆರಿಕ ಒಂದು ದೊಡ್ಡ ಖಳನಾಯಕನಂತೆ ಕಾಣುವುದು ನಿಜ. ಆದರೆ ಎಲ್ಲವನ್ನೂ ಒಂದಕ್ಕೊಂದು ಜೋಡಿಸಿ ಸಮಗ್ರ ಚಿತ್ರಣ ಪಡೆದುಕೊಂಡರೆ ಇಂದು ನಾವು ಬದುಕುತ್ತಿರುವ ಜಗತ್ತು ಇಷ್ಟಾದರೂ ಸಹನೀಯವಾಗಿರುವುದರಲ್ಲಿ ಅಮೆರಿಕದ ಪಾತ್ರ ಹಿರಿದಾಗಿದೆ. ಅಮೆರಿಕ ಜಾಗತಿಕ ಇತಿಹಾಸವನ್ನು ಹೀಗೆ ನಿರ್ದೇಶಿಸುತ್ತಿರುವುದರಿಂದಲೇ ಅದರ ಅಧ್ಯಕ್ಷ ಜಗತ್ತಿನ ಅತಿ ಪ್ರಬಲ, ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಪರಿಗಣಿಸಲ್ಪಡುತ್ತಾರೆ.

ಆದರೆ ತಮ್ಮೀ ‘ಶಕ್ತಿ’ಯನ್ನು ಡೆಮೋಕ್ರಾಟಿಕ್ ಅಧ್ಯಕ್ಷರುಗಳು ಋಣಾತ್ಮಕವಾಗಿ ಬಳಸಿಕೊಳ್ಳುವ ಪರಿಯನ್ನು ಕೆಲವು ದಶಕಗಳಿಂದಲೂ ನೋಡುತ್ತಿದ್ದೇವೆ. ಇಂದು ‘ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ಯಾಗಿ ಆಯ್ಕೆಯಾಗುತ್ತಿರುವವರು ಡೊನಾಲ್ಡ್ ಟ್ರಂಪ್ ಅವರೇ ಅಥವಾ ಕಮಲಾ ಹ್ಯಾರಿಸ್ ಅವರೇ ಎನ್ನವುದು ಮುಖ್ಯವಾಗುವುದು ಈ ಕಾರಣದಿಂದಾಗಿ. ಇಂದು ತಮ್ಮದೇ ಇತಿಹಾಸ ನಿರ್ವಣದೊಂದಿಗೆ ಮುಂದಿನ ಜನವರಿ 20ರಂದು ಶ್ವೇತಭವನದ ಅಧಿಪತಿಯಾಗಲಿರುವ ‘ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಜಗತ್ತಿನ ಇತಿಹಾಸವನ್ನು ಹೇಗೆ ನಿರ್ದೇಶಿಸಬಹುದು ಎಂಬ ಲೆಕ್ಕಾಚಾರಕ್ಕೆ ಮುಂದಿನವಾರ ಇಳಿಯೋಣ.