More

    ರೋಡ್ ರೋಮಿಯೋಗಳಿಗೆ ಕಡಿವಾಣ ಹಾಕಲು ಗಸ್ತು ಹೆಚ್ಚಳ

    ಚಿಕ್ಕಮಗಳೂರು: ಸಂಜೆ ವೇಳೆ ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವಿದ್ಯಾರ್ಥಿನಿಯರಿಗೆ ತೊಂದರೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ದೂರುಗಳನ್ನು ಆಲಿಸಿ ಮಾತನಾಡಿದರು.

    ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಎಲ್ಲ ಠಾಣೆ ವ್ಯಾಪ್ತಿಯಲ್ಲೂ ದಾಳಿ ನಡೆಸಿ ಕೇಸು ದಾಖಲಿಸಲಾಗುತ್ತಿದೆ. ಅಕ್ರಮ ಚಟುವಟಿಕೆ, ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ನಿಗಾವಹಿಸಲು ಪೊಲೀಸ್ ಗಸ್ತು ಹೆಚ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಅಕ್ರಮ ಮದ್ಯ ಮಾರಾಟದಿಂದ ಕೂಲಿನಾಲಿ ಮಾಡಿ ಜೀವನ ಮಾಡುತ್ತಿರುವ ಬಡವರು, ದಲಿತ ಕುಟುಂಬಗಳ ಹಣ ಪೋಲಾಗುವುದರ ಜತೆಗೆ ಆರೋಗ್ಯಕ್ಕೂ ಸಮಸ್ಯೆಯಾಗುತ್ತದೆ. ಯಾವ ಸಮಸ್ಯೆ ಇದ್ದರೂ ಜನರು ಧೈರ್ಯವಾಗಿ ಹೇಳಬಹುದು. ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಇದ್ದರೆ ಗಮನಕ್ಕೆ ತನ್ನಿ. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಪರಿಶಿಷ್ಟ ಜಾತಿ ಪಂಗಡಗಳ ಸಭೆಯನ್ನು ನಿಯಮಿತವಾಗಿ ನಡೆಸಲು ನಿರ್ಧರಿಸಿದ್ದು ಇದರಿಂದ ಪರಸ್ಪರ ಚರ್ಚೆಗೆ ಅವಕಾಶ ಸಿಗಲಿದೆ. ಯಾವುದೇ ಮಾಹಿತಿ ಇದ್ದರೂ ಎಸ್ಪಿ, ಡಿವೆಎಸ್ಪಿ ಮುಂತಾದ ಅಧಿಕಾರಿಗಳಿಗೆ ನಿರ್ಭಯವಾಗಿ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಶಂಕರಪುರ ಹಾಗೂ ಕೆಲವೆಡೆ ಯುವಕರು ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿರುವುದು, ಅಂಬೇಡ್ಕರ್ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ರ್ಪಾಂಗ್, ಹೆಣ್ಣುಮಕ್ಕಳ ಹಾಸ್ಟೆಲ್ ಮುಂದೆ ಪಡ್ಡೆ ಹುಡುಗರ ಓಡಾಟ ಹೆಚ್ಚಳದ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್​ಪಿ ಎಸ್.ಪುರುಷೋತ್ತಮ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts