ರುದ್ರಯ್ಯ ಸೊಬರದಮಠ
ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ ಬೋಧಿಸಿ, ಮಾನವಕುಲ ದೈವತ್ವದೆಡೆಗೆ ಸಾಗಲು ದಾರಿದೀಪವಾಗಬಲ್ಲ ವೀರಶೈವ-ಲಿಂಗಾಯತ ಧರ್ಮ ಸ್ಥಾಪಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಲಿಂಗೋದ್ಭವರಾಗಿ ಅವತರಿಸಿದ ಶುಭದಿನ ಇಂದು. (ಮಾ.05)
ಶ್ರೀ ರೇಣುಕಾಚಾರ್ಯರು ಫಾಲ್ಗುಣ ಶುದ್ಧ ತ್ರಯೋದಶಿಯಂದು ಈಗಿನ ತೆಲಂಗಾಣ ರಾಜ್ಯದ ಕೊಲ್ಲಿಪಾಕಿ ಸ್ವಯಂಭು ಸೋಮೇಶ್ವರ ಲಿಂಗದಿಂದ ಅವತರಿಸಿದರು. ಆಗ ಅದನ್ನು ತ್ರಿಲಿಂಗ ದೇಶದ ಕೊಲ್ಲನ್ ಪಾಕ್ ಎನ್ನುತ್ತಿದ್ದರು. ಅಂದರೆ, ಮೂರು ಪುರಾತನ ಲಿಂಗ ಕ್ಷೇತ್ರಗಳಿಂದ ಕೂಡಿದ ಅಥವಾ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳನ್ನು ಧರಿಸಿದ ಜನರು ವಾಸಿಸುತ್ತಿದ್ದ ಪ್ರದೇಶವೇ ತ್ರೖೆಲಿಂಗದೇಶವೆಂದು ಸ್ಥಳದ ಕುರಿತು ಉಲ್ಲೇಖವಿದೆ. ಜ್ಞಾನ ದಾಸೋಹದ ಮೂಲಕ ಜಾತ್ಯತೀತತೆ ಜಾರಿಗೊಳಿಸಿ, ದೀನ-ದಲಿತೋದ್ಧಾರದ ಪರಿಕಲ್ಪನೆಗೆ ಪ್ರೇರಕರಾದ ರೇಣುಕರು ಕೊಲ್ಲಿಪಾಕಿಯಲ್ಲಿ ಕೆಳವರ್ಗದ ಹದಿನೆಂಟು ಜಾತಿ ಜನಾಂಗಗಳಿಗೆ ಮಠಗಳನ್ನು ಸ್ಥಾಪಿಸಿ, ಶಿಷ್ಯರನ್ನು ನೇಮಿಸುವುದರ ಮೂಲಕ ಧಾರ್ವಿುಕ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣದ ಅಂಶ ವನ್ನು ಮುನ್ನೆಲೆಗೆ ತಂದು ಅಸ್ಪೃ್ಯತೆಯಂತಹ ಪಿಡುಗನ್ನು ತೊಡೆದು ಹಾಕುವುದರ ಜತೆಗೆ ಮೂಢನಂಬಿಕೆ ಮತ್ತು ನಾಸ್ತಿಕ ಭಾವವನ್ನು ಅಳಿಸಿಹಾಕಿದರು. ಜಾತಿ-ಲಿಂಗ ತಾರತಮ್ಯವಿಲ್ಲದೆ ಸರ್ವರಿಗೂ ಲಿಂಗದೀಕ್ಷೆ ನೀಡುವುದರೊಂದಿಗೆ ಧಾರ್ವಿುಕ ಆಚರಣೆಗಳಲ್ಲಿ ಸ್ತ್ರೀಯರಿಗೂ ಸಮಾನ ಹಕ್ಕು ನೀಡಿದರು. ಧಾರ್ವಿುಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಕೃಷಿ, ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳ ಮೂಲಕ ಆದರ್ಶ ಆಚಾರ್ಯರಾದರು.
ಸಮಾಜದ ಉದ್ಧಾರಕ್ಕಾಗಿ ಶ್ರೀಲಂಕಾ ಮಾರ್ಗದಲ್ಲಿ ಪರ್ಯಟನೆ ಮಾಡುತ್ತಿರುವಾಗ,ರಾವಣನಿಂದ ಮಾತು ಪಡೆದ ವಿಭೀಷಣನ ಕೋರಿಕೆಯಂತೆ 3 ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿದ ಮಹಾತ್ಮರು ಶ್ರೀ ರೇಣುಕ ಭಗವತ್ಪಾದರು. ಈಗಲೂ ಜಾಫ್ನಾ ಸಮೀಪದ ತಿರುಮಲೈ ಎಂಬಲ್ಲಿ ರೇಣುಕಾಶ್ರಮ, ರೇಣುಕವನ ವಿದ್ದು ವೀರಶೈವರು ವಾಸಿಸುತ್ತಿದ್ದಾರೆ. ಈ ಕುರಿತು ಡಾ. ಎಂ.ಚಿದಾನಂದ ಮೂರ್ತಿ ಅವರ ಸಂಶೋಧನೆ ಮೂಲಕ ತಿಳಿಯುತ್ತದೆ. ಜಗದ್ಗುರು ರೇಣುಕರ ಅವತಾರದ ಕುರಿತು 701 ವಿರಕ್ತ ಮಹಾತಪಸ್ವಿ ಯಡಿಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳು ತಮ್ಮ ವಚನದಲ್ಲಿ ಆದಿಯಲ್ಲಿ ಶಿವತತ್ವದಲ್ಲಿ ರೇಣುಕರು ಉದಯವಾಗದಿದ್ದರೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋಳ್..? ಆ ಶಿವನಲ್ಲಿಯೆ ಹುಟ್ಟಿ, ಶಿವನಲ್ಲಿಯೆ ಲಯವಾದ ರೇವಣಸಿದ್ದೇಶ್ವರನು ಎನ್ನುತ್ತಾರೆ. ಅಲ್ಲದೆ ಲಿಂಗೋದ್ಭವವನ್ನು ಅನುಮಾನಿಸುವ ಅಜ್ಞಾನಿಗಳಿಗೆ ನಾಕನರಕ ತಪ್ಪದು ಎಂದು ಹೇಳಿದ್ದಾರೆ. ಹಾಗೆಯೇ ಶರಣೆ ಅಕ್ಕನಾಗಮ್ಮ, ‘ಅಂಗದಿಂದ ಉದಯವಾದಾತ ಮಡಿವಾಳಯ್ಯ, ಲಿಂಗದಿಂದ ಉದಯ ವಾದಾತ ರೇವಣಸಿದ್ಧ’ಎಂದು ತಮ್ಮ ವಚನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ದೇಶದ ಉದ್ದಗಲಕ್ಕೂ ಸಂಚರಿಸುತ್ತಾ ಬಂದ ಶ್ರೀ ರೇಣುಕರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಮಲಯಾಚಲಕ್ಕೆ ಬಂದು ನೆಲೆನಿಂತರು. ಅಲ್ಲಿ ಅಗಸ್ತ್ಯ ಮಹಾಮುನಿ ಗಳಿಗೆ ವೀರಶೈವ ಧರ್ಮದ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ಬೋಧಿಸಿ, ಭದ್ರಾನದಿಯ ತಟದಲ್ಲಿನ ಸುಂದರ ಪುಣ್ಯಭೂಮಿಯಲ್ಲಿ ಪೃಥ್ವಿ ತತ್ವದ ಸಂಕೇತವಾದ ಹಸಿರು ಧ್ವಜ ಹಿಡಿದು ರಂಭಾಪುರಿ ವೀರಸಿಂಹಾಸನ ಪೀಠ ಸ್ಥಾಪಿಸಿ ಶ್ರೀ ರುದ್ರಮುನಿ ಶಿವಾಚಾರ್ಯರಿಗೆ ಪಟ್ಟಾಭಿಷೇಕ ಮಾಡಿದರು. ಅಂದಿನಿಂದ ಇಂದಿನವರೆಗೆ 120 ಜಗದ್ಗುರುಗಳು ಪೀಠವನ್ನು ಅಲಂಕರಿಸಿದ್ದು, 119ನೇ ಜಗದ್ಗುರುಗಳಾದ ಶ್ರೀ ವೀರಗಂಗಾಧರರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ದಿವ್ಯವಾಣಿ ನೀಡುವ ಮೂಲಕ ರೇಣುಕರ ತತ್ವ ಸಿದ್ಧಾಂತವನ್ನು ಎತ್ತರಕ್ಕೆ ಕೊಂಡೊಯ್ದರು. ಪ್ರಸ್ತುತ 121ನೇ ಪೀಠಾಧೀಶರಾದ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶಯದಂತೆ ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ, ಶಾಂತಿ-ಸಮೃದ್ಧಿ ಸರ್ವರಿಗಾಗಲಿ ಎಂಬ ತತ್ವದಂತೆ ಪೀಠವು ಸಮಾಜ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ವೀರಶೈವ-ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗ ಧರಿಸಿ ಶಿವನೇ ತಾನಾಗುವ ನಂಬಿಕೆಯಿದ್ದು, ದೇಶಕ್ಕೊಂದು ಸಂವಿಧಾನ ಇರುವಂತೆ ವೀರಶೈವ ಧರ್ಮಕ್ಕೊಂದು ಶಾಸ್ತ್ರ ಸಿದ್ಧಾಂತ ಸಂಹಿತೆಯಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಮಾರ್ಗದಲ್ಲಿ ನಡೆದು ಶ್ರೇಯಸ್ಸನ್ನು ಕಂಡ ಧರ್ಮ ಇದಾಗಿದೆ.
ಇಂದಿಗೂ ಪಂಚಪೀಠಗಳು, ಸಾವಿರಾರು ವೀರಶೈವ ಮಠ- ಮಂದಿರಗಳು ಸಮಾಜದಲ್ಲಿನ ಸಾವಿರಾರು ವಿದ್ಯಾರ್ಥಿಗಳಿಗೆ, ದಿನ- ದಲಿತರಿಗೆ ಅನ್ನ-ಜ್ಞಾನ-ಸಂಸ್ಕಾರವನ್ನು ನೀಡುವುದರೊಂದಿಗೆ ತ್ರಿವಿಧ ದಾಸೋಹವನ್ನು ಮಾಡುತ್ತಾ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಿದ್ಧಾಂತ ಪಾಲಿಸುತ್ತಾ ಮುನ್ನಡೆಯುತ್ತಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ.