ಕೆಲವು ವರ್ಷಗಳಿಂದ ಪದ್ಮ ಪ್ರಶಸ್ತಿಗಳ ಪಟ್ಟಿ ಜನರ ಕಣ್ಣು ಅರಳಿಸುವಂತೆ ಮಾಡುತ್ತಿದೆ. ವನವಾಸಿಗಳು, ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶದವರು, ಕುಗ್ರಾಮದ ಸಾಧಕರು, ಬೇರುಮಟ್ಟದಲ್ಲಿ ಕಾರ್ಯನಿರ್ವಹಿಸಿದವರು ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿ, ಸುಧಾರಣೆಗೆ ಕಾರಣವಾಗಿರುವ ತೆರೆಮರೆಯ ಸಾಧಕರಿಗೆ ಪ್ರಶಸ್ತಿ ಅರಸಿಕೊಂಡು ಬರುತ್ತಿದೆ. ತನ್ಮೂಲಕ ಪ್ರಶಸ್ತಿಯ ಘನತೆಯೂ ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ಜನರ ಸಹಭಾಗಿತ್ವ. ಶ್ರೀಸಾಮಾನ್ಯರೇ ಸಾಧಕರ ಹೆಸರನ್ನು ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡಬಹುದಾಗಿದೆ. ಈ ವರ್ಷದಿಂದ ಇದೇ ಮಾದರಿಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅನುಸರಿಸಲಾಗುತ್ತಿದೆ. ಈ ಸಕಾರಾತ್ಮಕ ಸಂಚಲನದ ಕುರಿತು ರವೀಂದ್ರ ಎಸ್. ದೇಶಮುಖ್ ಮತ್ತು ರಮೇಶ ದೊಡ್ಡಪುರ ಅವರು ಅವಲೋಕಿಸಿದ್ದಾರೆ.
ಒಂದೊಂದು ಕ್ಷೇತ್ರದ ಸುಧಾರಣೆಗೂ ಜೀವನವನ್ನೇ ಸಮರ್ಪಿಸಿ, ನಿಷ್ಠೆ, ನಿಸ್ವಾರ್ಥದಿಂದ ಕಾರ್ಯನಿರ್ವಹಿಸುವ ಸಜ್ಜನ ಶಕ್ತಿಯ ದೊಡ್ಡ ಸಮೂಹವೇ ಭಾರತದಲ್ಲಿದೆ. ಇಂಥವರಿಂದಲೇ ಸ್ಥಳೀಯವಾಗಿ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ, ಅಭಿವೃದ್ಧಿಯ ಹೊಸ ಮಾದರಿಯೂ ಹುಟ್ಟಿಕೊಳ್ಳುತ್ತದೆ. ಹೀಗಿರುವಾಗ ಪ್ರಶಸ್ತಿಗಳು ಇಂಥ ಸಾಧಕರನ್ನು ಹುಡುಕಿಕೊಂಡು ಹೋದಾಗ ಅವುಗಳ ಮೌಲ್ಯ, ಘನತೆ ಇನ್ನಷ್ಟು ಹೆಚ್ಚುತ್ತದೆ. ಇತರರಿಗೆ ಪ್ರೇರಣೆಯೂ ಒದಗುತ್ತದೆ. ಕೆಲ ವರ್ಷಗಳ ಮುಂಚೆ ಪದ್ಮ ಪ್ರಶಸ್ತಿಗಳ ಹಿಂದೆ ರಾಜಕೀಯ ಲಾಬಿ, ವರ್ಚಸ್ಸು ಮುಂತಾದವು ಕೆಲಸ ಮಾಡುತ್ತಿದ್ದವು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 2014ರಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಕ್ರಮಕ್ಕೆ ಮುಂದಾಯಿತು. https://padmaawards.gov.in/ ಪೋರ್ಟಲ್ ಮುಖಾಂತರ ಜನರೇ ಸಾಧಕರನ್ನು ಗುರುತಿಸಿ, ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡುವ ಪಾರದರ್ಶಕ ನೀತಿ ಬಂತು. ಪರಿಣಾಮ, ಪಾರಂಪರಿಕ ಔಷಧದ ಮೂಲಕ ಸಾವಿರಾರು ಜನರ ಜೀವ ಉಳಿಸಿದವರು, ವಿಶಿಷ್ಟ ಕಲಾಪ್ರಕಾರಗಳ ಮೂಲಕ ಮನಸ್ಸಿನ ನೆಮ್ಮದಿ ಸ್ಥಾಪಿಸಿದವರು, ಕೃಷಿಯಲ್ಲಿ ನಾವೀನ್ಯತೆ ತಂದವರು, ಅಂಗವಿಕಲರು, ಅನಾಥರ ಕಲ್ಯಾಣಕ್ಕೆ ಶ್ರಮಿಸಿದವರು ಹೀಗೆ ಅಪರೂಪದ ಸಾಧಕರನ್ನು ಪದ್ಮ ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ. ಇದೇ ಹಾದಿಯಲ್ಲಿ ಕರ್ನಾಟಕ ಸರ್ಕಾರ ನಡೆಯಲು ಮುಂದಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ ಜನರು ಸಾಧಕರ ಹೆಸರನ್ನು ಶಿಫಾರಸು ಮಾಡಬಹುದಾಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಂದ ಕೂಡಲೆ, ‘ಪಡೆದುಕೊಂಡಿದ್ದ, ಹೊಡೆದುಕೊಂಡಿದ್ದ?’ ಎಂಬ ಮಾತು ಕೆಲ ವರ್ಷಗಳ ಹಿಂದೆ ಕೇಳಿಬರುತ್ತಿತ್ತು. ಮುಖ್ಯವಾಗಿ ರಾಜಕಾರಣಿಗಳ ಶಿಫಾರಸು ಆಧರಿಸಿ ‘ಸಾಧಕ’ರನ್ನು ಆಯ್ಕೆ ಮಾಡುವುದು ಬಹಿರಂಗ ಗುಟ್ಟಾಗಿತ್ತು. ಕನ್ನಡ ನಾಡು-ನುಡಿಗೆ ಕೊಡುಗೆ ನೀಡಿದವರನ್ನು ಗೌರವಿಸಲು ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರ ನೀಡುವ ಪ್ರಶಸ್ತಿ ಅನೇಕ ಬಾರಿ ಇಂಥ ಅಪಹಾಸ್ಯಕ್ಕೀಡಾಗಿದೆ. ಅಕ್ಟೋಬರ್ 31ರ ತಡರಾತ್ರಿವರೆಗೆ ನಡೆಯುತ್ತಿದ್ದ ಪ್ರಶಸ್ತಿ ಲಾಬಿ ಕೆಲವೊಮ್ಮೆ ನ.1ರಂದೂ ಮುಂದುವರಿದ ನಿದರ್ಶನಗಳಿವೆ. ಇಷ್ಟೆ ಅಲ್ಲದೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ಕೆಲವರ ಹೆಸರನ್ನು ಕರೆದು ಸನ್ಮಾನಿಸಿ ಆನಂತರ ಪ್ರಶಸ್ತಿ ಪತ್ರ, ಪದಕ ಮುದ್ರಣಕ್ಕೆ ನೀಡಲಾಗುತ್ತಿತ್ತು ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಮಾತು. ಪ್ರಶಸ್ತಿ ಪಡೆದವರಿಗೆ ವಿವಿಧ ಸರ್ಕಾರಿ ಯೋಜನೆಗಳು ಸೇರಿ ನಿವೇಶನ ನೀಡಿಕೆಯಲ್ಲೂ ಪ್ರಾಶಸ್ಱ ಇರುವ ಕಾರಣಕ್ಕೆ ಪ್ರಶಸ್ತಿ ಕೊಡಿಸುವ ದಲ್ಲಾಳಿಗಳೂ ಹುಟ್ಟಿಕೊಂಡಿದ್ದರು.
ಭಾರತದಲ್ಲಿ ಅಸಾಧಾರಣ ಕೆಲಸ ಮಾಡಿದ, ಮಾಡುತ್ತಿರುವ ಪ್ರತಿಭಾವಂತರು ಸದ್ದಿಲ್ಲದೆ ಸುಧಾರಣೆಯನ್ನು ತರುತ್ತಿದ್ದಾರೆ. ಇಂಥ ತೆರೆಮರೆ ಸಾಧಕರ ಬಗ್ಗೆ ಜನರು ಕೂಡ ಹೆಚ್ಚು ತಿಳಿದಿಲ್ಲ. ಅವರವರ ಪ್ರದೇಶಗಳಲ್ಲಿನ ಈ ಅನನ್ಯ ಸಾಧಕರನ್ನು ಜನರೇ ಗುರುತಿಸಿ, ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಬೇಕು. ಇದರಿಂದ ನಿಜವಾದ ಸಾಧಕರಿಗೆ ಪ್ರಶಸ್ತಿ ತಲುಪಿಸಲು ಸಾಧ್ಯವಾಗುತ್ತದೆ. ಕೆಲ ವರ್ಷಗಳಿಂದ ಈ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. | ನರೇಂದ್ರ ಮೋದಿ ಪ್ರಧಾನಿ (ಟ್ವೀಟ್ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ)
ಸಾವಿರಾರು ಅರ್ಜಿಗಳು
ಅರ್ಜಿ ಸಲ್ಲಿಕೆಯಲ್ಲಿ 2010ರ ರಾಜ್ಯೋತ್ಸವ ಪ್ರಶಸ್ತಿ ದಾಖಲೆ ನಿರ್ವಿುಸಿತ್ತು. ಈ ಅವಧಿಯಲ್ಲಿ 3,200ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. 2013ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನೀಡಬೇಕಾಗಿದ್ದ ಚಿನ್ನದ ಪದಕಗಳ ಕಳವು ಪ್ರಕರಣ ಪ್ರಶಸ್ತಿಯ ಘನತೆಯನ್ನು ಪಾತಾಳಕ್ಕೆ ತಳ್ಳಿತು. ಇಂತಿಷ್ಟೇ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ನಿಯಮ ಇರಲಿಲ್ಲ. ವಿವಿಧ ಸರ್ಕಾರಗಳ ‘ಇಚ್ಛಾಶಕ್ತಿ’ಗೆ ತಕ್ಕಂತೆ ಹೆಚ್ಚು-ಕಡಿಮೆಯಾಗುತ್ತ ಬಂದಿದ್ದವು. ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ 175 ಜನರಿಗೆ ಪ್ರಶಸ್ತಿ ನೀಡಿದ್ದರು! 176 ಪ್ರಶಸ್ತಿ ನೀಡುವ ಮೂಲಕ ಧರ್ಮಸಿಂಗ್ ಸರ್ಕಾರ ಈ ದಾಖಲೆಯನ್ನು ಮುರಿದಿತ್ತು. ಆನಂತರ ವ್ಯಕ್ತವಾದ ಟೀಕೆಗಳಿಂದ ಪ್ರಶಸ್ತಿಗಳ ಸಂಖ್ಯೆಯಲ್ಲಿ ಕಡಿತವಾಯಿತು. 2009ರಲ್ಲಿ ರಾಜ್ಯಾ ದ್ಯಂತ ಬರದ ಛಾಯೆಯಿದ್ದ ಹಿನ್ನೆಲೆ ಯಲ್ಲಿ ಪ್ರಶಸ್ತಿ ನೀಡಿರಲಿಲ್ಲ. 2010ರಲ್ಲಿ ಎರಡೂ ವರ್ಷದ ಪ್ರಶಸ್ತಿ ಸೇರಿಸಿ ಒಟ್ಟು 162 ಪ್ರಶಸ್ತಿಗಳನ್ನು ನೀಡಲಾಗಿತ್ತು. 2011ರಲ್ಲಿ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ, ಈ ಸಂಖ್ಯೆ ಯನ್ನು 50ಕ್ಕೆ ಸೀಮಿತಗೊಳಿಸಬೇಕೆಂಬ ದೃಢನಿರ್ಧಾರ ತಳೆದರು. ಆದರೆ ಮುಂದಿನ ವರ್ಷ ತೀವ್ರ ಒತ್ತಡದಿಂದಾಗಿ ಮತ್ತೆ 64ಕ್ಕೆ ಹೆಚ್ಚಳವಾಯಿತಾದರೂ ತೀರಾ ಕೈಮೀರುವ ಹಂತಕ್ಕೆ ಹೋಗಲಿಲ್ಲ. 2014ರಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು, ಕರ್ನಾಟಕ ಏಕೀಕರಣವಾದ ವರ್ಷದಷ್ಟೆ ಪ್ರಶಸ್ತಿ ನೀಡುವ ಸೂತ್ರವನ್ನು ಹಾಕಿಕೊಂಡಿತು.ಅದರಂತೆ 2014ರಲ್ಲಿ 59 ಪ್ರಶಸ್ತಿ ನೀಡಲಾಯಿತು.
ಮಾನದಂಡ ರಚನೆ
ಸಾಂಸ್ಕೃತಿಕ ನೀತಿ ರಚಿಸಲು ಸರ್ಕಾರ ರೂಪಿಸಿದ ಡಾ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ 2014ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಇದರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಳ ಬಗ್ಗೆ ಉಲ್ಲೇಖವಿತ್ತು. ‘ಪ್ರಶಸ್ತಿಗಳ ಪಾರದರ್ಶಕತೆ’ ಶೀರ್ಷಿಕೆಯಲ್ಲಿ ವಿವಿಧ ಪ್ರಶಸ್ತಿಗಳ ನೀಡಿಕೆಯಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸಲಹೆ ನೀಡಲಾಗಿತ್ತು. ಆದರೆ ವರದಿ ಸಲ್ಲಿಕೆಯಾಗಿ ಎರಡು ವರ್ಷವಾಗಿದ್ದರೂ ಸಾಂಸ್ಕೃತಿಕ ನೀತಿ ಅಳವಡಿಸಿಕೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿತ್ತು. ಇದೇ ವೇಳೆ ಬೆಂಗಳೂರಿನ ಸತ್ಯನಾರಾಯಣ ಎಂಬ ಸಾಹಿತಿಯೊಬ್ಬರು ದಾಖಲಿಸಿದ ಪ್ರಕರಣ ಪ್ರಶಸ್ತಿಯ ಸುಧಾರಣೆಯಲ್ಲಿ ಮುಖ್ಯಪಾತ್ರ ವಹಿಸಿತು. ತಾವು ಸಾಹಿತ್ಯದಲ್ಲಿ ಗಮನಾರ್ಹ ಕೆಲಸ ಮಾಡಿದ್ದರೂ, ಹಲವು ವರ್ಷ ಅರ್ಜಿ ಸಲ್ಲಿಸಿದರೂ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿರಲಿಲ್ಲ ಎಂದು 2014ರಲ್ಲೇ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇವರನ್ನು ಪದೇಪದೆ ತಿರಸ್ಕರಿಸಲಾಗುತ್ತಿದೆಯಾದರೆ, ಆಯ್ಕೆಗೆ ಮಾನದಂಡಗಳೇನು? ಎಂದು ಪ್ರಶ್ನಿಸಿತು. ಮಾನದಂಡವೇ ಇಲ್ಲ ಎಂಬುದು ತಿಳಿದುಬಂದಾಗ, ಪ್ರಶಸ್ತಿ ಆಯ್ಕೆಗೆ ಮಾನದಂಡ ರಚಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತು. ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಅಧ್ಯಕ್ಷತೆಯ 22 ಸದಸ್ಯರ ಸಮಿತಿಯನ್ನು ಸರ್ಕಾರ ರಚಿಸಿತು. ಸಮಿತಿ ವರದಿ ಆಧಾರದಲ್ಲಿ ಮಾರ್ಗಸೂಚಿ ರಚನೆ ಮಾಡಲಾಯಿತು. ನಿಯಮ ರೂಪಿಸಿ ಹೈಕೋರ್ಟಿಗೆ ಸಲ್ಲಿಸಲಾಯಿತು. ಅದೇ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿ, ಮಾರ್ಗಸೂಚಿ ಹೊರಡಿಸಿತು.
ಜನರಿಂದ ಸಲಹೆ, ಸರ್ಕಾರಕ್ಕೆ ಸವಾಲು
ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು, ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ (https://sevasindhu.karnataka.gov.in/) ಸಾಧಕರ ಹೆಸರು ಶಿಫಾರಸು ಮಾಡಲು ಅವಕಾಶ ನೀಡಿದ್ದಾರೆ. ಅಂದಾಜು 18 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದು, ಇಷ್ಟು ಅರ್ಜಿಗಳನ್ನು ವಿಲೇವಾರಿ ಮಾಡುವುದು ಸಮಿತಿಗೆ ಸವಾಲಾದರೂ, ಸಾರ್ವಜನಿಕರ ಸಹಭಾಗಿತ್ವ ಮಹತ್ವದ ಹೆಜ್ಜೆಯಾಗಿದೆ. ಅರ್ಹರನ್ನೇ ಆಯ್ಕೆ ಮಾಡುವ ಮೂಲಕ ಜನರ ನಂಬಿಕೆ ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆಯೂ ಸಮಿತಿ ಹಾಗೂ ಸರ್ಕಾರದ ಮೇಲಿದೆ.
ಆಯ್ಕೆ ಪ್ರಕ್ರಿಯೆ
ಜನರಿಂದ ಬಂದ ನಾಮನಿರ್ದೇಶನಗಳನ್ನು ತಜ್ಞರ ಸಮಿತಿ ಸೂಕ್ಷ್ಮವಾಗಿ ಪರಿಶೀಲಿಸುವ ಜತೆಗೆ, ಸ್ಥಳೀಯ ಮಟ್ಟದಲ್ಲಿ ಸಾಧನೆಯನ್ನು, ಸಾಧಕರ ಕೊಡುಗೆಯನ್ನು ಆಮೂಲಾಗ್ರವಾಗಿ ಅವಲೋಕಿಸಲಾಗುತ್ತದೆ. ಎಲ್ಲ ಮಾಹಿತಿಯನ್ನು ಖಾತ್ರಿಪಡಿಸಿಕೊಂಡು, ಶಿಸ್ತುಬದ್ಧ ಮೌಲ್ಯಮಾಪನದ ನಂತರ ಶಾರ್ಟ್ ಲಿಸ್ಟ್ ಮಾಡಿ, ಪ್ರಶಸ್ತಿಗೆ ಸಾಧಕರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.
ಯಾವುದೇ ಪ್ರಶಸ್ತಿಗೆ ಸಾಧಕರೇ ಅರ್ಜಿ ಹಾಕಿಕೊಂಡು ಕೇಳಬಾರದು, ಪ್ರಶಸ್ತಿಯೇ ಸಾಧಕರನ್ನು ಹುಡುಕಿಕೊಂಡು ಬರಬೇಕು ಎನ್ನುವುದು ನನ್ನ ಅಭಿಪ್ರಾಯ. ಸಾಧಕರು ತಾವೇ ಬಯೋಡೇಟಾ ಗಳನ್ನು ಹಿಡಿದುಕೊಂಡು ಓಡಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ, ಅವರ ಕುರಿತು ಬೇರೆಯವರು ಶಿಫಾರಸು ಮಾಡಲು ಸೇವಾ ಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಯಿತು. ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಒಂದೇ ವರ್ಷದಲ್ಲಿ ಎಲ್ಲ ಸರಿಯಾಗದೇ ಇರಬಹುದು, ಹಂತ ಹಂತವಾಗಿ ಸುಧಾರಣೆ ಆಗುತ್ತದೆ. | ವಿ. ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ
ರಾಜ್ಯೋತ್ಸವ ಪ್ರಶಸ್ತಿ ಮಾರ್ಗಸೂಚಿ
ಸಾರ್ವಜನಿಕರಿಂದ ಆಹ್ವಾನ ಸ್ವಾಗತಾರ್ಹ
ರಾಜ್ಯೋತ್ಸವ ಪ್ರಶಸ್ತಿಯ ವಿಷಯ ಬಂದಾಗೆಲ್ಲ, ಆಸಕ್ತ ಸಾಧಕರು ಅರ್ಜಿ ಹಾಕಿಕೊಳ್ಳುವಂತೆ ಮಾಡುವುದು ಸರಿಯಲ್ಲ ಎಂಬ ಟೀಕೆ ಬರುತ್ತದೆ. ಈ ಸಾರಿ ಸೇವಾ ಸಿಂಧು ಮೂಲಕ ಸಲಹೆ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಕೊಡುವ ಸಲಹೆಗಳಿಂದ ಸಮಿತಿಗೆ, ಅರಿವಿಗೆ ಬಾರದೆ ಇರುವ ಸಾಧಕರ ವಿವರ ಸಿಗಬಹುದು. ಅಷ್ಟರ ಮಟ್ಟಿಗೆ ಇದು ಒಳ್ಳೆಯ ಉಪಕ್ರಮ. ಸರ್ಕಾರದ ವತಿಯಿಂದ ಕೊಡುವ ರಾಜ್ಯೋತ್ಸವ ಪ್ರಶಸ್ತಿಗೆ ಸಾಧನೆಯ ಅರ್ಹತೆಯನ್ನು ಮೂಲ ಮಾನದಂಡವಾಗಿಟ್ಟುಕೊಂಡು ಸಾಮಾಜಿಕ, ಪ್ರಾದೇಶಿಕ ಹಾಗೂ ಮಹಿಳಾ ನ್ಯಾಯದ ಆಧಾರದಲ್ಲಿ ಆಯ್ಕೆ ಮಾಡಬೇಕು. ನಾನು ಆಯ್ಕೆ ಸಮಿತಿಯಲ್ಲಿದ್ದಾಗ, ಈಗ ಇಲ್ಲವಾಗುತ್ತಿರುವ ಹಂತಕ್ಕೆ ತಲುಪಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಯಂ ಹುಡುಕಿ ಪ್ರಶಸ್ತಿ ಕೊಡಬೇಕು ಎಂದು ಪ್ರತಿಪಾದಿಸಿ ಯಶಸ್ವಿಯಾಗಿದ್ದೆ. ಕನ್ನಡಪರ ಕ್ರಿಯಾಶೀಲತೆಯ ಸಾಧಕರಿಗೆ ಕನ್ನಡ ಸೇವೆ ಎಂಬ ಪ್ರತ್ಯೇಕ ವಿಭಾಗ ಮಾಡಿ ಪ್ರತಿ ವರ್ಷ ಇಬ್ಬರು-ಮೂವರಿಗೆ ಪ್ರಶಸ್ತಿ ನೀಡುವಂತೆ ಮಾಡಲಾಗಿತ್ತು. ಆದರೆ ಕೆಲವು ವರ್ಷಗಳಿಂದ ಈ ವಿಭಾಗವೇ ಇಲ್ಲ. ಇನ್ನೂ ಬದುಕಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಶಸ್ತಿ ಹಾಗೂ ಕನ್ನಡ ಸೇವೆ ವಿಭಾಗದ ಮರುಸ್ಥಾಪನೆ- ಇವುಗಳಿಗೆ ಒತ್ತಾಯಿಸುವೆ.
| ಡಾ. ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ