ಅಂಕಣ

ಕಡೆಗೂ ಬಯಲಾದ ಕುಕೃತ್ಯ

ಮೋಹನ್​ ಶೆಟ್ಟಿ

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ಆಂಧ್ರಪ್ರದೇಶದ ಪಟ್ಟಣವೊಂದರ ನಿವಾಸಿ ನಾಗರಾಜು ತನ್ನ ಪದವಿ ಪರೀಕ್ಷೆ ಮುಗಿಸಿದ ನಂತರ ನೌಕರಿಗಾಗಿ ಎರಡು ವರ್ಷ ಹುಡುಕಾಡಿದರೂ ಯಾವ ನೌಕರಿಯೂ ಸಿಗಲಿಲ್ಲ. ಕಡೆಗೆ ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದ ಅವನಿಗೆ ಸರ್ಕಾರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ನೌಕರಿ ದೊರಕಿತು. ಬಾಲಕರ ಅನಾಥಾಶ್ರಮವೊಂದರಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ಕೆಲಸಕ್ಕೆ ಅವನನ್ನು ನೇಮಿಸಲಾಯಿತು. ಬಹಳ ನಿಷ್ಠೆಯಿಂದಲೇ ಕೆಲಸ ಮಾಡುತ್ತಿದ್ದ ನಾಗರಾಜು ನಿಧಾನವಾಗಿ ಅನಾಥಾಶ್ರಮದ ಎಲ್ಲ ಕೆಲಸಗಳನ್ನು ಕಲಿತ. ಮಕ್ಕಳ ರಕ್ಷಣೆಗೆ ಸಂಬಂಧಪಟ್ಟ ಕಾನೂನುಗಳನ್ನೆಲ್ಲಾ ಓದಿದ. ಮಕ್ಕಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದಿಸಿದ. ಹೀಗಾಗಿ ಆ ಶಾಲೆಯ ಸೂಪರಿಂಟೆಂಡೆಂಟ್ ಅವನಿಗೆ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಕೊಡಲಾರಂಭಿಸಿದರು.

ತನಗೆ ಬರುತ್ತಿದ್ದ ಸಂಬಳ ಸಾಲದೇ ಹೋಗುತ್ತಿದೆ ಎಂದು ಮನಗಂಡ ನಾಗರಾಜು ಸುಮಾರು ಒಂದು ವರ್ಷದ ಸೇವೆಯ ನಂತರ ತನ್ನ ನೌಕರಿಯನ್ನು ಖಾಯಂಗೊಳಿಸಬೇಕೆಂದು ಮನವಿ ಸಲ್ಲಿಸಿದ. ಅವನಂತೆಯೇ ಸಾವಿರಾರು ನೌಕರರು ದಿನಗೂಲಿ ಸೇವೆಯಲ್ಲಿದ್ದು ಅವರಲ್ಲಿ ಕೆಲವರು ನ್ಯಾಯಾಲಯಗಳಿಗೆ ಇದೇ ವಿಷಯದ ಬಗ್ಗೆ ಅರ್ಜಿಗಳನ್ನು ಸಲ್ಲಿಸಿದ್ದರಿಂದ ಅವನ ಮನವಿಯನ್ನು ಕೂಡಲೇ ಪರಿಗಣಿಸಲು ಆಗಲಿಲ್ಲ. ಏತನ್ಮಧ್ಯೆ ನಾಗರಾಜು ತನಗೆ ಪರಿಚಯವಿದ್ದವರೊಬ್ಬರ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸಕ್ಕೂ ಸೇರಿಕೊಂಡ. ಹೀಗಾಗಿ ಕುಟುಂಬ ನಿರ್ವಹಣೆ ಸ್ವಲ್ಪ ಸುಲಭವಾಯಿತು. ಕೆಲಕಾಲದ ನಂತರ ಅವನಿಗೆ ಆನ್​ಲೈನ್ ಲಾಟರಿ ಗೀಳು ಹತ್ತಿತು. ಇದು ಎಷ್ಟು ಹೆಚ್ಚಾಯಿತೆಂದರೆ ತಾನು ಗಳಿಸುತ್ತಿದ್ದ ಸಂಬಳವನ್ನೆಲ್ಲಾ ಲಾಟರಿಗೆ ಹಾಕುವ ಮಟ್ಟಕ್ಕೆ ಬಂದ. ಇದರಿಂದ ಅವನಿಗೆ ಆರ್ಥಿಕ ದುಸ್ಥಿತಿ ಎದುರಾದಾಗ ಆತ ತನ್ನ ಹಾಸ್ಟೆಲ್​ನಿಂದ ಹಣ ದುರುಪಯೋಗ ಮಾಡಿಕೊಳ್ಳಲು ಆರಂಭಿಸಿದ.

ಅಕೌಂಟ್ಸ್ ಕೆಲಸವನ್ನು ಅವನೇ ನೋಡಿಕೊಳ್ಳುತ್ತಿದ್ದುದರಿಂದ ಬಹಳ ದಿನಗಳ ಕಾಲ ಆತ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದುದು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ದುರುಪಯೋಗ ಮಾಡಿ ಕೊಳ್ಳುತ್ತಿದ್ದ ಆತ ಕಾಲಕ್ರಮೇಣ ಭಾರೀ ಪ್ರಮಾಣದಲ್ಲಿಯೇ ಹಣವನ್ನು ಲಪಟಾಯಿಸತೊಡಗಿದ. ಎರಡು ವರ್ಷದ ನಂತರ ಅವನ ಹಾಸ್ಟೆಲ್​ಗೆ ಕೇಂದ್ರ ಸರ್ಕಾರದ ಲೆಕ್ಕಪತ್ರಾಧಿಕಾರಿಗಳು ಆಡಿಟ್​ಗೆ ಬಂದಾಗ ಅಲ್ಲಿ ನಡೆದಿದ್ದ ಅಕ್ರಮ ಬಯಲಾಯಿತು. ನಾಗರಾಜು ಸುಮಾರು ಐದು ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದಾನೆಂದು ಸಾಬೀತಾಯಿತು. ಆತ ದಿನಗೂಲಿ ನೌಕರನಾಗಿದ್ದರಿಂದ ಆತನನ್ನು ಕೂಡಲೇ ನೌಕರಿಯಿಂದ ವಜಾ ಮಾಡಲಾಯಿತು. ಇದಾದ ನಂತರ ಆತ ಬೇರೆ ಬೇರೆ ಕಡೆ ಖಾಯಂ ನೌಕರಿಗಾಗಿ ಪ್ರಯತ್ನಿಸಿದ. ಆದರೆ ಎಲ್ಲೂ ಸಿಗಲಿಲ್ಲ. ಏತನ್ಮಧ್ಯೆ ನಾಗರಾಜುವಿನ ಮದುವೆಯೂ ಆಯಿತು. ಆಗ ಆತನಿಗೆ ಸಂಸಾರ ನಿಭಾಯಿಸುವುದು ತೀರಾ ದುಸ್ತರವಾಯಿತು. ಲಾಟರಿ ಆಟದ ಚಟವನ್ನೂ ಬಿಡಬೇಕಾಯಿತು.

ಚೆನ್ನೈನಲ್ಲಿದ್ದ ನಾಗರಾಜುವಿನ ಸಂಬಂಧಿಕನೊಬ್ಬ ಆ ಊರಿನಲ್ಲಿ ವಿಪುಲ ಉದ್ಯೋಗಾವಕಾಶಗಳು ಇವೆಯೆಂದು ನಾಗರಾಜುವಿಗೆ ಹೇಳಿದ. ಆ ನಗರಕ್ಕೆ ಹೋಗಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ನಿರ್ಧರಿಸಿದ ನಾಗರಾಜು ಅಲ್ಲಿಗೆ ಹೋದ. ಹೋಗುವಾಗ ತನ್ನ ಮಡದಿ ಮಕ್ಕಳನ್ನು ತನ್ನ ಊರಿನಲ್ಲಿಯೇ ಬಿಟ್ಟ. ಒಂದು ತಿಂಗಳು ಹುಡುಕಿದ ನಂತರ ಖಾಸಗಿ ಸೇವಾ ಟ್ರಸ್ಟ್ ನಡೆಸುತ್ತಿದ್ದ ಅನಾಥಾಶ್ರಮವೊಂದರಲ್ಲಿ ಅವನಿಗೆ ವಾರ್ಡನ್ ಕೆಲಸ ಸಿಕ್ಕಿತು. ಅಲ್ಲಿಯ ಸಂಬಳವೂ ಚೆನ್ನಾಗಿದ್ದು ಉಳಿದುಕೊಳ್ಳಲು ಅವನಿಗೆ ಮನೆಯನ್ನೂ ಕೊಟ್ಟಿದ್ದರು. ಒಂದು ವರ್ಷ ಅಲ್ಲಿ ಸೇವೆ ಸಲ್ಲಿಸಿದ ನಂತರ ತಾನೇ ಸ್ವಂತವಾಗಿ ಅನಾಥಾಲಯವೊಂದನ್ನು ನಡೆಸಬೇಕು ಎಂದು ನಾಗರಾಜು ತೀರ್ಮಾನಿಸಿದ. ಅದರಂತೆ ಆತ ವೆಲ್​ಫೇರ್ ಆಫ್ ಚಿಲ್ಡ›ನ್ ಟ್ರಸ್ಟ್ ಎನ್ನುವ ಒಂದು ಸಂಘಟನೆಯನ್ನು ರಚಿಸಿ ಆಂಧ್ರಪ್ರದೇಶದಲ್ಲಿ ಆ ಟ್ರಸ್ಟನ್ನು ನೋಂದಾಯಿಸಿದ. ಆ ಸಂಸ್ಥೆಗೆ ಚೆನ್ನೈನ ದಾನಿಗಳಿಂದ ದೇಣಿಗೆಗಳನ್ನು ಸಂಗ್ರಹಿಸಲು ಆರಂಭಿಸಿದ. ಆಂಧ್ರಪ್ರದೇಶಕ್ಕೇ ಸೇರಿದ್ದ ಬೇರೆ ಅನಾಥಾಶ್ರಮದ ಫೋಟೋಗಳನ್ನು ತೋರಿಸಿ ಹಣ ಸಂಗ್ರಹಿಸತೊಡಗಿದ. ಆರೇ ತಿಂಗಳಲ್ಲಿ ಐದಾರು ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ.

ಯಾವುದೇ ಅನಾಥಾಲಯ ತೆರೆಯದೇ ಮನೆಯಲ್ಲೇ ಕುಳಿತು ಇಷ್ಟೊಂದು ಹಣ ಸಂಪಾದಿಸಬಹುದಾದರೆ ಇದನ್ನೇ ಪ್ರಮುಖ ಉದ್ಯೋಗವನ್ನಾಗಿ ಮುಂದುವರೆಸಬೇಕು ಎಂದು ತೀರ್ಮಾನಿಸಿದ ನಾಗರಾಜು, ಚೆನ್ನೈನಲ್ಲೇ ಒಂದು ಕಚೇರಿಯನ್ನು ಬಾಡಿಗೆಗೆ ತೆಗೆದುಕೊಂಡ. ಅಲ್ಲಿ ಹತ್ತು ಯುವತಿಯರನ್ನು ನೌಕರಿಗಾಗಿ ಇಟ್ಟುಕೊಂಡ. ‘ನೀವು ನಮ್ಮ ಟ್ರಸ್ಟ್​ನ ಚಟುವಟಿಕೆಗಳನ್ನು ದೇಣಿಗೆದಾರರಿಗೆ ಫೋನ್ ಮೂಲಕ ಇಲ್ಲವೇ ಮುಖತಃ ವಿವರಿಸಿ ಅವರಿಂದ ನಮ್ಮ ಟ್ರಸ್ಟ್​ಗಾಗಿ ಹಣಸಂಗ್ರಹಿಸಬೇಕು. ನಿಮಗೆ ತಿಂಗಳಿಗೆ 15 ಸಾವಿರ ರೂ. ಸಂಬಳ ಕೊಡುತ್ತೇನೆ. ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಪ್ರತಿ ತಿಂಗಳೂ ಸಂಗ್ರಹಿಸಬೇಕು. ಒಂದು ವೇಳೆ ಇದರಲ್ಲಿ ನೀವು ವಿಫಲರಾದರೆ ನಿಮ್ಮನ್ನು ನೌಕರಿಯಿಂದ ತೆಗೆದುಬಿಡುವೆ. ಒಂದು ಲಕ್ಷಕ್ಕಿಂತ ಹೆಚ್ಚು ಸಂಗ್ರಹಿಸಿದರೆ ಆ ಹಣದ ಶೇ. 10ರಷ್ಟನ್ನು ನಿಮಗೆ ಕಮಿಷನ್ ರೂಪದಲ್ಲಿ ಕೊಡುವೆ. ನಿಮಗೆ ಈ ಊರಿನ ಶ್ರೀಮಂತ ಹಾಗೂ ಉದಾರ ವ್ಯಕ್ತಿಗಳ ವಿಳಾಸ ಹಾಗೂ ಟೆಲಿಫೋನ್ ನಂಬರ್ ಕೊಡುವೆ.

ನೀವು ಅವರನ್ನು ಸಂಪರ್ಕಿಸಬೇಕು. ನೀವು ಅವರನ್ನು ಫೋನ್ ಮೂಲಕವಾದರೂ ಸಂರ್ಪಸಬಹುದು, ಇಲ್ಲವೇ ಮನೆಗೆ ಹೋಗಿಯಾದರೂ ಸಂಪರ್ಕಿಸಬಹುದು. ಒಂದು ವೇಳೆ ನಿಮಗೆ ಭಾರಿ ದೇಣಿಗೆ ಕೊಡುವ ವ್ಯಕ್ತಿ ಕಂಡರೆ ಆಗ ನನ್ನನ್ನು ಕರೆಯಿರಿ. ನಾನೇ ಅವರ ಬಳಿ ಬಂದು ಟ್ರಸ್ಟ್​ನ ಕೆಲಸ ಕಾರ್ಯಗಳನ್ನು ವಿವರಿಸುವೆ’ ಎಂದು ಹೇಳಿದ. ಅವರ ಕೆಲಸಕ್ಕೆ ಬೇಕಾಗುವ ಕರಪತ್ರಗಳು, ಫೋಟೋಗಳು, ಮಾಹಿತಿ ಪುಸ್ತಕಗಳು ಮುಂತಾದವನ್ನೂ ನೀಡಿದ. ಅವೆಲ್ಲವೂ ಸುಳ್ಳು ದಾಖಲೆಗಳೇ ಆಗಿದ್ದವು. ಪ್ರತಿಯೊಬ್ಬ ಯುವತಿಗೂ ತನ್ನ ಕ್ಯೂಆರ್ ಕೋಡ್ ಕೊಟ್ಟು, ‘ನೀವು ಯಾರಿಂದಲೂ ನಗದು ಹಣಸಂಗ್ರಹಿಸಬಾರದು. ಎಲ್ಲರೂ ಕ್ಯೂಆರ್ ಕೋಡ್​ಗೆ ಹಣ ಹಾಕುವಂತೆ ಹೇಳಬೇಕು. ಚೆಕ್ ಹಾಗೂ ಡಿಮಾಂಡ್ ಡ್ರಾಫ್ಟ್​ಗಳ ಮೂಲಕವೂ ಹಣ ಪಡೆಯಬಹುದು’ ಎಂದ. ಕಾಲಕ್ರಮೇಣ ಅವನಿಗೆ ಸಾಕಷ್ಟು ಹಣ ಸಂಗ್ರಹವಾಗತೊಡಗಿತು. ಆಗ ನಾಗರಾಜು ಒಂದು ದೊಡ್ಡ ಕಚೇರಿಯನ್ನು ಕಾಲ್ ಸೆಂಟರ್​ನ ಮಾದರಿಯಲ್ಲಿ ತೆರೆದ. 25 ಯುವತಿಯರನ್ನು ಮತ್ತು ಅವರ ಮೇಲ್ವಿಚಾರಕ ಸಿಬ್ಬಂದಿಯನ್ನು ನೇಮಿಸಿಕೊಂಡ. ದೇಣಿಗೆ ಮೂಲಕ ತಿಂಗಳಿಗೆ ಕನಿಷ್ಠ 20 ಲಕ್ಷ ರೂ. ಗಳಿಸಲಾರಂಭಿಸಿದ. ತಾನಿದ್ದ ಕೆಲಸಕ್ಕೆ ರಾಜೀನಾಮೆಯನ್ನಿತ್ತ.

ಇಷ್ಟರಲ್ಲಿ ನಾಗರಾಜುವಿನ ಕಚೇರಿಗೆ ಮಲ್ಲಿಕಾ ಎಂಬ 30 ವರ್ಷದ ಅವಿವಾಹಿತ ಯುವತಿ ಸೂಪರ್​ವೈಸರ್ ಕೆಲಸಕ್ಕೆ ಸೇರಿಕೊಂಡಳು. ಆಕರ್ಷಕ ಮೈಕಟ್ಟನ್ನು ಹೊಂದಿ, ಸುಂದರವಾಗಿದ್ದ ಮಲ್ಲಿಕಾ ಭಾರಿ ಬುದ್ಧಿವಂತೆಯಾಗಿದ್ದಳು. ಆಕೆಯ ಗ್ರಹಣ ಶಕ್ತಿ ಅತ್ಯುತ್ತಮ ಮಟ್ಟದಲ್ಲಿದ್ದು ನಾಲ್ಕೈದು ಜನರು ಮಾಡುವ ಕೆಲಸಗಳನ್ನು ಒಬ್ಬಳೇ ಮಾಡಬಲ್ಲವಳಾಗಿದ್ದಳು. ಹೀಗಾಗಿ ನಾಗರಾಜು ತನ್ನ ಕಚೇರಿಯ ಎಲ್ಲ ಕೆಲಸಗಳಿಗೂ ಅವಳನ್ನೇ ಅವಲಂಬಿಸಲಾರಂಭಿಸಿದ. ತನಗೇ ತಿಳಿಯದಂತೆ ಆತ ಅವಳಲ್ಲಿ ಅನುರಕ್ತನಾದ. ಕಚೇರಿ ಸಮಯದ ನಂತರ ಇಬ್ಬರೂ ಮಾಲ್​ಗಳು, ಪಬ್​ಗಳು, ನೈಟ್​ಕ್ಲಬ್​ಗಳು ಮುಂತಾದ ಜಾಗಗಳಿಗೆ ಹೋಗಲಾರಂಭಿಸಿದರು. ತನಗಿನ್ನೂ ಮದುವೆಯಾಗಿಲ್ಲವೆಂದೇ ನಾಗರಾಜು ಅವಳಿಗೆ ಹೇಳಿದ್ದರಿಂದ ಮಲ್ಲಿಕಾಳೂ ಅವನನ್ನು ಪ್ರೀತಿಸಲಾರಂಭಿಸಿದಳು. ಕೆಲವು ತಿಂಗಳ ಬಳಿಕ ನಾವಿಬ್ಬರೂ ಮದುವೆಯಾಗೋಣ ಎಂದು ನಾಗರಾಜು ಅವಳಿಗೆ ಹೇಳಿದ ಕೆಲವೇ ದಿನಗಳ ಬಳಿಕ ಇಬ್ಬರ ನಡುವೆಯೂ ಲೈಂಗಿಕ ಸಂಬಂಧ ಬೆಳೆಯಿತು.

ಐದಾರು ತಿಂಗಳ ನಂತರ ಒಂದು ಸಂಜೆ ನಾಗರಾಜು ತನ್ನ ಕಚೇರಿಯಲ್ಲಿಯೇ ಮಲ್ಲಿಕಾಳ ಜತೆ ಚಕ್ಕಂದವಾಡುತ್ತಿದ್ದಾಗ ಅವನ ಪತ್ನಿ ಮಕ್ಕಳೊಂದಿಗೆ ಅಲ್ಲಿಗೇ ಬಂದುಬಿಟ್ಟಳು. ಪರಸ್ತ್ರೀಯೊಬ್ಬಳ ಜತೆ ಅರೆನಗ್ನಾವಸ್ಥೆಯಲ್ಲಿದ್ದ ಗಂಡನ ಮೇಲೆ ಮುಗಿಬಿದ್ದ ಆಕೆ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಮಲ್ಲಿಕಾಗೂ ನಾಲ್ಕೇಟು ಕೊಟ್ಟಳು. ಈ ಧಿಢೀರ್ ಘಟನೆಯಿಂದ ಮಲ್ಲಿಕಾ ತೀವ್ರ ಆಘಾತಗೊಂಡು ಮಾರನೆಯ ದಿನವೇ ತನ್ನ ಕೆಲಸಕ್ಕೆ ರಾಜೀನಾಮೆಯಿತ್ತಳು. ಕೇವಲ ರಾಜೀನಾಮೆ ನೀಡಿ ಆಕೆ ಸುಮ್ಮನಾಗಲಿಲ್ಲ. ತನಗೆ ಮೋಸ ಮಾಡಿದ ನಾಗರಾಜುವನ್ನು ಜೈಲಿಗೆ ಕಳುಹಿಸಬೇಕೆಂದು ತೀರ್ಮಾನಿಸಿದಳು. ನಾಗರಾಜು ಸುಳ್ಳು ಟ್ರಸ್ಟ್​ಗಳನ್ನು ಮಾಡಿಕೊಂಡು ಜನರಿಗೆ ಮೋಸ ಮಾಡಿ ಹಣ ಸಂಗ್ರಹಿಸುತ್ತಿರುವ ವಿಷಯ ಅವಳಿಗೆ ತಿಳಿದಿತ್ತು. ಅವಳು ನೇರವಾಗಿ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ನಾಗರಾಜು ಮತ್ತು ಆತ ನಡೆಸುತ್ತಿದ್ದ ಮೂರು ಟ್ರಸ್ಟ್​ಗಳ ವಿರುದ್ಧ ದೂರಿತ್ತಳು. ಆಕೆಯ ದೂರಿನ ಮೇರೆಗೆ ಅದೇ ದಿನವೇ ಚೆನ್ನೈನ ಸಿಸಿಬಿ ಅಧಿಕಾರಿಗಳು ನಾಗರಾಜುವಿನ ಕಛೇರಿ ಮೇಲೆ ದಾಳಿ ಮಾಡಿ ಎಲ್ಲ ಕಾಗದಪತ್ರಗಳನ್ನೂ ವಶಪಡಿಸಿಕೊಂಡರು.

ಕಳೆದ ಮೂರು ವರ್ಷಗಳಲ್ಲಿ ನಾಗರಾಜು ಮಾಡಿದ ಎಲ್ಲ ಕುಕೃತ್ಯಗಳು ಮುಂದಿನ ತನಿಖೆಯಲ್ಲಿ ಬೆಳಕಿಗೆ ಬಂದವು. ಆ ಅವಧಿಯಲ್ಲಿ ಆತ ಐದೂವರೆ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣಸಂಗ್ರಹಿಸಿದ್ದ. ಪತ್ರಿಕೆಗಳಲ್ಲಿ ಈ ಸುದ್ದಿ ಓದಿದ ಹಲವಾರು ದಾನಿಗಳು ಪೊಲೀಸರ ಬಳಿ ಬಂದು ತಾವು ಮೋಸ ಹೋದ ಬಗ್ಗೆ ದೂರಿತ್ತರು. ಮುಂದೆ ನಾಗರಾಜುನನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣೆಯ ನಂತರ ನ್ಯಾಯಾಧೀಶರು ಅವನಿಗೆ ಐದು ವರ್ಷಗಳ ಕಾರಾಗೃಹಶಿಕ್ಷೆ ನೀಡಿದರು. ತನ್ನ ಮೇಲೆ ನಾಗರಾಜು ಅತ್ಯಾಚಾರ ಮಾಡಿದ್ದನೆಂದು ಮಲ್ಲಿಕಾ ಪೊಲೀಸರಿಗೆ ದೂರನ್ನಿತ್ತಿದ್ದರೆ ಅವನಿಗೆ ಭಾರಿ ಶಿಕ್ಷೆಯೇ ಆಗುತ್ತಿತ್ತು. ಆದರೆ ತನ್ನ ಮಾನಕ್ಕೆ ಹೆದರಿ ಮಲ್ಲಿಕಾ ಆ ವಿಷಯ ಮುಚ್ಚಿಟ್ಟು ಕೇವಲ ಮೋಸದ ದೂರನ್ನಿತ್ತಳು. ಅವಳು ಈ ದೂರನ್ನು ಕೊಡದೇ ಹೋಗಿದ್ದರೆ ನಾಗರಾಜು ಮಾಡಿದ ಮೋಸ ಬೆಳಕಿಗೆ ಬರುವ ಸಂದರ್ಭಗಳು ಕಡಿಮೆಯಾಗಿದ್ದವು.

ಕಡೆಗೂ ನಾಗರಾಜು ಅರಿತ ಸತ್ಯವೆಂದರೆ ಯಾವುದೇ ಅಪರಾಧ ಕೃತ್ಯವನ್ನೂ ನಿರಂತರವಾಗಿ ಮುಚ್ಚಿಡಲು ಸಾಧ್ಯವಿಲ್ಲ ಎನ್ನುವುದನ್ನು. ‘ಶುಭಂ ವಾ ಅಶುಭಂ ಕರ್ಮ ಫಲಕಾಲಮಪೇಕ್ಷತೇ, ಶರದ್ಯೇವ ಫಲತ್ಯಾಷು ಶಾಲಿರ್ನ ಸುರಭೌ ಕ್ವಚಿತ್’ ಎನ್ನುತ್ತದೆ ಸುಭಾಷಿತ. ಇದರರ್ಥ, ಒಳ್ಳೆಯ ಕೆಲಸವಾಗಲೀ ಕೆಟ್ಟ ಕರ್ಮವಾಗಲೀ ಫಲ ಕೊಡುವ ಕಾಲಕ್ಕಾಗಿ ಕಾಯುತ್ತದೆ. ಭತ್ತವು ಶರತ್ಕಾಲದಲ್ಲಿ ಫಲಿಸುತ್ತದೆಯೇ ಹೊರತು ವಸಂತ ಕಾಲದಲ್ಲಲ್ಲ ಎಂದು.