More

    ಶೇ.80 ಬ್ಯಾಂಕ್​ ಸಿಬ್ಬಂದಿಗೆ ಕನ್ನಡವೇ ಬರೋದಿಲ್ಲ!

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಕನ್ನಡದಲ್ಲಿ ಸೇವೆಕೊಡಲು ಹಿಂದೇಟು ಹಾಕುವ ಬ್ಯಾಂಕ್​ಗಳು ತಮ್ಮ ಸಿಬ್ಬಂದಿಗೆ ಕನ್ನಡ ಕಲಿಸುವುದರಲ್ಲೂ ಆಸಕ್ತಿ ತೋರದಿರುವ ಅಂಶ ಬೆಳಕಿಗೆ ಬಂದಿದೆ. 2014ರಿಂದೀಚೆಗೆ ಬ್ಯಾಂಕುಗಳಿಗೆ ನೇಮಕಗೊಂಡ ಅನ್ಯರಾಜ್ಯದ ಶೇ.80 ನೌಕರರು ಕನ್ನಡ ಓದಲು ಬಾರದೆ ಹಿಂದಿ ಮತ್ತು ಇಂಗ್ಲಿಷ್​ನಲ್ಲೇ ಗ್ರಾಹಕರ ಜತೆ ವ್ಯವಹರಿಸುತ್ತಿದ್ದಾರೆಂಬ ಸಂಗತಿ ಸರ್ಕಾರದ ಭಾಗವಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಡಿ.15ರೊಳಗೆ ವರದಿ ನೀಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿತ್ತಾದರೂ ಇನ್ನೂ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

    ರಾಷ್ಟ್ರೀಯ ಮಟ್ಟದಲ್ಲಿ 2014ರ ಬಳಿಕ ಬ್ಯಾಂಕಿಂಗ್ ಹುದ್ದೆಗಳ ನೇಮಕ ನಿಯಮದಲ್ಲಿ ಬದಲಾವಣೆಯಾಯಿತು. ಹೊಸ ನಿಯಮದ ಪ್ರಕಾರ ಅನ್ಯರಾಜ್ಯದವರು ಯಾವ ರಾಜ್ಯದಲ್ಲಿ ನೇಮಕಗೊಳ್ಳುತ್ತಾರೆಯೋ ಅಲ್ಲಿನ ಸ್ಥಳೀಯ ಭಾಷೆಯನ್ನು ಆರು ತಿಂಗಳಲ್ಲಿ ಕಲಿತುಕೊಳ್ಳಬೇಕು. ಬಳಿಕವಷ್ಟೇ ಅವರ ಪರೀಕ್ಷಾರ್ಥ ಅವಧಿ (ಪ್ರೊಬೆಷನರಿ ಅವಧಿ) ಮುಕ್ತಾಯಗೊಂಡು ಸೇವೆ ಕಾಯಂಗೊಳ್ಳಲಿದೆ. ಒಂದು ವೇಳೆ ಆರು ತಿಂಗಳಲ್ಲಿ ಕಲಿಯದೇ ಹೋದಲ್ಲಿ 2 ವರ್ಷದೊಳಗಾದರೂ ಕಲಿತುಕೊಳ್ಳಬಹುದೆಂದು ನಿಯಮ ಸಡಿಲಿಕೆ ಮಾಡಲಾಯಿತು. ಆ ಪ್ರಕಾರ ಆರು ವರ್ಷದಿಂದೀಚೆಗೆ ರಾಜ್ಯದಲ್ಲಿ ನೇಮಕಗೊಂಡ ಬ್ಯಾಂಕಿಂಗ್ ಸಿಬ್ಬಂದಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು. ಮೆರಿಟ್ ಆಧಾರದಲ್ಲಿ ಅನ್ಯರಾಜ್ಯದವರು ಇಲ್ಲಿನ ಹುದ್ದೆಗಳನ್ನೇನೋ ದೊಡ್ಡ ಪ್ರಮಾಣದಲ್ಲಿ ಪಡೆದುಕೊಂಡರು. ಆದರೆ, ಕನ್ನಡವನ್ನು ಮಾತ್ರ ಕಲಿಯಲೇ ಇಲ್ಲ. ಯಾರು ಏನು ಮಾಡುತ್ತಾರೆ ನೋಡೋಣ ಎಂಬ ಧೋರಣೆಯಲ್ಲೇ ಮುಂದುವರಿದಿದ್ದಾರೆ. ಬ್ಯಾಂಕುಗಳ ಆಡಳಿತ ಮಂಡಳಿಗಳು ಈ ಬಗ್ಗೆ ಗಮನಹರಿಸಲೂ ಇಲ್ಲ.

    ರಾಜ್ಯ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಬಗ್ಗೆ ಪದೇಪದೆ ಪ್ರಸ್ತಾಪ ಆಗುತ್ತಲೇ ಇದೆ. ಸರ್ಕಾರ ತನ್ನ ಆಶಯವನ್ನು ಬ್ಯಾಂಕುಗಳಿಗೆ ಹೇಳಿಕೊಂಡೇ ಬಂದಿದೆ. ಜತೆಗೆ ನ. 11ರಂದು ವಿಧಾನಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಮಹತ್ವದ ಸಭೆಯೂ ನಡೆಯಿತು. ಭಾರತೀಯ ರಿಸರ್ವ್ ಬ್ಯಾಂಕ್​ನ ನಿಯಮಾವಳಿ, ನೇಮಕ ಪ್ರಕ್ರಿಯೆ ಹಾಗೂ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ಚರ್ಚೆ ನಡೆದಿತ್ತು. ಜತೆಗೆ ಬ್ಯಾಂಕುಗಳಲ್ಲಿ ಕನ್ನಡ ಅನುಷ್ಠಾನ ವಿಷಯವಾಗಿ ಪತ್ರ ಬರೆದರೂ ಸ್ಪಂದನೆ ದೊರೆತಿಲ್ಲ. ಈ ರೀತಿ ನಡವಳಿಕೆ ಸರಿಯಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ 2014ರ ನಂತರ ನೇಮಕಗೊಂಡ ಕನ್ನಡೇತರ ಅಧಿಕಾರಿ ನೌಕರರು ಎಷ್ಟು? ನೇಮಕಾತಿ ನಿಯಮದನ್ವಯ ಎಷ್ಟು ಮಂದಿ ಕನ್ನಡ ಕಲಿತಿದ್ದಾರೆ, ಎಷ್ಟು ಜನ ಕಲಿತಿಲ್ಲ ಎಂದು 15 ದಿನಗಳೊಳಗೆ ವರದಿ ನೀಡುವಂತೆ ರಾಜ್ಯ ಲೀಡ್ ಬ್ಯಾಂಕ್​ಗೆ ಸೂಚಿಸಿದ್ದರು. ಲೀಡ್ ಬ್ಯಾಂಕ್ ಸಂಯೋಜಕರು ಒಪ್ಪಿಕೊಂಡಿದ್ದರು. ಈವರೆಗೂ ಮಾಹಿತಿ ಮಾತ್ರ ಪ್ರಾಧಿಕಾರಕ್ಕೆ ತಲುಪಿಸಿಲ್ಲ.

    ಪ್ರಾಧಿಕಾರ ಕಂಡಿದ್ದೇನು?

    ಪ್ರಾಧಿಕಾರ ಬ್ಯಾಂಕುಗಳಿಗೆ ಭೇಟಿ ನೀಡಿದಾಗ ಕನ್ನಡದಲ್ಲಿರುವ ನಮೂನೆ, ಇತ್ಯಾದಿ ತೋರಿಸಲಾಗುತ್ತದೆ. ಆದರೆ, ಜನರಿಗೆ ಅದನ್ನು ತಲುಪಿಸುವುದಿಲ್ಲ ಎಂದು ಪ್ರಾಧಿಕಾರ ಕಳವಳ ವ್ಯಕ್ತಪಡಿಸಿದೆ. ಬ್ಯಾಂಕ್​ಗಳು ನೇರವಾಗಿ ರೈತರೊಂದಿಗೆ ವ್ಯವಹರಿಸುವುದರಿಂದ ಸ್ಥಳೀಯ ಕನ್ನಡ ಭಾಷೆಯಲ್ಲೇ ವ್ಯವಹರಿಸಬೇಕಾಗುತ್ತದೆ ಎಂಬುದು ಪ್ರಾಧಿಕಾರದ ವಾದವಾಗಿದೆ.

    ಕಲಿಯದಿದ್ದರೆ ಬಿಡಿ ಗಾಡಿ!

    ನೇಮಕಗೊಂಡ 6 ತಿಂಗಳೊಳಗೆ ಕನ್ನಡ ಓದಲು ಮತ್ತು ಬರೆಯಲು ಕಲಿತಿರಬೇಕು, 6 ವರ್ಷವಾದರೂ ಕನ್ನಡ ಕಲಿಯದ ನೌಕರರ ವಿರುದ್ಧ ಬ್ಯಾಂಕುಗಳು ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ ಸಿ ಮತ್ತು ಡಿ ವರ್ಗದ ನೌಕರರಿಗೆ ಕನ್ನಡ ಕಲಿಸಿ ಇಲ್ಲವೇ ನಿಯಮಗಳ ಪ್ರಕಾರವೇ ಅಂತಹವರನ್ನು ತಕ್ಷಣವೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಬ್ಯಾಂಕುಗಳಿಗೆ ಪ್ರಾಧಿಕಾರ ತಾಕೀತು ಮಾಡಿದೆ.

    2014ರಿಂದೀಚೆಗೆ ನೇಮಕಗೊಂಡವರು ಕನ್ನಡ ಕಲಿತ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಈ ವರೆಗೂ ಮಾಹಿತಿ ಕೊಟ್ಟಿಲ್ಲ. ನಾವು ಇಷ್ಟಕ್ಕೆ ಸುಮ್ಮನೆ ಕೂರಲ್ಲ.

    ಡಾ.ಕೆ.ಮುರಳೀಧರ್ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

    ಕನ್ನಡ ಯುವಜನೋತ್ಸವ!

    ಶೇ.80 ಬ್ಯಾಂಕ್​ ಸಿಬ್ಬಂದಿಗೆ ಕನ್ನಡವೇ ಬರೋದಿಲ್ಲ!ಇನ್ನು ಮುಂದೆ ಜಿಲ್ಲಾ ಮಟ್ಟದ ಯುವಜನೋತ್ಸವದ ಆಶುಭಾಷಣ ಹಾಗೂ ಏಕಾಂಕ ನಾಟಕ ಸ್ಪರ್ಧೆಗಳನ್ನು ಕನ್ನಡದಲ್ಲೂ ನಡೆಸುವಂತೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸೂಚನೆ ನೀಡಿದೆ. ತುಮಕೂರಿನಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎರಡೂ ಸ್ಪರ್ಧೆಗಳನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ನಡೆಸುತ್ತಿರುವ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪಣೆ ವ್ಯಕ್ತಪಡಿಸಿ ಯುವ ಸಬಲೀಕರಣ ಇಲಾಖೆಗೆ ಪತ್ರ ಬರೆದಿತ್ತು. ಇಲಾಖೆಯ ನಡವಳಿಕೆ ರಾಜ್ಯದ ಭಾಷಾನೀತಿಗೆ ವಿರೋಧವೆಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸ್ಪರ್ಧೆಗಳು ನಡೆದಿರುವುದರಿಂದ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ.

    ಚೆನ್ನಾಗ್ ಓದು ಎಂದು ಮನೇಲಿ ಹೇಳಿದ್ದಕ್ಕೆ ಏನ್​ ಮಾಡ್ದ ನೋಡಿ ಈ ಪೋರ!

    ‘ನನ್ನನ್ನು ರಕ್ಷಿಸಿ..’ ಎಂದು ಅಪ್ಪನ ವಿರುದ್ಧವೇ ದೂರು ಕೊಟ್ಟಳು ಮಾಜಿ ಸಚಿವರ ಮಗಳು!

    ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts