ಉಪಖಂಡದಲ್ಲಿ ಮತ್ತೊಂದು ಯುದ್ಧವಾದರೆ ಅದರಲ್ಲಿ ಅಣ್ವಸ್ತ್ರಗಳು ಬಳಕೆಯಾಗುವುದು ಮತ್ತು ಅದು ಪಾಕಿಸ್ತಾನಕ್ಕೆ ಹೆಚ್ಚು ಮಾರಕವಾಗುವುದು ಸರಿಸುಮಾರು ನಿಶ್ಚಯ. ಒಂದುವೇಳೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುದ್ಧವೇ ನಡೆದರೆ ಅದರಲ್ಲಿ ಪಾಕಿಸ್ತಾನೀ ಸೇನೆ ಸೋತು ಅದು ಆ ದೇಶದ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವುದು ನಿಶ್ಚಿತ.
ಯುದ್ಧದ ಮೂಲಕ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಲು ಪಾಕಿಸ್ತಾನ ತಾನು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮತ್ತೆಮತ್ತೆ ಪ್ರಯತ್ನಿಸಿಯೇ ಇದೆ. 1947 ಅಕ್ಟೋಬರ್ 22ರ ರಾತ್ರಿ ಐದು ಸಾವಿರ ಶಸ್ತ್ರಸಜ್ಜಿತ ಪಠಾಣ ಬುಡಕಟ್ಟು ಜನರನ್ನು ಕಾಶ್ಮೀರಕ್ಕೆ ನುಗ್ಗಿಸುವುದರ ಮೂಲಕ ಮೊದಲ ಪ್ರಯತ್ನ ನಡೆಯಿತು. ಆ ಪ್ರಯತ್ನದಲ್ಲಿ ಪಶ್ಚಿಮ ಮತ್ತು ವಾಯವ್ಯ ಕಾಶ್ಮೀರವನ್ನು ಆಕ್ರಮಿಸಿಕೊಳ್ಳುವುದರಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು. (ಆ ‘ಯಶಸ್ಸು’ ಸಾಧ್ಯವಾದದ್ದು ನೆಹರೂ ಸರ್ಕಾರದ ಅರ್ತಾಕ ಹಾಗೂ ಆತ್ಮಹತ್ಯೀಯ ನೀತಿಗಳಿಂದ ಎನ್ನುವುದನ್ನು ನಾವಿಲ್ಲಿ ವಿಷಾದದಿಂದ ನೆನಪಿಸಿಕೊಳ್ಳಬೇಕು.) ಇನ್ನುಳಿದ ಕಾಶ್ಮೀರವನ್ನು ಕಬಳಿಸಲೆಂದು, ಆ ಪ್ರದೇಶದ ಜತೆ ಭಾರತಕ್ಕಿದ್ದ ಏಕೈಕ ಸಂಪರ್ಕ ಕೊಂಡಿ ‘ಜಮ್ಮು-ಅಖ್ನೂರ್ ರಸ್ತೆ’ಯನ್ನೇ ಕತ್ತರಿಸಿಬಿಡಲು ಪಾಕಿಸ್ತಾನ 1965ರ ಸೆಪ್ಟೆಂಬರ್ನಲ್ಲಿ ಮತ್ತೆ ಪ್ರಯತ್ನಿಸಿತು. ಆದರೆ ಈ ಸಲ ಪ್ರಧಾನಿ ಶಾಸ್ತ್ರಿಯವರ ಬುದ್ಧಿವಂತಿಕೆಯಿಂದಾಗಿ ಯುದ್ಧದ ಗತಿಯೇ ಬದಲಾಗಿ, ಕಾಶ್ಮೀರವನ್ನು ಮರೆತು ಲಾಹೋರ್ ನಗರವನ್ನು ರಕ್ಷಿಸಿಕೊಳ್ಳಬೇಕಾದ ಒತ್ತಡಕ್ಕೆ ಪಾಕಿಸ್ತಾನ ಸಿಲುಕಿ ನಲುಗಿಹೋಯಿತು. ಅನಂತರ ಪಾಕಿಸ್ತಾನ 1984ರಲ್ಲಿ ಸಣ್ಣದೊಂದು ಪ್ರಯತ್ನ ನಡೆಸಿತು. ಸಿಯಾಚಿನ್ ಗ್ಲೇಷಿಯರ್ ಪ್ರದೇಶದ ಮೇಲೆ ತನ್ನ ಹತೋಟಿ ಸ್ಥಾಪಿಸುವುದರ ಮೂಲಕ ಕಾರಾಕೊರಂ ಕಣಿವೆಗೆ ದಾರಿ ಮಾಡಿಕೊಂಡು ಲೇಹ್ನತ್ತ ನುಗ್ಗುವ ಜಿಯಾ ಸರ್ಕಾರದ ಹುನ್ನಾರವನ್ನು ಸಣ್ಣ ಪ್ರಮಾಣದ ಕಾರ್ಯಾಚರಣೆಗಳ ಮೂಲಕ ಭಾರತೀಯ ಸೇನೆ ನಿರರ್ಥಕಗೊಳಿಸಿದ್ದು ಇಂದಿರಾ ಸರ್ಕಾರದ ದೃಢ ನಿಶ್ಚಯದಿಂದ. (ಈ ಸಿಯಾಚಿನ್ ಘರ್ಷಣೆಯನ್ನು ‘ಯುದ್ಧ’ ಎಂದು ಪೆಂಟಗನ್ ತಂಡ ಪರಿಗಣಿಸಿಲ್ಲದ್ದು ಸರಿಯಾಗಿಯೇ ಇದೆ). ನಂತರ ಕಾರ್ಗಿಲ್ ಉನ್ನತ ಪ್ರದೇಶಗಳನ್ನೇ ಆಕ್ರಮಿಸಿಕೊಂಡು ಸಿಯಾಚಿನ್ ಹಾಗೂ ಲೇಹ್ ಎರಡೂ ಪ್ರದೇಶಗಳ ಜತೆ ಭಾರತದ ಸಂಪರ್ಕವನ್ನು ಕತ್ತರಿಸಲು ಜಿಯಾ-ಉಲ್-ಹಖ್ ತಯಾರಿಸಿದ್ದ ಯೋಜನೆಯನ್ನು ಪರ್ವೇಜ್ ಮುಷರ್ರಫ್ 1999ರಲ್ಲಿ ಕಾರ್ಯರೂಪಕ್ಕಿಳಿಸಿದರೂ ಭಾರತದ ಪ್ರತಿಕಾರ್ಯಾಚರಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ಈ ‘ಕಾರ್ಗಿಲ್ ಯುದ್ಧ’ದ ವೈಫಲ್ಯದ ನಂತರ ಪಾಕಿಸ್ತಾನ ಮತ್ತೊಂದು ಪ್ರಯತ್ನಕ್ಕೆ ಮುಂದಾಗುವುದು ನಿರೀಕ್ಷಿತವೇ ಆಗಿತ್ತು. ಅದು 2012-14ರಲ್ಲಾಗಬಹುದೆಂದು ಪೆಂಟಗನ್ ವಿಶೇಷಜ್ಞರ ತಂಡ ಊಹಿಸಿತ್ತು. ಆ ಸಮಯದ ಹೊತ್ತಿಗೆ, 1991ರಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದಿಂದ ಬಲಗೊಳ್ಳುತ್ತ ಸಾಗಿದ ಭಾರತದ ವಿರುದ್ಧ ಸರಿಸಮನಾಗಿ ಸೆಣೆಸಲು ಪಾಕಿಸ್ತಾನಕ್ಕೆ ಸಾಧ್ಯವಾಗಲಾರದೆಂದೂ ಪೆಂಟಗನ್ ತಂಡ ಲೆಕ್ಕ ಹಾಕಿತ್ತು.
2012-14 ಬಂದುಹೋಯಿತು. ಆಗಾಗಲೀ, ನಂತರದ ಈ ಆರು ವರ್ಷಗಳಲ್ಲಾಗಲೀ ಪಾಕಿಸ್ತಾನ ಭಾರತದೊಡನೆ ಯುದ್ಧಕ್ಕಿಳಿದಿಲ್ಲ. ಇದಕ್ಕೆ ಕಾರಣ ಪೆಂಟಗನ್ ತಂಡ ಊಹಿಸಲಾಗದಂತಹ ಬದಲಾವಣೆಗಳು ಪಾಕಿಸ್ತಾನದೊಳಗೆ ಹಾಗೂ ಈ ವಲಯದ ಭೂ-ರಾಜಕೀಯ ಸ್ಥಿತಿಗಳಲ್ಲಾದದ್ದು. ಮೊದಲಿಗೆ ಪಾಕಿಸ್ತಾನದ ಆಂತರಿಕ ಪರಿಸ್ಥಿತಿಯನ್ನೇ ತೆಗೆದುಕೊಳ್ಳುವುದಾದರೆ, ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲೆ ಅಲ್-ಖಯೀದಾ ದಾಳಿ ನಡೆದ ತರುವಾಯ ಅಮೆರಿಕ ತಾನು ಆರಂಭಿಸಿದ ‘ಭಯೋತ್ಪಾದನೆಯ ವಿರುದ್ಧದ ಯುದ್ಧ’ದಲ್ಲಿ ಪಾಕಿಸ್ತಾನವನ್ನು ಬಲವಂತವಾಗಿ ಸೇರಿಸಿಕೊಂಡಿತಷ್ಟೇ. ಆಗ ತಾನೇ ಸಾಕಿದ್ದ ತಾಲಿಬಾನ್ ವಿರುದ್ಧ ಅಮೆರಿಕಕ್ಕೆ ಸಹಕರಿಸುವ ಒತ್ತಡಕ್ಕೆ ಪಾಕಿಸ್ತಾನ ಒಳಗಾಯಿತು. ಆಗ ಅಫ್ಘನ್ ಹಾಗೂ ಪಾಕ್ ತಾಲಿಬಾನ್ಗಳೆರಡೂ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದವು. ಗಡಿನಾಡು ಪ್ರಾಂತ್ಯ ಖೈಬರ್-ಪಕ್ತೂನ್ಖ್ವಾದಲ್ಲಿ ಪಾಕ್ ತಾಲಿಬಾನ್ ಮತ್ತು ಪಾಕ್ ಸೇನೆಯ ನಡುವಿನ ಘರ್ಷಣೆ ಯಾವ ಮಟ್ಟಕ್ಕೇರಿತೆಂದರೆ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ನ ಆಡಳಿತವನ್ನು ಮಾನ್ಯ ಮಾಡುವ ಅವಮಾನಕರ ಒಪ್ಪಂದವೊಂದಕ್ಕೆ 2009ರ ಆದಿಯಲ್ಲಿ ಪಾಕ್ ಸರ್ಕಾರ ಸಹಿ ಹಾಕಬೇಕಾಯಿತು. ಅಲ್ಲದೆ, ರಾಜಧಾನಿ ಇಸ್ಲಾಮಾಬಾದ್ಗೆ ಕೇವಲ ನೂರು ಕಿಲೋಮೀಟರ್ ಉತ್ತರದಲ್ಲಿರುವ ಬುನೇರ್ ಪಟ್ಟಣದ ಮೇಲೆ ತಾಲಿಬಾನಿಗಳು ಏರಿಬಂದರು. ಇದೆಲ್ಲದರಿಂದಾದ ಒಂದು ಒಳ್ಳೆಯ ಪರಿಣಾಮವೆಂದರೆ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಭಾರತಕ್ಕಿಂತಲೂ ತಾಲಿಬಾನ್ ಮೂಲಭೂತವಾದಿಗಳೇ ದೊಡ್ಡ ಅಪಾಯಕಾರಿಗಳು ಎಂಬ ತೀರ್ವನಕ್ಕೆ ಅಧ್ಯಕ್ಷ ಜರ್ದಾರಿ-ಪ್ರಧಾನಿ ಗಿಲಾನಿ ಸರ್ಕಾರ ಬಂದದ್ದು.
ಮೂರೇ ತಿಂಗಳಲ್ಲಿ ಸ್ವಾತ್ ಒಪ್ಪಂದ ಮುರಿದುಬಿದ್ದು, ಮುಂದಿನ ಒಂದು ವರ್ಷದಲ್ಲಿ ತಾಲಿಬಾನ್ ಅನ್ನು ಮಟ್ಟಹಾಕುವುದರಲ್ಲಿ ಪಾಕ್ ಸೇನೆ ಯಶಸ್ವಿಯಾಯಿತೇನೋ ನಿಜ. ಆದರೆ ಅಷ್ಟರಲ್ಲಾಗಲೇ ಪಾಕ್ ಸೇನೆಯಲ್ಲಿ ಬಿರುಕುಗಳು ಕಾಣಿಸಿಕೊಂಡಾಗಿತ್ತು. ರಾಷ್ಟ್ರದ ಏಕತೆ, ಪ್ರಾದೇಶಿಕ ಸಮಗ್ರತೆಗೆ ಸೇನೆಯ ಒಂದು ದೊಡ್ಡ ಭಾಗ ಗಮನ ಕೊಟ್ಟರೆ, ಅದಕ್ಕೆ ವಿರುದ್ಧವಾಗಿ ಮತ್ತೊಂದು ಪುಟ್ಟ ಭಾಗ ಇಸ್ಲಾಮಿಕ್ ರಾಜಕೀಯ-ಸಾಮಾಜಿಕ ವ್ಯವಸ್ಥೆಯ ನಿರ್ವಣದತ್ತ ಒಲವು ತೋರತೊಡಗಿತು. ಅಲ್ಲದೆ ಸೇನೆಯಲ್ಲಿ ಶೇಕಡ ಮೂವತ್ತರಷ್ಟಿರುವ ಪಕ್ತೂನಿಗಳು (ಪಠಾಣರು) ಗಡಿನಾಡಿನಲ್ಲಿ ಸೇನೆ ನಡೆಸುತ್ತಿದ್ದ ಕಾರ್ಯಾಚರಣೆಗಳ ಬಗ್ಗೆ ಅಸಮ್ಮತಿ ಬೆಳೆಸಿಕೊಂಡರು. ಇದರಿಂದಾಗಿ ರಾಷ್ಟ್ರದ ನೀತಿಗಳನ್ನು ರೂಪಿಸುವಂತಹ ಯಾವುದೇ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಸೇನಾ ವರಿಷ್ಠರು ಹಿಂದುಮುಂದು ನೋಡುವಂತಾಯಿತು. ಹೀಗಾಗಿಯೇ, ಮಹತ್ವಾಕಾಂಕ್ಷಿಯಾದ ಅಂದಿನ ಸೇನಾ ದಂಡನಾಯಕ ಜನರಲ್ ಆಷ್ಪಾಕ್ ಪರ್ವೆಜ್ ಕಯಾನಿಯಾಗಲೀ, ನಂತರದ ಸೇನಾ ವರಿಷ್ಠ ರಹೀಲ್ ಶರೀಫ್ ಆಗಲೀ ಸೇನಾಕ್ರಾಂತಿ ನಡೆಸದೆ ಸುಮ್ಮನೆ ತೆರಮರೆಯಲ್ಲೇ ಕೈಯಾಡಿಸುತ್ತ ಕೂರುವಂತಾಯಿತು. ಇಂದಿನ ಸೇನಾ ದಂಡನಾಯಕ ಕಮರ್ ಜಾವೆದ್ ಬಾಜ್ವಾರದೂ ಅದೇ ಪರಿಸ್ಥಿತಿ. ಹೀಗಾಗಿ ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದಾದ ನಂತರ ಒಂದರಂತೆ ಎರಡು ಚುನಾಯಿತ ರಾಷ್ಟ್ರೀಯ ಶಾಸನಸಭೆಗಳು (ನ್ಯಾಷನಲ್ ಅಸೆಂಬ್ಲಿ) ಪೂರ್ಣಾವಧಿ ಮುಗಿಸಿವೆ. ಹೀಗೆ ದೇಶದ ರಾಜಕಾರಣವನ್ನೇ ತನ್ನ ಕೈಗೆ ತೆಗೆದುಕೊಳ್ಳಲಾಗದ ಪಾಕ್ ಸೇನೆ ಭಾರತದ ವಿರುದ್ಧ ನೇರ ಯುದ್ಧಕ್ಕಿಳಿಯುವಂತಹ ಮಹತ್ವದ ನಡೆಯನ್ನು ತೆಗೆದುಕೊಳ್ಳಲಾರದು. ಬದಲಾದ ಸನ್ನಿವೇಶದಲ್ಲಿ ಮೂಲಭೂತವಾದಿಗಳನ್ನು ನಿಯಂತ್ರಣದಲ್ಲಿಡುವುದು ಸೇನೆಯ ಪ್ರಮುಖ ಆಂತರಿಕ ನೀತಿಯಾದರೆ ಕಾಶ್ಮೀರದಲ್ಲಿ ಆಗಾಗ ಶಾಂತಿ ಕದಡುತ್ತ ಭಾರತವನ್ನು ಅಲ್ಲಿ ಕಟ್ಟಿಹಾಕಿ ಕೂರಿಸಿಬಿಡುವುದು ಅದರ ವಿದೇಶನೀತಿಯ ಪ್ರಮುಖ ಅಂಶವಾಯಿತು.
ಇನ್ನು ಈ ವಲಯದಲ್ಲಿ ಕಳೆದೊಂದು ದಶಕದಲ್ಲಿ ಬದಲಾದ ಭೂ-ರಾಜಕೀಯ ವಾಸ್ತವಗಳತ್ತ ತಿರುಗೋಣ. ದಕ್ಷಿಣ ಏಷ್ಯಾದಲ್ಲಿ ಮತ್ತೊಂದು ಯುದ್ಧ ಮತ್ತು ಪಾಕಿಸ್ತಾನದ ಪತನವನ್ನು ತನ್ನ ಹಿತಾಸಕ್ತಿಗಳಿಗೆ ಅಪಾಯಕಾರಿ ಎಂದು ಚೀನಾ ಕಳೆದ ಒಂದೂವರೆ ದಶಕದಿಂದಲೂ ಭಾವಿಸತೊಡಗಿದೆ. ಪೆಂಟಗನ್ ತಂಡ ತನ್ನ ‘ಭವಿಷ್ಯ’ ಹೇಳಿದ ನಂತರದ ವರ್ಷಗಳಲ್ಲಿ ದಕ್ಷಿಣ ಏಷ್ಯಾದ ವಾಯವ್ಯ ವಲಯದಲ್ಲಿ ಚೀನೀ ಪ್ರಭಾವ ಗಮನಾರ್ಹವಾಗಿ ಏರಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸುದ್ದಿಸಂಸ್ಥೆಗಳಿಗೆ ಪ್ರವೇಶವಿಲ್ಲದ ಕಾರಣ ಅಲ್ಲಿನ ಘಟನಾವಳಿಗಳ ಬಗ್ಗೆ ನಿಖರ ವಿವರಗಳು ಸಿಗದಿದ್ದರೂ ಲಭ್ಯ ಮಾಹಿತಿಗಳ ಪ್ರಕಾರ ಅಲ್ಲಿನ ಪಾಕ್-ವಿರೋಧಿ ದಂಗೆಗಳನ್ನು ಅಡಗಿಸಿ ಶಾಂತಿ ಸ್ಥಾಪಿಸುವುದರಲ್ಲಿ ಚೀನೀ ಸೇನೆ 2007ರಿಂದಲೂ ತೊಡಗಿಕೊಂಡಿದೆ. ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ಬದಲಾದ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕಿಂತಲೂ ಚೀನಾಗೇ ಹೆಚ್ಚು ಅಗತ್ಯವಾಗಿದೆ.
ಚೀನಾ ಮತ್ತು ಪಾಕಿಸ್ತಾನಗಳನ್ನು ಸಂಪರ್ಕಿಸು ಸುವ ‘ಕಾರಾಕೊರಂ ಹೆದ್ದಾರಿ’ಯನ್ನು ಚೀನೀಯರು ಪಾಕ್ ಆಕ್ರಮಿತ ಕಾಶ್ಮೀರದ ದುರ್ಗಮ ಪರ್ವತ ಪ್ರದೇಶಗಳಲ್ಲಿ 1970ರ ದಶಕದ ಆದಿಯಲ್ಲೇ ನಿರ್ವಿುಸಿದರಷ್ಟೇ. ಆ ಹೆದ್ದಾರಿಗೆ ಹೊಂದಿಕೊಂಡಂತೇ ರೈಲುಹಾದಿಯನ್ನು ನಿರ್ವಿುಸುವ ಮಹತ್ತರ ಯೋಜನೆಗೆ ಚೀನಾ ದಶಕದ ಹಿಂದೆ ಮುಂದಾಯಿತು. ಪಶ್ಚಿಮ ಚೀನಾದ ಉಯ್ಘರ್ ಷಿನ್ಜಿಯಾಂಗ್ ಪ್ರಾಂತ್ಯದ ಕಾಶ್ಗರ್ನಿಂದ ಬಲೂಚಿಸ್ತಾನದ ಅರಬ್ಬೀ ಸಮುದ್ರ ತೀರದಲ್ಲಿ ಚೀನೀಯರು ನಿರ್ವಿುಸಿರುವ ಗ್ವಾಡಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ಈ ರೈಲುಹಾದಿ ಕೇವಲ ಆರ್ಥಿಕ ಮಹತ್ವದ್ದು ಎಂದು ಚೀನಾ ಹೇಳುತ್ತಿದೆ. ಪಶ್ಚಿಮ ಏಷ್ಯಾದಿಂದ ಚೀನಾದ ಪೂರ್ವತೀರದ ಬಂದರುಗಳಿಗೆ ಹಡಗುಗಳ ಮೂಲಕ ತೈಲ ಸಾಗಿಸಲು ಈಗ ಇಪ್ಪತ್ತೊಂದು ದಿನಗಳಿಗೂ ಅಧಿಕ ಕಾಲ ಬೇಕಾಗುತ್ತದೆ. ಆದರೆ ರೈಲುಹಾದಿ ಪೂರ್ಣಗೊಂಡ ನಂತರ ತೈಲ ಸಾಗಾಟಕ್ಕೆ ತಗಲುವ ಕಾಲ ಕೇವಲ ನಲವತ್ತೆಂಟು ಗಂಟೆಗಳು! ಈ ದೃಷ್ಟಿಯಿಂದ ಈ ರೈಲುಹಾದಿ ಚೀನೀಯರಿಗೆ ಆರ್ಥಿಕವಾಗಿ ಅತ್ಯಂತ ಅನುಕೂಲಕರ ಎಂಬುದು ನಿಜವಾದರೂ ಅದರ ಸಾಮರಿಕ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಭಾರತ ಮತ್ತು ಚೀನಾಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದ ಪಕ್ಷದಲ್ಲಿ ಚೀನಾ ತನ್ನ ಸೈನಿಕರನ್ನು ತ್ವರಿತಗತಿಯಲ್ಲಿ ಅರಬ್ಬೀ ಸಮುದ್ರ ತೀರಕ್ಕೆ ಕಳುಹಿಸಿ ಭಾರತದ ಪಶ್ಚಿಮ ತೀರಕ್ಕೆ ಅಪಾಯವೊಡ್ಡಲು ಈ ರೈಲುಹಾದಿ ಸಹಕಾರಿಯಾಗಬಲ್ಲುದು.
ಚೀನೀಯರ ಯೋಜನೆಗಳು ಯಶಸ್ವಿಯಾಗಿ ಚೀನಾ ಮತ್ತು ಅರಬ್ಬೀ ಸಮುದ್ರಗಳ ನಡುವೆ ನೇರ ರೈಲು ಸಂಪರ್ಕ ನಿರ್ವಣವಾಗುವವರೆಗೆ ಮತ್ತು ಆನಂತರ ಪಾಕಿಸ್ತಾನ ಈಗಿನಂತೆಯೇ ಇರಬೇಕೆಂದು ಲೆಕ್ಕ ಹಾಕದೆ ಚಾಣಾಕ್ಷ ಚೀನೀಯರು ಈ ಮಹತ್ತರ ಯೋಜನೆಯನ್ನು ಕೈಗೆತ್ತಿಕೊಂಡಿರಲಾರರು. ಈ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ಚೀನಾ ಎದುರುನೋಡುವ ಅಪಾಯಗಳು ಎರಡು ಬಗೆಯವು. ಮೊದಲನೆಯದು, ಪಾಕಿಸ್ತಾನದ ಭೌಗೋಳಿಕ ಸ್ಥಿತಿಯಲ್ಲಿ ಬದಲಾವಣೆ ಮತ್ತು, ಎರಡನೆಯದು, ಪಾಕ್ ರಾಜಕೀಯ ವ್ಯವಸ್ಥೆಯ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ಹಿಡಿತ.
ಪಾಕಿಸ್ತಾನ ಛಿದ್ರವಾಗಿ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳು ಬೇರೆಯಾಗಿ ಅವು ಭಾರತದ ಪ್ರಭಾವಕ್ಕೆ ಸಿಲುಕಿದರೆ ಚೀನೀ ಯೋಜನೆಗೆ ಧಕ್ಕೆಯಾಗುತ್ತದೆ. ಹಾಗೆಯೇ, ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈ ಮೇಲಾದರೆ ಚೀನೀ ಯೋಜನೆಗಳು ಕುಸಿದುಬೀಳುತ್ತವೆ. ಈಗಾಗಲೇ ಉಯ್ಘರ್ ಷಿನ್ಜಿಯಾಂಗ್ ಪ್ರಾಂತ್ಯದಲ್ಲಿ ಚೀನೀ ಸರ್ಕಾರದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಮುಸ್ಲಿಂ ಉಗ್ರಗಾಮಿಗಳಿಗೆ ಪಾಕಿಸ್ತಾನದಲ್ಲಿ ಬಹಿರಂಗವಾಗಿಯೇ ಬೆಂಬಲ ದೊರೆಯುತ್ತದೆ. ಜತೆಗೇ ತಮ್ಮ ಉಯ್ಘರ್ ಮುಸ್ಲಿಂರನ್ನು ದಮನಿಸುವ ಚೀನೀ ಸರ್ಕಾರದ ಜತೆ ಮೂಲಭೂತವಾದಿ ಪಾಕ್ ಸರ್ಕಾರ ಸ್ನೇಹಯುತ ಸಂಬಂಧ ಏರ್ಪಡಿಸಿಕೊಳ್ಳಲಾರದು. ಅಲ್ಲಿಗೆ ಅರಬ್ಬೀ ಸಮುದ್ರ ತಲುಪುವ ಕನಸನ್ನು ಚೀನಾ ಮರೆಯಬೇಕಾಗುತ್ತದೆ. ಹೀಗೆ, ಚೀನಾ ಆತಂಕ ಪಡುವ ಬೆಳವಣಿಗೆಗಳು ಘಟಿಸುವುದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧವಾಗಿ ಪಾಕ್ ಸೇನೆ ಸೋತುಹೋದಾಗ.
ಉಪಖಂಡದಲ್ಲಿ ಮತ್ತೊಂದು ಯುದ್ಧವಾದರೆ ಅದರಲ್ಲಿ ಅಣ್ವಸ್ತ್ರಗಳು ಬಳಕೆಯಾಗುವುದು ಮತ್ತು ಅದು ಪಾಕಿಸ್ತಾನಕ್ಕೆ ಹೆಚ್ಚು ಮಾರಕವಾಗುವುದು ಸರಿಸುಮಾರು ನಿಶ್ಚಯ. ಒಂದುವೇಳೆ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಯುದ್ಧವೇ ನಡೆದರೆ ಅದರಲ್ಲಿ ಪಾಕಿಸ್ತಾನೀ ಸೇನೆ ಸೋತು ಅದು ಆ ದೇಶದ ರಾಜಕೀಯದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುವುದು ನಿಶ್ಚಿತ. ಹಾಗಾದಾಗ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳ ಕೈ ಮೇಲಾಗುತ್ತದೆ ಮತ್ತು ಸಿಂಧ್ ಮತ್ತು ಬಲೂಚಿಸ್ತಾನಗಳಲ್ಲಿ ಪ್ರತ್ಯೇಕತೆಗೆ ಭಾರೀ ಕುಮ್ಮಕ್ಕು ದೊರೆಯುತ್ತದೆ. ಇವೆರಡೂ ಚೀನಾ ಎದುರುನೋಡುವ ಅಪಾಯಗಳು. ಹೀಗಾಗಿ ಅವುಗಳನ್ನು ತಡೆಯಲು ಚೀನಾ ಶತಾಯಗತಾಯ ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಅಂಗವಾಗಿಯೇ ಭಾರತದೊಡನೆ ಸಂಬಂಧಗಳನ್ನು ಸುಧಾರಿಸಿಕೊಳ್ಳಲು ಪಾಕಿಸ್ತಾನದ ಮೇಲೆ ಚೀನಾ ಈ ದಶಕದ ಆರಂಭದಲ್ಲಿಯೇ ಒತ್ತಡ ಹೇರತೊಡಗಿತು. ಭಾರತದೊಂದಿಗೆ ಯುದ್ಧವಾದರೆ ಚೀನಾ ತಮ್ಮ ಪರವಾಗಿಲ್ಲವೆಂಬ ಅರಿವು ಪಾಕ್ ನಾಯಕರನ್ನು ಕಂಗೆಡಿಸಿರುವುದಷ್ಟೇ ಅಲ್ಲ, ಭಾರತ ನೀಡುತ್ತಿರುವ ಕಟು ಶಿಕ್ಷೆಗಳನ್ನೂ ಕೈಕೈ ಹಿಸುಕಿಕೊಂಡು ಸಹಿಸಿಕೊಳ್ಳುವಂತಹ ಒತ್ತಡಕ್ಕೆ ಪಾಕ್ ಸರ್ಕಾರ ಮತ್ತು ಸೇನೆಯನ್ನು ಸಿಲುಕಿಸಿದೆ. ಎರಡೂ ದೇಶಗಳ ನಡುವೆ ಕಾಶ್ಮೀರದ ಕುರಿತಾಗಿ ಮತ್ತೊಂದು ಯುದ್ಧ ಇಲ್ಲಿಯವರೆಗೂ ಆಗದಿರುವುದಕ್ಕೆ ಇದು ಕಾರಣ.