|ಮಂಜುನಾಥ ತಿಮ್ಮಯ್ಯ ಮೈಸೂರು
ಸಾಂಸ್ಕೃತಿಕ ನಗರಿಗೆ ಮುಕುಟಪ್ರಾಯವಾಗಿರುವ ಮೈಸೂರು ಅರಮನೆಯನ್ನು ಝುಗಮಗಿಸುವಂತೆ ಮಾಡಿ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರಕ್ಕೆ ಇದೀಗ ನೂರು ವರ್ಷದ ಸಡಗರ..!
ಅರಮನೆಯನ್ನು ಬೆಳಗುತ್ತಿರುವ ಹೊನ್ನ ಚೆಲುವು ಈ ಲೈಟಿಂಗ್ಸ್. ಈ ದೀಪಾಲಂಕಾರ ಇಲ್ಲದ ಸೌಂದರ್ಯವನ್ನು ನೆನೆಸಿಕೊಳ್ಳುವುದೂ ಕಷ್ಟಕರ. ಶತಮಾನೋತ್ಸವದ ಸಂಭ್ರಮದಲ್ಲಿ ಅರಮನೆ ಅಂದವನ್ನು ಇಮ್ಮಡಿಗೊಳಿಸಿರುವ ವಿದ್ಯುತ್ ದೀಪಾಲಂಕಾದ ಇತಿಹಾಸವನ್ನು ಒಮ್ಮೆ ಸ್ಮರಿಸಿಕೊಳ್ಳೋಣ.
ಮೊದಲು ಇದ್ದ ಅರಮನೆ ಇದಲ್ಲ. ವೈಭವೋಪೇತ ನೋಟಕ್ಕೆ ಹೆಸರುವಾಸಿಯಾಗಿದ್ದ ಮರದ ಅರಮನೆ 1897ರಲ್ಲಿ ಜಯಲಕ್ಷ್ಮೀ ಅಮ್ಮಣ್ಣಿ ಅವರ ವಿವಾಹದಲ್ಲಿ ಅಗ್ನಿ ಆಕಸ್ಮಿಕದಲ್ಲಿ ಭಾಗಶಃ ಸುಟ್ಟುಹೋಯಿತು. ಮಹಾರಾಜ ಆಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಪ್ರಾಪ್ತ ವಯಸ್ಕರಾಗಿದ್ದರಿಂದ ಅವರ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಆಡಳಿತ ನಿರ್ವಹಿಸುತ್ತಿದ್ದರು. ಅಗ್ನಿ ಅವಘಡದಿಂದ ಎದೆಗುಂದದ ಅವರು, ಅದೇ ಸ್ಥಳದಲ್ಲೇ ನೂತನ ಅರಮನೆ ನಿರ್ವಿುಸಲು ಸಂಕಲ್ಪ ಮಾಡಿದರು. ಹೆಸರಾಂತ ಬ್ರಿಟಿಷ್ ವಾಸ್ತುಶಿಲ್ಪಿ ತಜ್ಞ ಹೆನ್ರಿ ಇರ್ವಿನ್ ಅವರಿಗೆ ವಿನ್ಯಾಸ ರಚನೆ ಹೊಣೆ ವಹಿಸಿದರು. ಮೈಸೂರಿನ ಪ್ರಾಕೃತಿಕ ಹಿನ್ನೆಲೆ, ಚಾಮುಂಡಿ ಬೆಟ್ಟ, ಕೋಟೆಯ ಸುತ್ತಲಿನ ವಾತಾವರಣ ಎಲ್ಲವನ್ನೂ ಅಧ್ಯಯನ ಮಾಡಿದ ಅವರು ನೀಲಿನಕ್ಷೆ ತಯಾರಿಸಿ ಕೊಟ್ಟರು. 1897ರಲ್ಲಿ ಹಳೇ ಬುನಾದಿ ಮೇಲೆ ಹೊಸ ಅರಮನೆ ಕಟ್ಟಲು ಶುರು ಮಾಡಲಾಯಿತು. ಭಾರತೀಯ-ಪರ್ಷಿಯನ್ ಶೈಲಿಯ ಗುಮ್ಮಟಗಳನ್ನು ಒಳಗೊಂಡ ಭವ್ಯ ಅರಮನೆ 1912ರಲ್ಲಿ ಪೂರ್ಣಗೊಂಡಿತು. ಅಂದು ಇದಕ್ಕೆ ಖರ್ಚಾಗಿದ್ದು 41.05 ಲಕ್ಷ ರೂ. ಮಾತ್ರ. ಇದು ಒಂದು ಇತಿಹಾಸವಾದರೆ ವಿದ್ಯುತ್ ದೀಪಾಲಂಕಾರಕ್ಕಿದೆ ಮತ್ತೊಂದು ಚರಿತ್ರೆ.
ಬ್ರಿಟನ್ ಗಣಿ ಕಂಪನಿಗಳು ಕೋಲಾರದ ಗಣಿಗಳಿಂದ ಚಿನ್ನ ತೆಗೆಯಲು ವಿದ್ಯುತ್ ಅಗತ್ಯವಿತ್ತು. ಆಗ ಕಾವೇರಿ ಕಣಿವೆಯ ಶಿವನಸಮುದ್ರದಲ್ಲಿ 1905ರಲ್ಲಿ ವಿದ್ಯುತ್ ಉತ್ಪಾದನೆ ಕಾರ್ಯಾರಂಭ ಮಾಡಲಾಯಿತು. ಇದು ಮೈಸೂರು ಸಂಸ್ಥಾನಕ್ಕೆ ಲಾಭದಾಯಕವೂ ಆಯಿತು. ಹೆಚ್ಚುವರಿ ವಿದ್ಯುತ್ತನ್ನು ಬೆಂಗಳೂರಿಗೆ ಪೂರೈಸಿ ಅದನ್ನೂ ಬೆಳಗುವಂತೆ ಮಾಡಲಾಯಿತು. ದೇಶದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿದ ಮೈಸೂರು ಸಂಸ್ಥಾನಕ್ಕೆ ವಿದ್ಯುತ್ ಸಿಕ್ಕಿದ್ದು ಮೂರು ವರ್ಷ ಬಳಿಕ ಅಂದರೆ 1908ರಲ್ಲಿ.
ಮೈಸೂರು-ಶಿವನಸಮುದ್ರ ನಡುವೆ ತಾಮ್ರದ ತಂತಿಗಳ ಮುಖೇನ ಹರಿದು ಬಂದ ವಿದ್ಯುತ್ನಿಂದ ಮೈಸೂರು ಅರಮನೆಯಲ್ಲಿ ದೀಪ ಬೆಳಗಿತು. ವಿದ್ಯುತ್ ಒದಗಿಸಲು ಅಗತ್ಯವಾದ ತಾಂತ್ರಿಕ ಸೌಲಭ್ಯವನ್ನು ಅರಮನೆ ಸಮೀಪದಲ್ಲಿ ಸ್ಥಾಪಿಸಲಾಯಿತು. ನಿಯಂತ್ರಣ ಕೊಠಡಿ ಅರಮನೆ ಆವರಣದಲ್ಲೇ ಕಾರ್ಯಾರಂಭಗೊಂಡಿತು.
ನಂತರ ವಿದ್ಯುತ್ ಶಕ್ತಿ ಉಪಯೋಗಿಸಿ ವಿಶೇಷ ಸಂದರ್ಭಗಳಲ್ಲಿ ಅರಮನೆ ಭಾಗದಲ್ಲೂ ಅಸಂಖ್ಯೆಯ ದೀಪಗಳು ಉರಿಯುವಂತೆ ಮಾಡಲಾಯಿತು. ಅರಮನೆ ವಿಶೇಷ ಸಭೆ ಸಮಾರಂಭಗಳು, ಗಣ್ಯ ಅತಿಥಿಗಳ ಭೇಟಿ ಸಮಯದಲ್ಲೂ ದೀಪಾಲಂಕಾರವಿರುತ್ತಿತ್ತು. ವರ್ಣರಂಜಿತ ಕಾರಂಜಿಗಳೂ ವಿದ್ಯುತ್ನಿಂದ ವಿಶೇಷ ಆಕರ್ಷಣೆ ಪಡೆದವು. ಅರಮನೆಯ ಪ್ರವೇಶ ದ್ವಾರಗಳು, ಉದ್ಯಾನ, ದೇವಾಲಯಗಳು ವಿದ್ಯುತ್ ದೀಪಗಳಲ್ಲಿ ಬೆಳಗಲು ಆರಂಭಿಸಿದವು.
ವಿದೇಶ ಪ್ರವಾಸ ಅನುಭವ ಆಧರಿಸಿ, ಹೆರಾಲ್ಡ್ ಡೌಗ್ಲಾಸ್ ರೈಸ್ ಸಲಹೆ ಮೇರೆಗೆ ಮೈಸೂರು ಅರಮನೆಗೂ ಕಾಯಂ ದೀಪಾಲಂಕಾರ ಮಾಡಲು ತೀರ್ವನಿಸಲಾಯಿತು. ಆದರೆ ಅರಮನೆಗೆ ದೀಪಾಲಂಕಾರ ಮಾಡಲು ವಿದ್ಯುದ್ದೀಕರಣ ಮಾಡುವ ವ್ಯವಸ್ಥೆ ಇರಲಿಲ್ಲ. ಅರಮನೆ ಮೈಮೇಲೆ ತೆಳು ಹಲಗೆ ಪಟ್ಟಿ ಅಳವಡಿಸಿ ಅದರ ಮೇಲೆ ಕುಳಿ ತೆಗೆದು ದೀಪ ಅಳವಡಿಕೆಗೆ ನಿರ್ಣಯಿಸಲಾಯಿತು. ವಿದೇಶಿ ಸಂಸ್ಥೆಯೊಂದಕ್ಕೆ ದೀಪಾಲಂಕಾರದ ಹೊಣೆಗಾರಿಕೆ ನೀಡಲಾಯಿತು. ಇದಕ್ಕೆ 15,120 ರೂ. ವೆಚ್ಚ ನಿಗದಿ ಮಾಡಲಾಯಿತು. ಮರದ ಪಟ್ಟಿಗಳಿಗೆ ಮೊಳೆ ಒಡೆದು ಕುಳಿ ಮಾಡಿ ಬಲ್ಬ್ಗಳ ಅಳವಡಿಕೆ ಮಾಡಲಾಯಿತು. ಲೈಟ್ಗಳು ಅಲುಗಾಡದಂತೆ ತಿರುಗಣೆ ಮಾದರಿ ದೀಪಗಳನ್ನೇ ಅಳವಡಿಸಲಾಯಿತು. 1925ರಲ್ಲಿ ಸಂಪೂರ್ಣ ವಿದ್ಯುತ್ ದೀಪಾಲಂಕಾರ ಆರಂಭವಾಯಿತು. ಈಗಲೂ ದೀಪಗಳು ಉರಿಯುತ್ತಿವೆ. ಪ್ರಸ್ತುತ ದೀಪಾಲಂಕಾರಕ್ಕೆ 1.20 ಲಕ್ಷ ಬಲ್ಬ್ಗಳನ್ನು ಉಪಯೋಗಿಸಲಾಗುತ್ತಿದೆ. ಬುರುಡೆ ದೀಪದ ಒಳಗಿನ ಸರಳು ಹೊನ್ನಿನ ಬಣ್ಣವಿರುವುದು ಅದು ಆಂಗ್ಲದ ಎಂ ಅಕ್ಷರ ಸಂಕೇತಿಸುವುದು ಇನ್ನೊಂದು ವಿಶೇಷ. ಮೊದಲಿನಿಂದ ಇತ್ತೀಚಿನವರೆಗೂ ಲೈಟ್ಗಳನ್ನು ಪೂರೈಸುತ್ತಿದ್ದು ರಾಜ್ಯ ಸರ್ಕಾರದ ಮೈಸೂರು ಲ್ಯಾಂಪ್ಸ್ ಸಂಸ್ಥೆ ಎಂಬುದು ವಿಶೇಷ. ಇದು ಸ್ಥಗಿತಗೊಂಡ ಬಳಿಕ ಚೆನ್ನೈ, ಕೊಲ್ಕತ್ತದಿಂದ ತರಿಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ದೀಪಗಳಂತೆ ಬಂಗಾರ ಬಣ್ಣವನ್ನು ಒಡಲಿಟ್ಟುಕೊಂಡ ಪ್ರಖರ ಬೆಳಕಿನ ಅರಮನೆ ದೀಪಗಳ ಲೋಕ ಪ್ರಪಂಚ ವಿಖ್ಯಾತಿ. ಶತಕಗಳ ಕಾಲ ಕೋಟ್ಯಂತರ ಜನರನ್ನು ಖುಷಿಪಡಿಸಿ ಮೈಸೂರಿನ ಹಿರಿಮೆಯನ್ನು ದಶ ದಿಕ್ಕುಗಳಿಗೂ ಹರಡವಂತೆ ಮಾಡಿದೆ.
ಅರಮನೆ ಮೇಲಿರುವ ದೀಪಗಳ ಸಾಲು ಸರಮಾಲೆಯಂತೆ ಕಂಡರೂ ಅದರಲ್ಲಿ ಪ್ರತಿ ದೀಪಕ್ಕೂ ಪ್ರತ್ಯೇಕ ಸಂಪರ್ಕವಿದೆ. ಒಂದು ಬಲ್ಬ್ ಹಾಳಾದರೂ ಉಳಿದೆಲ್ಲ ಬಲ್ಬ್ಗಳು ಉರಿಯುವಂತಿರಲು ಈ ವ್ಯವಸ್ಥೆ. ಎಲ್ಲ ಋತುಗಳಲ್ಲೂ ಎಲ್ಲ ದಿನಗಳಲ್ಲೂ ಇದರ ನಿರ್ವಹಣೆ ಅಗತ್ಯವಾಗಿದೆ. ಪಕ್ಷಿಗಳ ಹಾರಾಟದಿಂದ, ಮಳೆ-ಗಾಳಿಯಿಂದ ಪ್ರತಿವರ್ಷ ಸುಮಾರು 20 ಸಾವಿರ ಲೈಟ್ಗಳು ಹಾಳಾಗುತ್ತವೆ. ತಂತ್ರಜ್ಞಾನ ಬದಲಾಗಿದ್ದರಿಂದ ಈಗಲೂ ಬುರುಡೆ ಬಲ್ಬ್ ಬಳಸಲಾಗುತ್ತದೆ.
ಸ್ವಾತಂತ್ರ್ಯ ಬಳಿಕ ದೀಪಾಲಂಕಾರ ವ್ಯವಸ್ಥೆ ರಾಜ್ಯಪಾಲರ ನೇತೃತ್ವದ ಮೇಲುಸ್ತುವಾರಿ ಸಮಿತಿ ಇತ್ತು ಎಂಬುದು ಗಮನಾರ್ಹ. ಇದೀಗ ರಾಜ್ಯ ಸರ್ಕಾರದ ಅಧೀನದ ಅರಮನೆ ಆಡಳಿತ ಮಂಡಳಿ ವತಿಯಿಂದ ಕೆಪಿಟಿಸಿಎಲ್ ತಾಂತ್ರಿಕ ನೆರವಿನೊಂದಿಗೆ ನಿರ್ವಹಿಸಲಾಗುತ್ತಿದೆ. ಬೆಳಕಿನ ಬಣ್ಣ ವ್ಯತ್ಯಾಸವಾಗುತ್ತದೆ ಎಂಬ ಕಾರಣಕ್ಕೆ ಆಧುನಿಕ ಲೈಟ್ಗಳನ್ನು ಬಳಸಿಲ್ಲ. ಈಗಲೂ ಬುರುಡೆ ಬಲ್ಬ್ಗಳನ್ನೂ ಉಪಯೋಗಿಸಲಾಗುತ್ತಿದೆ. ಇದರಿಂದ ಪ್ರಜ್ವಲಿಸುವ ಬೆಳಕಿನಲ್ಲಿ ಅರಮನೆ ಸೌಂದರ್ಯ ಮಿನುಗುತ್ತಿದೆ. ಹೊನ್ನಚೆಲುವಿನ ಗಿರಿಮೆ ಸಪ್ತಸಾಗರದಾಟಿ ಜಗತ್ತಿನ ಗಮನ ಸೆಳೆದಿದೆ.
ಪ್ರತಿ ಭಾನುವಾರ ಪ್ರಜ್ವಲಿಸುವ ಲೈಟಿಂಗ್
ಅರಮನೆ ದೀಪಾಲಂಕಾರ ದೇಶ-ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರತಿ ಭಾನುವಾರ, ರಾಷ್ಟ್ರೀಯ ರಜಾ ದಿನಗಳಲ್ಲಿ ಸಂಜೆ 7ರಿಂದ 7.45ರವರೆಗೆ ಅರಮನೆಯ ದೀಪಾಲಂಕಾರ ಪ್ರಕಾಶಮಾನವಾಗಿ ಬೆಳಗುತ್ತದೆ. ದಸರಾದ ನವರಾತ್ರಿಯಲ್ಲಿ ಮಾತ್ರ ಸಂಜೆ 7ರಿಂದ 10ರವರೆಗೆ ದೀಪಗಳು ಪ್ರಜ್ವಲಿಸುವ ಮೂಲಕ ದಸರೆಗೆ ರಂಗು ತುಂಬುತ್ತದೆ ಎಂಬುದು ಮತ್ತೊಂದು ವಿಶೇಷ. ಬೆಳಕಿನ ಅಲಂಕಾರದಲ್ಲಿ ಅರಮನೆಯನ್ನು ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲಿಗೆ ದೌಡಾಯಿಸುತ್ತಾರೆ. ಕಳೆದ ತಿಂಗಳು ನಡೆದ ದಸರಾದ 10 ದಿನಗಳಲ್ಲಿ ಮೂರು ಲಕ್ಷ ಜನರು ಇಲ್ಲಿಗೆ ಭೇಟಿ ನೀಡಿದ್ದರು. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಭೇಟಿ ಸಮಯವಾಗಿದೆ. ವಯಸ್ಕರಿಗೆ 120 ರೂ., 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂ.(10 ವರ್ಷದೊಳಗಿನ ಮಕ್ಕಳಿಗೆ ಉಚಿತ), ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರ 50 ರೂ. ಹಾಗೂ ವಿದೇಶಿ ಪ್ರವಾಸಿಗರಿಗೆ 1,000 ರೂ. ಪ್ರವೇಶ ದರ ಇದೆ.
ಅರಮನೆ ದೀಪಾಲಂಕಾರಕ್ಕೆ ಈ ಹಿಂದೆ 20 ವಾಟ್ನ ಬಲ್ಬ್ಗಳನ್ನು ಅಳವಡಿಸಲಾಗುತ್ತಿತ್ತು. ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ತಯಾರಿಸಿದ ಬಲ್ಬ್ಗಳನ್ನು ಬಳಸಲಾಗುತ್ತಿತ್ತು. ಈ ಕಾರ್ಖಾನೆಯು ಬಂದ್ ಆಗಿದೆ. ಕಣ್ಣು ಕೋರೈಸುವುದನ್ನು ಕಡಿಮೆ ಮಾಡಲು, ಅರಮನೆಯ ವಾಸ್ತುಶಿಲ್ಪ ಸರಿಯಾಗಿ ಗೋಚರಿಸಲು 15 ವಾಟ್ಗೆ ಇಳಿಸಲಾಗಿದೆ. ಈ ಬಲ್ಬ್ಗಳು ತಿರುಪಿನವಾಗಿದ್ದು, ಕಳವು ಮಾಡುವುದು ಸಾಧ್ಯವಿಲ್ಲ. ಬಿಗಿಯಾಗಿ ಕೂರುವುದರಿಂದ ಗಾಳಿ-ಮಳೆಗೂ ಅಲ್ಲಾಡುವುದಿಲ್ಲ. ಮೈಸೂರು ಲ್ಯಾಂಪ್ಸ್ ತಯಾರಿಸುತ್ತಿದ್ದ ‘ಎಂ’ ಆಕಾರದಲ್ಲಿಯೇ ಟಂಗ್ಸ್ಟನ್ ತಂತಿ ಇರುತ್ತದೆ. ತಲಾ ಸಾವಿರ ಕೆವಿ ಸಾಮರ್ಥ್ಯದ 2 ಟ್ರಾನ್ಸ್ಫಾಮರ್್ಗಳಿವೆ. 500 ಕೆವಿ ಸಾಮರ್ಥ್ಯದ ಮತ್ತೆರಡು ಟ್ರಾನ್ಸ್ಫಾಮರ್್ಗಳು ಗೇಟ್ಗಳಲ್ಲಿದೆ. ಅರಮನೆಯಲ್ಲಿ ಆರು ವಿದ್ಯುತ್ ವಿಭಾಗಗಳಿದ್ದು (ಬ್ರೇಕರ್ಸ್), ಪ್ರತಿಯೊಂದರಲ್ಲೂ 10 ಉಪ ವಿಭಾಗವಿದೆ. ವಿಭಾಗವಾರು ಪರಿಶೀಲನೆ ಹಾಗೂ ದುರಸ್ತಿ ನಡೆಸಲಾಗಿದೆ. ದೀಪಾಲಂಕಾರವನ್ನು ನಿಯಮಿತವಾಗಿ ನಿರ್ವಹಣೆ ಸಹ ಮಾಡಲಾಗುತ್ತದೆ. ದಸರಾ ಸಂದರ್ಭದಲ್ಲಿ ಹಾಳಾಗಿರುವ ಲೈಟ್ಗಳನ್ನು ಬದಲಿಸಲಾಗುತ್ತದೆ.
ಅರಮನೆ ದೀಪಾಲಂಕಾರ ವ್ಯವಸ್ಥೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ. ಚಿತ್ರದುರ್ಗದ ವಾಣಿವಿಲಾಸ ಜಲಾಶಯದ ಮುಖ್ಯ ಇಂಜಿನಿಯರ್ ಆಗಿದ್ದ ಹೆರಾಲ್ಡ್ ಡೌಗ್ಲಾಸ್ ರೈಸ್ ಯೋಜನೆ ರೂಪಿಸಿದವರು. ರೈಸ್ ಮತ್ತೊಂದು ಕೊಡುಗೆ ಚಾಮುಂಡಿಬೆಟ್ಟ ರಸ್ತೆ ಯೋಜನೆ. ಮನೆಯಲ್ಲಿ ಬಳಕೆಯಾಗುವಂತಹ ಬಲ್ಬ್ನಂತಲ್ಲ ಇವು. ಮೊದಲ ಬಾರಿಗೆ 90 ಸಾವಿರ ಬಲ್ಬ್ ಅಳವಡಿಕೆ ಮಾಡಲಾಯಿತು. ಇದೀಗ ಇವುಗಳ ಸಂಖ್ಯೆ 1.20 ಲಕ್ಷ ದಾಟಿದೆ. ಬಲ್ಬ್ಗಳು ಚಿನ್ನದ ಹೊಳಪಿನಿಂದ ಪ್ರಜ್ವಲಿಸುತ್ತಿವೆ. ಹೀಗಾಗಿ, ಇವುಗಳನ್ನು ಬದಲಿಸಿಲ್ಲ. ಗೋಧಿ ಬಣ್ಣ ಅಥವಾ ದಂತದ ಬಣ್ಣ ಹೊರಸೂಸುವ ಅರಮನೆ ದೀಪಾಲಂಕಾರದಿಂದಲೇ ಮೈಸೂರಿಗೆ ಐವರಿ ಸಿಟಿ ಎಂದು ಬರಲು ಕಾರಣ. ಒಂದು ಶತಮಾನ ಕಾಲ ದೀಪಾಲಂಕಾರದಿಂದ ಅರಮನೆ ಝುಗಮಗಿಸುತ್ತಿದೆ. ಇದುವೇ ಇದಕ್ಕೆ ವಿಶ್ವವಿಖ್ಯಾತಿ ತಂದುಕೊಟ್ಟಿದೆ.| ಪ್ರೊ. ಎನ್.ಎಸ್. ರಂಗರಾಜು ಪಾರಂಪರಿಕ ತಜ್ಞ