More

    ಸೀರಿಯಲ್​ಗೂ ಸೈ, ಸಿನಿಮಾಕ್ಕೂ ಜೈ ಎನ್ನುತ್ತಿದ್ದಾರೆ ‘ಖಳ’ ಸೂರ್ಯ ಪ್ರವೀಣ್…

    ಬೆಂಗಳೂರು: ಸೀರಿಯಲ್​ನಲ್ಲಿ ವಿಲನ್ ಆಗಿ ನಟಿಸುವಾಗ, ಸಿಕ್ಕ ಸಿಕ್ಕಲ್ಲಿ ಜನ ಬೈತಿದ್ರು. ಇನ್ನು ಕೆಲವರು ಮನೆಗೆ ಕರೆದು ಬಾಡೂಟ ಹಾಕಿಸ್ತಿದ್ರು.. ಇದೆಲ್ಲವನ್ನು ನೋಡುತ್ತಿದ್ದ ನನಗೆ, ನನ್ನ ಕೆಲಸ ಜನರಿಗೆ ತೃಪ್ತಿ ತಂದಿದೆ. ಅವರನ್ನು ಇದೇ ರೀತಿ ಮನರಂಜಿಸುವುದಷ್ಟೇ ನನ್ನ ಕಾಯಕವಾಗಲಿ ಎಂದು ಮನದಲ್ಲಿಯೇ ಹೇಳಿಕೊಳ್ಳುತ್ತಿದ್ದೆ…- ಹೀಗೆ ಹೇಳಿಕೊಳ್ಳುತ್ತಾರೆ ಸಿನಿಮಾಕ್ಕೂ ಸೈ, ಸೀರಿಯಲ್​ಗೂ ಜೈ ಎನ್ನುವ ನಟ ಸೂರ್ಯ ಪ್ರವೀಣ್.


    ಖಳನಾಯಕ ಹೀಗೇ ಇರಬೇಕು ಎಂಬುದಕ್ಕೆ ಹೇಳಿ ಮಾಡಿಸಿದಂತಿರುವ ಸೂರ್ಯ ಪ್ರವೀಣ್, 2011ರಲ್ಲಿ ಸಂಗೊಳ್ಳಿ ರಾಯಣ್ಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸ್ಟಾರ್ ನಟರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷ ಏನೆಂದರೆ, ಆ ಎಲ್ಲ ಸಿನಿಮಾಗಳಲ್ಲಿ ಅವರು ಖಳನಾಗಿಯೇ ಮಿಂಚು ಹರಿಸಿದ್ದಾರೆ. ಸಿನಿಮಾ ಅಷ್ಟೇ ಅಲ್ಲ ಧಾರಾವಾಹಿಗಳಲ್ಲಿಯೂ ಇವರು ಬೇಡಿಕೆಯ ಖಳನಟ.


    ಈ ಖಳ ಪಾತ್ರಗಳ ಬಗ್ಗೆ ಮಾತನಾಡುವ ಸೂರ್ಯ ಪ್ರವೀಣ್, ನನಗೆ ಖಳನ ಪಾತ್ರವೇ ಇಷ್ಟ. ಈಗಾಗಲೇ ಜನ ಅದನ್ನು ನೋಡಿಯೇ ಗುರುತಿಸಿದ್ದಾರೆ. ನಾಯಕನಾಗಿ ಲಾಂಚ್ ಆಗುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಖಳನ ಪಾತ್ರ ತೃಪ್ತಿ ನೀಡುವಷ್ಟು ಬೇರಾವ ಪಾತ್ರವೂ ನನಗೆ ಅಷ್ಟಾಗಿ ಒಗ್ಗುವುದಿಲ್ಲ. ಗಟ್ಟಿಮೇಳ, ಮಂಗಳಗೌರಿ ಮದುವೆ ಸೇರಿ 30ಕ್ಕೂ ಅಧಿಕ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿನ ಖಳನ ಪಾತ್ರವೇ ನನಗಿಷ್ಟ ಎನ್ನುತ್ತಾರವರು.

    ಸೀರಿಯಲ್​ಗೂ ಸೈ, ಸಿನಿಮಾಕ್ಕೂ ಜೈ ಎನ್ನುತ್ತಿದ್ದಾರೆ ‘ಖಳ’ ಸೂರ್ಯ ಪ್ರವೀಣ್...
    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬೈಟು ಲವ್ ಚಿತ್ರದಿಂದ ಒಳ್ಳೇ ಪ್ರತಿಕ್ರಿಯೆ ಪಡೆದ ಸೂರ್ಯ ಪ್ರವೀಣ್, ಪ್ರಿಯಾಂಕಾ ಉಪೇಂದ್ರ ಅವರ ಉಗ್ರಾವತಾರ ಚಿತ್ರದಲ್ಲಿಯೂ ಖಳನಾಗಿ ಅಬ್ಬರಿಸಿದ್ದಾರೆ. ಇಂಗ್ಲಿಷ್ ಮಂಜ, ಕೌಟಿಲ್ಯ, ರಾಮನ ಅವತಾರ ಸಿನಿಮಾಗಳಲ್ಲಿಯೂ ನಾಯಕನೆದುರು ವಿಲನ್ ಆಗಿದ್ದಾರೆ. ಈ ಎಲ್ಲ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಹೊಸದಾಗಿ ಅಲಂಕಾರ್ ವಿದ್ಯಾರ್ಥಿ, ಗತವೈಭವದಲ್ಲಿಯೂ ವಿಶೇಷ ಪಾತ್ರಗಳಲ್ಲಿ ಸೂರ್ಯ ಪ್ರವೀಣ್ ನಟಿಸುತ್ತಿದ್ದಾರೆ.


    ಕನ್ನಡ ಮಾತ್ರವಲ್ಲದೆ, ಪರಭಾಷೆಯ ಸಿನಿಮಾ ಧಾರಾವಾಹಿಗಳಿಂದಲೂ ಅವಕಾಶಗಳು ಸೂರ್ಯಗೆ ಒಲಿದು ಬಂದಿವೆ. ಆದರೆ, ಭಾಷೆ ಸಮಸ್ಯೆಯಿಂದ ಅವೆಲ್ಲವನ್ನು ಬದಿಗಿಟ್ಟು ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ. ತೆಲುಗು ಸೀರಿಯಲ್ ಅವಕಾಶಗಳು ಬಂದವು. ಆದರೆ, ಭಾಷೆ ಸಮಸ್ಯೆಯಿಂದ ಕೈಬಿಟ್ಟೆ. ಮೊದಲು ಇಲ್ಲಿ ನೆಲೆ ಕಂಡುಕೊಳ್ಳಬೇಕು. ಅದಾದ ಬಳಿಕ ಬೇರೆ ನೆಲದಲ್ಲಿ ಸಾಧಿಸಬೇಕು ಎಂಬುದು ಅವರ ಮಾತು.


    ಆದರ್ಶ ಫಿಲಂ ಇನ್ಟಿಟ್ಯೂಟ್​ನಲ್ಲಿ ಹಿರಿಯ ನಿರ್ದೇಶಕ ಭಗವಾನ್ ಅವರ ಗರಡಿಯಲ್ಲಿ ಪಳಗಿ, ಅಪ್ಪು ವೆಂಕಟೇಶ್ ಅವರ ಜತೆಗೆ ಸ್ಟಂಟ್​ ಕಲಿತು. ಇದೀಗ ಖಳನಟನಾಗಿಯೇ ಹತ್ತು ಹಲವು ಅವಕಾಶಗಳನ್ನು ಪಡೆಯುತ್ತಿದ್ದಾರೆ ಸೂರ್ಯ ಪ್ರವೀಣ್. ನಾನು ಚಿತ್ರರಂಗಕ್ಕೆ ಅಂಟಿಕೊಂಡಿದ್ದೇನೆ. ನನಗೆ ಬೇರೆ ಕೆಲಸವೂ ಬರುವುದಿಲ್ಲ. ಏನೇ ಆದರೂ, ಚಿತ್ರರಂಗದಲ್ಲಿಯೇ ಇರುತ್ತೇನೆ. ಬೇರೆ ಕೆಲಸ ಮಾಡುವುದೇ ಇಲ್ಲ ಎಂದೂ ಹೇಳುತ್ತಾವರವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts