ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ನುಡಿಜಾತ್ರೆ ಬಗ್ಗೆ ಹಲವು ಬಗೆಯ ವಿಶ್ಲೇಷಣೆ, ಸಾರ್ಥಕತೆ ಬಗ್ಗೆ ಅನುಮಾನದ ದನಿಗಳು ಹೆಚ್ಚುತ್ತಿರುವ ಹೊತ್ತಲ್ಲೇ ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉತ್ಸಾಹದ, ಕನ್ನಡಾಭಿಮಾನದ ದೊಡ್ಡ ಸಂದೇಶವನ್ನೇ ರವಾನಿಸಿತು. ಇಲ್ಲಿ ಏನೆಲ್ಲ ವೈಶಿಷ್ಟ್ಯವಿತ್ತು ಎಂಬ ಕುತೂಹಲವೇ? ಬನ್ನಿ, ಸಮ್ಮೇಳನದ ಅಂಗಳದಲ್ಲಿ ಒಂದು ಸುತ್ತು ಹಾಕಿ ಬರೋಣ.
‘‘ಏನೇ ಹೇಳ್ರಿ, ಇಷ್ಟ ಮಂದಿ, ಇಂಥಾ ಖುಷಿ, ಈ ಗದ್ಲ... ಎಲ್ಲೆಲ್ಲೂ ನೋಡಿರ್ಲಿಲ್ಲ. ಏನ್ ಜನಾರಿ... ಅಪ್ಪನ ಜಾತ್ರಿಗೆ (ಶರಣಬಸವೇಶ್ವರರ ಜಾತ್ರೆ) ಬಂದಾಂಗ ಬಂದಾರ್ ನೋಡ್ರಿ. ಕಲಬುರಗಿ ಅಂದ್ರ ಬಯಲುಸೀಮಿ, ಇಲ್ಲಿ ಸಾಹಿತ್ಯಾಸಕ್ತಿ ಕಮ್ಮಿ ಅಂತಿದ್ರಲ್ಲ, ಅವರೆಲ್ಲ ಒಮ್ಮೆ ಈ ಜನರ ಪ್ರವಾಹ ನೋಡಬೇಕ್ರಿ. ಕನ್ನಡಕ್ಕ ನಮ್ದು ತೋರಿಕಿ ಅಭಿಮಾನ ಅಲ್ಲರಿ ಮತ್ತ... ಒಂದ್ ಕಡೆ ತೆಲುಗು, ಮತ್ತೊಂದ್ ಕಡೆ ಮರಾಠಿ, ಮ್ಯಾಲ್ ಉರ್ದು ಪ್ರಭಾವ್ ಇದ್ರೂ ಕಲ್ಯಾಣ ಕರ್ನಾಟಕ ಭಾಗದ ಮಂದಿ ಕನ್ನಡಕ್ಕ ಹೃದಯದಾಗ ಜಾಗ ಕೊಟ್ಟಾರ್ರಿ. ಇಲ್ಲಿನ ಜವಾರಿ ನೆಲದಾಗ ಬರೀ ತೊಗರಿ ಅಲ್ಲ, ಸಾಹಿತ್ಯ ಕೃಷಿನೂ ಮಾಡ್ಲಿಕ್ ಬರ್ತದ ಅಂತ ಎಲ್ಲಾರೂ ಅರ್ಥ ಮಾಡ್ಕೋಬೇಕು... ’
ಇದು 85ನೇ ನುಡಿಜಾತ್ರೆಯ ಸಂಭ್ರಮವನ್ನು ಕಲಬುರಗಿಯ ಜನರು ಕಟ್ಟಿಕೊಟ್ಟಿರುವ ಪರಿ. ಕಲಬುರಗಿ ಎಂದರೆ ಬರೀ ಉರಿಬಿಸಿಲು, ಖಡಕ್ ಭಾಷೆ ಎಂದೇ ಭಾವಿಸಿದ್ದ ನಾಡಿನ ಬೇರೆ ಬೇರೆ ಭಾಗದ ಜನರು ಸಮ್ಮೇಳನಕ್ಕೆ ಬಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ‘ಹಿಂದಿನ ಸಮ್ಮೇಳನಗಳಿಗಿಂತ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರಲ್ಲ, ವಾಹ್’ ಎಂದು ಅಚ್ಚರಿಯಿಂದ ಸಂತಸ ಹೊರಹಾಕಿದರು. ನಿಜ, ರಾಜ್ಯದ ಇತರ ಭಾಗಗಳಷ್ಟು ಅಬ್ಬರ ಮಾಡುವುದಿಲ್ಲ ಕಲ್ಯಾಣ ಕರ್ನಾಟಕ. ಸಾಹಿತಿಯ ಮೌನದಂತೆ, ಏಕಾಂತದಂತೆ ತನ್ನ ಪಾಡಿಗೆ ತಾನು ಧ್ಯಾನಸ್ಥನಾಗಿ ಅಂತಃಶಕ್ತಿಯ ಬಲದಿಂದಲೇ ಅದ್ಭುತಗಳನ್ನು ಸಾಕಾರಗೊಳಿಸುವ ಭಾಗವಿದು. ಶರಣರ ನಾಡು, ಭಾವೈಕ್ಯ, ಸೌಹಾರ್ದ ವನ್ನು ಅಂತರ್ಗತ ಮಾಡಿಕೊಂಡೇ ಸಮನ್ವಯದಿಂದ ಮುಂದೆ ಸಾಗುತ್ತಿದೆ. ಇದೇ ಸಮನ್ವಯದ ಸಂದೇಶವನ್ನು ಇಲ್ಲಿನ ಸಾಹಿತ್ಯ ಸಮ್ಮೇಳನ ಇಡೀ ಕರುನಾಡಿಗೆ ನೀಡಿತು. ಹೌದು, ಕೆಲ ಗೋಷ್ಠಿಗಳಲ್ಲಿ ಅಪ್ರಾಸಂಗಿಕ ಮಾತು, ಕೆಲವರ ಪ್ರಚಾರ ಪಡೆಯುವ ಹಪಹಪಿ ಬಿಟ್ಟರೆ ಇಡೀ ಸಮ್ಮೇಳನ ಮಾಲ್ಪುರಿಯಷ್ಟೇ (ಕಲಬುರಗಿಯ ವಿಶೇಷ ಸಿಹಿ ಖಾದ್ಯ) ಸಿಹಿಯಾಗಿತ್ತು, ಆಪ್ತವಾಗಿತ್ತು.
ಸಂಬಂಜ ದೊಡ್ಡದು ಕಣಾ...!: ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಈ ಸಮ್ಮೇಳನವನ್ನು ಗೆಲ್ಲಿಸಿದ್ದು ಜನಪ್ರೀತಿ! ಹೌದು, ಮೊದಲ ದಿನದಿಂದಲೇ ಆಯೋಜಕರ ನಿರೀಕ್ಷೆಗೂ ಮೀರಿ ಜನರು ಬಂದರು. ಉದ್ಘಾಟನಾ ಸಮಾರಂಭದ ಹೊತ್ತಿಗೆ ನೂಕುನುಗ್ಗಲಿನ ಸ್ಥಿತಿ. ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳಲ್ಲದೆ, ಕೇರಳ, ಮಹಾರಾಷ್ಟ್ರ, ಆಂಧ್ರದಿಂದಲೂ ಕನ್ನಡಿಗರು ಆಗಮಿಸಿದ್ದರು. ಜನರ ಬರುವಿಕೆ ಆರಂಭೋತ್ಸಾಹಕ್ಕೆ ಸೀಮಿತವಾಗಿ ಉಳಿಯಲಿಲ್ಲ. ಎರಡನೇ, ಮೂರನೇ ದಿನವೂ ಜನರು ಭಾರಿ ಸಂಖ್ಯೆಯಲ್ಲಿ ಬಂದರು. ಸಮ್ಮೇಳನ ಸ್ಥಳ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಿಂದ 3 ಕಿಲೋಮೀಟರ್ವರೆಗೆ ಜನದಟ್ಟಣೆ, ಸಂಚಾರದಟ್ಟಣೆ ಸಾಮಾನ್ಯವಾಗಿತ್ತು. ಬಹುತೇಕ ಸಮ್ಮೇಳನಗಳಲ್ಲಿ ಜನ ಬಂದರೂ ಗೋಷ್ಠಿ ಕಡೆ ತಲೆ ಹಾಕುವವರು ಕಡಿಮೆ. ಕಲಬುರಗಿ ಸಮ್ಮೇಳನದಲ್ಲಿ ಹಾಗಾಗಲಿಲ್ಲ. ಸಮಾನಾಂತರ ವೇದಿಕೆ ಕೇಳುಗರ ಕೊರತೆ ಎದುರಿಸಿದರೂ ಮುಖ್ಯ ವೇದಿಕೆಯ ಗೋಷ್ಠಿಗಳಲ್ಲಿ ಜನರ ಉಪಸ್ಥಿತಿ ಗಮನಾರ್ಹವಾಗಿತ್ತು. ಜನ ಬಂದು ಬಿಟ್ಟರೆ ಸಮ್ಮೇಳನ ಸಾರ್ಥಕವಾ ಅಂತ ಪ್ರಶ್ನಿಸುವವರೂ ಇದ್ದಾರೆ. ಆದರೆ, ಕನ್ನಡಕ್ಕಾಗಿ ಲಕ್ಷಾಂತರ ಜನರು ಒಂದೆಡೆ ಸೇರಿ ಚಿಂತನ-ಮಂಥನ ನಡೆಸಿ, ಸಡಗರ, ಸಂಭ್ರಮ ಪಟ್ಟಾಗ ಒಂದಿಷ್ಟು ಜನರಲ್ಲಾದರೂ ಕನ್ನಡತನ ಆವರಿಸಿಕೊಳ್ಳುತ್ತದೆ. ಕನ್ನಡಪ್ರೀತಿ, ಅಭಿಮಾನ ಶಾಶ್ವತವಾಗಿ ನೆಲೆಸುತ್ತದೆ.
ಯುವಸಮೂಹದ ಉತ್ಸಾಹ: ಯುವಪೀಳಿಗೆ ಸಾಹಿತ್ಯಿಕ ಕಾರ್ಯಕ್ರಮಗಳಿಂದ ದೂರ ಎಂಬ ಅಪವಾದವನ್ನು ಈ ಸಮ್ಮೇಳನ ದೂರವಾಗಿಸಿತು. ಮೂರೂ ದಿನಗಳ ಕಾಲ ಯುವಕ-ಯುವತಿಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿತ್ತು. ಕಾಲೇಜು ವಿದ್ಯಾರ್ಥಿಗಳಂತೂ ದಂಡಿ ದಂಡಿಯಾಗಿ ಭಾಗವಹಿಸಿ, ಕನ್ನಡ ತಮ್ಮಮನಸುಗಳಿಂದ ದೂರವಾಗಿಲ್ಲ ಎಂಬ ಸಂದೇಶ ರವಾನಿಸಿದರು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಕೆಲವೊಮ್ಮೆ ಒಳ್ಳೆಯ ಕಾರ್ಯಗಳಿಗೆ ಸ್ಥಳೀಯರ ಸಹಕಾರವೇ ಸಿಗುವುದಿಲ್ಲ. ಆದರೆ, ಕಲಬುರಗಿ ನಗರ ಮತ್ತು ಜಿಲ್ಲೆಯ ಜನ ನುಡಿಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮಾತ್ರವಲ್ಲ, ಬೇರೆ ಊರು, ಪ್ರಾಂತ್ಯಗಳಿಂದ ಬಂದ ಜನರಿಗೆ ಆತಿಥ್ಯ ನೀಡಿದರು. ಕೆಲವರು ಸ್ವಯಂಸ್ಪೂರ್ತಿಯಿಂದ ವಾಹನ ವ್ಯವಸ್ಥೆ ಕಲ್ಪಿಸಿದರೆ, ಮತ್ತೆ ಕೆಲವರು ಪ್ರತಿನಿಧಿಗಳು ಉಳಿದುಕೊಳ್ಳಲು ತಮ್ಮಮನೆಯಲ್ಲೇ ವ್ಯವಸ್ಥೆ ಮಾಡಿಕೊಟ್ಟರು. ‘ನಮ್ ಊರಾಗ 33 ವರ್ಷದ ಮ್ಯಾಲ್ ಇಂಥ ಕಾರ್ಯಕ್ರಮ ನಡದದ ಅಂದ್ರ ನಮ್ಮ ಕೈಲಿ ಎಷ್ಟ್ ಶಕ್ಯ ಅದನೋ ಅಷ್ಟು ಮದತ್ ಮಾಡೋದು ನೋಡ್ರಿ’ ಎಂದು ಖುಷಿಯಿಂದ ಪ್ರತಿಕ್ರಿಯಿಸಿದರು.
ಭಾವಸಂಗಮ: ಸಮ್ಮೇಳನ ಎಂದರೆ ಬರೀ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಷ್ಟೇ ಅಲ್ಲ. ಲೇಖಕರು, ಕವಿಗಳು, ವಿಚಾರವಂತರು, ಕಲಾವಿದರ ಸಕ್ರಿಯ ಪಾಲ್ಗೊಳ್ಳುವಿಕೆ. ಇಂಥ ಭಾವಸಂಗಮಕ್ಕೆ ಈ ಸಮ್ಮೇಳನ ಸಾಕ್ಷಿಯಾಯಿತು. ಎಷ್ಟೋ ವರ್ಷ ಭೇಟಿ ಆಗದವರು, ಸಮ್ಮೇಳನ ನಿಮಿತ್ತ ಮುಖಾಮುಖಿಯಾದಾಗ ಅವರ ಮುಖದಲ್ಲಿ ಅರಳಿದ ನಗು ವಿಶೇಷವಾಗಿತ್ತು.
ಸಂಭ್ರಮವೇ ಮುಖ್ಯ...
ಸಮ್ಮೇಳನಕ್ಕೆ ಲಕ್ಷಾಂತರ ಜನ ಬರುವುದು ದೊಡ್ಡದು. ಲೇಖಕರು, ಸಾಹಿತಿಗಳ ವೈಮನಸ್ಯ ಮುಖ್ಯವಲ್ಲ. ಜನರು ಒಪ್ಪಬೇಕು, ಬರಬೇಕು, ಓಡಾಡಬೇಕು, ಊಟ ಮಾಡಬೇಕು, ಪುಸ್ತಕ ಖರೀದಿ ಮಾಡಬೇಕು. ಇದೆಲ್ಲ ಪರಿಗಣಿಸಿದರೆ ಕಲಬುರಗಿಯಲ್ಲಿ ಹೆಚ್ಚು ಯಶಸ್ಸು ಕಾಣಿಸಿದೆ. ಕರ್ನಾಟಕದಲ್ಲಿ ಜಾತ್ರೆಗಳು ತುಂಬ ಆಗುತ್ತವೆ. ಅದಕ್ಕೆ ಸಾಹಿತ್ಯದ ಬಲ ಕೊಡಬೇಕು. ಏಕೆಂದರೆ, ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಹೋದ್ಮೇಲೆ ಯಾವ ಹೊಸ ಪುಸ್ತಕ ಓದಬೇಕು ಎಂಬ ಸ್ಪಷ್ಟತೆಯೂ ಬರುವುದಿಲ್ಲ. ಸಾಹಿತ್ಯದ ಚರ್ಚೆಗೆ, ಸಾಹಿತ್ಯ ಮಥನಕ್ಕೆ ಬೇರೆ ಸ್ವರೂಪದ ಕಾರ್ಯಕ್ರಮವೇ ಬೇಕು.
| ವಸುಧೇಂದ್ರ ಖ್ಯಾತ ಕಥೆಗಾರ
ಊಟಕ್ಕಿಲ್ಲ ತೊಂದರೆ
ಬಹುತೇಕ ಸಮ್ಮೇಳನಗಳಲ್ಲಿ ಊಟದ ಅವ್ಯವಸ್ಥೆಯೇ ದೊಡ್ಡ ಸುದ್ದಿಯಾಗಿ ಬಿಡುತ್ತದೆ. ಈ ಬಾರಿ 200ಕ್ಕಿಂತ ಹೆಚ್ಚು ಕೌಂಟರ್ಗಳನ್ನು ಸ್ಥಾಪಿಸಿದ್ದರಿಂದ ಯಾವುದೇ ಗದ್ದಲ, ಗೊಂದಲ ಆಗಲಿಲ್ಲ. ಊಟ ರುಚಿಯ ಜತೆಗೆ ಗುಣಮಟ್ಟದಲ್ಲೂ ಉತ್ತಮವಾಗಿತ್ತು. ಬಾಣಸಿಗರ ತಂಡ ವಾಕಿಟಾಕಿಗಳನ್ನು ಬಳಸಿ ಸಂವಹನ ಸುಲಭ ಮಾಡಿಕೊಂಡಿದ್ದು, ಅಚ್ಚುಕಟ್ಟಾದ ವ್ಯವಸ್ಥೆ ರೂಪಿಸಿದ್ದು ವಿಶೇಷವಾಗಿತ್ತು.
ಸಮ್ಮೇಳನಾಧ್ಯಕ್ಷ ಎಚ್ಚೆಸ್ವಿ ಸರಳತೆ
ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಎಲ್ಲರೊಡನೆ ಮುಕ್ತವಾಗಿ ಬೆರೆತರು, ಜನಸಾಮಾನ್ಯರೊಂದಿಗೆ ಒಂದಾದರು. ಮೊದಲ ಬಾರಿಗೆ ರೂಪಿಸಲಾಗಿದ್ದ ಲೇಖಕರ ಕಟ್ಟೆಯಲ್ಲಿ ಕುಳಿತು ಓದುಗರೊಂದಿಗೆ ಹರಟಿದರು. ಭೇಟಿ ಆದವರಿಗೆಲ್ಲ ‘ಕನ್ನಡದಲ್ಲಿ ಹೆಚ್ಚು ಮಾತಾಡಿ, ಕನ್ನಡ ಕೃತಿಗಳನ್ನು ಓದಿರಿ’ ಎಂದು ಪ್ರೀತಿಯ ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಆಟೋಗ್ರಾಫ್ ನೀಡಿದರೆ, ಸೆಲ್ಪೀ ಕ್ರೇಜಿನವರ ಒತ್ತಾಯಕ್ಕೆ ಮಣಿದು ಪೋಸು ನೀಡಿದರು. ಪ್ರಮುಖ ಗೋಷ್ಠಿಗಳನ್ನು ಪೂರ್ತಿ ಕೇಳಿಸಿಕೊಂಡರು. 76ರ ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಓಡಾಡಿದರು, ಮಾತಾಡಿದರು.
ವೇದಿಕೆ ಬಳಿಯೇ ಪುಸ್ತಕ ವ್ಯಾಪಾರ
ಈ ಹಿಂದಿನ ಸಮ್ಮೇಳನಗಳಲ್ಲಿ ಮುಖ್ಯ ವೇದಿಕೆ ಮತ್ತು ಪುಸ್ತಕ ಮಳಿಗೆಗಳ ನಡುವೆ ತುಂಬಾ ಅಂತರವಿರುತ್ತಿತ್ತು. ಆದರೆ, ಈ ಬಾರಿ ಮುಖ್ಯ ವೇದಿಕೆಯ ಹತ್ತಿರದಲ್ಲೇ 400ಕ್ಕಿಂತ ಹೆಚ್ಚು ಪುಸ್ತಕ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಮುಖ್ಯವಾಗಿ, ಈ ಮಳಿಗೆಗಳನ್ನು ರೂಪಿಸಿದ ರೀತಿ ಮತ್ತು ಅವುಗಳಿಗೆ ಒದಗಿಸಿದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಹಿಂದೆಲ್ಲ ಪುಸ್ತಕಗಳು ಮತ್ತು ವ್ಯಾಪಾರಿಗಳು ಧೂಳು ಸೇವಿಸುವುದು ಅನಿವಾರ್ಯ ಆಗಿರುತ್ತಿತ್ತು. ಈ ಬಾರಿ ವ್ಯವಸ್ಥಿತ ಮ್ಯಾಟ್ಗಳನ್ನು ಹಾಕಿದ ಪರಿಣಾಮ ಧೂಳಿನ ಸಮಸ್ಯೆ ದೂರವಾಗಿತ್ತು. ಬಹುತೇಕ ಎಲ್ಲ ಪ್ರಕಾಶನ ಸಂಸ್ಥೆಗಳು ರಿಯಾಯಿತಿ ಘೊಷಿಸಿದ್ದರಿಂದ ಪುಸ್ತಕ ಖರೀದಿಗೆಂದೇ ಸಮ್ಮೇಳನಕ್ಕೆ ಆಗಮಿಸಿದವರ ಸಂಖ್ಯೆ ದೊಡ್ಡದಾಗಿತ್ತು. ಪರಿಣಾಮ, ಪುಸ್ತಕ ವ್ಯಾಪಾರ ಭರ್ಜರಿಯಾಗಿಯೇ ನಡೆಯಿತು. ವ್ಯಕ್ತಿತ್ವ ವಿಕಸನ, ಪ್ರೇರಣಾದಾಯಕ, ಅಧ್ಯಾತ್ಮದ ಕೃತಿಗಳ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಗೆ ಭಾರಿ ಬೇಡಿಕೆ ಇತ್ತು. ‘ಈ ಬಾರಿ ಯುವಸಮೂಹವೇ ಹೆಚ್ಚು ಪುಸ್ತಕ ಖರೀದಿ ಮಾಡಿದೆ. ಸ್ವಾಮಿ ವಿವೇಕಾನಂದರ ಸಾಹಿತ್ಯ, ಉಪದೇಶಾಮೃತಗಳನ್ನು ಆಸಕ್ತಿಯಿಂದ ಖರೀದಿಸಿದ್ದಾರೆ. ತುಂಬ ಉತ್ತಮ ಪ್ರತಿಕ್ರಿಯೆ ಬಂದಿದೆ. ಉತ್ತಮ ವಿಚಾರಗಳ ಸಾಹಿತ್ಯ ಖರೀದಿಗೆ ಒಲವು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ರಾಮಕೃಷ್ಣ ಆಶ್ರಮ ಸಾಹಿತ್ಯದ ಎರಡು ಮಳಿಗೆಗಳನ್ನು ಹಾಕಿದ ಅಶೋಕ್ ಪಾಟೀಲ್ ಪ್ರತಿಕ್ರಿಯಿಸಿದರು.
ನಾನು ಹಲವಾರು ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ಇಲ್ಲಿ ಕಂಡಷ್ಟು ಜನ ಎಲ್ಲೂ ಕಂಡಿಲ್ಲ. ಇದೊಂದು ವಿಶೇಷ ಸಮ್ಮೇಳನ. ಅವ್ಯವಸ್ಥೆ, ಗೊಂದಲಗಳಿಲ್ಲ. ಪುಸ್ತಕ ಮಳಿಗೆಗಳನ್ನು ತುಂಬಾ ಚೆನ್ನಾಗಿ ರೂಪಿಸಿ ಕೊಟ್ಟಿದ್ದರು. ಆದರೆ, ಜನ ಬರೀ ಜಾತ್ರೆಗೆ ಬರುವಂತೆ ಬರಬಾರದು. ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಬೇಕು. ಗೋಷ್ಠಿಗಳಲ್ಲಿ ಸಕ್ರಿಯ ಸಹಭಾಗಿತ್ವ ಇರಬೇಕು. | ಶ್ರೀ ಮಹೇಶ್ವರಾನಂದ ಸ್ವಾಮೀಜಿ ಮುಖ್ಯಸ್ಥರು, ರಾಮಕೃಷ್ಣ ವಿವೇಕಾನಂದ ವಿದ್ಯಾಪೀಠ, ತಾಡತೆಗನೂರು, ಕಲಬುರಗಿ
| ರವೀಂದ್ರ ಎಸ್. ದೇಶಮುಖ್