More

    ಕರೊನಾ ನಂತರ ಯಾರ ತೆಕ್ಕೆಗೆ ಜಗತ್ತು..? ವಿಶ್ಲೇಷಣೆ ಮಾಡಿದ್ದಾರೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ

    ದುರಂತವೆಂದರೆ ಡೊನಾಲ್ಡ್ ಟ್ರಂಪ್ ಈ ವೈರಸ್​ನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲ. ವ್ಯಾಪಾರಿ ಮನೋಭಾವ ಉಳ್ಳವರಾದ್ದರಿಂದ ಅಮೆರಿಕದ ಆರ್ಥಿಕತೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿತ್ತು. ತೀರಾ ಮನೆಬಾಗಿಲಿಗೆ ಕರೊನಾ ಬಂದಾಗಲೂ ಅದನ್ನು ಅವಗಣನೆ ಮಾಡಿದ ಪರಿಣಾಮ 50 ಸಾವಿರ ಸಾವುಗಳು ಸಂಭವಿಸಿದವು.

    ಕರೊನಾ ನಂತರ ಯಾರ ತೆಕ್ಕೆಗೆ ಜಗತ್ತು..? ವಿಶ್ಲೇಷಣೆ ಮಾಡಿದ್ದಾರೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಬಿಟ್ಟರೂ ಬಿಡದು ಕರೊನಾ ಮಾಯೆ. ಇನ್ನು ಆರು ತಿಂಗಳೊಳಗೆ ಇದು ನಮ್ಮನ್ನು ಬಿಟ್ಟುಹೋದರೆ ಮನುಕುಲದ ಪುಣ್ಯ ಅಷ್ಟೇ. ಕೆಲವರ ಅಂದಾಜಿನ ಪ್ರಕಾರ ಮುಂದಿನ 18-20 ತಿಂಗಳಕಾಲ ಕರೊನಾ ನಮ್ಮ ನಡುವೆಯೇ ಇದ್ದು, ನಮ್ಮನ್ನು ಬಾಧಿಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಇದನ್ನು ಅದಾಗಲೇ ಸೂಕ್ಷ್ಮವಾಗಿ ಹೇಳಿಬಿಟ್ಟಿದ್ದಾರೆ. ಜಗತ್ತು ಕರೊನಾ ಸಾವಿಗೆ ಹೆದರುವ ಅವಧಿಯನ್ನು ದಾಟಿ ಬಂದುಬಿಟ್ಟಿದೆ. ಇಟಲಿಯಲ್ಲಿ ಇನ್ಯಾರು ಸತ್ತರೂ ಅಳುವ ಸ್ಥಿತಿಯಲ್ಲಿ ಅಲ್ಲಿನ ಜನರಿಲ್ಲ. ಅಮೆರಿಕದಲ್ಲಿ ಅದಾಗಲೇ 50 ಸಾವಿರ ಜನರ ಮಾರಣಹೋಮವಾಯ್ತು. ಜರ್ಮನಿ, ಸ್ಪೇನ್​ನಂಥ ರಾಷ್ಟ್ರಗಳು ಕರೊನಾ ಕಾರಣದ ಅತಿ ಹೆಚ್ಚು ಸಾವುಗಳನ್ನು ನೋಡಿಯಾಯ್ತು. ಅವರೆಲ್ಲರಿಗೂ ಈಗ ಭವಿಷ್ಯದ ಚಿಂತೆ ಕಾಡುತ್ತಿದೆ.

    ಒಂದಷ್ಟು ರಾಷ್ಟ್ರಗಳಿಗೆ ಅದಾಗಲೇ ಸಾಕಷ್ಟು ಆರ್ಥಿಕ ದುಃಸ್ಥಿತಿಯನ್ನು ಎದುರಿಸಿರುವುದರಿಂದ ಮತ್ತೆ ಹಳೆಯ ವೈಭವವನ್ನು ಪಡೆಯುವುದು ಹೇಗೆಂಬ ಚಿಂತೆ ಕಾಡುತ್ತಿದ್ದರೆ, ಮತ್ತಷ್ಟು ರಾಷ್ಟ್ರಗಳಿಗೆ ಕಳಕೊಂಡ ಜನರು ಇರುವ ಒಟ್ಟಾರೆ ಸಂಖ್ಯೆಯನ್ನು ಕಡಿಮೆ ಮಾಡಿಬಿಟ್ಟಿದ್ದಾರೆ ಎಂಬ ಹೆದರಿಕೆಯೂ ಇದೆ! ಹೀಗಾಗಿ ಕರೊನಾ ನಂತರದ ಜಗತ್ತು ಹಿಂದಿನದಕ್ಕಿಂತ ಭಿನ್ನವಾಗಿ ಇರಲಿದೆ. ಕರೊನಾ ವಕ್ಕರಿಸಿಕೊಳ್ಳುವ ಮುನ್ನ ಯಾವ ಜಗತ್ತನ್ನು ನೋಡಿದ್ದೆವೋ ಅದಂತೂ ಖಂಡಿತ ಮತ್ತೊಮ್ಮೆ ನೋಡಸಿಗುವುದಿಲ್ಲ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಸಹಜವೂ ಹೌದು ಬಿಡಿ. ಕನಿಷ್ಠಪಕ್ಷ ಇನ್ನೊಂದಾರು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡಿರುತ್ತದೆ. ಅದರರ್ಥ ಮನಸ್ಸು ಬಂದೊಡನೆ ಜಗತ್ತಿನ ಯಾವ ಮೂಲೆಗಾದರೂ ಹೋಗಿಬಿಡುತ್ತಿದ್ದ ಜನ ಇನ್ನು ಮುಂದೆ ತಮ್ಮ ರಾಷ್ಟ್ರಕ್ಕೆ ಅಂಟಿಕೊಂಡಿರಬೇಕಾದ ಸ್ಥಿತಿ ಬರುತ್ತದೆ. ಚೀನಾ ನಡೆಸಿರುವ ಈ ಅವ್ಯವಹಾರದ ಕಾರಣದಿಂದಾಗಿ ರಾಷ್ಟ್ರ-ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧ ಕೂಡ ತುರ್ತಾಗಿ ಕುದುರಿಸಲಾಗದೆ ಬಲುದೊಡ್ಡ ಹೊಡೆತವನ್ನು ಅನುಭವಿಸಲಿದೆ. ಜಾಗತೀಕರಣದ ನಂತರ ಒಂದು ಮುಷ್ಠಿಯೊಳಗೆ ಬಂದಿದ್ದ ಜಗತ್ತೆಲ್ಲ ಮತ್ತೆ ಪ್ರತ್ಯೇಕದ್ವೀಪಗಳಾಗಿ ರೂಪುಗೊಳ್ಳಬಹುದೇನೋ! ಈ ನಡುವೆ ಕರೊನಾ ನಂತರ ಜಗತ್ತಿನ ನಾಯಕತ್ವವನ್ನು ವಹಿಸಬಲ್ಲ ರಾಷ್ಟ್ರ ಯಾವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾಗೆ ಸುಮ್ಮನೆ ಇರುವ ಒಂದಷ್ಟು ಸಾಧ್ಯತೆಗಳನ್ನು ಪರಿಶೀಲಿಸೋಣ.

    ಸದ್ಯದಮಟ್ಟಿಗೆ ಅಮೆರಿಕವೇ ಜಗತ್ತಿನ ‘ದೊಡ್ಡಣ್ಣ’. ಆಂತರಿಕವಾಗಿ ಅಮೆರಿಕ ಸಾಕಷ್ಟು ಕುಸಿದು ಹೋಗಿದ್ದರೂ ಹಣಬಲ ಮತ್ತು ಸೈನ್ಯಶಕ್ತಿಯಿಂದಾಗಿಯೇ ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸುತ್ತಿದೆ. ದ್ವಿತೀಯ ಮಹಾಯುದ್ಧದಲ್ಲಿ ಹಿರೋಶಿಮಾ-ನಾಗಾಸಾಕಿಗಳ ಮೇಲೆ ಬಾಂಬ್​ದಾಳಿ ಮಾಡಿದಾಗಿನಿಂದಲೂ ಅಮೆರಿಕದ ಸಾರ್ವಭೌಮತೆ ಜಗತ್ತಿನ ಕಣಕಣವನ್ನೂ ಹೊಕ್ಕಿಬಿಟ್ಟಿದೆ. ಅರಬ್ ರಾಷ್ಟ್ರಗಳನ್ನು ಅವರು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿರುವ ರೀತಿ, ಯುರೋಪಿನೊಂದಿಗೆ ಇರಿಸಿಕೊಂಡಿರುವ ಸೌಹಾರ್ದ ಬಾಂಧವ್ಯ, ಏಷ್ಯಾದಲ್ಲಿ ಚೀನಾಕ್ಕೆ ಎದುರಾಗಿ ಸ್ಥಾಪಿಸಿರುವ ಅಘೊಷಿತ ಪ್ರಭುತ್ವ ಅವರನ್ನು ಸಹಜವಾಗಿಯೇ ಬಲಾಢ್ಯ ರಾಷ್ಟ್ರವಾಗಿಸಿದೆ. ಆದರೆ, ಒಬಾಮ ಅವಧಿಯಲ್ಲಿ ಬುದ್ಧಿಜೀವಿಗಳನ್ನು ಮೆಚ್ಚಿಸುವ ಭರದಲ್ಲಿ ಅಮೆರಿಕ ಆಂತರಿಕವಾಗಿ ಸಾಕಷ್ಟು ಬಲಹೀನಗೊಂಡಿತು. ಆ ವೇಳೆಗೆ ಚೀನಾ ಜಗತ್ತಿನ ಒಂದೊಂದೇ ರಾಷ್ಟ್ರವನ್ನು ಆಪೋಶನ ತೆಗೆದುಕೊಳ್ಳುತ್ತ ಅಮೆರಿಕಕ್ಕೆ ಸರಿಸಮವಾಗಿ ಬೆಳೆದು ನಿಲ್ಲುವ ಲಕ್ಷಣವನ್ನು ತೋರಿತು. ಒಬಾಮ ಜಾಗದಲ್ಲಿ ಟ್ರಂಪ್ ಇದ್ದಿದ್ದರೆ ಚೀನಾ ಈ ರೀತಿ ಬೆಳೆಯುವುದು ಸಾಧ್ಯವೇ ಇರಲಿಲ್ಲ. ಆದರೇನು? ಕಾಲ ಮಿಂಚಿ ಹೋಗಿತ್ತು. ಟ್ರಂಪ್ ಬಂದೊಡನೆ ಅಮೆರಿಕದ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದರು. ಚೀನಾ ಎದುರಿಗೆ ಏಷ್ಯಾದಲ್ಲೇ ಪ್ರಬಲವಾದ ಪಡೆಯೊಂದನ್ನು ನಿರ್ವಿುಸುವ ಪ್ರಯತ್ನದಿಂದ ಮಹತ್ವವಾದ ಹೆಜ್ಜೆ ಇಟ್ಟರು. ಚೀನಾದೊಂದಿಗೆ ಆರ್ಥಿಕ ಸಮರಕ್ಕೂ ಇಳಿದು ದೊಡ್ಡಣ್ಣ ತಾನೇ ಎಂಬುದನ್ನು ಸಾಬೀತುಪಡಿಸಲು ಬೇಕಾದ ಪ್ರಯತ್ನವೂ ನಡೆಯಿತು. ಆಗ ಆಕ್ರಮಿಸಿಕೊಂಡಿದ್ದು ಕರೊನಾ! ದುರಂತವೆಂದರೆ ಡೊನಾಲ್ಡ್ ಟ್ರಂಪ್ ಈ ವೈರಸ್​ನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲ. ವ್ಯಾಪಾರಿ ಮನೋಭಾವ ಉಳ್ಳವರಾದ್ದರಿಂದ ಅಮೆರಿಕದ ಆರ್ಥಿಕತೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿತ್ತು. ತೀರಾ ಮನೆಬಾಗಿಲಿಗೆ ಕರೊನಾ ಬಂದಾಗಲೂ ಅದನ್ನು ಅವಗಣನೆ ಮಾಡಿದ ಪರಿಣಾಮ 50 ಸಾವಿರ ಸಾವುಗಳು ಸಂಭವಿಸಿದವು.

    ಈಗ ನಿಜವಾದ ಪ್ರಶ್ನೆ ಇರುವುದು ಅಮೆರಿಕನ್ನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಅಂತ. ಪ್ರತಿನಿತ್ಯ ಸುಮಾರು ಒಂದೂವರೆ ಗಂಟೆಗಳ ಕಾಲ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿರುವ ಟ್ರಂಪ್ ಅವರ ಮೇಲೆ ತಿರುಗಬಹುದಾಗಿದ್ದ ಅಷ್ಟೂ ಆಕ್ರೋಶವನ್ನು ಚೀನಾದತ್ತ ತಿರುಗಿಸಿಬಿಟ್ಟಿದ್ದಾರೆ. ಅಮೆರಿಕದ ಬಹುಪಾಲು ಜನ ಚೀನಾದ ವಿರುದ್ಧ ಈಗ ಕೊತಕೊತನೆ ಕುದಿಯುತ್ತಿದ್ದಾರೆ. ಚೀನಾ ತನ್ನ ಪ್ರಯೋಗಶಾಲೆಯಲ್ಲಿ ತಯಾರು ಮಾಡಿದ ವೈರಸ್ ಇದು ಎಂಬುದನ್ನು ಅಲ್ಲಿನ ಜನ ಎಷ್ಟು ಆಕ್ರೋಶದಿಂದ ನೋಡುತ್ತಿದ್ದಾರೆ ಎಂದರೆ ನಿಕಿ ಹ್ಯಾಲೆ ಚೀನಾ ವಿರುದ್ಧ ಅಮೆರಿಕ ಸಂಸತ್ತು ನಿರ್ಣಯ ಕೈಗೊಳ್ಳಬೇಕೆಂಬ ಸಹಿ ಸಂಗ್ರಹ ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ! ಅದರಲ್ಲಿ ಸೇರಿಸಿರುವ ಅಂಶಗಳೇನೇನು ಗೊತ್ತೇ? ‘ಕೋವಿಡ್-19 ಹಬ್ಬುವಿಕೆಯಲ್ಲಿ ಕಮ್ಯುನಿಸ್ಟ್ ಚೀನಾದ ಪಾತ್ರವನ್ನು ತನಿಖೆ ಮಾಡಬೇಕು. ಅವಶ್ಯಕ ವಸ್ತುಗಳಾದ ಆರೋಗ್ಯ ಸಂಬಂಧಿ ವಸ್ತುಗಳ ಉತ್ಪಾದನೆಯನ್ನು ಇನ್ನು ಮುಂದೆ ಅಮೆರಿಕದಲ್ಲೇ ಮಾಡಬೇಕು. ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಆದ ನಷ್ಟವನ್ನು ಚೀನಾದಿಂದಲೇ ತುಂಬಿಸಬೇಕು. ತೈವಾನ್​ಗೆ ಪೂರ್ಣಬೆಂಬಲ ಕೊಡಬೇಕು ಮತ್ತು ಅಮೆರಿಕದ ಕಾಲೇಜು, ವಿಶ್ವವಿದ್ಯಾಲಯಗಳು ಮತ್ತು ಅಲ್ಲಿನ ಸಂಶೋಧಕರಿಗೆ ಚೀನಾದಿಂದ ಬರುತ್ತಿರುವ ಧನಸಹಾಯದ ಕುರಿತಂತೆ ಪ್ರಕಟಣೆಯೂ ಆಗಬೇಕು’. ನಿಕಿಯ ಒಂದೊಂದು ಬೇಡಿಕೆಯೂ ಅಮೆರಿಕದಲ್ಲಂತೂ ಚೀನಾದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಗಳೇ.

    ಅಮೆರಿಕ ಕರೊನಾ ಯುದ್ಧವನ್ನು ಆರ್ಥಿಕವಾಗಿ ಹೆಚ್ಚು ನಷ್ಟವಿಲ್ಲದೇ ಗೆದ್ದು, ರಾಷ್ಟ್ರೀಯತೆಯಿಂದ ತುಂಬಿಹೋಗಿರುವ ಜನ ಟ್ರಂಪ್​ರನ್ನು ಮತ್ತೆ ಆಯ್ಕೆ ಮಾಡಿದರೆ ಅಮೆರಿಕ ಎಂದಿನಂತೆ ಮತ್ತೆ ಜಗತ್ತನ್ನು ಮುನ್ನಡೆಸುವ ಅವಕಾಶಗಳು ಬೆಟ್ಟದಷ್ಟಿವೆ. ಹಾಗಂತ ಆ ಅವಕಾಶ ಅಮೆರಿಕಕ್ಕೆ ದಕ್ಕದೇ ಅದು ಪೂರ್ಣ ನಷ್ಟವಾಗಿ ಹೋಯ್ತೆಂದರೆ ದುಃಖಿಸಬೇಕಾದ ಸಂಗತಿಯೇನೂ ಇಲ್ಲ. ಏಕೆಂದರೆ ದ್ವಿತೀಯ ಮಹಾಯುದ್ಧದ ನಂತರ ಅಮೆರಿಕ ಹೀಗೆಯೇ ಜಗತ್ತಿನ ಜುಟ್ಟನ್ನು ತನ್ನ ಕೈಗೆ ತೆಗೆದುಕೊಂಡಿತ್ತು. ಈಗ ಆ ಜುಟ್ಟನ್ನು ಚೀನಾ ಕಸಿಯಬಹುದಷ್ಟೇ. ಕರ್ಮ ಯಾರನ್ನೂ ಬಿಡುವುದಿಲ್ಲ!

    ಇನ್ನು ಯುರೋಪು ಜಗತ್ತನ್ನು ಆಳಬಲ್ಲದಾ? ಎಂದು ಕೇಳಿದರೆ ಅದು ಸಾಧ್ಯವೇ ಇಲ್ಲದ ಸಂಗತಿ. ಯುರೋಪು ಬಲಾಢ್ಯ ರಾಷ್ಟ್ರದ ಬಾಲಂಗೋಚಿಯಾಗಷ್ಟೇ ಇರಬಲ್ಲದು. ಅಮೆರಿಕ ಜಗತ್ತನ್ನು ಆಳುವಾಗ ಅಮೆರಿಕದೊಂದಿಗಿದ್ದರು. ಈಗ ಚೀನಾ ಆಳ್ವಿಕೆ ನಡೆಸಿದರೆ, ಅವರ ಬೆನ್ನಿಗೆ ನಿಲ್ಲುತ್ತಾರೆ. ಕರೊನಾ ಕಾರಣಕ್ಕೆ ಹೆಚ್ಚು ನಷ್ಟವನ್ನು ಅನುಭವಿಸಿರೋದೇ ಯುರೋಪು. ಇಷ್ಟಾದರೂ ಚೀನಾದ ಒತ್ತಡಕ್ಕೆ ಮಣಿದು ಕರೊನಾದ ವಿಚಾರದಲ್ಲಿ ಮಾಡಿದ ವಿಡಿಯೋದಲ್ಲಿ ಚೀನಾದ ಕುರಿತ ಅಂಶಗಳನ್ನು ತೆಗೆದುಹಾಕಿತ್ತು ಈ ಒಕ್ಕೂಟ. ಇಷ್ಟು ಹೆದರಿಕೆ ಉಳ್ಳವರು, ಮುನ್ನುಗ್ಗಲು ಅಂಜುವವರು, ಜಗತ್ತಿನ ನಾಯಕರಾಗುವುದು ಸಾಧ್ಯವೇ ಇಲ್ಲ!

    ಇನ್ನೇನಿದ್ದರೂ ಎಲ್ಲರ ಕಣ್ಣು ಚೀನಾದ ಮೇಲೆ ಮಾತ್ರ. ಚೀನಾ ಈಗಲೂ ಬಲಾಢ್ಯಶಕ್ತಿಯೇ. ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಆಫ್ರಿಕಾಖಂಡದ ಬಹುತೇಕ ರಾಷ್ಟ್ರಗಳನ್ನು ಸಾಲಕೊಟ್ಟು ತನ್ನೆಡೆಗೆ ಸೆಳೆದುಕೊಂಡಿದೆ. ಅಮೆರಿಕ ಮತ್ತು ಯುರೋಪಿನ ಯಾವ ಪತ್ರಕರ್ತ, ಯಾವ ಉಪನ್ಯಾಸಕ, ಯಾವ ಸಂಶೋಧಕ ಚೀನಾದ ಹಣದಲ್ಲಿ ಬದುಕಿದ್ದಾನೆಂದು ಅರಸುವುದು ಹೆಚ್ಚು-ಕಡಿಮೆ ಅಸಾಧ್ಯವೇ ಸರಿ. ಅಂದರೆ ಸಾಲ ಕೊಡಬಹುದಾದ ರಾಷ್ಟ್ರಗಳಿಗೆ ಸಾಲಕೊಟ್ಟು ಸೆಳೆಯುತ್ತದೆ. ಇಲ್ಲವಾದಲ್ಲಿ ಆಯಾ ರಾಷ್ಟ್ರದ ವೀಕ್​ಲಿಂಕ್​ಗಳನ್ನು ಬಳಸಿ ಆಯಾ ದೇಶದ ವಿರುದ್ಧ ತನ್ನ ಉದ್ದೇಶವನ್ನು ಸಫಲಗೊಳಿಸಿಕೊಳ್ಳುತ್ತದೆ. ಚೆನ್ನಾಗಿ ಅರ್ಥವಾಗಬೇಕೆಂದರೆ ಶ್ರೀಲಂಕಾಕ್ಕೆ ಸಾಲಕೊಟ್ಟು ಬಲಿಹಾಕುತ್ತದೆ, ಭಾರತದ ಪೊ›ಫೆಸರ್​ಗಳನ್ನು, ಪತ್ರಕರ್ತರನ್ನು ಖರೀದಿಸುತ್ತದೆ ಅಷ್ಟೇ!

    ಸದ್ಯದ ಮಟ್ಟಿಗಂತೂ ವಿಶ್ವ ಆರೋಗ್ಯ ಸಂಸ್ಥೆಯಷ್ಟನ್ನೂ ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವ ಚೀನಾ ಮನಸ್ಸಿಗೆ ಬಂದಂತೆ ಆಟವಾಡಿಸುತ್ತಿದೆ. ಅದರ ಅಧ್ಯಕ್ಷ ಟೆಡ್ರೋಸ್​ರನ್ನು ಅಲ್ಲಿಗೆ ತಂದು ಕೂರಿಸಲು ಶ್ರಮವಹಿಸಿದ್ದೇ ಚೀನಾ. ಟೆಡ್ರೋಸನ್ ಇಥಿಯೋಪಿಯಾದ ಆರೋಗ್ಯ ಸಚಿವರಾಗಿದ್ದರು. ಆ ಹೊತ್ತಿನಲ್ಲಿ ಆ ರಾಷ್ಟ್ರಕ್ಕೆ ಅಮರಿಕೊಂಡಿದ್ದ ಕಾಲರಾವನ್ನು ಅತ್ಯಂತ ಸಾಮಾನ್ಯವೆಂದು ಮುಚ್ಚಿಹಾಕುವ ಪ್ರಯತ್ನ ಮಾಡಿದ ರಾಜಕಾರಣಿ ಆತ. ಮುಂದೆ ವಿದೇಶಾಂಗ ಖಾತೆಯನ್ನು ತನ್ನ ಬಗಲಿಗೆ ಹಾಕಿಕೊಂಡು ಚೀನಾದೊಂದಿಗೆ ಭರ್ಜರಿ ಸಂಬಂಧವನ್ನು ಬೆಳೆಸಿಕೊಂಡರು.

    2017ರಲ್ಲಿ ವಿಶ್ವಸಂಸ್ಥೆಯ ಈ ಪಟ್ಟಕ್ಕೆ ಚುನಾವಣೆ ನಡೆದಾಗ ಆಫ್ರಿಕಾದ ಒಕ್ಕೂಟ ಇವರನ್ನೇ ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಒತ್ತಡ ಹೇರಿದ್ದೂ ಚೀನಾವೇ. ಶತಾಯ-ಗತಾಯ ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದಿತು ಚೀನಾ. ಏಕೆಂದರೆ ಅವರ ವಿರುದ್ಧವಾಗಿ ಸ್ಪರ್ಧಿಸಿದ್ದ ಇಂಗ್ಲೆಂಡಿನ ಡೇವಿಡ್ ನಬಾರೊ ತೈವಾನ್ ಪರವಾಗಿದ್ದು ಚೀನಾದ ಹೇರಿಕೆಯನ್ನು ವಿರೋಧಿಸುತ್ತಿದ್ದರು. ಚೀನಾ ತನ್ನ ಪ್ರಚಾರಮಾಧ್ಯಮವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಟೆಡ್ರೋ ವಿರೋಧವೆಂದರೆ ಕರಿಯರನ್ನು ವಿರೋಧಿಸುವುದು ಎಂದರ್ಥ ಎಂಬಂತೆ ಬಿಂಬಿಸಿತು. ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಖೆಡ್ಡಾದೊಳಕ್ಕೆ ಬಿದ್ದು ಟೆಡ್ರೋರನ್ನು ಆರಿಸಿಕೊಂಡವು. ಚೀನಾ ತನ್ನೆಲ್ಲ ಪ್ರಭಾವವನ್ನು ಬಳಸಿ ಈ ಅಧ್ಯಕ್ಷರಿಗೆ ಸರ್ವಾಧಿಕಾರ ದಕ್ಕುವಂತೆ ನೋಡಿಕೊಂಡಿತು. ಟೆಡ್ರೋ ಗೆದ್ದ ಮರುದಿನವೇ ಚೀನಾದ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಅದಾದ ವಾರದೊಳಗೆ ತೈವಾನನ್ನು ವಿಶ್ವ ಆರೋಗ್ಯ ಸಂಸ್ಥೆಯ ಹೊರಗಿಡುವ ನೀತಿಯನ್ನು ಮುಂದುವರಿಸುವ ಭರವಸೆ ಕೊಟ್ಟಿದ್ದು, ಅದರ ಒನ್​ಬೆಲ್ಟ್ ಒನ್​ರೋಡ್ ಯೋಜನೆಗೆ ತಾವು ಕೈಜೋಡಿಸುವ ಮಾತನಾಡಿದ್ದೆಲ್ಲವೂ ಒಳ್ಳೆಯ ಬೆಳವಣಿಗೆಯಾಗಿರಲಿಲ್ಲ. ಜಗತ್ತೂ ತಲೆಕೆಡಿಸಿ ಕೊಂಡಿರಲಿಲ್ಲ ಅಷ್ಟೇ. ಆಮೇಲೇನು? ಎಲ್ಲ ಚೀನಾ ಅಂದುಕೊಂಡಂತೆ ಆಯ್ತು.

    ಡಿಸೆಂಬರ್​ನ ಕೊನೆಯ ದಿನ ಚೀನಾದಲ್ಲಿ ಕರೊನಾದ ತಾಂಡವನೃತ್ಯ ನಡೆಯುತ್ತಿರುವ ಸುದ್ದಿ ಬಂದಾಗಲೂ ಸಂಸ್ಥೆ ಎಚ್ಚೆತ್ತುಕೊಳ್ಳಲಿಲ್ಲ. ಜನವರಿ ಮಧ್ಯಭಾಗದಲ್ಲಿ ಟೆಡ್ರೋ, ‘ಕರೋನಾ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ’ ಎಂಬ ಹೇಳಿಕೆ ಕೊಟ್ಟರು. ಭಾರತ, ಅಮೆರಿಕದಂತಹ ರಾಷ್ಟ್ರಗಳು ಚೀನಾದಿಂದ ಬರುವವರಿಗೆ ತಡೆಯೊಡ್ಡುತ್ತೇವೆ ಎಂದಾಗ ‘ಆತಂಕ ಹುಟ್ಟಿಸುವ ಕ್ರಮ’ ಎಂದರು. ‘ರೋಗಿಗಳು ಮಾತ್ರ ಮಾಸ್ಕ್ ಹಾಕಿಕೊಂಡರೆ ಸಾಕು’ ಎಂಬುದನ್ನು ಹೇಳಲೂ ಮರೆಯಲಿಲ್ಲ. ಎಲ್ಲ ರಾಷ್ಟ್ರಗಳಿಗೂ ಕರೊನಾ ಸುಸೂತ್ರವಾಗಿ ಹಬ್ಬಿದೆ ಎಂದು ಗೊತ್ತಾದಮೇಲೆ ಇದನ್ನೊಂದು ‘ಜಾಗತಿಕ ತುರ್ತು ಪರಿಸ್ಥಿತಿ’ ಎಂದು ಘೊಷಿಸಿದರು! ಟ್ರಂಪ್ ಉರಿದುಬಿದ್ದರು. ಈ ಸಂಸ್ಥೆಗೆ ಕೊಡುತ್ತಿದ್ದ ಧನಸಹಾಯ ತಡೆಹಿಡಿದರು. ನೆನಪಿರಲಿ. ವಿಶ್ವ ಆರೋಗ್ಯ ಸಂಸ್ಥೆಯ ಧನಸಹಾಯದ ಒಟ್ಟು ಪಾಲಿನಲ್ಲಿ ಶೇಕಡ 10ರಷ್ಟು ಅಮೆರಿಕದ್ದಾದರೆ, ಚೀನಾದ ಪಾಲು ಶೇಕಡ 1ರಷ್ಟೂ ಇಲ್ಲ. ಜಗತ್ತಿನ ಎರಡನೇ ದೊಡ್ಡ ಆರ್ಥಿಕ ಶಕ್ತಿಗಿಂತಲೂ ಹೆಚ್ಚು ಹಣವನ್ನು ಬಿಲ್​ಗೆಟ್ಸ್ ಫೌಂಡೇಶನ್ ನೀಡುತ್ತದೆ ಎಂಬುದೇ ಜಾಗತಿಕ ವಲಯದಲ್ಲಿ ಹರಿದಾಡುವ ಜೋಕು.

    ಚೀನಾ ಇಲ್ಲಿಗೇ ನಿಲ್ಲಲಿಲ್ಲ. ಕರೊನಾ ಕುರಿತಂತೆ ಮಾಹಿತಿಯನ್ನು ಮುಚ್ಚಿಟ್ಟಿದ್ದಲ್ಲದೇ ಜಗತ್ತಿನಲ್ಲಿ ಎಲ್ಲೆಲ್ಲಿ ಮಾಸ್ಕ್​ಗಳನ್ನು, ರಕ್ಷಣಾಕವಚಗಳನ್ನು ಉತ್ಪಾದಿಸುತ್ತಿದ್ದರೋ ಅಲ್ಲಿಂದೆಲ್ಲ ಆಮದು ಮಾಡಿಕೊಂಡು ದಾಸ್ತಾನು ಖಾಲಿಮಾಡಿತು. ಬಲಪ್ರಯೋಗದಿಂದ ತಾನು ಕರೊನಾ ಗೆದ್ದು ಜಗತ್ತಿಗೆಲ್ಲ ಮಾಸ್ಕ್ ಗಳನ್ನು, ರಕ್ಷಣಾಕವಚಗಳನ್ನು, ಟೆಸ್ಟ್ಕಿಟ್​ಗಳನ್ನು ಹೆಚ್ಚು ಬೆಲೆಗೆ ರಫ್ತು ಮಾಡುವ ಕೆಲಸ ಆರಂಭಿಸಿತು. ಶಸ್ತ್ರವನ್ನೇ ಬಳಸದೆ ಯುದ್ಧಮಾಡಿ ತಾನು ಗೆದ್ದಿದ್ದೇನೆ ಎಂದು ಬೀಗುತ್ತಿರುವ ಚೀನಾ ಜಗತ್ತಿನ ನಾಯಕತ್ವ ವಹಿಸಬಲ್ಲದಾ? ಹೇಳಲಾಗದು. ಆದರೆ, ಅದಾಗಲೇ ಅಮೆರಿಕ, ಜಪಾನ್, ಕೊರಿಯಾ, ಆಫ್ರಿಕಾದ ಕೆಲವು ರಾಷ್ಟ್ರಗಳು, ಭಾರತ, ಆಸ್ಟ್ರೇಲಿಯಾ ಇವೆಲ್ಲವೂ ಚೀನಾದ ವಿರುದ್ಧ ಒಗ್ಗಟ್ಟಾಗುತ್ತಿವೆ. ಎಲ್ಲೆಡೆ ಹಬ್ಬಿಸಿರುವ ಬಾಹುಗಳನ್ನು ಕತ್ತರಿಸುವ ಪ್ರಯತ್ನ ಭರದಿಂದ ಸಾಗಿದೆ. ಹೇಗಿದ್ದರೂ ಲಾಕ್​ಡೌನ್ ಇರುವುದರಿಂದ ಇದು ಮೊದಲಿನಷ್ಟು ಕಷ್ಟವಾಗಲಾರದು. ಆದರೆ ಆರ್ಥಿಕ ವಾಗಿ ಬಲಾಢ್ಯವಾಗಿರುವ ಚೀನಾ ಇವೆಲ್ಲವನ್ನೂ ತಡೆಯಲು ಶಕ್ಯವಾದರೆ ಅದು ನಿಸ್ಸಂಶಯವಾಗಿ ಜಗತ್ತನ್ನು ಆಳುತ್ತದೆ! ಅದನ್ನುಳಿದು ಚೀನಾ ಮಣಿಯುವ ಪ್ರಸಂಗ ಬಂದರೆ, ಅದಾಗಲೇ ಆಂತರಿಕವಾಗಿ ಭುಗಿಲೇಳುತ್ತಿರುವ ತನ್ನದ್ದೇ ಜನರನ್ನು ತಡೆಯಲು ಅಶಕ್ಯವಾದರೆ ಶೀತಲಸಮರದ ವೇಳೆಯಲ್ಲಿ ರಷ್ಯಾಕ್ಕಾದ ಗತಿಯೇ ಚೀನಾಕ್ಕೂ ಕಾದಿದೆ. ಇನ್ನುಳಿದ ಒಂದೇ ಸಾಧ್ಯತೆ ಭಾರತದ್ದು ಮಾತ್ರ. ಜಗತ್ತಿನ ಎಲ್ಲರ ಪ್ರೀತಿಯನ್ನು ಗಳಿಸಿ, ಜಾಗತೀಕರಣದ ಹೊತ್ತಲ್ಲೂ, ಈಗ ಲಾಕ್​ಡೌನಿನ ಹೊತ್ತಲ್ಲೂ ಸಮಪ್ರಮಾಣದ ವಿಶ್ವಾಸ ಉಳಿಸಿಕೊಂಡಿರುವ ಏಕೈಕ ರಾಷ್ಟ್ರ! ಆರ್ಥಿಕವಾಗಿ ಬಲಗೊಳ್ಳುತ್ತಿದೆ, ಸೈನಿಕ ಶಕ್ತಿಯಾಗಿ ಬೆಳೆದು ನಿಲ್ಲುತ್ತಿದೆ, ಯುವಶಕ್ತಿಯ ತವರೂರಾಗಿದೆ, ಚುರುಕುಮತಿಗಳ ತಾಣವಾಗಿದೆ ಮತ್ತು ಜಗತ್ತಿನ ಎಲ್ಲರೂ ಉದ್ದಿಮೆ ಮಾಡಲು ಬಯಸುವ ಪ್ರದೇಶವಾಗಿ ಮಾರ್ಪಡುತ್ತಿದೆ. ಯಾವ ದಿಕ್ಕಿನಿಂದ ನೋಡಿದರೂ ಒಂದು ಶಕ್ತಿಯಾಗಿ ಖಂಡಿತ ಬೆಳೆದು ನಿಲ್ಲುತ್ತಿದ್ದೇವೆ. ಎಲ್ಲರ ಜಗಳದ ನಡುವೆ ಶಾಂತವಾಗಿ ಜಗತ್ತಿನ ನೇತೃತ್ವ ವಹಿಸಿಬಿಡುತ್ತೇವಾ? ಎದೆ ಜೋರಾಗಿ ಬಡಿದುಕೊಳ್ಳುತ್ತಿದೆ!

    ‘ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್​ಡೌನ್ ಪರಿಹಾರವಲ್ಲ ನಿಜ, ಆದರೆ…’ ಎನ್ನುತ್ತ ಚಕ್ರವರ್ತಿ ಸೂಲಿಬೆಲೆ ಅವರೇನು ವಿವರಣೆ ಕೊಟ್ಟಿದ್ದಾರೆ ಇಲ್ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts