ತೆಲಂಗಾಣ ಚುನಾವಣೆ: ಬೆಳಿಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ ಸ್ಟಾರ್​ ನಟರು, ವಿಶೇಷ ಗಮನ ಸೆಳೆದ Jr NTR

Telangana Vote
Published on

ಹೈದರಾಬಾದ್​: ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಬಿರುಸು ಪಡೆದುಕೊಂಡಿದೆ. ಟಾಲಿವುಡ್​ ಸ್ಟಾರ್​ ನಟರು ಬೆಳ್ಳಂಬೆಳಗ್ಗೆಯೇ ಮತಗಟ್ಟೆಗೆ ಆಗಮಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಯುವಜನರಿಗೆ ತಪ್ಪದೇ ಮತದಾನ ಮಾಡವಂತೆ ಕರೆ ನೀಡಿದ್ದಾರೆ.

Allu Arjun 1

ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಏಕಾಂಗಿಯಾಗಿ ಬಂದು ಮತದಾನ ಮಾಡಿದರೆ, ಜೂ. ಎನ್​ಟಿಆರ್​ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಮೆಗಾಸ್ಟಾರ್​ ಚಿರಂಜೀವಿ ಸಹ ತಮ್ಮ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು. ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಹಕ್ಕು ಚಲಾಯಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

Jr NTR

ಕೆಲವು ವಾರಗಳ ಚುನಾವಣಾ ಪ್ರಚಾರದ ಭರಾಟೆಯ ನಡುವೆ ಇಂದು ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಅಲ್ಲು ಅರ್ಜುನ್​ ಅವರು ಜುಬಿಲಿ ಹಿಲ್ಸ್​ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಈ ವೇಳೆ ಅಭಿಮಾನಿಗಳ ಮನವಿ ಮೇರೆಗೆ ಸೆಲ್ಫಿಗೆ ಪೋಸ್​ ಸಹ ನೀಡಿದರು. ಮತ ಚಲಾಯಿಸಿದ ಫೋಟವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್​, ದಯವಿಟ್ಟು ಮತದಾನ ಮಾಡಿ ನಿಮ್ಮ ನಿಮ್ಮ ಜವಬ್ದಾರಿ ಮೆರೆಯುವಂತೆ ಕೇಳಿಕೊಂಡಿದ್ದಾರೆ.

Allu arjun 2

ನೀವು ವೋಟ್​ ಮಾಡಲ್ವಾ?

ತಮ್ಮ ಕುಟುಂಬ ಸಮೇತ ಜುಬಿಲಿ ಹಿಲ್ಸ್​ ಮತಗಟ್ಟೆಯಲ್ಲಿ ವೋಟ್​ ಮಾಡಲು ಬಂದಿದ್ದ ಜೂ. ಎನ್​ಟಿಆರ್​ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದು, ಎಲ್ಲರ ಗಮನ ಸೆಳೆಯಿತು. ಕ್ಯೂನಲ್ಲಿ ನಿಂತಿರುವ ಸಮಯದಲ್ಲಿ ಮಾಧ್ಯಮ ಮತ್ತು ಯೂಟ್ಯೂಬ್​ ಮಂದಿ ಎನ್​ಟಿಆರ್​ ಫೋಟೋ ಮತ್ತು ವಿಡಿಯೋಗಾಗಿ ಮುಗಿಬಿದ್ದರು. ಈ ವೇಳೆ ಅವರನ್ನು ನೋಡಿ ನೀವು ವೋಟ್​ ಮಾಡುವುದಿಲ್ಲವೇ? ಇಲ್ಲಿಯೇ ಇರುತ್ತೀರಾ? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ವ್ಯಕ್ತಿಯೊಬ್ಬರು ಉತ್ತರ ನೀಡಿ, ನೀವು ವೋಟ್​ ಮಾಡಿದ ಬಳಿಕ ನಾವು ಮಾಡುತ್ತೇವೆ ಎಂದರು.

Rajamouli

ಚಿರಂಜೀವಿ, ಜೂ. ಎನ್​ಟಿಆರ್​, ರಾಣಾ ದಗ್ಗುಬಾಟಿ, ವೆಂಕಟೇಶ್​ ದಗ್ಗುಬಾಟಿ ಸೇರಿದಂತೆ ಸ್ಟಾರ್​ ನಟರುಗಳು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಶೂಟಿಂಗ್​ ಹಿನ್ನೆಲೆಯಲ್ಲಿ ಮೈಸೂರಿನಲ್ಲಿದ್ದ ರಾಮ್​ ಚರಣ್​, ನಿನ್ನೆಯೇ ಹೈದರಾಬಾದ್​ಗೆ ಆಗಮಿಸಿ ಇಂದು ತಮ್ಮ ಹಕ್ಕನ್ನು ಚಲಾಯಿಸಿ, ಇತರರಿಗೆ ಮಾದರಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net