ಅಂಕಣ

ವಿಚ್ಛೇದನಕ್ಕೆ 2ನೇ ಬಾರಿ ಅರ್ಜಿ ಸಲ್ಲಿಸಬಹುದು

malli
  • ಮದುವೆಯಾಗಿ 11 ವರ್ಷ. ಗಂಡನ ಹಿಂಸೆ ತಾಳದೆ ಬೇರೆ ಊರಿಗೆ ಬಂದೆ. ನಂತರ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದೆವು. ಆದರೆ ಕಡೆಯದಿನ ನನ್ನ ಪತಿ ಕೋರ್ಟ್​ಗೆ ಬರದ ಕಾರಣ, ಕೇಸು ವಜಾ ಆಯಿತು. ಈಗ ಏಳು ವರ್ಷಗಳಿಂದ ಗಂಡ ಮತ್ತೆ ಹಿಂಸೆ ಕೊಡುತ್ತಿದ್ದಾರೆ. ಒಂದು ಸಲ ವಿಚ್ಛೇದನದ ಅರ್ಜಿ ವಜಾ ಆದರೆ ನಾನು ಮತ್ತೆ ವಿಚ್ಛೇದನ ಪಡೆಯಲು ಆಗುವುದಿಲ್ಲವಂತೆ. ಇದು ನಿಜವೆ?
ಈ ಹಿಂದೆ ನೀವಿಬ್ಬರೂ ಸೇರಿ ವಿಚ್ಛೇದನಕ್ಕೆ ಹಾಕಿದ್ದ ಪ್ರಕರಣ, ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಇರುವ ಒಂದು ಕಾನೂನು ಕ್ರಮ. ಈ ರೀತಿಯ ಪ್ರಕರಣ ಸಲ್ಲಿಸಿದಾಗ, ಪ್ರಕರಣ ಸಲ್ಲಿಸಿದ ಆರು ತಿಂಗಳ ನಂತರ ಹದಿನೆಂಟು ತಿಂಗಳ ಒಳಗೆ ವಿಚ್ಛೇದನದ ಆದೇಶವನ್ನು ಸಾಮಾನ್ಯವಾಗಿ ನ್ಯಾಯಾಲಯ ಕೊಡುತ್ತದೆ. ಆದರೆ ಆದೇಶದ ದಿನದವರೆಗೂ ವಿಚ್ಛೇದನಕ್ಕೆ ಇಬ್ಬರ ಒಪ್ಪಿಗೆಯೂ ಇರಲೇಬೇಕು. ನಿಮ್ಮ ಪತಿ ಬರದೇ ಇದ್ದುದರಿಂದ ಪ್ರಕರಣವನ್ನು ವಜಾ ಮಾಡಲಾಗಿದೆ. ಅದೇ ಪ್ರಕರಣವನ್ನು ಏಳು ವರ್ಷಗಳ ನಂತರ ಮುಂದುವರೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಬೇಕಿದ್ದರೆ ಪುನಃ ನೀವಿಬ್ಬರೂ ಸೇರಿ ಮತ್ತೊಮ್ಮೆ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಲು ಪ್ರಕರಣ ದಾಖಲಿಸಬಹುದು. ಪತಿ ಅದಕ್ಕೆ ಒಪ್ಪುವುದಿಲ್ಲ ಎನ್ನುವುದಾದರೆ, ನೀವು ಪ್ರತ್ಯೇಕವಾಗಿ ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸಿ. ನಿಮಗೆ ನಿಮ್ಮ ಪತಿಯಿಂದ ಆಗಿರುವ ಕ್ರೂರತೆಯನ್ನು ವಿವರಿಸಿ. ನಿಮಗೆ ವಿಚ್ಛೇದನ ಸಿಗಬಹುದು. ಒಮ್ಮೆ ಪರಸ್ಪರ ಒಪ್ಪಿಗೆಯಿಂದ ಸಲ್ಲಿಸಿದ ವಿಚ್ಛೇದನದ ಪ್ರಕರಣ ವಜಾ ಆದ ಮಾತ್ರಕ್ಕೆ ನೀವು ಮತ್ತೆ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಯಾವ ತೊಡಕೂ ಇಲ್ಲ. ನೀವು ಹೆದರಬೇಕಾಗಿಲ್ಲ.
  • ನನ್ನ ಹೆಂಡತಿಯ ತಂದೆಗೆ ಅವರ ತಂದೆಯಿಂದ ಬಂದ 40 ಎಕರೆ ಜಮೀನು ಇತ್ತು.ನನ್ನ ಹೆಂಡತಿಗೆ ತಂದೆ, ತಾಯಿ ಇಲ್ಲ. ಇಬ್ಬರು ಸಹೋದರರ ಪೈಕಿ ಒಬ್ಬ ತೀರಿಕೊಂಡಿದ್ದಾರೆ. ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿಯ ತಮ್ಮ ತನ್ನೊಬ್ಬನ ಹೆಸರಿಗೆ ಲೀಗಲ್ ಹೈರ್ ಸರ್ಟಿಫಿಕೇಟ್ ಮಾಡಿಸಿಕೊಂಡು ಖಾತೆ ಬದಲಾಯಿಸಿಕೊಂಡಿದ್ದಾನೆ. ಈಗ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾನೆ. ನನ್ನ ಹೆಂಡತಿಗೆ ಆಸ್ತಿಯಲ್ಲಿ ಯಾವ ಭಾಗವೂ ಇಲ್ಲ ಎನ್ನುತ್ತಿದ್ದಾನೆ. ಪರಿಹಾರವೇನು?

ನಿಮ್ಮ ಮಾವನಿಗೆ ಅವರ ತಂದೆಯಿಂದ ಬಂದ ಸ್ವತ್ತು ಅವರ ಪ್ರತ್ಯೇಕ ಸ್ವತ್ತಾಗಿರುತ್ತದೆ. ಇದು ಸ್ವಯಾರ್ಜಿತ ಸ್ವತ್ತಿನ ಎಲ್ಲ ಗುಣಗಳನ್ನೂ ಹೊಂದಿರುತ್ತದೆ. ಮಾವ ತೀರಿಕೊಂಡ ನಂತರ ಹಿಂದೂ ವಾರಸಾ ಕಾಯ್ದೆಯ ಕಲಂ 8ರಂತೆ ನಿಮ್ಮ ಮಾವನ ಹೆಂಡತಿ ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ.

ಅತ್ತೆ ಕೂಡ ಇಲ್ಲದೇ ಇರುವುದರಿಂದ ಆಸ್ತಿ ಮೂರು ಭಾಗವಾಗಿ, ನಿಮ್ಮ ಪತ್ನಿಗೆ, ಆಕೆಯ ತಮ್ಮನಿಗೆ ಹಾಗೂ ನಿಮ್ಮ ಪತ್ನಿಯ ಮೃತ ಸಹೋದರನಿಗೆ ತಲಾ ಒಂದೊಂದು ಭಾಗ ಹೋಗುತ್ತದೆ. ನಿಮ್ಮ ಪತ್ನಿಯ ಮೃತ ಸಹೋದರನ ಮೂರನೇ ಒಂದು ಭಾಗ ಮತ್ತೆ ಆತನ ಹೆಂಡತಿ ಮತ್ತು ಇಬ್ಬರ ಮಕ್ಕಳಿಗೆ ಸಮವಾಗಿ ಹಂಚಿಕೆ ಆಗುತ್ತದೆ. ನಿಮ್ಮ ಪತ್ನಿ ದಾವೆ ಹಾಕಿ ತಮ್ಮ ಆಸ್ತಿಯನ್ನು ಪರಭಾರೆ ಮಾಡಬಾರದೆಂಬ ತಾತ್ಕಾಲಿಕ ನಿರ್ಬಂಧಕ ಆಜ್ಞೆ/ಇಂಜಂಕ್ಷನ್ ಆರ್ಡರನ್ನು ಪಡೆದುಕೊಳ್ಳಲಿ.

ಕೇಸಿನಲ್ಲಿ ನಿಮ್ಮ ಪತ್ನಿಯ ಮೃತ ಸಹೋದರನ ಹೆಂಡತಿ ಮತ್ತು ಮಕ್ಕಳನ್ನೂ ಪಾರ್ಟಿ ಮಾಡಲಿ. ಕೇಸಿನಲ್ಲಿ ಎಲ್ಲರಿಗೂ ನೋಟಿಸು ಜಾರಿ ಆದ ಮೇಲೆ ಮಧ್ಯಸ್ಥಿಕೆಗೆ ಪ್ರಕರಣವನ್ನು ಕಳಿಸಿಕೊಡಲು ಪತ್ನಿ ಕೇಳಿಕೊಳ್ಳಲಿ. ಮಧ್ಯಸ್ಥಿಕೆಯಲ್ಲಿ ಯಾವುದಾದರೂ ಒಂದು ಒಪ್ಪಂದಕ್ಕೆ ಎಲ್ಲರೂ ಬರಬಹುದು. ಇಲ್ಲದೇ ಹೋದರೆ ಕೇಸನ್ನು ಆ ನಂತರ ನಿಮ್ಮ ಪತ್ನಿ ಮುಂದುವರೆಸಲಿ. ಆಕೆಯ ಮೂರನೇ ಒಂದು ಭಾಗಕ್ಕೆ ತೊಂದರೆಯಿಲ್ಲ.

  • ತಂದೆಯವರು ಸಂಪಾದಿಸಿದ್ದ ಒಂದು ಜಮೀನು ನನಗೆ ಮತ್ತು ತಮ್ಮನಿಗೆ ತಲಾ ಎರಡು ಎಕರೆಯಂತೆ ವಿಭಾಗ ಆಗಿ, ವಿಭಾಗ ಪತ್ರ ನೋಂದಣಿಯಾಗಿ ಖಾತೆ ಪಹಣಿಯೂ ಆಗಿತ್ತು. ನನಗೆ ತಿಳಿಯದಂತೆ ತಮ್ಮ ಒಂದು ಎಕರೆಯನ್ನೂ ಸೇರಿಸಿ ಮಾರಿದ್ದಾನೆ. ಚಕ್ಕುಬಂದಿಯನ್ನು ಮೂರು ಎಕರೆಗೆ ಬರೆದಿದ್ದಾನೆ. ನನ್ನ ಪಾಲಿನ ಎರಡು ಎಕರೆಯನ್ನು ಮಾರಾಟ ಮಾಡಿರದ ಕಾರಣ, ತಮ್ಮ ಮಾಡಿರುವ ಕ್ರಯ ಪತ್ರದಿಂದ ತೊಂದರೆ ಆಗುತ್ತದೆಯೇ? ನಮ್ಮ ಆಸ್ತಿಯನ್ನು ಬೇರೆಯವರು ಮಾರಿದರೆ ಏನಾಗುತ್ತದೆ? ಕೊಂಡು ಕೊಂಡವರು ತಂತಿ ಬೇಲಿ ಹಾಕಲು ಹೊರಟಿದ್ದಾರಂತೆ. ಪರಿಹಾರವೇನು?

ನಮ್ಮ ಆಸ್ತಿಯನ್ನು ಬೇರೆ ಯಾರೋ ಮತ್ಯಾರಿಗೋ ಮಾರಾಟ ಮಾಡಿದರೆ ನಾವು ಯೋಚಿಸಬೇಕಿಲ್ಲ ಎನ್ನುವುದು ಸರಿ. ಆದರೆ, ಆ ಪತ್ರ ನೋಂದಾಯಿತವಾಗಿರುವಾಗ ಮುಂದೆ ನಿಮ್ಮ ಹಕ್ಕನ್ನು ಯಾರಾದರೂ ಪ್ರಶ್ನಿಸಿದರೆ ತೊಂದರೆ ಆಗಬಹುದು. ಆದ್ದರಿಂದ ನಿರ್ದಿಷ್ಟ ಪರಿಹಾರ ಕಾಯ್ದೆ 1963 /ಸ್ಪೆಸಿಫಿಕ್ ರಿಲೀಫ್ ಆಕ್ಟ್ 1963 ಕಾಯ್ದೆಯ ಕಲಂ 31ರಂತೆ ನೀವು , ನಿಮ್ಮ ತಮ್ಮ ಬೇರೆಯವರಿಗೆ ಮಾರಾಟ ಮಾಡಿಕೊಟ್ಟಿರುವ ನಿಮ್ಮ ಆಸ್ತಿಗೆ ಸಂಬಂಧಿಸಿರುವ ಕ್ರಯ ಪತ್ರವನ್ನು ಶೂನ್ಯ ಎಂದು ಹಕ್ಕು ಘೊಷಣೆ ಮಾಡುವಂತೆ ಮತ್ತು ಆ ಕ್ರಯ ಪತ್ರವನ್ನು ರದ್ದು ಮಾಡುವಂತೆ ದಾವೆ ಹಾಕುವುದು ಒಳ್ಳೆಯದು.

ನಿಮ್ಮ ದಾವೆಯಲ್ಲಿ ತಮ್ಮ ಮತ್ತು ಕೊಂಡುಕೊಂಡವರನ್ನೂ ಪ್ರತಿವಾದಿಯಾಗಿಸಬೇಕು. ಕ್ರಯವಾದ ಮೂರು ವರ್ಷಗಳ ಒಳಗೆ ದಾವೆ ಹಾಕಬೇಕಿರುತ್ತದೆ. ಪ್ರಕರಣದಲ್ಲಿ ಎದುರುದಾರರಿಗೆ ನೋಟಿಸ್​ಜಾರಿಯಾದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಎಲ್ಲರೂ ಕೂತು ಮಾತಾಡಿದಾಗ ಪರಿಹಾರ ಸಿಕ್ಕಬಹುದು. ನಿಮ್ಮ ತಮ್ಮ ಮತ್ತು ಕ್ರಯಕ್ಕೆ ಪಡೆದವರು ಒಪ್ಪದೇ ಹೋದರೆ ದಾವೆ ಮುಂದುವರೆಸಿ. ನೀವು ಹೆದರಬೇಕಾಗಿಲ್ಲ.

(ಸೂಚನೆ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)