ಚಿಂತಕ, ಸಮಾಜ ಚಿಕಿತ್ಸಕ, ದೂರದೃಷ್ಟಿಯ ನೇತಾರ, ಬರಹಗಾರ, ಅಪ್ರತಿಮ ಸಂಘಟನಾ ಚತುರ-ಹೀಗೆ ಬಹುಮುಖ ಪ್ರತಿಭೆ ಪಂಡಿತ್ ದೀನದಯಾಳ ಉಪಾಧ್ಯಾಯ. ಸ್ವಂತ ಸುಖವನ್ನು ಬದಿಗಿರಿಸಿ ಸಂಘದ ಪ್ರಚಾರಕರಾಗಿ ಆರೆಸ್ಸೆಸ್ ಗರಡಿಯಲ್ಲಿ ಬೆಳೆದು ನಂತರ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಜೀವನವನ್ನೇ ಭಾರತಮಾತೆಯ ಸೇವೆಗೆ ಸಮರ್ಪಿಸಿದರು. ಇವರ ವ್ಯಕ್ತಿತ್ವ ಮೃದುವಾಗಿದ್ದರೂ ವಿಚಾರಗಳು ಅಷ್ಟೇ ಪ್ರಖರವಾಗಿರುತ್ತಿದ್ದವು.
ಬಾಲ್ಯಜೀವನ: ದೀನದಯಾಳರು ಬಡಕುಟುಂಬದಲ್ಲಿ ಜನಿಸಿದವರು (1916 ಸೆಪ್ಟೆಂಬರ್ 25). ಅನೇಕ ಕಷ್ಟ, ನೋವುಗಳನ್ನು ಕಿರಿಯ ವಯಸ್ಸಿನಲ್ಲೇ ಅನುಭವಿಸಿದರು. ಹುಟ್ಟಿದ ಎರಡೂವರೆ ವರ್ಷಕ್ಕೆ ತಂದೆಯನ್ನು, 7ನೇ ವಯಸ್ಸಿನಲ್ಲಿ ತಾಯಿಯನ್ನು, 15ನೇ ವಯಸ್ಸಿಗೆ ತಮ್ಮನನ್ನು ಕಳೆದುಕೊಂಡರು. ಇದರ ನಡುವೆ ತಾತ-ಅಜ್ಜಿ ಕಾಲವಶವಾಗಿ ದೀನದಯಾಳರು ಅಕ್ಷರಶಃ ಏಕಾಂಗಿಯಾದರು. ಸೋದರಮಾವ ರಾಧಾರಮಣ ಶುಕ್ಲರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಈ ಎಲ್ಲ ಸಂಕಷ್ಟಗಳ ನಡುವೆ ಬರೆದ ಎಲ್ಲ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸಿ ಉತ್ತೀರ್ಣರಾದರು. ಸಂಕಷ್ಟ, ನೋವುಗಳಿಂದ ಅವರೆಂದೂ ಮಾನಸಿಕವಾಗಿ ಕುಗ್ಗಲಿಲ್ಲ. ಬದಲಿಗೆ ಅವುಗಳನ್ನು ಎದುರಿಸಿ ಮತ್ತಷ್ಟು ಗಟ್ಟಿಯಾದರು.
ಸೋದರಮಾವನ ಒತ್ತಾಯಕ್ಕೆ ಮಣಿದು ಅಂದಿನ ಸರ್ಕಾರದ ಆಡಳಿತ ಪರೀಕ್ಷೆಗೆ ಕುಳಿತು ಉತ್ತೀರ್ಣರಾಗಿ ಸಂದರ್ಶನದಲ್ಲಿ ಕೆಲಸಕ್ಕೆ ಆಯ್ಕೆಯಾದರು. ಆದರೆ ಅವರ ಬದುಕು ಸಮಾಜಕ್ಕೆ ಎಂದು ನಿರ್ಣಯವಾಗಿತ್ತು. ಕೆಲಸವನ್ನು ತಿರಸ್ಕರಿಸಿ ವಿದ್ಯಾಭ್ಯಾಸ ಮುಂದುವರಿಸಲು ಪ್ರಯಾಗಕ್ಕೆ ತೆರಳಿದರು.
ಸಂಘದ ಸಂಪರ್ಕ: 1937ರಲ್ಲಿ ಕಾನಪುರದಲ್ಲಿ ಅವರ ಸಹಪಾಠಿಗಳಾಗಿದ್ದ ಬಾಲಾಜಿ ಮಹಾಶಬ್ದೆ ಇವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಪರಿಚಯಿಸಿದರು. ಸಂಘದ ಸ್ಥಾಪಕರಾದ ಡಾ.ಹೆಡ್ಗೇವಾರ್ರನ್ನು ಭೇಟಿ ಮಾಡುವ ಅವಕಾಶ ಲಭಿಸಿ, ಇವರ ಜೀವನದ ದಿಕ್ಕು ಸಂಪೂರ್ಣ ಬದಲಾಯಿತು. ವಿದ್ಯಾಭ್ಯಾಸ ಮುಗಿಸಿ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸಮಾಜದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಅಂದಿನ ದಿನದಲ್ಲಿ ಇವರ ಓದಿಗೆ ದೊಡ್ಡ ಸರ್ಕಾರಿ ಹುದ್ದೆ ಸುಲಭವಾಗಿ ದೊರೆಯುತ್ತಿತ್ತು. ಆದರೆ ಬಾಲ್ಯದಿಂದಲೂ ಕಷ್ಟದ ಜೀವನ, ಸಮೀಪದ ಬಂಧುಗಳ ಅಗಲಿಕೆಯ ನೋವಿನಿಂದ ಜರ್ಜರಿತವಾಗಿದ್ದರೂ ಹಣದ ಮೋಹಕ್ಕೆ ಒಳಗಾಗಲಿಲ್ಲ.
ಸಂಘದ ಪ್ರಚಾರಕರಾದ ತರುವಾಯ ಇವರ ಪ್ರತಿಭೆ ಮತ್ತಷ್ಟು ಅನಾವರಣಗೊಂಡಿತು. 1945ರಲ್ಲಿ ಇವರ ಪ್ರೇರಣೆಯಿಂದ ‘ರಾಷ್ಟ್ರಧರ್ಮ’ ರಾಷ್ಟ್ರೀಯ ವಿಚಾರಗಳ ಮಾಸಪತ್ರಿಕೆ, ‘ಪಾಂಚಜನ್ಯ’ ವಾರಪತ್ರಿಕೆ ಆರಂಭಗೊಂಡವು. ಜೊತೆಗೆ ‘ಸ್ವದೇಶ್’ ದಿನಪತ್ರಿಕೆಯನ್ನು ಆರಂಭಿಸಿದರು. ಉತ್ತರ ಪ್ರದೇಶದ ಪ್ರಾಂತ್ಯ ಪ್ರಚಾರಕರಾಗಿದ್ದ್ದ ಭಾವುರಾವ್ ದೇವರಸ್ ಚಂದ್ರಗುಪ್ತ ಮೌರ್ಯ ಬಗ್ಗೆ ಮಕ್ಕಳು ಓದಲು ಯಾವುದೇ ಪುಸ್ತಕವಿಲ್ಲವೆಂದು ದೀನದಯಾಳರ ಬಳಿ ಹೇಳಿದಾಗ ಚಂದ್ರಗುಪ್ತ ಮೌರ್ಯನ ಕುರಿತು ಪುಸ್ತಕ ಬರೆದರು.
ಸಂಘದಿಂದ ಜನಸಂಘಕ್ಕೆ: 1950ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮದಾಸ್ ಟಂಡನ್ ಸಂಘದ ಸ್ವಯಂಸೇವಕರನ್ನು ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯನ್ನು ಅಂಗೀಕರಿಸಿದರು. ನೆಹರುರ ವಿರೋಧ ಹಾಗೂ ಇದರ ಬಗ್ಗೆ ಉಂಟಾದ ವಿವಾದದಿಂದ ಪ್ರಸ್ತಾವನೆ ಕೈಬಿಡಲಾಯಿತು. ಕಾಕತಾಳೀಯವಾಗಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾದರು. ಇದರ ಫಲಶ್ರುತಿಯಾಗಿ 1952ರಲ್ಲಿ ಜನಸಂಘದ ಉದಯವಾಯಿತು.
ದೀನದಯಾಳ್ ಉಪಾಧ್ಯಾಯರನ್ನು ಸಂಘದಿಂದ ಜನಸಂಘದಲ್ಲಿ ಕೆಲಸಮಾಡಲು ಗುರೂಜಿ ಕಳುಹಿಸಿ ಕೊಟ್ಟರು. ದೇಶವ್ಯಾಪಿ ಜನಸಂಘದ ಪ್ರಭಾವವನ್ನು ಬೆಳೆಸುವ ಗುರುತರ ಜವಾಬ್ದಾರಿ ಇವರ ಹೆಗಲೇರಿತು. ದೀನದಯಾಳ್ ಉಪಾಧ್ಯಾಯರು ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಇವರ ಕಾರ್ಯಕೌಶಲ, ಬೌದ್ಧಿಕ ಸಾಮರ್ಥ್ಯ ಹಾಗೂ ಸಂಘಟನಾ ಚಾತುರ್ಯ ನೋಡಿ ಡಾ.ಶ್ಯಾಮಪ್ರಸಾದ್ ಮುಖರ್ಜಿ, ‘ದೀನದಯಾಳರಂತಹ ಇಬ್ಬರು ನನಗೆ ದೊರೆತರೆ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವೆ’ ಎಂಬ ಮೆಚ್ಚುಗೆ ಮಾತನ್ನು ಆಡಿದರು.
ಒಮ್ಮೆ ದೀನದಯಾಳರು ಸರಸಂಘಚಾಲಕರಾದ ಗುರೂಜಿಯವರನ್ನು ಕಾಣಲು ಹೋಗಿದ್ದರು. ಪತ್ರಿಕಾ ಸಂದರ್ಶನ ನೀಡುತ್ತಿದ್ದ ಗುರೂಜಿ ಅವರಿಗೆ ಪತ್ರಕರ್ತ-‘ಸ್ವಯಂಸೇವಕ ಎಂದರೆ ಯಾರು?’ ಎಂದು ಪ್ರಶ್ನಿಸಿದರು. ಆಗ ಗುರೂಜಿ ಥಟ್ಟನೆ ಪಕ್ಕದಲ್ಲಿ ಕುಳಿತಿದ್ದ ದೀನದಯಾಳರನ್ನು ತೋರಿಸಿದರು. ಅವರು ಅದೆಂಥ ಆದರ್ಶ ಸ್ವಯಂಸೇವಕರಾಗಿದ್ದರು ಎಂಬುದಕ್ಕೆ ಇದು ನಿದರ್ಶನ.
ವಿಶಿಷ್ಟ ವ್ಯಕ್ತಿತ್ವ: ರಾಜಕೀಯಲ್ಲಿದ್ದರೂ ಆ ಕ್ಷೇತ್ರದ ಮಸಿಯನ್ನು ತಮ್ಮ ಬಿಳಿಯ ಶುಭ್ರವಸ್ತ್ರಕ್ಕೆ ಮೆತ್ತಲು ಒಮ್ಮೆಯೂ ಆಸ್ಪದ ಕೊಡಲಿಲ್ಲ. ಉತ್ತರಪ್ರದೇಶದ ಜೌನ್ಪುರ ಕ್ಷೇತ್ರದ ಲೋಕಸಭಾ ಉಪಚುನಾವಣೆಗೆ ಇವರು ಸ್ಪರ್ಧಿಸಿದ ಸಂದರ್ಭ. ಇವರ ಕಾಂಗ್ರೆಸ್ ಎದುರಾಳಿ ಠಾಕೂರ್ ಜಾತಿಗೆ ಸೇರಿದವರು. ಜನಸಂಘದ ಕಾರ್ಯಕರ್ತರು ದೀನದಯಾಳರ ಬಳಿ ಬಂದು, ‘ಪ್ರಚಾರದ ವೇಳೆ ನೀವು ಬ್ರಾಹ್ಮಣರು ಎಂದು ಬಿಂಬಿಸಿದರೆ ನಮಗೆ ಲಾಭವಾಗುತ್ತದೆ’ ಎಂದಾಗ ದೀನದಯಾಳರು ಕೆರಳಿ ‘ಸಿದ್ಧಾಂತವನ್ನು ಬಲಿ ಕೊಟ್ಟು ಗಳಿಸುವ ಗೆಲುವು ಸೋಲಿಗಿಂತ ಹೀನಾಯವಾದ ಸಂಗತಿ. ಅಂಥ ಗೆಲುವು ನನಗೆ ಸರ್ವಥಾ ಬೇಡ’ ಎಂದು ಖಡಕ್ ಆಗಿ ತಿಳಿಸಿದರು.
ಇವರು ಪಟ್ಟ ಶ್ರಮದಿಂದಾಗಿ 1967ರ ಲೋಕಸಭಾ ಚುನಾವಣೆಯಲ್ಲಿ ಜನಸಂಘ ದೇಶದ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇವರು ಕೊಟ್ಟ ಏಕಾತ್ಮ ಮಾನವತಾವಾದದ ವೈಚಾರಿಕ ತಳಹದಿ 2020ರಲ್ಲಿಯೂ ಬಿಜೆಪಿಗೆ ಮೂಲ ಸಿದ್ಧಾಂತವಾಗಿರುವುದು ಅದರ ಪ್ರಸ್ತುತತೆ ಮತ್ತು ಅವರ ಚಿಂತನೆಯ ಆಳಕ್ಕೆ ಹಿಡಿದ ಕನ್ನಡಿ. ರಾಜಕೀಯ ಜೀವನದಲ್ಲಿ ಎಂದಿಗೂ ಜಾತಿ, ಭಾಷೆ ಮತ್ತು ಪ್ರಾಂತೀಯತೆಯನ್ನು ಬಂಡವಾಳ ಮಾಡಿಕೊಳ್ಳಲಿಲ್ಲ. ಸೈದ್ಧಾಂತಿಕ ಭದ್ರ ತಳಹದಿಯ ಮೇಲೆ ಪಕ್ಷವನ್ನು ಮುನ್ನಡೆಸಿದರು. ಇದನ್ನೂ ಓದಿ: ಸ್ತ್ರೀಯರೇ ದುಷ್ಟರಾದರೆ ಸಮಾಜದ ಗತಿ?
ಒಮ್ಮೆ ಹುಬ್ಬಳ್ಳಿಗೆ ಬಂದ ಸಂದರ್ಭ. ಇವರೊಂದಿಗೆ ಜನಸಂಘದ ಧುರೀಣ ಸದಾಶಿವಪ್ಪ ಶೆಟ್ಟರ್ ಇದ್ದರು. ರಿಕ್ಷಾದಲ್ಲಿ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿದ್ದ ಅಂಗಡಿಗಳ ಫಲಕಗಳು ಕೇವಲ ಇಂಗ್ಲಿಷ್ನಲ್ಲಿ ಇರುವುದನ್ನು ಗಮನಿಸಿದ ದೀನದಯಾಳರು, ‘ಈ ಬೋರ್ಡ್ಗಳೆಲ್ಲ ಯಾಕೆ ಇಂಗ್ಲಿಷ್ನಲ್ಲಿವೆ, ಕನ್ನಡದಲ್ಲಿ ಯಾಕಿಲ್ಲ? ನೀವೊಂದು ಚಳವಳಿ ಮಾಡಿ, ಎಲ್ಲ ಫಲಕಗಳನ್ನು ಕನ್ನಡದಲ್ಲಿ ಬರೆಯುವಂತೆ ಮಾಡಬೇಕು’ ಎಂದು ಸೂಚಿಸಿದರು. ನಾವು ಹಾಕುವ ಸಹಿ ಸ್ವಭಾಷೆಯಲ್ಲಿಯೇ ಇರಬೇಕು ಎಂದು ಆಗ್ರಹಪೂರ್ವಕವಾಗಿ ಹೇಳುತ್ತಿದ್ದರು. ಸ್ವದೇಶ, ಸ್ವಭಾಷೆ ಮತ್ತು ಸ್ವಭೂಷಣವನ್ನು ಅನುಸರಿಸಬೇಕೆಂದು ದೀನದಯಾಳರು ಅಂದೇ ಪ್ರತಿಪಾದಿಸಿದರು.
ದೀನದಯಾಳ ಉಪಾಧ್ಯಾಯರಂಥ ವಿಶಿಷ್ಟ ವ್ಯಕ್ತಿತ್ವದ ನಾಯಕ ದೊರೆಯುವುದು ವಿರಳ. ಸದ್ಗುಣಗಳ ಖನಿಯಾಗಿದ್ದ ದೀನದಯಾಳರು ಜೀವನದ ಕಡೆಯವರೆಗೂ ಎಲೆಮರೆಯ ಕಾಯಿಯಂತೆ ಬದುಕಿದರು. ಅವರ ವಿಚಾರಗಳನ್ನು ಮನನ ಮಾಡಿಕೊಂಡು ಭಕ್ತಿಪೂರ್ವಕವಾಗಿ ಗೌರವ ಸಲ್ಲಿಸುವ ಸುದಿನವಾಗಿದೆ ಇಂದು.
(ಲೇಖಕರು ಸಾಮಾಜಿಕ ಕಾರ್ಯಕರ್ತರು, ಹವ್ಯಾಸಿ ಬರಹಗಾರರು)