ಕ್ರೈಸ್ಟ್ಚರ್ಚ್: ಕೊನೇ ಮೂರು ಓವರ್ಗಳಲ್ಲಿ ಎಡಗೈ ಬ್ಯಾಟರ್ ತಿಲಕ್ ವರ್ಮ (51* ರನ್, 26 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ನಿತೀಶ್ ಕುಮಾರ್ ರೆಡ್ಡಿ (26* ರನ್, 13 ಎಸೆತ, 1 ಬೌಂಡರಿ, 1 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಸಾಹಸದ ನೆರವಿನಿಂದ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 4 ವಿಕೆಟ್ಗಳ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಪಡೆ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಚುಟುಕು ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ 200ನೇ ಜಯವೂ ಇದಾಗಿದೆ.
ಹ್ಯಾಗ್ಲಿ ಓವಲ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅಗ್ರ ಕ್ರಮಾಂಕ ವೈಲ್ಯ ನಡುವೆಯೂ ಗ್ಲೆನ್ ಫಿಲಿಪ್ಸ್ (70 ರನ್, 43 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನಾಟ ಹಾಗೂ ಬೆವೊನ್ ಚಾಕೋಬ್ಸ್ (58 ರನ್, 46 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ 5 ವಿಕೆಟ್ಗೆ 180 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಚೇಸಿಂಗ್ನಲ್ಲಿ 70 ರನ್ಗೆ 5 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟದಲ್ಲಿ ಸಿಲುಕಿತು. ಮುರಿಯದ ಏಳನೇ ವಿಕೆಟ್ಗೆ ತಿಲಕ್ ವರ್ಮ ಹಾಗೂ ನಿತೀಶ್ ಕುಮಾರ್ ರೆಡ್ಡಿ 30 ಎಸೆತಗಳಲ್ಲಿ 69 ರನ್ ಕಸಿದರು. ಅಂತಿಮವಾಗಿ ಭಾರತ 19.5 ಓವರ್ಗಳಲ್ಲಿ 6 ವಿಕೆಟ್ಗೆ 181 ರನ್ಗಳಿಸಿ ರೋಚಕ ಜಯ ಸಾಧಿಸಿತು.
ತಿಲಕ್-ನಿತೀಶ್ ಚೇಸ್ ಥ್ರೀಲ್!: ನಮನ್ ಧೀರ್ ಔಟಾದ ಬಳಿಕ ಕೊನೇ ಐದು ಓವರ್ಗಳಲ್ಲಿ 60 ರನ್ ಬೇಕಿದ್ದಾಗ ತಿಲಕ್ ಜತೆಯಾದ ನಿತೀಶ್ ಕುಮಾರ್ ಸಮರ್ಥ ಬೆಂಬಲ ನೀಡಿದರು. 18, 19ನೇ ಓವರ್ನಲ್ಲಿ ಕ್ರಮವಾಗಿ 17, 18 ರನ್ ಕಸಿದ ಈ ಜೋಡಿ ಗೆಲುವಿನ ಹಾದಿ ಸುಗಮಗೊಳಿಸಿತು. ಜೇಕಬ್ ಡಫಿ ಎಸೆದ ಕೊನೇ ಓವರ್ನಲ್ಲಿ 11 ರನ್ ಅವಶ್ಯವಿದ್ದಾಗ, 2 ಎಸೆತದಲ್ಲಿ ಬೌಂಡರಿಗಳಿಸಿದ ತಿಲಕ್ ಹಾದಿ ಸುಲಭಗೊಳಿಸಿದರು.
300. ಭಾರತ ಅಂತಾರಾಷ್ಟ್ರೀಯ ಟಿ20ಯಲ್ಲಿ 300 ಪಂದ್ಯವನ್ನಾಡಿದ ಎರಡನೇ ತಂಡ ಎನಿಸಿತು. ಪಾಕಿಸ್ತಾನ (304) ಮೊದಲ ಸ್ಥಾನದಲ್ಲಿದೆ.
200. ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತ ತಂಡದ 200ನೇ ಗೆಲುವು ಇದಾಗಿದ್ದು, ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.