| ಗಣಪತಿ ಶಿರಳಗಿ ಸಾಗರ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಏಕಾಗ್ರತೆಯೊಂದಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಸಾಧನೆಯ ಶಿಖರವೇರಲು ಯೋಗಾಭ್ಯಾಸ ಸಹಕಾರಿ ಎಂಬ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತಿನಂತೆ, ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಶಾಲಾ ಪಠ್ಯಕ್ರಮದಲ್ಲೂ ಯೋಗವನ್ನು ಸೇರಿಸುವ ಚರ್ಚೆ ಕೂಡ ನಡೆದಿದೆ. ಇದರ ನಡುವೆ ಮಕ್ಕಳಲ್ಲಿ ಯೋಗಾಸಕ್ತಿ ಬೆಳೆಯುತ್ತಿರುವುದು ಆಶಾದಾಯಕವಾಗಿದೆ. ಬಾಲಪ್ರತಿಭೆಯಾಗಿ ಯೋಗದಲ್ಲಿ ಸಾಧನೆ ಮಾಡಿರುವ ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಬಳಸಗೋಡಿನ ಬಾಲೆ ನಮನಾ ಅಂದಾಜು 70-80 ಯೋಗ ಭಂಗಿಗಳನ್ನು ಮಾಡುತ್ತಾಳೆ. ಅರೆ..! ಅದರಲ್ಲೇನಿದೆ ಬಿಡಿ ಅನ್ನಬೇಡಿ. ಆಕೆಗಿನ್ನೂ 5 ವರ್ಷ 9 ತಿಂಗಳು. ಬಳಸಗೋಡಿನ ಕೃಷಿಕ ಡಿ.ಸಂತೋಷ್ ಮತ್ತು ಸುಮಾ ದಂಪತಿ ಪುತ್ರಿಯಾದ ನಮನಾ ಎಸ್. ಆರು ವರ್ಷ ತುಂಬುವ ಮೊದಲೇ 6 ಪ್ರತಿಷ್ಠಿತ ಪ್ರಶಸ್ತಿಗಳನ್ನೂ ದಕ್ಕಿಸಿಕೊಂಡಿದ್ದಾಳೆ. ನಮನಾಗೆ ಮಂಚಾಲೆ ಕಾನುಗೋಡಿನ ವಕೀಲರೂ ಆಗಿರುವ ಶ್ರೀಧರಮೂರ್ತಿ ಹಾಗೂ ಅವರ ಮಗಳು ಸಂಧ್ಯಾ ತರಬೇತಿ ನೀಡುತ್ತಿದ್ದಾರೆ. ಒಂದು ನಿಮಿಷಕ್ಕೆ 7 ಸೂರ್ಯ ನಮಸ್ಕಾರ ಮಾಡುವ ನಮನಾಳ ಸಾಧನೆ ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಸಂಧ್ಯಾ ಯೋಗ ಪ್ರೇರಣೆ: ಯೋಗಪಟು ಸಂಧ್ಯಾ ಅವರು ಯೂಟ್ಯೂಬ್ನಲ್ಲಿ ಹಾಕಿದ ಯೋಗಾಸನವನ್ನು ನೋಡಿ ಪ್ರೇರಿತಳಾದ ನಮನಾ ಇದೇ ರೀತಿ ತಾನೂ ಸಾಧಿಸಬೇಕು ಎಂದುಕೊಂಡು ಗುರು ಶ್ರೀಧರಮೂರ್ತಿ ಅವರ ಬಳಿ ಪ್ರತಿದಿನ ಸಂಜೆ ಎರಡು ಗಂಟೆ ಕಾಲ ತರಬೇತಿ ಪಡೆಯುತ್ತಾಳೆ. ಯೋಗ ಮತ್ತು ಪ್ರಾಣಾಯಾಮವನ್ನು ಮಂತ್ರೋಕ್ತವಾಗಿ ಕಲಿಯಲು ಆರಂಭಿಸಿದಳು. ನಮನಾಳ ಹಿರಿಯ ಸಹೋದರಿ ಸನಿಹಾ ಕೂಡ ಯೋಗಪಟು ಮತ್ತು ನೃತ್ಯಗಾತಿ. ಇದಕ್ಕೆ ಪಾಲಕರ ನಿರಂತರ ಪೋ›ತ್ಸಾಹ ಮತ್ತು ಬೆಂಬಲ ಕಾರಣ ಎನ್ನುವುದು ನಮನಾಳ ಮನದಾಳದ ಮಾತು.
ಶಾಸ್ತ್ರೀಯವಾಗಿ ಕಲಿತಿದ್ದಾಳೆ: ‘ನಮನಾ ಶಾಸ್ತ್ರೀಯವಾಗಿ ಆಸನಗಳನ್ನು ಕಲಿತು ಸುಲಭವಾಗಿ ಮಾಡುತ್ತಾಳೆ. ಕರ್ನಾಟಕದಲ್ಲಿ ತಲೆಗೆ ಪಾದವನ್ನು ತಾಗಿಸಿ ಮಾಡುವ ಪಶ್ಚಿಮೋತ್ತಾಸನವನ್ನು ಈ ವಯೋಮಿತಿ ಯಲ್ಲಿ ಮಾಡುವ ಬೆರಳೆಣಿಕೆಯಲ್ಲಿ ಇವಳೂ ಒಬ್ಬಳು’ ಎಂದು ಯೋಗಗುರು ಶ್ರೀಧರಮೂರ್ತಿ ಹೇಳುತ್ತಾರೆ.
ಪ್ರಶಸ್ತಿಗಳು: ನಮನಾ ಮೊದಲ ಬಾರಿಗೆ ಯೋಗ ಪ್ರದರ್ಶನ ನೀಡಿದ್ದು, ಹಾವೇರಿ ಜಿಲ್ಲೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ. ಅಲ್ಲಿ ನಮನಾಳ ಯೋಗಪ್ರದರ್ಶನ ಕಂಡು ಹುಕ್ಕೇರಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಶುಭಾಶೀರ್ವಾದ ಮಾಡಿದ್ದರು. ಅಂದಿನಿಂದ ಆರಂಭವಾದ ನಮನಾಳ ಯೋಗ ಪ್ರದರ್ಶನ ಜಿಲ್ಲೆ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆಯುತ್ತಿದೆ.