More

    7ನೇ ವೇತನ ಆಯೋಗದ ವರದಿ ಅನುಷ್ಠಾನ ಖಚಿತ: ಸಿಎಂ ಭರವಸೆ

    ಬೆಂಗಳೂರು: ಇಂದು ಮಂಡನೆಯಾದ ರಾಜ್ಯ ಬಜೆಟ್​ ಬಗ್ಗೆ ಸರ್ಕಾರಿ ನೌಕರರ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದ ಬೆನ್ನಿಗೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಕುರಿತ ಭರವಸೆಯೊಂದನ್ನು ನೀಡಿದ್ದಾರೆ. ಬಜೆಟ್ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ಸರ್ಕಾರಿ ನೌಕರರ ಅಸಮಾಧಾನವನ್ನು ತಣಿಸುವಂಥ ವಿಷಯ ತಿಳಿಸಿದ್ದಾರೆ.

    ಏಳನೇ ವೇತನ ಆಯೋಗದ ಅನುಷ್ಠಾನದ ಕುರಿತು ಮನವಿ ಮಾಡಿಕೊಂಡಿದ್ದರೂ ಬಜೆಟ್​​ನಲ್ಲಿ ಆ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಆ ಬಗ್ಗೆ ಇನ್ನೊಮ್ಮೆ ಮನವಿ ಮಾಡಿಕೊಳ್ಳಲಾಗುವುದು, ಅದಾಗ್ಯೂ ಸ್ಪಂದಿಸದಿದ್ದರೆ ಹೋರಾಟದ ಅವಕಾಶವೂ ಇದೆ ಎಂಬುದಾಗಿ ಪರೋಕ್ಷವಾಗ ಎಚ್ಚರಿಕೆಯನ್ನೂ ನೀಡಿದ್ದರು.

    ಇದಕ್ಕೆ ಉತ್ತರ ಎನ್ನುವಂತೆ ಸಿಎಂ ಪ್ರತಿಕ್ರಿಯಿಸಿದ್ದು, ಏಳನೇ ವೇತನ ಆಯೋಗದ ವರದಿ ಶೀಘ್ರವೇ ಬರಲಿದೆ. ಈ ವರ್ಷದ ಬಜೆಟ್‌ನಲ್ಲಿ‌ 6 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಈ ವರ್ಷವೇ 7ನೇ ವೇತನ ಆಯೋಗದ ವರದಿ ಅನುಷ್ಠಾನ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

    ಚುನಾವಣೆ ಇದೆ ಎಂದು ನಾನು ಕೂಡ ಬೇಜಾವಾಬ್ದಾರಿಯಿಂದ ಘೋಷಣೆಗಳನ್ನು ಮಾಡಬಹುದಿತ್ತು. ಮಹಿಳೆಯರಿಗೆ ಇಷ್ಟು ಕೊಡುತ್ತೇವೆ, ಅಷ್ಟು ಕೊಡುತ್ತೇವೆ ಎಂದೂ ಹೇಳಬಹುದಿತ್ತು. ಆದರೆ ‌ ನಮ್ಮದು‌ ಜವಾಬ್ದಾರಿಯುತ ಸರ್ಕಾರ ಎಂಬುದಾಗಿ ಸಿಎಂ ವಿರೋಧ ಪಕ್ಷಗಳವರ ಆರೋಪಕ್ಕೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಬಜೆಟ್ ಬಗ್ಗೆ ಸರ್ಕಾರಿ ನೌಕರರ ಸಂಘದ ಬೇಸರ; ಮತ್ತೊಮ್ಮೆ ಮನವಿ, ಈಡೇರದಿದ್ದರೆ ಹೋರಾಟಕ್ಕೂ ಚಿಂತನೆ

    ಕೋವಿಡ್ ಸಾಂಕ್ರಾಮಿಕ ವೇಳೆ ಆರ್ಥಿಕತೆ ಕುಸಿದು ಹೋಗಿದ್ದರೂ ಈ ಸಲ ಬಂಡವಾಳ ವೆಚ್ಚ ಕಳೆದ ಸಲಕ್ಕಿಂತ ಶೇ. 30 ಹೆಚ್ಚಾಗಿದೆ. ತೆರಿಗೆ ಇಲ್ಲದೆ ಆರ್ಥಿಕ ಸುಧಾರಣೆ ‌ತಂದಿದ್ದೇವೆ. ಹಿಂದಿನ‌ ಕಾರ್ಯಕ್ಷಮತೆ ನೋಡಿಕೊಂಡು ಜನರು ತೀರ್ಮಾನಿಸುತ್ತಾರೆ. ಸಾಲ ಕಡಿಮೆ ಮಾಡಿ, ಆದಾಯ ಹೆಚ್ಚಿಸಿ ಉತ್ತಮ ಬಜೆಟ್ ನೀಡಿದ್ದೇವೆ, ಈಗಿನ ವಿರೋಧ ಪಕ್ಷದ ನಾಯಕರ ಸಾಲವನ್ನು ನಾವು ಇಂದು ತೀರಿಸುತ್ತಿದ್ದೇವೆ ಎಂದು ಸಿಎಂ ಹೇಳಿದರು.

    ಆರ್ಥಿಕ ಬಲವರ್ಧನೆಗೂ ಈ ಬಜೆಟ್​ನಲ್ಲಿ ಕ್ರಮಕೈಗೊಳ್ಳಲಾಗಿದ್ದು, ನ್ಯಾಷನಲ್ ಹೈವೇ‌ಗೆ‌ ಭೂ‌ಸ್ವಾಧೀನಕ್ಕೆ‌ ಹಣಕಾಸು‌ ಒದಗಿಸುತ್ತೇವೆ. ಸುಮಾರು 2 ಸಾವಿರ‌ ಕಿ.ಮೀ. ರಾಷ್ಟ್ರೀಯ ಹೆದ್ದಾರಿಗೆ ಹಣ‌ ಬಿಡುಗಡೆಯಾಗಿದೆ. ಶಿವಮೊಗ್ಗ, ‌ವಿಜಯಪುರ ವಿಮಾನ ನಿಲ್ದಾಣ‌ ಈ ವರ್ಷದಿಂದಲೇ ಆರಂಭವಾಗಲಿದೆ. ದಾವಣಗೆರೆ, ‌ಕೊಪ್ಪಳ ವಿಮಾನ‌‌ ನಿಲ್ದಾಣಕ್ಕೆ ಸಮಗ್ರ ಯೋಜನಾ ವರದಿ ಸಿದ್ಧವಾಗಿದೆ ಎಂದೂ ಸಿಎಂ ಹೇಳಿದ್ದಾರೆ.

    ನಾರಾಯಣಗುರು ವಸತಿ ಶಾಲೆಗಳು ಆರಂಭವಾಗಲಿದ್ದು, ಈ ವರ್ಷದಲ್ಲಿ 1 ಲಕ್ಷಕ್ಕೂ ‌ಹೆಚ್ಚು ಮಕ್ಕಳಿಗೆ ‌ವಿದ್ಯಾಸಿರಿ ಯೋಜನೆ ಫಲ ಸಿಗಲಿದೆ. ತಳಮಟ್ಟದಲ್ಲೂ ಅನುಷ್ಠಾನ ನಡೆಸಲಾಗುತ್ತಿದ್ದು, ಕರಕುಶಲ‌ ಕಾರ್ಮಿಕರಿಗೆ ಕಾಯಕ‌ ಯೋಜನೆಯಡಿ 50 ಸಾವಿರ‌ ರೂ. ಕೊಡುತ್ತಿದ್ದೇವೆ, ಅಸಂಘಟಿತ‌ ಕಾರ್ಮಿಕರಿಗೂ ನಿಗಮ ಮಾಡುತ್ತಿದ್ದೇವೆ ಎಂದರು. ಒಂದು ಸಾವಿರ‌ ಶಾಲಾ ಬಸ್‌ ಜೋಡಣೆ ಮೂಲಕ ಶಾಲಾ‌‌ ಬಸ್ ಸಮಸ್ಯೆ ‌ನಿವಾರಣೆ ಮಾಡುತ್ತಿದ್ದೇವೆ. ಆಶಾ ಕಾರ್ಯಕರ್ತೆ, ಬಿಸಿಯೂಟ ತಯಾರಕರು, ‌ಗ್ರಂಥಪಾಲಕರಿಗೆ‌‌ ಗ್ರಾಚ್ಯುಟಿ ಕೊಡಲು ಆದೇಶ ಹೊರಡಿಸಿದ್ದೇವೆ, ಇದರಿಂದ 70 ಕೋಟಿ‌‌ ರೂ. ಹೊರೆಯಾಗಲಿದೆ ಎಂದೂ ಸಿಎಂ ಹೇಳಿದರು.

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಕೋವಿಡ್​ ತಡೆಯುವಲ್ಲಿ ಮಾಸ್ಕ್​ ನಿಜಕ್ಕೂ ಪರಿಣಾಮ ಬೀರಿದೆಯಾ?: ಇಲ್ಲಿದೆ ಅಧ್ಯಯನವೊಂದರ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts