More

    ಲಾಕ್​ಡೌನ್​ಗೆ ನೆಲಕಚ್ಚಿದ ಬಾಳೆಗೊನೆ

    ಹೊಳೆಹೊನ್ನೂರು: ಕರೊನಾ ಲಾಕ್​ಡೌನ್ ಪರಿಣಾಮ ಕೃಷಿ ಬೆಳೆಗಳ ಕಟಾವು ಸೇರಿ ಸಾಗಣೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಭದ್ರಾವತಿ ತಾಲೂಕಿನ ಇಟ್ಟಿಗೆಹಳ್ಳಿ ರೈತ ಚಂದ್ರಪ್ಪ ಅವರ 3 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿರುವ ಎಲಕ್ಕಿ ಬಾಳೆಗೊನೆಗಳು ಖರೀದಿದಾರರಿಲ್ಲದೆ ನೆಲಕಚ್ಚುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    ಕರೊನಾ ಲಾಕ್​ಡೌನ್​ನಿಂದಾಗಿ ಬಾಳೆಗೊನೆಗಳನ್ನು ಕೊಳ್ಳಲು ಯಾವ ಖರೀದಿದಾರನೂ ಮುಂದೆ ಬರುತ್ತಿಲ್ಲ. ಜಿಲ್ಲೆಯ ಬಹುತೇಕ ಬಾಳೆ ಮಂಡಿಗಳು ಬಾಗಿಲು ಮುಚ್ಚಿವೆ. ಚಂದ್ರಪ್ಪ ಅವರೇ ಬಾಳೆಗೊನೆಗಳನ್ನು ಕಡಿದು ಸಾಗಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ.

    ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಭಾಗದ ಬಾಳೆಗೊನೆ ಖರೀದಿದಾರರನ್ನು ಸಂರ್ಪಸಿದರೂ ಪ್ರಯೋಜನವಾಗಿಲ್ಲ. 3 ಎಕರೆಯಲ್ಲಿ ಬೆಳೆದಿರುವ ಎಲಕ್ಕಿ ಬಾಳೆಗೊನೆಗಳು ಭಾಗಶಃ ನೆಲಕ್ಕೆ ಬಿದ್ದು ಜಮೀನಲ್ಲಿಯೇ ಹಣ್ಣಾಗಿ ಕೊಳೆತು ಹೋಗುತ್ತಿವೆ.

    ಚಂದ್ರಪ್ಪ ಅವರು 4-5 ಲಕ್ಷ ಸಾಲ ಮಾಡಿ ಇಟ್ಟಿಗೆಹಳ್ಳಿಯ ಸರ್ವೆ ನಂ.20ರಲ್ಲಿರುವ ಜಮೀನಿನಲ್ಲಿ ಅಡಕೆಯೊಂದಿಗೆ ಬಾಳೆ ಕೃಷಿ ಮಾಡಿದ್ದರು. 1,350ಕ್ಕೂ ಹೆಚ್ಚು ಗೊನೆಗಳು ಸದ್ಯ ಕಟಾವಿಗೆ ಬಂದಿವೆ. ಒಂದೊದು ಗೊನೆಗಳು 10-15 ಕೆಜಿ ತೂಗುತ್ತವೆ. ಅಂದಾಜು 10 ಟನ್​ನಷ್ಟು ಬಾಳೆ ಕಟಾವಿಗೆ ಬಂದಿದ್ದು 4-5 ಟನ್​ನಷ್ಟು ಬಾಳೆಗೊನೆಗಳು ನೆಲಕ್ಕೆ ಬಿದ್ದು ಹಾಳಾಗಿವೆ.

    ಬಾಳೆ ಬೆಳೆಯಿಂದ 6 ಲಕ್ಷ ರೂ. ಗಿಂತ ಅಧಿಕ ಲಾಭದ ನಿರೀಕ್ಷೆ ಇತ್ತು. ಕಣ್ಣು ಮುಂದೆಯೇ ಲಕ್ಷಾಂತರ ರೂ. ವೆಚ್ಚದ ಬೆಳೆ ನಷ್ಟ ಸಂಭವಿಸುತ್ತಿರುವುದನ್ನು ಕಂಡು ಇಡೀ ಕುಟುಂಬ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.

    ಆನವೇರಿ ಗ್ರಾಮ ಮುಖಂಡ ಎಂ.ಬಿ ಬಸವರಾಜಪ್ಪ, ಮಾಜಿ ತಾಪಂ ಸದಸ್ಯ ಬಿ.ಟಿ.ಹನುಮಂತಪ್ಪ ಸೇರಿ ಇಟ್ಟಿಗೆಹಳ್ಳಿ ಗ್ರಾಮಸ್ಥರು ರೈತನಿಗೆ ಸಮಾಧಾನ ಮಾಡಿ ಧೈರ್ಯ ಹೇಳಿದರು. ಕೃಷಿ ಮಾರುಕಟ್ಟೆ ಅಧಿಕಾರಿಗಳಿಗೂ ಬಾಳೆ ಬಗ್ಗೆ ತಿಳಿಸಿದರೂ ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts