ಅಂಕಣ

ಸಮಾನತೆಗಾಗಿ ಶ್ರಮಿಸಿದ ಶ್ರೇಷ್ಠ ಮಾನವತಾವಾದಿ

Webdesk - Mallikarjun K R
 ಕುದ್ಮಲ್ ರಂಗರಾವ್ ಎಂಬ ನೈಜ ಮಾನವತಾವಾದಿ ಇಂದಿಗೆ ಸುಮಾರು 165 ವರ್ಷದ ಹಿಂದೆ (1859) ಜೂನ್ 29ರಂದು ಸಾರಸ್ವತ ಬ್ರಾಹ್ಮಣರೆಂಬ ಮಡಿವಂತ ಜಾತಿಯಲ್ಲಿ ಜನಿಸಿ ವಕೀಲರಾಗಿ ವೃತ್ತಿಜೀವನ ನಡೆಸುತ್ತ ಕೈತುಂಬ ದುಡಿಯುವ ವಯಸ್ಸಿನಲ್ಲಿ ಅಸ್ಪ ೃ್ಯರ ಬದುಕಿನ ಉದ್ಧಾರಕ್ಕಾಗಿ ಶ್ರಮಿಸಿದರು. ಪರಿಶಿಷ್ಟರು ಮತ್ತು ಕೊರಗರನ್ನು ಮಟ್ಟುವುದಿರಲಿ ಗಾಳಿ ಸೋಂಕಿಸಿಕೊಳ್ಳುವುದು ಅಪಮಾನ ಎಂಬ ದಿನಗಳಲ್ಲಿ ಕುದ್ಮಲ್, ಮನುಷ್ಯರೆಲ್ಲ ಒಂದೇ ಜಾತಿ ಎಂದು ವಾದ ನಡೆಸುತ್ತಲೇ ತನ್ನವರಿಂದಲೇ ಕಲ್ಲಿನಿಂದ ಪೆಟ್ಟು ತಿಂದಿದ್ದರು. ದಲಿತರಿಗಾಗಿ ಅವರೇ ಕಟ್ಟಿದ ಶಾಲೆಗೆ ಮಕ್ಕಳು ಬಾರದಂತೆ ತಡೆಯಲಾಯ್ತು. ಕುದ್ಮಲ್ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟರು ಎಂಬ ಕಾರಣಕ್ಕೆ ಅವರ ಕುಟುಂಬವನ್ನೇ ಬಹಿಷ್ಕರಿಸಲಾಯಿತು. ಈ ಎಲ್ಲ ನೋವು-ನುರಿ ಬೇಗುದಿಗಳನ್ನು ದಾಟಿಕೊಂಡು ದಲಿತರ ಪರ ಹೋರಾಟಕ್ಕೆ ತಿವಿಕ್ರಮನಂತೆ ಹೆಜ್ಜೆ ಇಟ್ಟಿದ್ದರು ಕುದ್ಮಲ್ ರಂಗರಾವ್.

ದೇಶಕ್ಕೆ ಸ್ವಾತಂತ್ರ್ಯ ಸಿಗುವ 50 ವರ್ಷಗಳ ಮೊದಲು ಮಂಗಳೂರಿನ ಬೆಂದೂರಿನ ಬಾಬು ಎಂಬ ಪರಿಶಿಷ್ಟ ಪಂಗಡದ ಹುಡುಗನಿಗೆ ನ್ಯಾಯಾಲಯದಲ್ಲಿ ಅಟೆಂಡರ್ ಕೆಲಸ ಕೊಡಿಸಿದ್ದಕ್ಕಾಗಿ ಅಂದಿನ ನ್ಯಾಯವಾದಿಗಳೆಲ್ಲ ನ್ಯಾಯಾಲಯವನ್ನೇ ಬಹಿಷ್ಕರಿಸಿದ್ದರು. ದುರಂತವೆಂದರೆ, ರಂಗರಾಯರ ಮಾತು ಕೇಳಿ ಮಾನವೀಯ ನೆಲೆಯಲ್ಲಿ ಬೆಂದೂರಿನ ಬಾಬುಗೆ ಅಟೆಂಡರ್ ಕೆಲಸ ಕೊಟ್ಟ ಅಂದಿನ ನ್ಯಾಯಮೂರ್ತಿಗಳಿಗೇ ವರ್ಗಾವಣೆಯಾಗಿತ್ತು. ನ್ಯಾಯಮೂರ್ತಿಯವರು ವಕೀಲ ಕುದ್ಮಲ್ ರಂಗರಾಯರನ್ನು ಕರೆದು, ‘ನಿನ್ನ ಕಾರಣಕ್ಕೆ ಬ್ರಿಟಿಷ್ ಸರ್ಕಾರ ನನ್ನನ್ನು ವರ್ಗಾವಣೆ ಮಾಡುತ್ತಿದೆ. ದಲಿತ ಹುಡುಗ ಬೆಂದೂರು ಬಾಬು ಇಲ್ಲಿ ಕೆಲಸ ಮಾಡುವುದು ಕಷ್ಟ. ಆ ಕಾರಣಕ್ಕೆ ಯಾವುದಾದರೂ ಶಾಲೆಯಲ್ಲಿ ಮೇಷ್ಟ್ರ ಕೆಲಸ ಕೊಡಿಸು’ ಎಂದಿದ್ದರಂತೆ. ಅಂತಹ ಕಾಲದಲ್ಲಿ ಕುದ್ಮಲ್ ಮನುಕುಲದ ಸಮಾನತೆಗಾಗಿ ಬಡಿದಾಡಿದರು.

ಕಾಸರಗೋಡಿನ ಕುದ್ಮಲ್ ಎಂಬ ನೆಲದಲ್ಲಿ ಮೇಲೆದ್ದು ಬಂದ ರಂಗರಾಯರು, ಅಸ್ಪ ೃ್ಯತೆಗೊಳಗಾದ ಪಂಚಮರಲ್ಲೂ ಮನುಷ್ಯನನ್ನು ಹುಡುಕಿ ಗೌರವಿಸಿದ್ದರು. ಅಸ್ಪ ೃ್ಯರಿಗೆ ಶಿಕ್ಷಣ, ಅಧಿಕಾರದ ಅವಕಾಶ, ಬದುಕಲು ತುಂಡುಭೂಮಿ ಹಂಚಿಕೆಗಾಗಿ ವಂಚಿತರೆಡೆ ನಡೆದೇ ಬಿಟ್ಟಿದ್ದರು. ರಂಗರಾಯರ ಅಂದಿನ ವಿಚಾರಗಳು ಇಂದು ಮಂಗಳೂರಿನ ಅತ್ತಾವರದ ನಂದಿಗುಡ್ಡೆಯ ಬಳಿ ಬ್ರಹ್ಮ ಸಮಾಜ ಮಿಷನ್ ಆವರಣದಲ್ಲಿ ಅವರ ಸಮಾಧಿಯಲ್ಲಿ ಅಕ್ಷರದ ಮೂಲಕ ಪ್ರಕಟವಾಗಿವೆ.

ಕುದ್ಮಲ್ ತಾವೇ ದಲಿತ ಮಕ್ಕಳಿಗಾಗಿ ತೆರೆದ ಶಾಲೆ ಎದುರು ನಿಂತು ಹೇಳಿದರಂತೆ, ‘ದಲಿತ ಮಗುವೊಂದು ಈ ಶಾಲೆಯಲ್ಲಿ ಕಲಿತು ವಿದ್ಯಾವಂತನಾಗಿ ಸರ್ಕಾರಿ ಉದ್ಯೋಗ ಹೊಂದಿ ಡಿ.ಸಿ.ಯಾಗಿ ನನ್ನೂರಲ್ಲಿ ಹಾದು ಹೋದರೆ ಅವನ ಕಾರಿನ ಧೂಳು ನನ್ನ ತಲೆಯ ಮೇಲೆ ಬಿದ್ದರೆ ನನ್ನ ಬದುಕು ಸಾರ್ಥಕವಾಯ್ತು’. ಸಮಾನತೆಗಾಗಿ ದುಡಿದ ರಂಗರಾಯರ ಶ್ರಮ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮಟ್ಟಿಗೆ ಬಹುತೇಕ ಯಶಸ್ವಿಯಾಗಿದೆ.

ಕಂಕನಾಡಿ, ಮುಲ್ಕಿ, ಬೋಳೂರು, ದಡ್ಡಲಕಾಡು, ಅತ್ತಾವರ, ಕಾಫಿಕಾಡ್, ಪಾಂಡೇಶ್ವರ, ಉಳ್ಳಾಲ, ಉಡುಪಿ ಜಿಲ್ಲೆಯ ಬನ್ನಂಜೆಯೂ ಸೇರಿ ಕುದ್ಮಲರು ಅಂದು ಹುಟ್ಟಿ ಹಾಕಿದ ಶಿಕ್ಷಣ ಸಂಸ್ಥೆಗಳಿಂದ ನೂರಾರು ಮಂದಿ ದಲಿತ ಮಕ್ಕಳು, ವಕೀಲ, ವೈದ್ಯ, ಅಧ್ಯಾಪಕರಾಗಿದ್ದು ಮಾತ್ರವಲ್ಲ ಕೆಲವರಾದರೂ ಐ.ಎ.ಎಸ್, ಕೆ.ಎ.ಎಸ್ ಪಾಸ್ ಆಗಿದ್ದು, ಗೋಚರಕ್ಕೆ ಬರುತ್ತದೆ. ರಾಜ್ಯ ಮತ್ತು ದೇಶದ ವಿವಿಧ ಕಡೆ ಇನ್ನೂ ಅಸ್ಪ ೃ್ಯತೆ ಜೀವಂತವಾಗಿದ್ದರೂ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಸ್ಪ ೃ್ಯತೆಯ ಲವಲೇಷವೂ ತೋರುತ್ತಿಲ್ಲ. ಅದಕ್ಕೆ ಬುನಾದಿ ಹಾಕಿದವರಲ್ಲಿ ಕುದ್ಮಲ್ ರಂಗರಾಯರು ಮೊದಲಿಗರು. ರಂಗರಾಯರದ್ದು ಎಂತಹ ಧೀಮಂತ ವ್ಯಕ್ತಿತ್ವವೆಂದರೆ ಇಡೀ ಬದುಕು ಸಮಾಜ ಸುಧಾರಣೆಗಾಗಿ ಸಮರ್ಪಿಸಿಕೊಂಡರೂ ಅದರ ಹಿಂದೆ ಎಳ್ಳಿನಷ್ಟು ಸ್ವಾರ್ಥವಿರಲಿಲ್ಲ. ಸಮಾಜದ ಸರ್ವರೂ ಸಮಾನವಾಗಿ, ಗೌರವದಿಂದ ಬದುಕಬೇಕು ಎಂಬುದೇ ಅವರ ಆಶಯವಾಗಿತ್ತು. ದಲಿತರ ಉದ್ಧಾರಕ್ಕೆ ರಂಗರಾಯರದ್ದು ಸಂಪೂರ್ಣ ನಿಸ್ವಾರ್ಥ ಕೊಡುಗೆ.

ಹಲವರ ನೆರವಿನಿಂದ ಉಡುಪಿಯ ಕುಂಜಿಬೆಟ್ಟುವಿನ ಸಮೀಪ ಪರಿಶಿಷ್ಟರ ಶಾಲೆ ಮತ್ತು ವಸತಿಗಾಗಿ ಅಂದು ರಂಗರಾಯರು ಕೊಟ್ಟ ಭೂಮಿ (11 ಎಕರೆ 53 ಸೆಂಟ್ಸ್) ಇಂದು ನೂರು ಕೋಟಿ ಸನಿಹ ಮೌಲ್ಯವಿರಬಹುದು ಎನ್ನುತ್ತಾರೆ ಆ ಪ್ರದೇಶದ ಹಿರಿಯರು. ಮಂಗಳೂರಿನ ಬಳಿ ಕೋರ್ಟ್​ಗುಡ್ಡೆಯಲ್ಲಿ ಕೊರಗ ಜನಾಂಗದ ಪರವಾಗಿ ಕಟ್ಟಿದ ಮನೆಗಳು, ಆದಿದ್ರಾವಿಡ ಸಹಕಾರಿ ಸಂಘದ ಸ್ಥಾಪನೆ ಇವೆಲ್ಲ ಅಂದಿನ ದಿನಗಳಲ್ಲಿ ಊಹಿಸಲಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಬಾಳು, ಸಮಪಾಲಿನ ಸಾಮಾಜಿಕ ನ್ಯಾಯಕ್ಕೆ ಒತ್ತುಕೊಡುವ ಸಂವಿಧಾನ ಸಮರ್ಪಣೆ ಮಾಡುವ ಸರಿಸುಮಾರು 50 ವರ್ಷದ ಮೊದಲೇ ಕುದ್ಮಲ್ ಅವಕಾಶ ವಂಚಿತರ ಪರವಾಗಿ ದನಿ ಎತ್ತಿದರು.

ಸ್ವಂತಕ್ಕೊಂದು ತುಂಡುಭೂಮಿಯ ಹಂಬಲದಿಂದ ಕಾರಂತರ ಚೋಮ ಮತಾಂತರದ ಬಗ್ಗೆ ಯೋಚಿಸುತ್ತಿರುವಾಗಲೇ ನಂಬಿದ ದೈವದ ನೆನಪಾಗಿ ಚಡಪಡಿಸುತ್ತಿರುವ ನೂರಾರು ಚೋಮರಿಗೆ ಬದುಕು ಕಟ್ಟಿಕೊಟ್ಟ ಕಾರಣಕ್ಕೆ ಕುದ್ಮಲ್ ರಂಗರಾಯರಿಗೆ ಅಂದಿನ ಸಮಾಜ ಕಲ್ಲಲ್ಲಿ ಹೊಡೆದಿತ್ತು. ಕುದ್ಮಲ್ ಅಸ್ಪ ೃ್ಯರ ಪರ ಹೋರಾಡುವಾಗ ಗಾಂಧಿ, ಅಂಬೇಡ್ಕರ್ ಬೆಂಬಲವಿರಲಿ ದೇಶದಲ್ಲಿ ಸಂವಿಧಾನದ ರಚನೆಯೇ ಆಗಿರಲಿಲ್ಲ ಎಂದರೆ ಆ ದಿನಗಳಲ್ಲಿ ವರ್ಗಸಂಘರ್ಷದ ಪರಕಾಷ್ಠೆ ಊಹಿಸಲಸಾಧ್ಯ. ತಮ್ಮ 28ನೇ ವಯಸ್ಸಿನಲ್ಲಿ ಅಂದರೆ 1887ರಲ್ಲಿ ಮಂಗಳೂರಿನ ಚಿಲಿಂಬಿಯಲ್ಲಿ ದಲಿತರಿಗಾಗಿ ಮೊದಲ ಶಾಲೆ ಆರಂಭಿಸಿ ಸ್ವಜಾತಿಯವರಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾದರು. ದಲಿತರು ಶಿಕ್ಷಣ ಹೊಂದುವುದನ್ನು ವಿರೋಧಿಸಿದ ಗುಂಪು ಶಾಲೆಯ ಅಂಗಳಕ್ಕೆ ಮಲಮೂತ್ರ ತಂದು ಸುರಿಯಿತು. ಆದರೆ ಕುದ್ಮಲ್ ಹಿಂದೆ ಸರಿಯಲಿಲ್ಲ. ಬ್ರಹ್ಮಾವರ, ಚಿಟ್ಪಾಡಿ, ತೋನ್ಸೆ ಉದ್ಯಾವರ ಕುಂದಾಪುರದಂತಹ ಊರುಗಳಲ್ಲಿ 20 ಶಾಲೆಗಳನ್ನು ತೆರೆದರು. ಊರೂರಿಗೆ ಹೋಗಲು ಸೇತುವೆ ಇಲ್ಲದ ಕಾರಣ ದೋಣಿಗಳ ಮೂಲಕ ಸಂಚರಿಸಿ ಅಸ ್ಪ ೃ್ಯರಿಗೆ ತಾವೇ ಸೇತುವೆಯಾದರು. ಮಕ್ಕಳ ಹೆತ್ತವರನ್ನು ಕರೆದು, ದಲಿತ ಮಕ್ಕಳನ್ನು ಕೂಲಿಗೆ ಬದಲಾಗಿ ಶಾಲೆಗೆ ಕಳುಹಿಸಿದರೆ ಇನಾಮು ಕೊಡುವುದಾಗಿ ಹೇಳಿದರು. ಮಾತ್ರವಲ್ಲ, ಹಾಗೆ ಮಾಡಿದರು. ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕಾಗಿ ಪ್ರತಿ ಮನೆಗೆ ಭೇಟಿ ಕೊಟ್ಟು ಮಕ್ಕಳಿಗಾಗಿ ಮುಷ್ಠಿ ಅಕ್ಕಿ ಕೊಡಿರೆಂದು ಪ್ರಾರ್ಥಿಸಿ ಸ್ವತಂತ್ರ ಭಾರತ ಯೋಚನೆ ಮಾಡುವ ಮೊದಲೇ ಬಡವರ ಮಕ್ಕಳಿಗೆ ಬಿಸಿಯೂಟ ಜಾರಿಗೆ ತಂದವರು ಕುದ್ಮಲ್ ರಂಗರಾಯರು. ವಕೀಲನಾಗಿ ಕೆಲಸ ಮಾಡುವ ಸಂದರ್ಭ ಒಂದು ಕೇಸ್ ಗೆದ್ದು ಕೊಟ್ಟ ಕಾರಣಕ್ಕೆ ಕ್ರೖೆಸ್ತ ಮಹಿಳೆಯೊಬ್ಬಳು ಶುಲ್ಕ ಕೊಡಲು ಮುಂದಾದಾಗ ಹಣದ ಬದಲಾಗಿ ರಂಗರಾಯರು ದೇರೇಬೈಲು ಗ್ರಾಮದಲ್ಲಿ ಭೂಮಿ ಪಡೆದು 25 ದಲಿತ ಕುಟುಂಬಗಳಿಗೆ ತಲಾ ಅರ್ಧ ಎಕರೆಯಂತೆ ಹಂಚಿದ ಪರಿಣಾಮ ದೇರೇಬೈಲಿನ ಈ ಮನೆಗಳಲ್ಲಿ ರಂಗರಾಯರ ಭಾವಚಿತ್ರ ಇಂದೂ ಗೋಚರಿಸುತ್ತವೆ. ಮಾತ್ರವಲ್ಲ, ಕಂಡವರ ಕಣ್ಣಾಲೆಗಳು ತುಂಬಿಕೊಳ್ಳುತ್ತವೆ.

ಸಾಮಾಜಿಕ ನ್ಯಾಯವಂಚಿತರ ಪರವಾಗಿ ಯಾವುದೇ ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರ ಮಾಡಲಾಗದ ಕೆಲಸವನ್ನು ಕುದ್ಮಲ್ ಮಾಡಿದ್ದರು. ಅದರ ಪರಿಣಾಮವೆಂದರೆ, ಶೋಷಿತರಿಗೆ ಮಾತ್ರವಲ್ಲ ಸ್ವತಃ ಕುದ್ಮಲ್​ರಿಗೆ ಕ್ಷೌರ ಮಾಡಲು ನಿರಾಕರಿಸಲಾಯ್ತು. ಬಟ್ಟೆ ಮಡಿ ಮಾಡುವವರು ಕುದ್ಮಲ್ ಬಟ್ಟೆ ಒಗೆಯಲು ನಿರಾಕರಿಸಿದರು. ಒಳ ಮನಸ್ಸಲ್ಲಿ ಅನುಕಂಪವಿದ್ದರೂ ಬಲಾಢ್ಯರಿಗೆ ಹೆದರಿ ಕುದ್ಮಲ್ ಕುಟುಂಬಕ್ಕೆ ಮದುವೆ, ಮುಂಜಿಗಳನ್ನು ಕರೆಯದೇ ಇರುವ ಪರಿಸ್ಥಿತಿ ನಿರ್ವಣವಾಯಿತು. ಆದರೆ ಸ್ವಾರ್ಥರಹಿತ ವ್ಯಕ್ತಿಯೊಬ್ಬ ಬಡವರಿಗೆ ಅದರಲ್ಲೂ ನಿರ್ಲಕ್ಷ್ಯಕ್ಕೊಳಗಾದ ಜನಾಂಗಕ್ಕೆ ಮಾಡಿದ ಪುಣ್ಯ ಫಲಿಸದೆ ಇರಲಿಲ್ಲ. ಬಹಿಷ್ಕರಿಸಿದ ವ್ಯಕ್ತಿಗಳೇ ನಿಧಾನವಾಗಿ ಕುದ್ಮಲ್ ರಂಗರಾವ್ ಬಳಿ ಬಂದರಾದರೂ ಮಾಗಿದ ಮನಸ್ಸಿನ ಸಾಧಕ ರಂಗರಾವ್ ಮುಗುಳ್ನಕ್ಕು ಸುತ್ತಲ ಸಮಾಜದ ಜೊತೆ ಕೈ ಜೋಡಿಸಿದರು. ಆದರೆ ತನ್ನ ಮೂಲನಂಬಿಕೆಯಲ್ಲಿ ಒಂಚೂರು ರಾಜಿ ಮಾಡಿಕೊಳ್ಳಲಿಲ್ಲ.

ಉಪೇಕ್ಷಿತ ಬಂಧುಗಳ ಏಳಿಗೆಗಾಗಿ ಇಡೀ ಬದುಕನ್ನೇ ತ್ಯಾಗ ಮಾಡಿದ ರಂಗರಾಯರ ವಯಸ್ಸು 65 ಸಮೀಪಿಸುತ್ತಲೇ ಮನಸ್ಸು ಸಂನ್ಯಾಸದತ್ತ ಹೊರಳಿತು. ಸಮಾಜಸೇವೆಗಾಗಿ ಬ್ರಿಟಿಷ್ ಸರ್ಕಾರ ಕೊಟ್ಟಿದ್ದ ‘ರಾವ್ ಬಹದ್ದೂರ್’ ಪ್ರಶಸ್ತಿಯನ್ನು ಸಂನ್ಯಾಸ ಸ್ವೀಕರಿಸುವ ಹೋಮಕುಂಡಕ್ಕೆ ಸಮರ್ಪಿಸಿದರು. 1928ರ ಜನವರಿ 30 ರಂದು ಕುದ್ಮಲ್ ರಂಗರಾವ್ ಕೊನೆಯುಸಿರೆಳೆದರು. ಸ್ವಚ್ಛತೆ ಮಾಡುವ ತೋಟಿ ಸಮುದಾಯ ತಮ್ಮ ಅಂತ್ಯಕ್ರಿಯೆ ಮಾಡಬೇಕೆಂದು ಉಯಿಲಿನಲ್ಲಿ ಬರೆದಿಟ್ಟಿದ್ದರು. ಕುದ್ಮಲ್ ರಂಗರಾಯರೆಂಬ ಆದರ್ಶ ಪುರುಷನೊಬ್ಬ ಹುಟ್ಟುಹಾಕಿದ ಸಾಮಾಜಿಕ ನ್ಯಾಯ ಒಂದೂವರೆ ಶತಮಾನ ದಾಟಿದರೂ ಪರಿಪೂರ್ಣವಾಗಿಲ್ಲ. ನಿಡುಗಾಲದಲ್ಲಿ ಮತ್ತೊಬ್ಬ ಕುದ್ಮಲ್ ಕಾಣುತ್ತಿಲ್ಲ. ಏನೇ ಆದರೂ ಕುದ್ಮಲ್ ರಂಗರಾಯರ ಆತ್ಮಕ್ಕೆ ಶತಶತ ನಮನಗಳು.

(ಲೇಖಕರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರು)