ನವದೆಹಲಿ: ಭಾರತ ತಂಡದ ಮಾಜಿ ವೇಗಿ ಪರ್ವಿಂದರ್ ಅವಾನ ಜೂನಿಯರ್ ಕ್ರಿಕೆಟ್ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶುಕ್ರವಾರ ನೂತನ ಜೂ.ಆಯ್ಕೆ ಸಮಿತಿಯನ್ನು ಅಧಿಕೃತವಾಗಿ ನೇಮಕಗೊಳಿಸಿದೆ.
ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸಲಹೆಯ ಮೇರೆಗೆ ಜೂ.ಆಯ್ಕೆ ಸಮಿತಿ ರಚಿಸಲಾಗಿದ್ದು, ದೆಹಲಿಯ ಪರ್ವಿಂದರ್ ಅವಾನ ಜತೆಗೆ ಕೃಷ್ಣ ದಾಸ್, ರಾಕೇಶ್ ಪಟೇಲ್ ಹಾಗೂ ಎನ್.ಅರ್ಜುನ್ ಯಾದವ್ ಇತರ ಸದಸ್ಯರಾಗಿರಲಿದ್ದಾರೆ. 5ನೇ ಸದಸ್ಯರನ್ನು ಶ್ರೀದಲ್ಲೇ ನೇಮಕ ಮಾಡುವುದಾಗಿ ಬಿಸಿಸಿಐ ತಿಳಿಸಿದೆ. 40 ವರ್ಷದ ಪರ್ವಿಂದರ್ ಭಾರತ ಪರ 2 ಟಿ20 ಆಡಿದ್ದು, 62 ಪ್ರಥಮ ದರ್ಜೆ ಪಂದ್ಯಗಳಲ್ಲಿ 191 ವಿಕೆಟ್ ಪಡೆದಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದ ಅವರು , ಭಾರತ ಎ ಮತ್ತು ಶೇಷ ಭಾರತ ಪರವೂ ಆಡಿದ ಅನುಭವ ಹೊಂದಿದ್ದಾರೆ. ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಬಿಸಿಸಿಐ ಶ್ರೇಷ್ಠತಾ ಕೇಂದ್ರ (ಸಿಒಇ) ಹಾಗೂ 16, 19, 23 ವಯೋಮಿತಿ ದೆಹಲಿ ತಂಡ, 19 ವಯೋಮಿತಿ ಭಾರತ ತಂಡದ ತರಬೇತಿ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.