ಅಂಕಣ

ಮಗುವಿನ ಪ್ರಶ್ನೆಯೂ ನಾಯಿಮರಿಯ ಉತ್ತರವೂ...

ಸುದೀಪ್​ ವಿ.ಎನ್​
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿ ಮರಿ ಕಳ್ಳ ಬಂದರೇನು ಮಾಡುವೆ? ಕುಂಯಿ ಕುಂಯಿ ಬೌ ಎಂದು ಕೂಗಿ ಪಾಡುವೆ ಜಾಣ ಮರಿ ತಾಳು ಹೋಗಿ ತಿಂಡಿ ತರುವೆನು ತಾ! ನಿನ್ನ ಮನೆಯ ನಾನು ಕಾಯುತಿರುವೆನು

ಜಿ.ಪಿ. ರಾಜರತ್ನಂ ಅವರ ಈ ಶಿಶುಗೀತೆಯನ್ನು ಕೇಳುತ್ತ ಬೆಳೆದ ಪೀಳಿಗೆಯೇ ಇದೆ. ಆ ಪದ್ಯ ನೆನೆಸಿಕೊಂಡರೆ ಈಗಲೂ ಒಂದು ಚಿತ್ರ ಕಣ್ಣೆದುರು ಬಂದು ಗುನುಗುವಂತಾಗುತ್ತದೆ. ಪದ್ಯದ ತಾಕತ್ತೇ ಅದಲ್ಲವೆ? ಗಟ್ಟಿಪದ್ಯವೊಂದು ಕಾಲಾತೀತವಾಗುವ ಗುಣವನ್ನು ಹೊಂದಿರುತ್ತದೆ. ಆಯಾ ಕಾಲಕ್ಕೆ ವಿಶಿಷ್ಟ ಅರ್ಥ ಹೊಳೆಯಿಸುವ ಗುಣವೂ ಅದಕ್ಕಿರುತ್ತದೆ. ಈ ನಾಯಿಮರಿ ಪದ್ಯ ಮನುಷ್ಯ ಮತ್ತು ಮೂಕಪ್ರಾಣಿಯೊಂದರ ನಡುವಿನ ಆತ್ಮೀಯ ಸಂಭಾಷಣೆಯಾಗಿಯೂ ನಮ್ಮೆದುರು ಮೈದಳೆಯುತ್ತದೆ. ಮಗುವಿನ ಮುಗ್ಧ ಕುತೂಹಲದ ಪ್ರಶ್ನೆಗೆ ನಾಯಿಮರಿ ತನ್ನದೇ ರೀತಿಯಲ್ಲಿ ಉತ್ತರಿಸುವ ಈ ಬಗೆ ಹೃದಯವನ್ನು ತಟ್ಟುತ್ತದೆ. ಅನೇಕ ಸಂದೇಶಗಳನ್ನು ಹೊಮ್ಮಿಸುವ ಈ ಪದ್ಯ, ಮಾನವೀಯತೆ ಹಾಗೂ ಶ್ವಾನನಿಷ್ಠೆಯ ಝುಲಕನ್ನು ಕೂಡ ಪರಿಚಯಿಸುತ್ತದೆ.

ನಾಯಿಮರಿಯ ಆಟ-ನೋಟಕ್ಕೆ ಬೆರಗಾಗದವರು ಯಾರಿದ್ದಾರೆ? ಅದರಲ್ಲೂ ಮಕ್ಕಳಿಗೆ ಈ ಪ್ರೀತಿ ಇನ್ನಷ್ಟು ಹೆಚ್ಚು. ನಾಯಿ ಕೇವಲ ಒಂದು ಪ್ರಾಣಿಯಲ್ಲ, ಮಾನವನ ಆತ್ಮೀಯ ಸಂಗಾತಿಯ ಹಾಗೇ ಆಗಿಬಿಟ್ಟಿದೆ. ಹಳ್ಳಿಗಳಲ್ಲಿ ಮನೆಯಲ್ಲಿ ಒಂದು ನಾಯಿ ಇದ್ದರೆ ಸಾಕು, ಸುರಕ್ಷತೆ ಭಾವನೆ ತಾನೇತಾನಾಗಿ ಮೂಡುತ್ತದೆ. ಸಣ್ಣ ಸದ್ದು ಕೇಳಿದರೂ ಅಲರ್ಟ್ ಆಗಿ ಕೂಗಿ ಎಚ್ಚರಿಸುತ್ತದೆ. ಕೆಲವೊಮ್ಮೆ ರಾತ್ರಿ ಮಲಗಿರುವಾಗ ಹೊತ್ತಲ್ಲದ ಹೊತ್ತಿನಲ್ಲಿ ನಾಯಿಯ ಬೊಗಳುವಿಕೆ ಕಿರಿಕಿರಿ ಎನಿಸುವುದು ನಿಜವಾದರೂ ಹಾಗೆ ಕೂಗಲು ಏನೋ ಕಾರಣ ಇರುತ್ತದೆ ಎಂಬುದು ಅರಿವಾದಾಗ ಕೋಪ ತಗ್ಗುತ್ತದೆ. ಒಡೆಯನನ್ನು ಕಾಪಾಡಿದ ನಾಯಿಯ ಸಾವಿರಾರು ಕಥೆಗಳು ನಮ್ಮಲ್ಲಿವೆ; ಮತ್ತು ಅದಕ್ಕೆ ಸೇರ್ಪಡೆ ಆಗುತ್ತಲೇ ಇರುತ್ತದೆ. ಇಂಥ ಸೂಕ್ಷ್ಮ ಬುದ್ಧಿಯ, ಎಚ್ಚರ ಸ್ವಭಾವದ ನಾಯಿಯನ್ನು ಸಹ ಚಿರತೆ ಗೊತ್ತೇ ಆಗದಂತೆ ಹೊತ್ತೊಯ್ಯುವುದು ಸೃಷ್ಟಿಯ ವೈಚಿತ್ರ್ಯ ಎನ್ನಬೇಕಷ್ಟೆ.

ಈಗ ನಗರಗಳಲ್ಲಂತೂ ನಾಯಿ ಸಾಕುವುದು ಪ್ಯಾಷನ್ ಮತ್ತು ಫ್ಯಾಷನ್ ಎರಡೂ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಲೋಕಲ್ ತಳಿಯ ನಾಯಿಗಳು (ಈಗ ಹಳ್ಳಿಗಳಲ್ಲೂ ಅಲ್ಲಲ್ಲಿ ಲಕ್ಷಾಂತರ ಕಿಮ್ಮತ್ತಿನ ಶ್ವಾನಗಳ ಆಗಮನವಾಗಿದೆ) ಇದ್ದರೆ, ದೊಡ್ಡ ನಗರಗಳಲ್ಲಿ ವಿದೇಶಿ ಮೂಲದ ತಳಿಗಳ ಬಗೆ ಬಗೆ ದಂಡೇ ಕಾಣಸಿಗುತ್ತದೆ. ಬೆಲೆ ಮಾತ್ರ ಕೇಳಬೇಡಿ. ಪೆಟ್ ಶಾಪ್​ಗಳಿಗೆ ಭರ್ಜರಿ ವಹಿವಾಟು ಇದೆ; ಪಶುವೈದ್ಯರಿಗೂ ಬಲು ಬೇಡಿಕೆ. ದಿನಾ ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿದ್ದರೆ ಅನೇಕರಿಗೆ ನಿದ್ರೆ ಬರುವುದಿಲ್ಲ. ಈ ‘ನಾಯಿ ವಾಕಿಂಗ್’ ಅನೇಕ ಜೋಕುಗಳಿಗೂ ಕಾರಣವಾಗಿದೆಯೆಂಬುದು ಬೇರೆ ವಿಚಾರ ಎನ್ನಿ! ಮನೋವಿಜ್ಞಾನಿಗಳು ಕೂಡ ಸಾಕುಪ್ರಾಣಿಗಳಿಗೂ-ಮಾನವನ ಬಂಧಕ್ಕೂ ಇರುವ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಮಾನವನ ಬದುಕಿನಲ್ಲಿ ಇಷ್ಟೆಲ್ಲ ಮಹತ್ವದ ಪಾತ್ರ ವಹಿಸುವ ನಾಯಿ ಈಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದೆ; ಸಾಕುನಾಯಿಯಲ್ಲ, ಬೀದಿನಾಯಿ ಎಂಬುದಷ್ಟೇ ವ್ಯತ್ಯಾಸ. ಮಾತ್ರವಲ್ಲ ಇದು ಕಾನೂನು ಮತ್ತು ಆಡಳಿತ ವ್ಯವಸ್ಥೆಯ ಎದುರು ಅನೇಕ ಪ್ರಶ್ನೆಗಳನ್ನು ಸಹ ತೆರೆದಿಟ್ಟಿದೆ. ದೆಹಲಿಯಲ್ಲಿ ಬೀದಿನಾಯಿಗಳ ಹಾವಳಿ ಕುರಿತ ಅರ್ಜಿಯೊಂದರ ವಿಚಾರಣೆ ವೇಳೆ ಸವೋಚ್ಚ ನ್ಯಾಯಾಲಯ ನೀಡಿದ ನಿರ್ದೇಶನದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯುತ್ತಿರುವುದು ಗೊತ್ತೇ ಇದೆ. ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕು ಎಂದು ನ್ಯಾಯಾಲಯ ನೀಡಿದ ಆದೇಶಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಪರಿಶೀಲನೆಗೆ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವನ್ನು ರಚನೆ ಮಾಡಿದ್ದಾರೆ. ಮುಂದೆ ಯಾವ ರೀತಿಯ ತೀರ್ಪು ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಬೀದಿನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕಲೇಬೇಕು ಎಂಬುದು ನಿರ್ವಿವಾದ. ಏಕೆಂದರೆ ಅವುಗಳಿಂದ ಆಗುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಆದರೆ ನಿಯಂತ್ರಣ ಹೇಗೆ ಎಂಬುದು ದೊಡ್ಡ ಪ್ರಶ್ನೆ. ದೆಹಲಿಯಲ್ಲಿ 2009ರಲ್ಲಿ ನಡೆದ ಶ್ವಾನಗಣತಿ ಪ್ರಕಾರ, 5.6 ಲಕ್ಷ ಬೀದಿನಾಯಿಗಳಿದ್ದವು. ನಂತರದಲ್ಲಿ ಸಮೀಕ್ಷೆ ನಡೆದಿಲ್ಲ. ಆದರೂ, ಬೀದಿನಾಯಿಗಳ ಸಂಖ್ಯೆ ಸುಮಾರು 10 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇವುಗಳಿಗೆಲ್ಲ ಆಶ್ರಯ ತಾಣ ನಿರ್ವಿುಸಲೇಬೇಕು ಎಂಬ ಸನ್ನಿವೇಶ ಎದುರಾದಲ್ಲಿ ಅನುಷ್ಠಾನ ಸುಲಭವಲ್ಲ. ಇಂಥ ಪ್ರತಿ ತಾಣದಲ್ಲಿ 500 ನಾಯಿಗಳನ್ನು ಇರಿಸಬಹುದು ಎಂದು ಲೆಕ್ಕಹಾಕಿದರೂ, ಒಟ್ಟಾರೆಯಾಗಿ 2000 ಆಶ್ರಯ ತಾಣಗಳು ಬೇಕಾಗುತ್ತವೆ. ಸದ್ಯ ದೆಹಲಿ ಮುನ್ಸಿಪಲ್ ಕಾರ್ಪೆರೇಷನ್ 20 ಪ್ರಾಣಿ ನಿಯಂತ್ರಣ ಕೇಂದ್ರಗಳನ್ನು ಮಾತ್ರ ಹೊಂದಿದೆ. ಇವು ತಾತ್ಕಾಲಿಕ ಆಶ್ರಯ ಕೇಂದ್ರಗಳು. ಇಲ್ಲಿ ನಾಯಿಗಳಿಗೆ ಸಂತಾನಶಕ್ತಿ ಹರಣ ಮಾಡಿ ನಂತರ ಬಿಡಲಾಗುತ್ತದೆ. ಒಂದೊಮ್ಮೆ ಈ ಕೇಂದ್ರಗಳನ್ನೇ ಶ್ವಾನ ಆಶ್ರಯ ತಾಣಗಳಾಗಿ ಮಾರ್ಪಡಿಸಿದರೆ, ಹೆಚ್ಚೆಂದರೆ 5000 ನಾಯಿಗಳಿಗೆ ಆಸರೆ ಕಲ್ಪಿಸಬಹುದಷ್ಟೆ. ಉಳಿದ ನಾಯಿಗಳಿಗೆ ಏನು ಮಾಡುವುದು? ಇದು ಅಲ್ಲಿನ ಆಡಳಿತವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ.

ಬೆಂಗಳೂರಿನಲ್ಲಿ ಸಹ ಬೀದಿನಾಯಿ ಸಮಸ್ಯೆ ಬೃಹತ್ತಾಗೇ ಇದೆ. ಇಲ್ಲಿ ಸುಮಾರು 2.80 ಲಕ್ಷ ಬೀದಿನಾಯಿಗಳಿವೆಯೆಂಬುದು ಬಿಬಿಎಂಪಿ ಲೆಕ್ಕ. ಪ್ರತಿ ತಿಂಗಳೂ ಸರಾಸರಿ ಎರಡು ಸಾವಿರ ಬೀದಿನಾಯಿ ಕಡಿತ ಪ್ರಕರಣಗಳು ವರದಿಯಾಗುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ. (ರಾಜ್ಯದಲ್ಲಿ 2025ರ ಜನವರಿಯಿಂದ ಜೂನ್​ವರೆಗೆ 2.31 ಲಕ್ಷ ಬೀದಿನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ). ಬಡಾವಣೆ ನಿವಾಸಿಗಳ ವಾಟ್ಸಾ ್ಯ್ ಗ್ರೂಪುಗಳಲ್ಲಿ ನಾಯಿ ಬೆನ್ನಟ್ಟಿದ್ದು, ಕಚ್ಚಿದ್ದು, ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ವಾಹನ ಅಪಘಾತ ಮಾಡಿಕೊಂಡಿದ್ದು... ಇತ್ಯಾದಿ ಸಂಗತಿಗಳು ಪೋಸ್ಟ್ ಆಗುತ್ತಲೇ ಇರುತ್ತವೆ. ಜನರಿಗೆ ಕಚ್ಚಿದ ಅಥವಾ ವ್ಯಗ್ರ ಸ್ವಭಾವದ ನಾಯಿಗಳನ್ನು ಹಿಡಿದು, ನಿಗಾ ಕೇಂದ್ರದಲ್ಲಿರಿಸಿ, ಚಿಕಿತ್ಸೆ ನೀಡಿ, ಅವು ಸಹಜ ಸ್ಥಿತಿಗೆ ಬಂದಾಗ ವಾಪಸ್ ಅವುಗಳಿದ್ದ ಜಾಗಕ್ಕೇ ಬಿಡಬೇಕು ಎಂಬುದು ಸದ್ಯ ಇರುವ ನಿಯಮ.

ಪ್ರಾಣಿದಯಾ ಸಂಘಗಳು ಹಾಗೂ ಕೆಲ ಶ್ವಾನಪ್ರಿಯ ನಾಗರಿಕರು ವಾದಿಸುವ ಪ್ರಕಾರ- ಆಶ್ರಯ ಕೇಂದ್ರಗಳಂತಹವನ್ನು ನಿರ್ವಿುಸಿ, ಅದರಲ್ಲಿ ನಾಯಿಗಳನ್ನು ಕೂಡಿಹಾಕಿ ಸಂಭಾಳಿಸಲು ಸಾಧ್ಯವಿಲ್ಲ. ಅದರ ನಿರ್ವಹಣೆಗೆ ಅಗಾಧ ಮೊತ್ತ ಬೇಕಾಗುತ್ತದೆ. ಇದಲ್ಲದೆ, ನಾಯಿ ನಿಯಂತ್ರಣಕ್ಕೆ ತರಬೇತಾದ ಸಿಬ್ಬಂದಿ ಸಹ ಬೇಕಾಗುತ್ತಾರೆ. ದೊಡ್ಡ ಪ್ರಮಾಣದ ಜಾಗ ಸಹ ಅಗತ್ಯ. ಇದೆಲ್ಲ ಸುಲಭವಲ್ಲ. ಆದ್ದರಿಂದ, ಲಸಿಕೆ ನೀಡುವುದು ಮತ್ತು ಸಂತಾನಶಕ್ತಿ ಹರಣವೇ ಸೂಕ್ತ ಪರಿಹಾರೋಪಾಯ. ಅಷ್ಟಕ್ಕೂ ಪ್ರಾಣಿಪ್ರೀತಿಯಿಂದ ಬೀದಿಬೀದಿಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಆಹಾರ ನೀಡುವ ಅಗತ್ಯವೂ ಇಲ್ಲ ಎಂಬುದು ಇವರ ಪ್ರತಿಪಾದನೆ. ಬೀದಿನಾಯಿಗಳು ಬೇರೆಯ ಲೋಕದವು, ಅವು ಇಲ್ಲಿ ಬದುಕಬಾರದು ಎಂದು ಯಾರೂ ಹೇಳುವುದಿಲ್ಲ. ಆದರೆ ಅವುಗಳಿಂದ ಉಂಟಾಗುವ ಉಪಟಳಕ್ಕೆ ಕಡಿವಾಣ ಬೇಕೇ ಬೇಕು ಎಂಬುದು ಮತ್ತೊಂದು ವಾದ. ಮಾನವೀಯ ನೆಲೆಯಲ್ಲಿಯೇ ಪರಿಹಾರ ಕಂಡುಕೊಳ್ಳಲಿ ಎಂದು ಇವರು ಹೇಳುತ್ತಾರೆ.

ನಾಯಿ ಕಡಿತ, ಹಬ್ಬುತ್ತಿರುವ ರೇಬಿಸ್ ಕಾಯಿಲೆಯ ಪ್ರಮಾಣ ಭಾರತ ಮಾತ್ರವಲ್ಲ ಇತರ ದೇಶಗಳಲ್ಲೂ ಆತಂಕ ಉಂಟುಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ನಾಯಿ ಕಡಿತ ಮತ್ತು ರೇಬಿಸ್​ನಿಂದ ಪ್ರತಿವರ್ಷ ಜಾಗತಿಕವಾಗಿ 55 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪೈಕಿ ಭಾರತೀಯರ ಪ್ರಮಾಣವೇ 18ರಿಂದ 20 ಸಾವಿರ ಇರುತ್ತದೆಂಬುದು ಮತ್ತಷ್ಟು ಕಳವಳಕಾರಿ ಸಂಗತಿ. ಅದರಲ್ಲೂ ಹೆಂಗಸರು ಮತ್ತು ಮಕ್ಕಳು ಹೆಚ್ಚಾಗಿ ಅಪಾಯ ಎದುರಿಸುತ್ತಿದ್ದಾರೆ. ದೇಶದಲ್ಲಿ 1.53 ಕೋಟಿ ಬೀದಿನಾಯಿಗಳಿವೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕ. ಆದರೆ ಈ ಸಂಖ್ಯೆ 6 ಕೋಟಿಗಿಂತ ಹೆಚ್ಚು ಎಂಬುದು ಎನ್​ಜಿಒಗಳ ಅಂದಾಜು.

ಸುಪ್ರೀಂ ಕೋರ್ಟ್ ಆದೇಶದ ಬಳಿಕ ಬೀದಿನಾಯಿಗಳಿಗೆ ಲಸಿಕೆ ನೀಡುವ ಮತ್ತು ಸಂತಾನ ಶಕ್ತಿ ಹರಣ ಕಾರ್ಯದ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಬೀದಿನಾಯಿ ಸಮಸ್ಯೆ ಭಾರತಕ್ಕೆ ಸೀಮಿತವಲ್ಲ. ಎಲ್ಲ ದೇಶಗಳಲ್ಲೂ ಇದ್ದೇ ಇದೆ. ಅಮೆರಿಕವು ಬೀದಿನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ನೀತಿಯನ್ನು ಅಳವಡಿಸಿಕೊಂಡಿದೆ. ಲಸಿಕೆ ನೀಡುವ ಮತ್ತು ಸಂತಾನಶಕ್ತಿ ಹರಣದಂತಹ ಕ್ರಮಗಳನ್ನು ಅನೇಕ ದೇಶಗಳು ಅನುಸರಿಸುತ್ತವೆ.

ಕೊನೇ ಮಾತು: ಪ್ರಾಣಿಗಳ ವಿಚಾರದಲ್ಲಿ ಭಾರತೀಯರಿಗೆ ಒಂದು ಬಗೆಯ ಭಾವನಾತ್ಮಕ ಸಂಬಂಧ ಸಹ ಇದೆ. ಹೀಗಾಗಿ ಕೇವಲ ಪ್ರಾಣಿಗಳ ಹಾವಳಿ ಅಥವಾ ಉಪಟಳದ ಆಯಾಮದಲ್ಲಿ ಇದನ್ನು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ. ಎಷ್ಟೋ ಪ್ರಾಣಿಗಳು ನಮಗೆ ಪೂಜಾರ್ಹವಾಗಿವೆ. ಸಾಧು ಸ್ವಭಾವದ ಗೋವಿನ ಮಾತಿರಲಿ ಹುಲಿಯಂತಹ ಪ್ರಾಣಿಯನ್ನು ಕೂಡ ಆರಾಧನೆ ಮಾಡುವ ಪರಂಪರೆ ಇದೆ. ಮಲೆಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ಹುಲಿಯನ್ನು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಭಗವಾನ್ ದತ್ತಾತ್ರೇಯನ ಸುತ್ತ ಗೋವು ಹಾಗೂ ನಾಲ್ಕು ಶ್ವಾನಗಳಿರುತ್ತವೆ. ಈ ಶ್ವಾನಗಳು ನಾಲ್ಕು ವೇದಗಳನ್ನು ಪ್ರತಿನಿಧಿಸುತ್ತವೆ ಎಂಬ ವ್ಯಾಖ್ಯಾನವಿದೆ. ಇದೇ ರೀತಿ ಉಳಿದ ಪ್ರಾಣಿಗಳಿಗೂ ತಾತ್ವಿಕ ವಿವರಣೆಯಿದೆ. ಇಲಿ, ನವಿಲು, ಗರುಡ, ಸಿಂಹ ಇತ್ಯಾದಿ ಪ್ರಾಣಿಗಳು ದೇವವಾಹನಗಳಾಗಿಯೂ ಜನರ ಮನದಲ್ಲಿ ನೆಲೆನಿಂತಿವೆ. ಇದು ನಮ್ಮ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಕೃಷಿಕರು ಮಂಗ ಮತ್ತು ನವಿಲು ಇತ್ಯಾದಿ ಪ್ರಾಣಿಗಳ ಹಾವಳಿಯಿಂದ ಅಪಾರವಾಗಿ ಬೆಳೆ ನಷ್ಟ ಅನುಭವಿಸುತ್ತಾರೆ. ಹಾಗಂತ ಸಿಕ್ಕ ಸಿಕ್ಕ ಆನೆ, ಮಂಗ ಅಥವಾ ನವಿಲುಗಳನ್ನು ಹೊಡೆದು ಹಾಕುವ ಮನಸ್ಸು ಬರುವುದಿಲ್ಲ. ಇದೇ ಹೊತ್ತಿಗೆ, ಕಾನೂನಿನ ಅಂಕುಶವೂ ಇದೆಯೆಂಬುದನ್ನು ಮರೆಯಬಾರದು. ಈಗ ಬೀದಿನಾಯಿಗಳನ್ನು ಏನು ಮಾಡಬೇಕು ಎಂಬ ಸಂದಿಗ್ಧ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?’ ಎಂದು ಕೇಳಬೇಕೆ ಬೇಡವೆ ಎಂಬ ಇಕ್ಕಟ್ಟು ಎದುರಿಗಿದೆ. ಈ ಶ್ವಾನಪ್ರೀತಿ ಬಿಕ್ಕಟ್ಟು ಉಂಟುಮಾಡಿದರೆ ಎಂಬ ಭೀತಿ. ಇದರ ಜತೆಗೆ ಪ್ರಾಣಿಗಳಿಗೆ ನಿರ್ದಿಷ್ಟ ಜಾಗದಲ್ಲಿ ಮಾತ್ರ ಆಹಾರ ನೀಡಬೇಕು ಎಂಬ ನಿಯಮ ಕೂಡ ಕೆಲವೆಡೆ ಚಾಲ್ತಿಯಲ್ಲಿದೆ. ಸುಪ್ರೀಂ ಕೋರ್ಟ್ ಯಾವ ರೀತಿಯ ನಿರ್ಣಯ ಕೊಡುತ್ತದೆಂಬುದನ್ನು ಕಾದುನೋಡುವುದು ಸದ್ಯದ ಮಾರ್ಗ. ಏಕೆಂದರೆ, ಆ ತೀರ್ಪಿನ ಆಧಾರದ ಮೇಲೆ ಸರ್ಕಾರಗಳ ನೀತಿ ರೂಪಿತವಾಗುತ್ತದೆ. ಒಟ್ಟಿನಲ್ಲಿ ಪ್ರಾಯೋಗಿಕ ಆಧಾರದಲ್ಲಿ ಒಂದು ಮಾನವೀಯ ನೀತಿ ಬರುತ್ತದೆಂದು ನಿರೀಕ್ಷಿಸೋಣ.

(ಲೇಖಕರು 'ವಿಜಯವಾಣಿ' ಡೆಪ್ಯೂಟಿ ಎಡಿಟರ್​)