3 ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದವ ರೈತ ಹೋರಾಟಕ್ಕೆ ಬಲಿಯಾದ!

farmer
Published on

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟವು ಮಂಗಳವಾರದಂದು ಉಗ್ರ ರೂಪ ತಾಳಿ ಸಾಕಷ್ಟು ಹಿಂಸಾಚಾರ ನಡೆದಿದೆ. ಈ ಹೋರಾಟದಲ್ಲಿ ಓರ್ವ ಹೋರಾಟಗಾರ ಮೃತನಾಗಿದ್ದಾನೆ. ಮೃತನಾದ ಹೋರಾಟಗಾರ ಮೂರು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದ ಎಂದು ಇದೀಗ ಮಾಹಿತಿ ಸಿಕ್ಕಿದೆ.

ಉತ್ತರ ಪ್ರದೇಶದ ದಿಬ್ಡಿಯಾ ಗ್ರಾಮದ ನವೃತ್​ ಸಿಂಗ್​(27) ಮೃತನಾದ ವ್ಯಕ್ತಿ. ಆತ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಮೂರು ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದ. ಮಂಗಳವಾರದಂದು ಆತನೂ ತನ್ನ ಸ್ನೇಹಿತರ ಜತೆ ಸೇರಿ ದೆಹಲಿಗೆ ಬಂದಿದ್ದಾನೆ. ರೈತ ಹೋರಾಟದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸದೆಯೇ ಮನೆಯಿಂದ ಹೊರಟು ಬಂದಿದ್ದಾನೆ. ದೆಹಲಿಯಲ್ಲಿ ಆತನಿದ್ದ ಟ್ರ್ಯಾಕ್ಟರ್​ ಪಲ್ಟಿ ಹೊಡೆದಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ನನ್ನ ಮಗ ರೈತ ಹೋರಾಟಕ್ಕೆ ಹೋಗುತ್ತಿದ್ದಾನೆ ಎನ್ನುವುದು ನಮಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವನನ್ನು ಕಳುಹಿಸುತ್ತಿರಲಿಲ್ಲ. ಅವನ ಸ್ನೇಹಿತರು ಆತನನ್ನು ಕರೆದೊಯ್ದಿದ್ದಾರೆ ಎಂದು ಮೃತನ ಕುಟುಂಬ ದೂರಿದೆ.

ದೆಹಲಿಯಲ್ಲಿ ನಡೆದ ಹಿಂಸಾಚಾರದಿಂದ 80ಕ್ಕೂ ಹೆಚ್ಚು ಪೊಲೀಸರು ಹಾಗೂ ಕೆಲ ರೈತ ಹೋರಾಟಗಾರರು ಗಾಯಾಳುಗಳಾಗಿದ್ದಾರೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ನಡೆದ ದಾಳಿಯಿಂದಾಗಿ ಇಡೀ ದೇಶವೇ ಬೆಚ್ಚಿ ಬಿದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net