ಇಂದಿನಿಂದ (ಸೆ.22) ರಾಷ್ಟ್ರಾದ್ಯಂತ ನವರಾತ್ರಿಯ ಸಂಭ್ರಮ. ಶಕ್ತಿ ಪೂಜೆಗೆ ನಮ್ಮಲ್ಲಿ ದೀರ್ಘ ಇತಿಹಾಸ ಮತ್ತು ಪರಂಪರೆಯಿದೆ. ಶಕ್ತಿ ಆರಾಧನೆಯ ಮೂಲಕ ಕೆಡುಕಿನ ವಿರುದ್ಧ ಗೆಲುವು ಸಾಧಿಸಿದ, ಒಳಿತು ಪ್ರತಿಷ್ಠಾಪಿಸಿದ ಸಾಕಷ್ಟು ನಿದರ್ಶನಗಳಿವೆ. ದೇಶವನ್ನೇ ತಾಯಿಯ ಸ್ವರೂಪದಲ್ಲಿ ಕಂಡು (ಭಾರತ ಮಾತೆ) ಗೌರವಿಸಿ, ಆರಾಧಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಆದ್ದರಿಂದಲೇ ಭಾರತ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಜಗದ ಗಮನವನ್ನು ಸೆಳೆದಿದೆ.
ನವರಾತ್ರಿ ಎಂದರೆ ನವೋಲ್ಲಾಸ ತರುವ ಮತ್ತು ಆಶಾವಾದವನ್ನು ಜಾಗೃತಗೊಳಿಸುವ ಪರ್ವ. ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿದ ಪ್ರತೀಕವಾಗಿ, ದೇವಿಯು ಮಹಿಷಾಸುರನನ್ನು ಮರ್ದಿಸಿದ ನೆನಪಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ವಿಜಯದ ಹಂಬಲ ವ್ಯಕ್ತಿಗತ ಬದುಕಿಗೂ, ರಾಷ್ಟ್ರಪಥಕ್ಕೂ ಅವಶ್ಯ. ಆದರೆ, ಈ ದಾರಿಯಲ್ಲಿನ ಪಯಣ ಧರ್ಮದಿಂದ ಕೂಡಿರಬೇಕು, ನೈತಿಕ ಮೌಲ್ಯಗಳಿಂದ ಆವರಿಸಿರಬೇಕು ಎಂದು ಮತ್ತೆ ಮತ್ತೆ ನೆನಪಿಸಲು ನವರಾತ್ರಿಯ ಆಚರಣೆ. ದಸರಾ ಪರ್ವ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತಾಗಿದೆ. ಈ ವರ್ಷದ ಆರಂಭದಿಂದಲೇ ಪ್ರಾಕೃತಿಕ ವಿಕೋಪ, ಇನ್ನಿತರ ಅವಘಡಗಳಿಂದ ಒಂದು ಬಗೆಯ ನೈರಾಶ್ಯದ ವಾತಾವರಣವಿದ್ದು, ದಸರಾ ಆ ಎಲ್ಲ ಕೆಡಕುಗಳ ವಿರುದ್ಧ ವಿಜಯ ದೊರಕಿಸಲಿ ಎಂಬ ಆಶಯದಿಂದ ಪೂಜೆ, ಆರಾಧನೆ, ಇನ್ನಿತರ ಆಚರಣೆಗಳು ನಡೆಯುತ್ತಿರುವುದು ಅರ್ಥಪೂರ್ಣ. ಮಾನವೀಯ ಸಂವೇದನೆಯ ಬಲದಿಂದಲೇ ಕೆಡುಕುಗಳ ವಿರುದ್ಧ ಜಯ ಸಾಧಿಸಬಹುದಾಗಿದ್ದು, ಶಕ್ತಿಯ ಆರಾಧನೆ ಈ ನಿಟ್ಟಿನಲ್ಲಿ ಅವಶ್ಯ ಎಂಬುದಕ್ಕೆ ನಮ್ಮ ಪರಂಪರೆ ಸಾಕ್ಷಿಯಾಗಿದೆ.
ಇದೇ ಸಂದರ್ಭದಲ್ಲಿ ಜನಸಾಮಾನ್ಯರಿಗೆ ನಿರಾಳ ಒದಗಿಸುವ ಕೆಲವು ಬೆಳವಣಿಗೆಗಳು ಸಂಭವಿಸಿವೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಷ್ಕರಣೆ ಸೋಮವಾರದಿಂದ ಜಾರಿಗೆ ಬರಲಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊರೆಯನ್ನು ಇದು ತಗ್ಗಿಸಲಿದೆ. ಸ್ನಾನದ ಸಾಬೂನಿನಿಂದ ಹಿಡಿದು ವಾಹನಗಳವರೆಗೆ ಹಲವು ಜೀವನಾವಶ್ಯಕ ವಸ್ತುಗಳ ಬೆಲೆ ತಗ್ಗಲಿದ್ದು, ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಒಟ್ಟಾರೆ ವಿಜಯದ ದೃಢ ಸಂಕಲ್ಪದಿಂದ ಮುಂದೆ ಸಾಗಲು ಈ ಪರ್ವ ಪ್ರೇರಣೆ ನೀಡಲಿ.