(ಲೇಖಕರು ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು)
ಭಾರತದಾದ್ಯಂತ ಆಚರಿಸಲ್ಪಡುವ ಮತ್ತು ಪ್ರಪಂಚದಾದ್ಯಂತ ಭಾರತೀಯರಿಂದ ಆಚರಿಸಲ್ಪಡುವ ವೈಭವದ ಹಬ್ಬ ಎಂದರೆ ಅದು ದೀಪಾವಳಿ. ದಕ್ಷಿಣ ಭಾರತೀಯರ ಆಶ್ವಯುಜ ಮಾಸದ ತ್ರಯೋದಶೀ, ಚತುರ್ದಶೀ, ಅಮಾವಾಸ್ಯೆ, ಕಾರ್ತಿಕ ಮಾಸದ ಪ್ರಥಮಾ, ದ್ವಿತೀಯಾ ಹೀಗೆ ಒಟ್ಟು ಐದು ದಿನಗಳ ಕಾಲ ದೀಪಗಳನ್ನು ಹಚ್ಚುವುದರ ಮೂಲಕ ನಡೆಯುವ ಹಬ್ಬವೇ ದೀಪಾವಳಿ. ಇದು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಎಂಬ ಪ್ರಾಂತ್ಯಗಳ ಭೇದವಿಲ್ಲದೆ ಭಾರತೀಯರೆಲ್ಲರೂ ಸಂಭ್ರಮಪಡುವ ಹಬ್ಬ. ಸನಾತನ ಹಿಂದು ಧರ್ವಿುಯರೂ, ಬೌದ್ಧರೂ, ಜೈನರೂ ಈ ಹಬ್ಬವನ್ನು ಸಂತಸ ಮತ್ತು ಭಕ್ತಿಭಾವಗಳಿಂದ ಆಚರಿಸುತ್ತಾರೆ. ಸಿಖ್ಖರೂ ಇದನ್ನು ಬಂದೀ ಚೋಡ್ ದಿವಸ್ (ಎಂದರೆ ಬಿಡುಗಡೆಯ ದಿನ) ಎಂಬರ್ಥದಲ್ಲಿ ಆಚರಿಸುತ್ತಾರೆ. ಹೀಗೆ ಭಾರತದ ಎಲ್ಲ ಸನಾತನ ಧರ್ಮಗಳೂ ವೈಭವದಿಂದ ಮತ್ತು ದೀಪ, ಬೆಳಕು, ಬಾಣ, ಬಿರುಸುಗಳೊಂದಿಗೆ ಆಚರಿಸುವ ಮಹಾ ಪರ್ವ ದಿನ ದೀಪಾವಳಿ.
ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಬಹಳಷ್ಟು ದೇಶಗಳಲ್ಲಿ ಇರುವ ಭಾರತೀಯರು ಇದನ್ನು ಪ್ರಮುಖ ಹಬ್ಬವಾಗಿ ಸಂತಸದಿಂದ ಆಚರಿಸುವುದರಿಂದ ಅಲ್ಲಿನ ಪ್ರಭುತ್ವಗಳೇ ಹಬ್ಬವನ್ನು ಆಚರಿಸಲು ಭಾರತೀಯರನ್ನು ಕರೆಸುತ್ತವೆ. ಉದಾಹರಣೆಗೆ ಅಮೆರಿಕದ ವೈಟ್ಹೌಸ್ನಲ್ಲಿ ದೀಪಗಳನ್ನು ಹಚ್ಚಿಸಿ ದೀಪಾವಳಿ ಸಂದೇಶಗಳನ್ನು ಓದಲಾಗುತ್ತದೆ. ಅಷ್ಟರ ಮಟ್ಟಿಗೆ ದೀಪಾವಳಿ ಜಗತ್ತಿನ ಮೇಲೆ ಪ್ರಭಾವ ಬೀರಿದೆ.
ಹಬ್ಬದ ಪ್ರಮುಖ ದಿನಗಳು ಮತ್ತು ಆಚರಣೆ: ದೀಪಾವಳಿ ಹಬ್ಬವನ್ನು ಕೇವಲ ಒಂದು ದಿನ ಆಚರಿಸುವವರೂ ಇದ್ದಾರೆ. ಕೆಲವರು ಮೂರು ದಿನ ಆಚರಿಸುತ್ತಾರೆ. ಆದರೆ ಇದು ಧರ್ಮಶಾಸ್ತ್ರಗಳ, ಪರಂಪರೆಗಳ, ಇತಿಹಾಸದ ಪ್ರಕಾರ ಐದು ದಿನಗಳ ಹಬ್ಬವಾಗಿದೆ.
ಮೊದಲ ದಿನ ನೀರು ತುಂಬುವ ಹಬ್ಬ: ಇದನ್ನು ನರಕ ಚತುರ್ದಶಿಯ ಹಿಂದಿನ ರಾತ್ರಿ ಆಚರಿಸಬೇಕು. ಅಂದು ಮಾರನೆಯ ದಿನ ಪ್ರಾತಃಕಾಲದಲ್ಲಿಯೇ ಸೂರ್ಯೋದಯಕ್ಕಿಂತ ಮುಂಚೆ ಅಭ್ಯಂಜನ ಸ್ನಾನ ಮಾಡುವುದಕ್ಕಾಗಿ ನೀರನ್ನು ತುಂಬಿ ಅದಕ್ಕೆ ರಂಗವಲ್ಲಿ ಇತ್ಯಾದಿಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಈ ಪದ್ಧತಿ ಈಗಲೂ ಹಳ್ಳಿಗಳಲ್ಲಿದೆ. ನಗರಗಳಲ್ಲಿ ಹಂಡೆಗಳು, ನೀರಿನ ಒಲೆಗಳು ಇಲ್ಲ. ಈ ದಿನ ಅಪಮೃತ್ಯುವಿನ ನಿವಾರಣೆಗಾಗಿ ಯಮದೀಪ ದಾನವನ್ನು ಮಾಡಬೇಕು. ಅಂದರೆ ಒಂದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ದೀಪವನ್ನು ಮನೆಯ ಹೊರಗಡೆ ಹಚ್ಚಿ ಇಡಬೇಕು.
ಕಾರ್ತಿಕಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ |
ಯಮದೀಪಂ ಬಹಿರ್ದದ್ಯಾತ್ ಅಪಮೃತ್ಯುರ್ವಿನ್ಯಶ್ಯತಿ ||
ಎಂದು ಸ್ಕಂದ ಪುರಾಣ ಹೇಳುತ್ತದೆ. ಈ ದೀಪವನ್ನು ಹಚ್ಚಿ ಈ ಕೆಳಕಂಡಂತೆ ಪ್ರಾರ್ಥಿಸಬೇಕು.
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ ||
ಇದು ಯಮನಲ್ಲಿ ಪ್ರಾರ್ಥನೆ
ಎರಡನೇ ದಿನ ನರಕ ಚತುರ್ದಶೀ: ಅಂದು ಬೆಳಗ್ಗೆಯೇ ಸೂರ್ಯೋದಯಕ್ಕೆ ಮುಂಚೆ ಮನೆಯ ಎಲ್ಲರೂ ಅಭ್ಯಂಗ ಸ್ನಾನವನ್ನು (ಎಣ್ಣೆ ಮಜ್ಜನ) ಮಾಡಬೇಕು. ಸಂನ್ಯಾಸಿಗಳಿಗೆ ಎಣ್ಣೆ ಮಜ್ಜನ ನಿಷಿದ್ಧವಾಗಿದ್ದರೂ ಈ ದಿನ ಸಂನ್ಯಾಸಿಗಳೂ ಅಭ್ಯಂಗ ಸ್ನಾನವನ್ನು ಮಾಡಬೇಕು. ಇದರಿಂದ ನರಕಾಂತಕನಾದ ನಾರಾಯಣನಿಗೆ ಸಂತಸವಾಗಿ ಭಕ್ತರನ್ನು ಹರಸುತ್ತಾನೆ. ನರಕಚತುರ್ದಶಿಯಂದು ಎಣ್ಣೆಯಲ್ಲಿ ಲಕ್ಷ್ಮೀ ಸಾನ್ನಿಧ್ಯ ಮತ್ತು ನೀರಿನಲ್ಲಿ ಗಂಗೆಯ ಸಾನ್ನಿಧ್ಯ ಉಂಟಾಗುವುದರಿಂದ ಅಂದು ಅಭ್ಯಂಗ ಸ್ನಾನ ಮಾಡಿದರೆ ಸಮಸ್ತ ಪಾಪ ನಿವಾರಣೆಯಾಗಿ ನರಕ ಉಂಟಾಗುವುದಿಲ್ಲ ಮತ್ತು ಅಲಕ್ಷ್ಮೀ ಬರುವುದಿಲ್ಲ ಎಂದು ಹೇಳಲಾಗಿದೆ. ಸ್ನಾನವಾದ ನಂತರ ದೇವರಿಗೆ ನಮಸ್ಕರಿಸಿ ಹೊಸಬಟ್ಟೆಗಳನ್ನು ಧರಿಸಿ ಸಿಹಿಯನ್ನು ತಿನ್ನಬೇಕು. ಹಬ್ಬದ ಅಡಿಗೆಯನ್ನು ಸಂತಸದಿಂದ ಮಾಡಿ ಹಂಚಿ ತಿನ್ನಬೇಕು. ಸಂಜೆ ವೇಳೆಗೆ, ನರಕ ಪರಿಹಾರವಾಗಲಿ ಎಂದು ದೇವಾಲಯಗಳು, ಮಠ, ಬೃಂದಾವನಗಳು, ಮನೆಯ ಎಲ್ಲ ಭಾಗಗಳಲ್ಲಿ, ಮನೆಯ ಮುಂದೆ, ಗೋಶಾಲೆಯಲ್ಲಿ, ನದಿ, ದುರ್ಗ, ಬಾವಿ, ದಾರಿಗಳಲ್ಲಿ ದೀಪಗಳನ್ನು ಹಚ್ಚಿಸಬೇಕು. ನರಕ ಚತುರ್ದಶೀ ಮತ್ತು ಅಮಾವಾಸ್ಯೆಯಂದು ಕೈಯಲ್ಲಿ ಕೊಳ್ಳಿಯನ್ನು ಹಿಡಿದು ನನ್ನ ವಂಶದ ಅಗ್ನಿಯಿಂದ ದಗ್ಧವಾದ ಮತ್ತು ದಗ್ಧರಾಗದೆ ಇರುವ ಪಿತೃಗಳು ಪರಮಗತಿಯನ್ನು ಹೊಂದಲಿ. ‘ಉಜ್ವಲಜ್ಯೋತಿಷಾ ಮಾರ್ಗಂ ಪ್ರಪಶ್ಯಂತು ವ್ರಜಂತು ತೇ ||’ ಇದು ಅವರ ಮಾರ್ಗಕ್ಕೆ ಬೆಳಕಾಗಲಿ ಎಂದು ಪ್ರಾರ್ಥಿಸಬೇಕು. ಸುರುಸುರು ಬತ್ತಿಯನ್ನು ಹಿಡಿದು ಸುತ್ತುವ ಆಚರಣೆಗಳು ಈ ಸಂಪ್ರದಾಯದಿಂದ ಬಂದಿವೆ. ಸಂಜೆ ವೇಳೆಗೆ ಮಹಾವಿಷ್ಣು, ಸದಾಶಿವ, ಮಹಾರಾತ್ರಿ ದೇವತೆಗಳನ್ನು ಪೂಜಿಸಿ ಊಟ ಮಾಡಿ ಸಿಹಿ ಹಂಚಬೇಕು.
ಮೂರನೆಯ ದಿನ ಅಮಾವಾಸ್ಯೆ: ಇಂದು ಅಭ್ಯಂಗ ಸ್ನಾನ ಮಾಡಿ ಲಕ್ಷ್ಮೀದೇವಿಯನ್ನು ಪೂಜಿಸಬೇಕು. ವ್ಯಾಪಾರ ವಹಿವಾಟು ನಡೆಸುವವರು ಈ ದಿನ ಹೊಸ ಲೆಕ್ಕ ಆರಂಭಿಸುತ್ತಾರೆ. ಅಭ್ಯಂಗ ಸ್ನಾನಕ್ಕೆ ಅರಳಿ, ಅತ್ತಿ, ಮಾವು, ಆಲ ಮತ್ತು ಪ್ಲಕ್ಷ ಎಂಬ ಪಂಚವಟಗಳನ್ನು ನೀರಿಗೆ ಸೇರಿಸಿಕೊಳ್ಳಬೇಕು. ಅಮಾವಾಸ್ಯೆ ಇರುವುದರಿಂದ ಪಿತೃತರ್ಪಣ ಮಾಡಬೇಕು. ಸಂಜೆ ಗೋಧೂಳಿಯ ಸಮಯದಲ್ಲಿ ಮಹಾಲಕ್ಷ್ಮೀ ತಾಯಿ ವಿಜಯಲಕ್ಷ್ಮೀಯ ಪೂಜೆಯನ್ನು ಮಾಡುತ್ತ ಹೊಸ ಬಟ್ಟೆ, ಆಭರಣ ಧರಿಸಿ ನೃತ್ಯ, ವಾದ್ಯ, ಗೀತ ಮುಂತಾದವುಗಳಿಂದ ಸಂತೋಷಪಡಬೇಕು. ದೀಪಗಳನ್ನು ಎಲ್ಲೆಡೆ ಹಚ್ಚಿ ಮನೆಯನ್ನು ದೀಪದ ಸಾಲುಗಳಿಂದ ಅಲಂಕರಿಸಬೇಕು. ಮನೆಯಲ್ಲಿ ದೊಡ್ಡವರಿಂದ ಆರತಿ ಮಾಡಿಸಿಕೊಂಡು ಜಾಗರಣೆ ಮಾಡಬೇಕು. ಅಲಕ್ಷ್ಮೀಯನ್ನು ಓಡಿಸುವಂತೆ ನೃತ್ಯ, ವಾದ್ಯ, ನಗಾರಿಯ ಶಬ್ದಗಳನ್ನು ಮಾಡಬೇಕು. ಏಕೆಂದರೆ ಅಂದು ನಂಬಿಕೆಗಳ ಪ್ರಕಾರ ಲಕ್ಷ್ಮೀ ಎಚ್ಚರದಿಂದ ಇರುತ್ತಾಳೆ. ವ್ಯಾಪಾರಿಗಳು ಲಕ್ಷ್ಮೀಪೂಜೆಯ ಜತೆಗೆ ಕುಬೇರನನ್ನು ಪೂಜಿಸುವ ಪದ್ಧತಿ ಇಟ್ಟುಕೊಂಡಿದ್ದಾರೆ.
ನಾಲ್ಕನೆಯ ದಿನ ಬಲಿಪಾಡ್ಯಮಿ: ಪಾಡ್ಯ ಅಥವಾ ಪ್ರಥಮೆಯ ದಿನ ಪ್ರಮುಖವಾದ ದಿನ. ಬಲೀಂದ್ರನ ಪೂಜೆಯನ್ನು ಅವನ ಪರಿವಾರದ ಜೊತೆ ರಚಿಸಿದ ಐದು ಬಣ್ಣಗಳ ರಂಗೋಲಿಯಲ್ಲಿ ಮಾಡಿ ವಿಷ್ಣು ಸಾನ್ನಿಧ್ಯವನ್ನು ಪ್ರಾರ್ಥಿಸಬೇಕು.
ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ |
ಭವಿಷ್ಯೇಂದ್ರ ಸುರಾರಾತೇ ವಿಷ್ಣು ಸಾನ್ನಿಧ್ಯದೋ ಭವ ||
ಎಂದು. ಆ ರಾತ್ರಿ ಭಾರತದ ವೀರ ಕ್ಷತ್ರಿಯರ ತ್ಯಾಗದ ಕಥೆಗಳ ನಾಟಕಗಳನ್ನು ಆಯೋಜಿಸಬೇಕು. ಬಲಿ ಚಕ್ರವರ್ತಿಯ ಹೆಸರಿನಲ್ಲಿ ಬಡವರಿಗೆ ದಾನ ಮಾಡಬೇಕು. ಈ ದಿನ ಪಗಡೆ ಮುಂತಾದ ದ್ಯೂತಗಳನ್ನು (ವ್ಯಸನವಿಲ್ಲದೆ ಹಣ ಕಟ್ಟದೆ) ಆಡಬೇಕು. ಇಂದು ಶಿವ-ಪಾರ್ವತಿಯೊಡನೆ ಪಗಡೆಯ ಆಟವಾಡುವಾಗ ಪಾರ್ವತಿಯು ಪಗಡೆಯಲ್ಲಿ ಗೆದ್ದ ನೆನಪಿಗಾಗಿ ಆಟಗಳನ್ನು ಆಡಬೇಕು.
ಎಲ್ಲ ಕಡೆ ದೀಪಗಳನ್ನು ಹಚ್ಚಬೇಕು. ಹಸುಗಳನ್ನು, ಗೋಪಾಲಕೃಷ್ಣ ದೇವರನ್ನು ಪೂಜಿಸಬೇಕು. ಮಾರ್ಗಪಾಲೀ ಆಟ ಆಡಬೇಕು. ಸಂತಸದಿಂದ ಅಡುಗೆ ಮಾಡಿ ಹಬ್ಬವನ್ನು ಆಚರಿಸಬೇಕು. ದೀಪ, ಪಟಾಕಿ, ಬಾಣ ಬಿರುಸುಗಳನ್ನು ಹಚ್ಚಬೇಕು.
ಐದನೆಯ ದಿನ ಯಮದ್ವಿತೀಯಾ: ಇಂದು ಯಮಧರ್ಮನು ತನ್ನ ಸೋದರಿಯಾದ ಯಮುನಾ ದೇವಿಯ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ ದಿನ. ಆದ್ದರಿಂದ ಅಕ್ಕತಂಗಿಯರ ಮನೆಗೆ ಹೋಗಿ ಅವರ ಮನೆಯಲ್ಲಿ ಹಬ್ಬವನ್ನು ಆಚರಿಸಬೇಕು. ಭೋಜನ ಸ್ವೀಕರಿಸಿದ ನಂತರ ಅಕ್ಕತಂಗಿಯರಿಗೆ ಉಡುಗೊರೆಗಳನ್ನು ನೀಡಬೇಕು.
ನೀಡಬೇಕು. ಎಂಟು ಜನ ಚಿರಂಜೀವಿಗಳ ಹೆಸರು ಹೇಳಿ ಸ್ತೋತ್ರ ಮಾಡಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಬೇಕು. ಮಾರ್ಕಂಡೇಯ - ಬಲಿ - ವ್ಯಾಸ - ಹನುಮಂತ ವಿಭೀಷಣ ಕೃಪ - ಪರಶುರಾಮ ಅಶ್ವತ್ಥಾಮ ಇವರು ಚಿರಂಜೀವಿಗಳು.
ದೀಪಾವಳಿ ಹಬ್ಬದ ಹಿನ್ನೆಲೆ, ಪರಂಪರೆ: ಈ ಹಬ್ಬವು ಉಪನಿಷತ್ತಿನಲ್ಲಿ ಬರುವ ‘ತಮಸೋಮ ಜ್ಯೋತಿರ್ಗಮಯ’ ಎಂದರೆ ‘ಕತ್ತಲೆಯಿಂದ ಬೆಳಕಿನ ಕಡೆಗೆ ನಮ್ಮನ್ನು ನಡೆಸು’ ಎಂಬ ಅರ್ಥದಲ್ಲಿ ವೇದಗಳ ಕಾಲದಿಂದ ಆರಂಭವಾಗಿದೆ. ಭಾ ಎಂದರೆ ಬೆಳಕು ಜ್ಯೋತಿ ರತ ಎಂದರೆ ಅದರಲ್ಲಿ ಮಗ್ನನಾಗಿರುವವನು. ಆದ್ದರಿಂದಲೇ ಭಾರತ ಎಂಬ ಹೆಸರೇ ಬೆಳಕಿನ ಹೆಸರಾಗಿದೆ. ಶ್ರೀಕೃಷ್ಣ ಪರಮಾತ್ಮನು ಪ್ರಾಗ್ಜೊ್ಯೕತಿಷ ಪುರದ ಅಧಿಪತಿಯಾಗಿದ್ದ ನರಕಾಸುರನು 16000 ಹೆಣ್ಣುಮಕ್ಕಳನ್ನು ಬಂಧಿಸಿ ಅವರನ್ನು ಶೋಷಿಸುತ್ತಿದ್ದುದನ್ನು ಸಹಿಸದೆ ಅವರನ್ನು ಕಾಪಾಡಲು ನರಕಾಸುರನನ್ನು ವಧಿಸಿದ ದಿನವೇ ನರಕಚತುರ್ದಶೀ.
ಈ ನರಕ ಎಂದರೆ ನಮ್ಮ ಜೀವನದ ಕಷ್ಟಗಳು. ಹದಿನಾರು ಸಾವಿರ ನಾಡಿಗಳೇ ಹದಿನಾರು ಸಾವಿರ ಯುವತಿಯರು. ಜ್ಞಾನದ ಬೆಳಕೇ ಕೃಷ್ಣ ಎಂಬುದು ಯೋಗ ಮಾರ್ಗ. ಹಾಗಾಗಿ ಕೃಷ್ಣನ ಹೆಸರಲ್ಲಿ ನರಕ ಚತುರ್ದಶಿಯ ಆಚರಣೆಯನ್ನು ಮಾಡಲಾಗುತ್ತದೆ. ಮಹಾಲಕ್ಷ್ಮೀ ಅನುಗ್ರಹವಾದ ದಿನ ಅಮಾವಾಸ್ಯೆ. ಆದ್ದರಿಂದ ಅಮಾವಾಸ್ಯೆಯಂದು ಮಹಾಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಪಿತೃಗಳನ್ನು, ಶಿವನನ್ನು ಪೂಜಿಸಲಾಗುತ್ತದೆ. ಬಲಿ ಎಂಬ ಅಸುರನನ್ನು ಅವನು ಪರಮಭಕ್ತನಾಗಿದ್ದರೂ ಅವನ ಅಹಂಕಾರವನ್ನು ಅಳಿಸಿ ಮತ್ತೆ ಅವನ ಮನೆಯ ದ್ವಾರಪಾಲಕನಾಗಿ ನಿಂತು ಅವನಿಗೆ ರಾಜತ್ವವನ್ನು ನೀಡಿದ ವಾಮನ ತ್ರಿಮಿಕ್ರಮನ ಹೆಸರಲ್ಲಿ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ಎಲ್ಲವೂ ಮನಸ್ಸಿನ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ನೀಡುವ ದಿನಗಳಾದ್ದರಿಂದ ಸಹಸ್ರಾರು ವರ್ಷಗಳಿಂದ ದೀಪಾವಳಿಯನ್ನು ಬೆಳಕಿನ ಹಬ್ಬವಾಗಿ ಆಚರಿಸಲಾಗುತ್ತಿದೆ.
ಆರ್ಥಿಕ ಆಯಾಮ: ದೀಪಾವಳಿ ಬಂದರೆ ಭಾರತೀಯ ಪ್ರವಾಸೋದ್ಯಮ, ವ್ಯಾಪಾರ, ಆರ್ಥಿಕತೆ ಹೆಚ್ಚುತ್ತವೆ. ಧಾರ್ವಿುಕ ಪದಾರ್ಥಗಳು (ಅರಿಶಿಣ, ಕುಂಕುಮ, ಹೂವು ಇತ್ಯಾದಿ) ಅಡುಗೆ ಪದಾರ್ಥಗಳು, ಬಟ್ಟೆಗಳು, ಆಭರಣಗಳು, ವಾಹನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಎಣ್ಣೆ, ದೀಪಗಳು, ಪಟಾಕಿಗಳು (ಬಾಣ, ಬಿರುಸುಗಳು ಇತ್ಯಾದಿ) ಹೀಗೆ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಹೆಚ್ಚುತ್ತವೆ. ಜನರು ವಸ್ತುಗಳನ್ನು ಹಬ್ಬಕ್ಕಾಗಿ ಖರೀದಿಸುವುದರಿಂದ ಭಾರತದ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ. ಇದು ಎಲ್ಲ ವರ್ಗದ ಜನರೂ ಒಂದಲ್ಲ ಒಂದು ರೀತಿ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಿದಂತೆ ಆಗುವುದರ ಮೂಲಕ ಧರ್ವತೀತವಾಗಿ ಭಾರತೀಯರೆಲ್ಲರೂ ಲಾಭವನ್ನು ನೋಡುತ್ತಾರೆ ಮತ್ತು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳುವ ಪ್ರಕಾರ ಈ ವರ್ಷದ ದೀಪಾವಳಿಯ ವ್ಯಾಪಾರ ವಹಿವಾಟುಗಳು ಅಂದಾಜು 4.75 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಬಹುದು. ಇದು ಯಾವುದೇ ಹಬ್ಬದ ದೊಡ್ಡ ಆರ್ಥಿಕ ವಹಿವಾಟು. ಹೀಗೆ ದೀಪಾವಳಿ ಹಬ್ಬದ ಆರ್ಥಿಕ ಚಟುವಟಿಕೆಗಳು ಅನೇಕ ಉದ್ಯಮಗಳ ಪಾಲಿಗೆ ವರ್ಷದ ಕೂಳಿಗೆ ಕಾರಣವಾಗುತ್ತವೆ.
ಸಾಮಾಜಿಕ ಪರಿಣಾಮಗಳು: ದೀಪಾವಳಿ ಎಂದರೆ ಕೇವಲ ಒಂದು ಧರ್ಮದ ಒಂದು ಪಂಗಡ ಆಚರಿಸುವ ಹಬ್ಬವಲ್ಲ. ಶೈವರು, ವೈಷ್ಣವರು, ಶಾಕ್ತರು, ಗಾಣಪತ್ಯರು, ಸೌರರು, ಕೌಮಾರರು, ಬೌದ್ಧರು, ಜೈನರು, ಸಿಖ್ಖರು ಹೀಗೆ ಎಲ್ಲ ಜನಾಂಗ, ಸಮುದಾಯದವರೂ ಆಚರಿಸುವ ಬೆಳಕಿನ ಹಬ್ಬ. ಅಲ್ಲದೆ ಹಬ್ಬದ ಆಚರಣೆಯಲ್ಲಿ ಪರಸ್ಪರ ವಸ್ತುಗಳನ್ನು ಖರೀದಿಸುವುದರ ಮೂಲಕ ಎಲ್ಲರೂ ಹಬ್ಬದ ಪ್ರಕ್ರಿಯೆಯಲ್ಲಿ ಬೆರೆಯುವುದರಿಂದ ಇದು ಸಮಾಜದ ಎಲ್ಲರನ್ನೂ ಒಂದೇ ತತ್ವಕ್ಕೆ ಕರೆದೊಯ್ಯುವ ಮೂಲಕ ಬಹುತ್ವದಲ್ಲಿ ಏಕತೆಯನ್ನು ಉಂಟು ಮಾಡುತ್ತ ಬಂದಿದೆ. ಹಬ್ಬವನ್ನು ಆಚರಿಸದ ಬೇರೆ ಧರ್ವಿುಯರೂ ಆಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ದೀಪಾವಳಿ ಹಬ್ಬವು ಇಂದು ಭಾರತೀಯರ ಪರ್ವಕಾಲವಾಗಿದ್ದು ದೇಶದ ಉತ್ಸವವಾಗಿದೆ. ನಾವೆಲ್ಲರೂ ಒಂದಾಗಿ ಉತ್ಸವವನ್ನು ಆಚರಿಸುತ್ತ ಎಲ್ಲರನ್ನೂ ಒಳಗೊಂಡಂತೆ ಪರಿಸರ, ಸಮಾಜ, ಧಾರ್ವಿುಕತೆ, ಪರಂಪರೆ, ಇತಿಹಾಸ ಎಲ್ಲವನ್ನೂ ಸಂರಕ್ಷಿಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಆಚರಿಸೋಣ. ಎಲ್ಲರಿಗೂ ತಾಯಿ ಅಷ್ಟಭುಜ ವಿಜಯಲಕ್ಷ್ಮೀ ಅಮ್ಮನವರು ಶುಭ ಉಂಟು ಮಾಡಲಿ. ಎಲ್ಲ ಓದುಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ದೀಪಾವಳಿ ಎಂದರೆ ಏನು?
ದೀಪಾವಳಿಃ ಎಂದರೆ ದೀಪದ ಸಾಲು ಎಂದರ್ಥ. ಇದರಲ್ಲಿ ದೀಪ + ಆವಳಿಃ ದೀಪದ ಪಂಕ್ತಿ ಎಂದರ್ಥ. ಅಜ್ಞಾನವನ್ನು ನಿವಾರಿಸಿ ಆತ್ಮದ ಬೆಳಕನ್ನು ತೋರಿಸುವ ದೀಪಗಳನ್ನು ಈ ಹಬ್ಬದಲ್ಲಿ ಹಚ್ಚುವುದರಿಂದ ದೀಪಾವಳಿ ಎಂಬ ಹೆಸರು ಬಂದಿದೆ. ಆದರೆ ಇದರಲ್ಲಿ ನೀರು ತುಂಬುವ ಹಬ್ಬ, ನರಕ ಚತುರ್ದಶೀ, ಅಮಾವಾಸ್ಯೆ, ಬಲಿಪಾಡ್ಯಮೀ, ಯಮದ್ವಿತೀಯಾ ಎಂಬ ಐದು ದಿನಗಳಲ್ಲಿಯೂ ದೀಪವನ್ನು, ಆಕಾಶ ಬುಟ್ಟಿಯನ್ನು ಹಚ್ಚುವುದರಿಂದ ಇದನ್ನು ದೀಪಗಳ ಸಾಲು ಹಬ್ಬವಾಗಿ ಗುರುತಿಸಿ ಒಟ್ಟಾಗಿಯೇ ದೀಪಾವಳಿ ಹಬ್ಬ ಎಂದು ಕರೆಯಲಾಗಿದೆ.