ರಾಜಸ್ಥಾನ: ಬೇಟೆಗಾರನೇ ಬೇಟೆಯಾದಾಗ… ಈ ರೀತಿಯ ಮಾತು ಕೇಳಿಬರುವುದು ಬಹಳ ಅಪರೂಪ. ಥ್ರಿಲ್ಲರ್ ಸಿನಿಮಾಗಳಲ್ಲಿ ಕೇಳಿ ಬರುವ ಡೈಲಾಗ್, ಅರಣ್ಯದಲ್ಲಿ ನಿಜವಾದರೆ ಹೇಗಿರಬಹುದು? ಹೌದು! ಚಿರತೆಯಂತಹ ಉತ್ತಮ ಬೇಟೆಗಾರ ಪ್ರಾಣಿಯನ್ನು ಹುಲಿಯೊಂದು ತಿನ್ನುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಈ ಬಗ್ಗೆ ಐಎಫ್ಎಸ್ ಅಧಿಕಾರಿಯೊಬ್ಬರು ಫೋಟೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್, ಶನಿವಾರ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಚಿರತೆಯನ್ನು ತಿನ್ನುತ್ತಿರುವ ಚಿತ್ರವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ ಚಿರತೆ ಮತ್ತು ಗಂಡು ಹುಲಿ T-101 ನಡುವೆ ಸೆಣೆಸಾಟ ನಡೆದಿತ್ತು. ಅದರಲ್ಲಿ ಹುಲಿ ಗೆಲುವಿನ ನಗೆ ಬೀರಿದೆ. ಅಧಿಕಾರಿ ಈ ಫೋಟೊಗಳನ್ನು ಪೋಸ್ಟ್ ಮಾಡಿದ ನಂತರ ಟ್ವೀಟ್ ವೈರಲ್ ಆಗಿದೆ.
ಕಾಮೆಂಟ್ ವಿಭಾಗದಲ್ಲಿ ಒಬ್ಬರು ಪ್ರಾಣಿಗಳ ಈ ರೀತಿಯ ನಡವಳಿಕೆ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಬರೆದುಕೊಂಡಿದ್ದರು. ಇನ್ನೊಬ್ಬರು ಹೆಚ್ಚಿನ ಪ್ರಾಣಿಗಳನ್ನು ಬೇಟೆ ಆಡುವುದಕ್ಕಾಗಿ ಕಾಂಪಿಟೇಶನ್ ಅನ್ನೇ ಈ ಹುಲಿ ಮುಗಿಸಿದೆ ಎಂದು ಬರೆದಿದ್ದಾರೆ.