| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದ ವಿಚಾರಕ್ಕೆ ಬಂದರೆ ಎರಡು ಪ್ರಮುಖ ಪ್ರಸ್ತಾವನೆಗಳು ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳುವ ಹಂತದಲ್ಲೇ ಇವೆ. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯುಡಿಎ)ಗೆ ಬೇಡ್ತಿ-ವರದಾ ಹಾಗೂ ನೇತ್ರಾವತಿ- ಹೇಮಾವತಿ ನದಿ ಜೋಡಣೆಯ ವಿಸõತ ಯೋಜನೆಯಾಗಿ ಎತ್ತಿನಹೊಳೆ ಯೋಜನೆಯನ್ನು ಪರಿಗಣಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಡ್ತಿ ನದಿಯಿಂದ 243 ಮಿಲಿಯನ್ ಕ್ಯೂಬಿಕ್ ಮೀಟರ್ (8.55 ಟಿಎಂಸಿ) ನೀರನ್ನು ವರದಾ ನದಿಗೆ ತಿರುವುಗೊಳಿಸಲು ಎನ್ಡಬ್ಲ್ಯುಡಿಎ ವತಿಯಿಂದ ಪ್ರಾಥಮಿಕ ವರದಿ ತಯಾರಿಸಲಾಗಿತ್ತು. ರಾಜ್ಯ ಸರ್ಕಾರ 2021ರ ಜ.21ರಂದು ಪತ್ರ ಬರೆದು ಇದಕ್ಕೆ ವಿವರವಾದ ಯೋಜನಾ ವರದಿ ಸಿದ್ಧಪಡಿಸಲು ಸಹಮತಿ ತಿಳಿಸಿದೆ. ಎನ್ಡಬ್ಲ್ಯುಡಿಎ ವರದಿಯನ್ನು ಸಂಸ್ಥೆ ಸಿದ್ಧಪಡಿಸುತ್ತಿದ್ದು, ಶೀಘ್ರ ಸಿದ್ಧವಾಗುವ ನಿರೀಕ್ಷೆಯಲ್ಲಿದೆ ರಾಜ್ಯ ಸರ್ಕಾರ. ಆದರೆ ಈ ಯೋಜನೆ ಬಗ್ಗೆ ಸ್ಥಳೀಯವಾಗಿ ಭಾರಿ ವಿರೋಧ ಇದೆ. ಬೇಸಗೆಯಲ್ಲಿ ಬೇಡ್ತಿ ನದಿಯಲ್ಲೇ ನೀರು ಬತ್ತುತ್ತದೆ; ಹೀಗಿರುವಾಗ ನೀರು ತಿರುವು ಹೇಗೆ ಸಾಧ್ಯ ಎಂಬ ಪ್ರಶ್ನೆ ಜನರದ್ದು.
ನೇತ್ರಾವತಿ- ಹೇಮಾವತಿ ತಿರುವು ಯೋಜನೆ ಕುರಿತು ಎನ್ಡಬ್ಲ್ಯುಡಿಎ ಪ್ರಾಥಮಿಕ ವರದಿ ತಯಾರಿಸಿದ್ದು, ಇದರಲ್ಲಿ 188 ಮಿಲಿಯನ್ ಕ್ಯೂಬಿಕ್ ಮೀಟರ್ (6.64 ಟಿಎಂಸಿ) ತಿರುವುಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪದ ಜಲಾನಯನ ಪ್ರದೇಶವು ಕರ್ನಾಟಕ ಈಗಾಗಲೆ ಅನುಷ್ಠಾನ ಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹಿನ್ನೆಲೆಯಲ್ಲಿ ನೇತ್ರಾವತಿ-ಹೇಮಾವತಿ ಜೋಡಣೆ ಅಧ್ಯಯನ ಮುಂದುವರಿಸಬಾರದೆಂದು ಸಂಸ್ಥೆಯನ್ನು ಕೋರಲಾಗಿದೆ. ಎತ್ತಿನಹೊಳೆ ಯೋಜನೆಯನ್ನು ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಸರಬರಾಜಿಗಾಗಿ ಹಾಗೂ ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು (24.01 ಟಿಎಂಸಿ) ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ನೇತ್ರಾವತಿ-ಹೇಮಾವತಿ ನದಿ ಜೋಡಣೆಯ ವಿಸõತ ಯೋಜನೆಯನ್ನಾಗಿ ರಾಷ್ಟ್ರೀಯ ಯೋಜನೆಯಡಿ ಪರಿಗಣಿಸಿ ಆರ್ಥಿಕ ನೆರವು ನೀಡಬೇಕೆಂದು 2021ರ ಜ.29ರಂದು, 2021ರ ಫೆ.10ರಂದು ಮತ್ತು ಕಳೆದ ತಿಂಗಳಲ್ಲಿ ಪುನಃ ಕೇಂದ್ರವನ್ನು ಕೋರಲಾಗಿದೆ.
ಪರಿಶೀಲನೆ ಹಂತದಲ್ಲಿ...
ಬೇಡ್ತಿ-ಅಘನಾಶಿನಿ- ವರದಾ ಯೋಜನೆಯು ರಾಜ್ಯದಲ್ಲಿನ (ಇಂಟ್ರಾ ಸ್ಟೇಟ್) ನದಿ ಜೋಡಣೆಯಾಗಿದ್ದು, ಎನ್ಡಬ್ಲ್ಯುಡಿಎ ಪರಿಶೀಲನೆ ಹಂತದಲ್ಲೇ ಇದೆ. ಯೋಜನಾ ವರದಿಗಳು ಸಿದ್ಧವಾದ ನಂತರ ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಅಧ್ಯಯನ ಕೈಗೊಂಡು, ಸಕ್ಷಮ ಪ್ರಾಧಿಕಾರಿಗಳ ಅನುಮೋದನೆಗಳೊಂದಿಗೆ ಹಾಗೂ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.