ರಾಜಧಾನಿಯಲ್ಲಿ ನೆಲೆಸಿ ಸ್ವಂತ ಮನೆ ಹೊಂದಿರದ ಬಡ ಜನರಿಗೆ ಶಾಶ್ವತವಾಗಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಜಾರಿಗೆ ತರಲಾಗಿದೆ.
ಈ ಯೋಜನೆಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಬಡ ಜನರಿಗೆ ಸಾಕಷ್ಟು ಅನುಕೂಲಗಳಾಗಲಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ಕಾಣಬಹುದಾಗಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ರಾಜ್ಯ ಸರ್ಕಾರದ ಯೋಜನೆಗಳಾದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅನುದಾನ ಮೊತ್ತಗಳನ್ನು ಒಟ್ಟುಗೂಡಿಸಿ ಉಳಿಕೆ ಜಮೀನನ್ನು ಮಾರಾಟ ಮಾಡಿ, ಮಾರಾಟದಿಂದ ಬರುವ ಮೊತ್ತದಿಂದ ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆಯಡಿ ಸರ್ಕಾರ ಮನೆ ನಿರ್ವಿುಸಿ ಕೊಡುತ್ತದೆ.
ಹಲವು ಸೌಲಭ್ಯಗಳು
ಮಹಿಳೆಯರಿಗೆ ನೆರವಾಗಲು ಸರ್ಕಾರ ಬಹುಮಹಡಿ ಮನೆಯ ಪಕ್ಕದಲ್ಲಿ ಗಾರ್ವೆಂಟ್ಗಳನ್ನು ನಿರ್ವಿುಸಲು ಮುಂದಾಗಿದೆ. ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲಿ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯೂ ಒಂದು.
ಈ ಯೋಜನೆಗಳಡಿ ನಿರ್ವಿುಸುವ ಮನೆಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕೊಳವೆಬಾವಿ, ಪಂಪ್ ರೂಮ್ ಮಳೆ ನೀರು ಸಂಗ್ರಹ, ಎಸ್ಟಿಪಿ, ಜಿಎಲ್ಎಸ್ಆರ್, ಓಎಚ್ಟಿ, ಸಿಎ ಸೈಟ್ ಕಾಯ್ದಿರಿಸುವಿಕೆ, ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ಥೆ, ಭದ್ರತಾ ಸಿಬ್ಬಂದಿ ಕೊಠಡಿ ಹಾಗೂ ಸೌರ ವಿದ್ಯುತ್ ದೀಪಗಳ ಸೌಲಭ್ಯಗಳು ಇರಲಿವೆ. ಇದರ ಸುತ್ತ-ಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಇದರಿಂದ ಈ ಪ್ರದೇಶದ ಸುತ್ತ-ಮುತ್ತಲಿರುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗಲಿದೆ.
3 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರಬೇಕು
ಮನೆ ಪಡೆಯಲು ಇಚ್ಛಿಸುವವರು ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷ ನೆಲೆಸಿರಬೇಕು. ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಹೊಂದಿರಬೇಕು. ಆಧಾರ್ ಕಾರ್ಡ್ ಸೇರಿ ಕೆಲ ದಾಖಲೆಗಳನ್ನು ಹೊಂದಿರಬೇಕು. ಮುಖ್ಯವಾಗಿ ಗಾರ್ವೆಂಟ್ಸ್ ಕೆಲಸಗಾರರು, ಆಟೋ ಚಾಲಕರು, ಬೀಡಿ ಕಟ್ಟುವವರು, ಹಾಲು ಹಾಕುವವರು, ಪೇಪರ್ ಬಾಯ್, ತರಕಾರಿ ಮಾರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಗುತ್ತಿಗೆ ವಹಿಸಿದ ಪ್ರತಿ ಮನೆಯ ಘಟಕ ವೆಚ್ಚ ಮೂಲಭೂತ ಸೌಲಭ್ಯಗಳು ಸೇರಿ 10.60 ಲಕ್ಷ ರೂ. ಆಗಲಿದೆ. ಪಿಎಂಎವೈ ಯೋಜನೆಯಡಿ 1.50 ಲಕ್ಷ ರೂ., ಡಾ.ಬಿ.ಆರ್.ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಅನುದಾನ ಸಿಗಲಿದೆ. 7.90 ಲಕ್ಷ ರೂ.ಗಳನ್ನು ಫಲಾನುಭವಿಗಳು ಭರಿಸಬೇಕಿದೆ.
ಗುತ್ತಿಗೆದಾರರು ವಸತಿ ಸಂಕೀರ್ಣವನ್ನು 2 ವರ್ಷದವರೆಗೆ ಅವರ ವೆಚ್ಚದಲ್ಲಿ ಹಾಗೂ 3 ವರ್ಷಗಳ ವರೆಗೆ ಫಲಾನುಭವಿಗಳ ವೆಚ್ಚದಲ್ಲಿ ನಿರ್ವಹಿಸಲಿದ್ದಾರೆ. ಕಟ್ಟಡ ಭದ್ರತೆಯನ್ನು ಪರಿಶೀಲಿಸಲು ಐಐಎಸ್ಸಿ ಬೆಂಗಳೂರು, ಎನ್ಐಟಿ ಸುರತ್ಕಲ್, ಯುವಿಸಿಇ ಬೆಂಗಳೂರು, ಬಿಡಿಟಿ ದಾವಣಗೆರೆ, ವಿಟಿಯು ಬೆಳಗಾವಿಯನ್ನು ಮೂರನೇ ಸಂಸ್ಥೆಯಾಗಿ ನೇಮಿಸಲಾಗಿದೆ. ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಸದ್ಯದಲ್ಲೇ ಈ ಯೋಜನೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಕೇಜ್ 1,2,3,4 ಮತ್ತು 5ರ ಕಾಮಗಾರಿಗಳ ಗುತ್ತಿಗೆದಾರರಿಗೆ ಮುಂಗಡವಾಗಿ 135.88 ಕೋಟಿ ರೂ. ನೀಡಲಾಗಿದೆ. ಪಾರದರ್ಶಕವಾಗಿ ಆನ್ಲೈನ್ ಮುಖೇನ ಮೊದಲ ಹಂತದಲ್ಲಿ 49,615 ಫಲಾನುಭವಿಗಳು ನಿಗಮಕ್ಕೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಇಲ್ಲಿವರೆಗೆ 48,647 ಫಲಾನುಭವಿಗಳಿಗೆ ವಸತಿ ಘಟಕಗಳನ್ನು ಹಂಚಿಕೆ ಮಾಡಿ ಆಯ್ಕೆ ಪತ್ರಗಳನ್ನು ಆನ್ಲೈನ್ ಮುಖಾಂತರ ನೀಡಲಾಗಿದೆ.
| ಅವಿನಾಶ್ ಮೂಡಂಬಿಕಾನ