ಮತ್ತೊಂದು ವರ್ಷ ಮುಗಿದಿದೆ. ರಾಜ್ಯದ ರಾಜಕಾರಣದಲ್ಲಿ ಈ ವರ್ಷ ಬರೀ ವಿವಾದಗಳದ್ದೆ ಸದ್ದು. ದ್ವೇಷ ರಾಜಕಾರಣ ರಾಜ್ಯಕ್ಕೂ ಕಾಲಿಟ್ಟಿದೆ. ರಾಜ್ಯ ಸರ್ಕಾರ ಮತ್ತು 3 ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಗುಂಪುಗಾರಿಕೆಯೇ ಮೇಲಾಟವಾಡಿದೆ. ಪರಿಣಾಮ ಅಭಿವೃದ್ಧಿ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ.
| ರುದ್ರಣ್ಣ ಹರ್ತಿಕೋಟೆ
ಕೇಂದ್ರದ ವಿರುದ್ಧ ಪ್ರತಿಭಟನೆ, ನ್ಯಾಯಾಲಯದ ಮೆಟ್ಟಿಲು ಹತ್ತಿ ಪರಿಹಾರ ಪಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ಗಂಭೀರ ಆರೋಪ ಕೇಳಿ ಬಂದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪೋಕ್ಸೋ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ ಕೇಳಿ ಬಂದು ಮೂರೂ ಪಕ್ಷಗಳು ಮುಜುಗರಕ್ಕೆ ಒಳಗಾದವು.
ಒಕ್ಕೂಟ ಸರ್ಕಾರ ತೆರಿಗೆ ಪಾಲು ಹಂಚಿಕೆಯ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟದ ಸದಸ್ಯರು ನವದೆಹಲಿಯಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಹೆಸರಿನಲ್ಲಿ ಪ್ರತಿಭಟನೆ ಮಾಡಿ ದೇಶದ ಗಮನ ಸೆಳೆದರು. ಜಿಎಸ್ಟಿ ಪಾಲು, ಹದಿನೈದನೇ ಹಣಕಾಸು ಆಯೋಗದ ಶಿಫಾರಸುಗಳು ಸರಿಯಾಗಿ ಜಾರಿ ಆಗುತ್ತಿಲ್ಲವೆಂದು ಆರೋಪಿಸಿ ಫೆಬ್ರವರಿ 7ಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯವೊಂದು ರಾಷ್ಟ್ರ ರಾಜಧಾನಿಯಲ್ಲಿಯೇ ಪ್ರತಿಭಟನೆ ನಡೆಸಿದ್ದು ಇದೇ ಮೊದಲು.
ರಾಜ್ಯವನ್ನು ಕಾಡಿದ ಬರಕ್ಕೆ ಎಸ್ಡಿಆರ್ಎಫ್ನಡಿ ಪರಿಹಾರ ನೀಡುವಂತೆ ಕಾಡಿ ಬೇಡಿದರೂ ಕೇಂದ್ರ ಮಣಿಯದಿದ್ದಾಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲಾಯಿತು. ರಾಜ್ಯಕ್ಕೆ 18,171.44 ಕೋಟಿ ರೂ.ಗಳ ಪರಿಹಾರ ಕೊಡಿಸುವಂತೆ ಮನವಿ ಮಾಡಲಾಗಿತ್ತು. ಸುಪ್ರೀಂಕೋರ್ಟ್ ತರಾಟೆಯ ನಂತರ ಕೇಂದ್ರ ಸರ್ಕಾರ 3,545 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತು. ಬರದಿಂದ ತತ್ತರಿಸಿದ ಜನರಿಗೆ ನಿಯಮದ ಪ್ರಕಾರ ಜೀವನೋಪಾಯ ಭತ್ಯೆ 12 ಸಾವಿರ ಕೋಟಿ ರೂ.ಗಳನ್ನು ನೀಡುವಂತೆ ರಾಜ್ಯ ಸರ್ಕಾರ ಮೊದಲ ಬಾರಿಗೆ ಕೇಂದ್ರಕ್ಕೆ ಮನವಿ ಮಾಡಿತ್ತು. ಬರ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿ ಪಡೆದ ಮೊದಲ ರಾಜ್ಯ ಕರ್ನಾಟಕ.
ವರ್ಷದ ಆರಂಭವೇ ಲೋಕಸಭಾ ಚುನಾವಣೆಯ ಗುಂಗು ಆರಂಭವಾಯಿತು. ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಯ ಕಣಕ್ಕೆ ಇಳಿದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡವು. ಮೈತ್ರಿಯ ಲಾಭ ಎರಡೂ ಪಕ್ಷಗಳಿಗೆ ಆಯಿತು. ಬಿಜೆಪಿ ಕಳೆದ ಬಾರಿ ಗೆದ್ದಿದ್ದ 27 ಸ್ಥಾನಗಳಲ್ಲಿ 10 ಕಳೆದುಕೊಂಡು 17ಕ್ಕೆ ಇಳಿಯಿತು. ಕಾಂಗ್ರೆಸ್ ಕೇವಲ ಒಂದರಿಂದ ಒಂಭತ್ತಕ್ಕೆ ಏರಿದರೆ, ಜೆಡಿಎಸ್ 2 ಸ್ಥಾನಗಳನ್ನು ಗಳಿಸಿಕೊಂಡಿತು. ಕಾಂಗ್ರೆಸ್ ಗ್ಯಾರಂಟಿಗಳನ್ನು ನೆಚ್ಚಿಕೊಂಡಿತು. ಆದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೈ ಹಿಡಿಯಲಿಲ್ಲ. ಲೋಕಸಭಾ ಚುನಾವಣೆ ಮುಗಿದ ಆರು ತಿಂಗಳೊಳಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಇಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೋಲನ್ನು ಅನುಭವಿಸಿದರು.
ವಾಲ್ಮೀಕಿ ನಿಗಮದಲ್ಲಿ ನಡೆದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸುಮಾರು 88 ಕೋಟಿ ರೂ.ಗಳಷ್ಟು ಮೊತ್ತ ಆಂಧ್ರಪ್ರದೇಶದ ಬ್ಯಾಂಕ್ ಖಾತೆಗಳ ಮೂಲಕ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ತನಿಖೆಯನ್ನು ಇಡಿ ನಡೆಸಿದೆ. ನ್ಯಾಯಾಲಯದಲ್ಲಿ ನಾಗೇಂದ್ರಗೆ ಜಾಮೀನು ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದು ಈ ವರ್ಷದ ಗಮನಾರ್ಹ ಸಂಗತಿ. ಮನೆಗೆ ಬಂದಿದ್ದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂಬುದು 50ಕ್ಕೂ ಹೆಚ್ಚು ಗಣ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರು ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪ. ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ಜಾಮೀನು ನೀಡಿದೆ.
ರಾಜ್ಯದಲ್ಲಿ ಬಾಣಂತಿಯರ ಸಾವು ಘಟನೆಗಳು ಆತಂಕಕ್ಕೆ ಕಾರಣವಾದವು. ಸರ್ಕಾರದ ಲೆಕ್ಕದ ಪ್ರಕಾರವೇ 300ಕ್ಕೂ ಹೆಚ್ಚು ಸಾವು ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳಲ್ಲಿ ಹೆಸರು ತಳಕು ಹಾಕಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾಗಿದ್ದು ಈ ವರ್ಷದ ಪ್ರಮುಖ ಬೆಳವಣಿಗೆ. ಮುಡಾ ವಶಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಸಿಎಂ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ನೀಡಲಾಗಿತ್ತು. ಅದರಲ್ಲಿ ಅಕ್ರಮಗಳಾಗಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರು. ಲೋಕಾಯುಕ್ತ ತನಿಖೆ ನಡೆದಿದೆ. ಇನ್ನೊಂದೆಡೆ ಜಾರಿ ನಿರ್ದೇಶನಾಲಯ ಸಹ ವಿಚಾರಣೆ ಮಾಡುತ್ತಿದೆ. ಪ್ರಕರಣ ನ್ಯಾಯಾಲಯದ ಮುಂದಿದೆ. ಸರ್ಕಾರ ನ್ಯಾಯಾಂಗ ಆಯೋಗವನ್ನು ರಚನೆ ಮಾಡಿದೆ.
ರೈತರ, ಧಾರ್ವಿುಕ ಸಂಸ್ಥೆಗಳ ಆಸ್ತಿಗಳ ದಾಖಲೆಗಳಲ್ಲಿ ವಕ್ಪ್ ಹೆಸರು ನಮೂದಾಗಿದೆ ಎಂಬ ಕುರಿತು ಬಿಜೆಪಿ ಎಬ್ಬಿಸಿದ ಗಲಾಟೆ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿಯ ಎರಡು ಗುಂಪುಗಳು ಪ್ರರ್ಯಾಯ ಪ್ರತಿಭಟನೆ ನಡೆಸಿದ್ದವು. ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ, ರೈತರ, ಧಾರ್ವಿುಕ ಸಂಸ್ಥೆಗಳ ಆಸ್ತಿಗಳನ್ನು ವಕ್ಪ್ ವ್ಯಾಪ್ತಿಗೆ ತರುವುದಿಲ್ಲವೆಂದು ಸರ್ಕಾರ ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ಸ್ಪಷ್ಟಪಡಿಸಿತು. ಜೆಪಿಸಿ ಸಮಿತಿ ಸಹ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೂರೂ ರಾಜಕೀಯ ಪಕ್ಷಗಳಲ್ಲಿ ಗುಂಪುಗಾರಿಕೆ ಕಂಡುಬಂದಿದೆ. ಕಾಂಗ್ರೆಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಡಾ.ಎಚ್.ಸಿ. ಮಹದೇವಪ್ಪ ಹಾಗೂ ಇತರರು ಆಗಾಗ ಸಭೆ ಸೇರಿ ಚರ್ಚೆ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ 2028ಕ್ಕೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ಶಾಸಕರನ್ನು ಗುಂಪು ಸೇರಿಸುವ ಪ್ರಯತ್ನ ಸಹ ಮಾಡಿದ್ದಾರೆ. ಡಿಕೆಶಿ ಗುಂಪಿನ ಸದಸ್ಯರು ಸಹ ಅಲ್ಲಲ್ಲಿ ದನಿ ಎತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿಯಲ್ಲೂ ಗುಂಪುಗಾರಿಕೆ ತೀವ್ರವಾಗಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ ಹಾಗೂ ಇತರರು ದನಿ ಎತ್ತಿದ್ದಾರೆ. ವಕ್ಪ್ ವಿಚಾರದಲ್ಲಿ ಯತ್ನಾಳ್ ಗುಂಪು ಪ್ರತ್ಯೇಕ ಹೋರಾಟವನ್ನೇ ನಡೆಸಿತು. ಇದರ ನಡುವೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹಾಗೂ ಇತರರ ಮತ್ತೊಂದು ಗುಂಪಿದ್ದು ಅದು ತಟಸ್ಥ ನಿಲುವು ತಳೆದಿದೆ. ಗುಂಪುಗಾರಿಕೆ ವಿಚಾರದಲ್ಲಿ ಜೆಡಿಎಸ್ ಸಹ ಕಡಿಮೆ ಏನಿಲ್ಲ. ಮಾಜಿ ಸಚಿವ ಜಿ.ಟಿ. ದೇವೇಗೌಡ ಹಾಗೂ ಇತರರು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಆಕ್ರೋಶಗೊಂಡು ಒಂದು ಕಾಲು ಪಕ್ಷದಿಂದ ಹೊರಗಿಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಜೆಡಿಎಸ್ನ ಕೆಲವು ನಾಯಕರು ಬಂದಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ ಲಂಚಕ್ಕೆ ಬೇಡಿಕೆಯನ್ನಿಟ್ಟಿರುವ ಎರಡು ಘಟನೆಗಳು ವರದಿಯಾಗಿ ರಾಜಕೀಯ ಸಂಚಲನಕ್ಕೆ ಕಾರಣವಾದವು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹೋದರ ಗೋಪಾಲ ಜೋಶಿ ವಿರುದ್ಧ ಒಂದು ಪ್ರಕರಣ ಕೇಳಿ ಬಂದರೆ ಇನ್ನೊಂದು ಪ್ರಕರಣ ಚೈತ್ರ ಕುಂದಾಪುರ ವಿರುದ್ಧ ಕೇಳಿ ಬಂದಿತ್ತು. ನ್ಯಾಯಾಲಯದಲ್ಲಿ ತಡೆ ಸಿಕ್ಕಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಅನುಮತಿ ಕೇಳಿದರೂ ರಾಜ್ಯಪಾಲರು ನೀಡಿಲ್ಲ. ದೂರಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಕೊಡುವಂತೆ ರಾಜ್ಯಪಾಲರು ನೀಡಿರುವ ಸೂಚನೆ ವಿವಾದಕ್ಕೆ ಒಳಗಾಗಿದೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಅನೇಕ ಹಗರಣಗಳನ್ನು ರಾಜ್ಯ ಸರ್ಕಾರ ಕೆದಕುತ್ತಿದೆ. ಕೆಲವೊಂದು ಪ್ರಕರಣಗಳ ವಿಚಾರಣೆಗೆ ಆಯೋಗಗಳನ್ನು ರಚನೆ ಮಾಡಿದೆ. ಅದರಲ್ಲಿ ಪ್ರಮುಖವಾಗಿರುವುದು ಮಹಾಮಾರಿ ಕರೊನಾ ಸಂದರ್ಭದಲ್ಲಿ ನಡೆದ ಖರೀದಿ ಹಗರಣಗಳ ತನಿಖಾ ವರದಿ. ನ್ಯಾ. ಮೈಕೇಲ್ ಡಿ ಕುನ್ಹಾ ಅವರ ವರದಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವರದಿಯ ಪ್ರಕಾರ ಕ್ರಮ ಕೈಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ಸಹ ರಚನೆಯಾಗಿದೆ. ಒಂದು ಪ್ರಕರಣದಲ್ಲಿ ಪೊಲೀಸ್ ದೂರು ದಾಖಲಾಗಿ ಎಫ್ಐಆರ್ ಸಹ ಆಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಬೆಂಗ ಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿದವು. ಅದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಒಂದು ದಿನ ಮೊದಲೇ ಪ್ರಮುಖ ನಗರದಲ್ಲಿ ಸತ್ಯ ಸಂದೇಶ ಯಾತ್ರೆ ನಡೆಸಿತು. ಮೈಸೂರಿನಲ್ಲಿ ಎರಡು ಬೃಹತ್ ಸಮಾವೇಶಗಳು ನಡೆದವು.
ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ಜಾತಿ ನಿಂದನೆ ಸೇರಿ ವಿವಿಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದರು. ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಏಡ್ಸ್ ಇಂಜೆಕ್ಷನ್ ಚುಚ್ಚಲು ಸಿದ್ಧತೆ ಮಾಡಿದ್ದರು ಎಂಬುದು ತೀವ್ರ ಚರ್ಚೆಗೆ ಒಳಗಾದ ಪ್ರಕರಣವಾಗಿದೆ. ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದ ಅವರ ಮೇಲೆ ಇತ್ತೀಚೆಗೆ ಮೊಟ್ಟೆ ಎಸೆಯಲಾಗಿದೆ.
ವಿಧಾನ ಪರಿಷತ್ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕುರಿತು ಬಿಜೆಪಿಯ ಸಿ.ಟಿ. ರವಿ ಪ್ರಯೋಗಿಸಿದರು ಎನ್ನಲಾದ ಅವಾಚ್ಯ ಪದ ವಿವಾದ ಹುಟ್ಟುಹಾಕಿತು. ರವಿ ಮೇಲೆ ಹೆಬ್ಬಾಳ್ಕರ್ ಬೆಂಬಲಿಗರ ಹಲ್ಲೆ ಯತ್ನ, ಪೊಲೀಸರ ವರ್ತನೆಗಳೆಲ್ಲ ಚರ್ಚೆಗೆ ಒಳಗಾಗುವಂತೆ ಮಾಡಿದವು.
ನವದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟ.
ವಯನಾಡಿನ ದುರಂತಕ್ಕೆ ಮಿಡಿದ ರಾಜ್ಯ 100 ಮನೆ ನಿರ್ವಣಕ್ಕೆ ಮುಂದಾಗಿದೆ.
ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲುವಾಸ.
ಮಂಡ್ಯದಲ್ಲಿ ಯಶಸ್ವಿಯಾಗಿ ನಡೆದ ಸಮ್ಮೇಳನದಲ್ಲಿ ಬಾಡೂಟದ ಗದ್ದಲ, ಮೊಟ್ಟೆ ವಿತರಣೆ.
ಅಜೀಂ ಪ್ರೇಮ್ ಫೌಂಡೇಶನ್ನಿಂದ ಶಾಲಾಮಕ್ಕಳಿಗೆ ಮೊಟ್ಟೆ ವಿತರಣೆ.
ಹವಾಮಾನ ವೈಪರಿತ್ಯದಿಂದ ಸತತ ಮಳೆ, ಬೆಳೆ ಹಾನಿ, ಸಂಕಷ್ಟದಲ್ಲಿ ರೈತಾಪಿ ವರ್ಗ.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇಮಕ.
ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರ ನೇಮಕ.