ಕೊನೆಯವರೆಗೂ ಡೇನಿಯಲ್​ ಬಾಲಾಜಿ ಮದುವೆಯಾಗಲಿಲ್ಲ ಏಕೆ? ಇಲ್ಲಿದೆ ಅಸಲಿ ಕಾರಣ

Daniel Balaji Kirataka
Published on

ಚೆನ್ನೈ: ರಾಕಿಂಗ್​ ಸ್ಟಾರ್​ ಯಶ್​ಗೆ ಅತಿದೊಡ್ಡ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಖಡಕ್​ ಖಳನಾಯಕನಾಗಿ ತೆರೆಯ ಮೇಲೆ ಅಬ್ಬರಿಸಿದ್ದ ನಟ ಡೇನಿಯಲ್​ ಬಾಲಾಜಿ ಹೃದಯಾಘಾತದಿಂದ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿ ನಿನ್ನೆ (ಮಾರ್ಚ್​ 30) ಕೊನೆಯುಸಿರೆಳೆದಿದ್ದಾರೆ. ಬಾಲಾಜಿ ಸಾವು ಚಿತ್ರರಂಗದಕ್ಕೆ ಒಂದು ದೊಡ್ಡ ಆಘಾತವಾಗಿದೆ.

ವಿಜಯ್​ ಅಭಿನಯದ ಬಿಗಿಲ್​, ಭೈರವ ಸಿನಿಮಾಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೆ, ಕಾಖಾಕಾಖಾ, ವೆಟ್ಟೈಯಾಟು ವಿಳೈಯಾಡು, ಪೊಲ್ಲಾದವನ್​, ಎನ್ನೈ ಅರಿಂದಾಲ್​ ಸೇರಿಂದತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಾತಕ ಜತೆಗೆ ಶಿವಾಜಿ ನಗರ, ಬೆಂಗಳೂರು ಅಂಡರ್​ವರ್ಲ್ಡ್ ಹಾಗೂ ಡವ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸಿನಿರಸಿಕರಿಗೆ ಚಿರಪರಿಚಿತರು ಎಂದು ಹೇಳಬಹುದಾಗಿದೆ.

ಮಾರ್ಚ್​ 29ರಂದು ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಶನಿವಾರ (ಮಾರ್ಚ್​ 30) ಕೊನೆಯುಸಿರೆಳೆದರು. ತಿರುವನ್ಮಿಯೂರಿನಲ್ಲಿ ಅಂತಿಮ ಸಂಸ್ಕಾರ ನೆರವೇರಿತು.

ಮದುವೆಯಾಗಿರಲಿಲ್ಲ ಏಕೆ?

ಡೇನಿಯಲ್​ ಬಾಲಾಜಿ ಅವರಿಗೆ ವಯಸ್ಸು 48 ಆಗಿದ್ರೂ ಮದುವೆಯಾಗಿರಲಿಲ್ಲ. ಅವರ ಆಪ್ತರು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡರು ಬಾಲಾಜಿ ಮಾತ್ರ ಒಪ್ಪಿರಲಿಲ್ಲ. ಕೊನೆಯವರೆಗೂ ಬ್ರಹ್ಮಚಾರಿಯಾಗೇ ಉಳಿದು ಕೊನೆಯುಸಿರೆಳೆದರು. ಮದುವೆ ಆಗಿಲ್ಲ ಏಕೆ ಎಂಬ ಪ್ರಶ್ನೆಗೆ ಹಿಂದೊಮ್ಮೆ ಸಂದರ್ಶನದಲ್ಲಿ ಉತ್ತರಿಸಿದ್ದ ಬಾಲಾಜಿ ಅದು ನನ್ನ ವೈಯಕ್ತಿಕ ಆಯ್ಕೆ ಎಂದಿದ್ದರು. ನಾನು ದೇವರಿಗೆ ಮೀಸಲಾಗಿದ್ದೇನೆ ಮತ್ತು ಜನರಿಗೆ ಒಳ್ಳೆಯದನ್ನು ಮಾಡಲು ಬಯಸಿದ್ದೇನೆ. ಹೀಗಾಗಿ ಮದುವೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

ಸಾವಿನಲ್ಲೂ ಸಾರ್ಥಕತೆ

ನಟ ಡೇನಿಯಲ್​ ಬಾಲಾಜಿ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಈ ವಿಚಾರ ಅಭಿಮಾನಿಗಳನ್ನು ಮತ್ತಷ್ಟು ಭಾವುಕವಾಗಿಸಿದೆ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಡೇನಿಯಲ್​ ಬಾಲಾಜಿ ಕತ್ತಲೆಯಲ್ಲಿದವರ ಬಾಳನ್ನು ಬೆಳಕಾಗಿಸಿದ್ದಾರೆ. ಸಾವಿನ ಸುದ್ದಿ ಕೇಳಿ ಆತಂಕದಲ್ಲಿದ್ದ ಅಭಿಮಾನಿಗಳು ಈ ವಿಷಯ ಕೇಳಿ ಮತ್ತಷ್ಟು ಭಾವುಕರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net