More

    ‘ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್​ಡೌನ್ ಪರಿಹಾರವಲ್ಲ ನಿಜ, ಆದರೆ…’ ಎನ್ನುತ್ತ ಚಕ್ರವರ್ತಿ ಸೂಲಿಬೆಲೆ ಅವರೇನು ವಿವರಣೆ ಕೊಟ್ಟಿದ್ದಾರೆ ಇಲ್ನೋಡಿ..

    'ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್​ಡೌನ್ ಪರಿಹಾರವಲ್ಲ ನಿಜ, ಆದರೆ...' ಎನ್ನುತ್ತ ಚಕ್ರವರ್ತಿ ಸೂಲಿಬೆಲೆ ಅವರೇನು ವಿವರಣೆ ಕೊಟ್ಟಿದ್ದಾರೆ ಇಲ್ನೋಡಿ..

    ರಾಹುಲ್ ಹೇಳಿದಂತೆ ಕರೊನಾ ಎದುರಿಸಲು ಲಾಕ್​ಡೌನ್ ಪರಿಹಾರವಲ್ಲ ನಿಜ, ಆದರೆ ತಕ್ಷಣಕ್ಕೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಅತ್ಯಂತ ಪ್ರಭಾವಿ ಮಾಧ್ಯಮ ಎಂಬುದಂತೂ ಹೌದು. ಹೀಗಾಗಿಯೇ ಭಾರತ ಇಟ್ಟ ಹೆಜ್ಜೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸಿಸಲ್ಪಡುತ್ತಿದೆ! ಆದರೂ, ಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.

    ಕರೊನಾ, ಕರೊನಾ, ಕರೊನಾ… ಇನ್ನು ಎಷ್ಟು ದಿನ ಇದರ ಬಗ್ಗೆನೇ ಮಾತಾಡ್ಬೇಕು, ಕೇಳ್ಬೇಕು, ನೋಡ್ಬೇಕು, ಬರಿಬೇಕು! ನನಗೆ ಗೊತ್ತು, ಪ್ರತಿಯೊಬ್ಬರಿಗೂ ಸಾಕಾಗಿಹೋಗಿದೆ. ಮನೆಯೊಳಗೆ ಧ್ಯಾನ-ಜಪ-ತಪ ಮಾಡಿಕೊಂಡಿದ್ದರೂ ದಿನಕ್ಕೊಮ್ಮೆಯಾದರೂ ಕರೊನಾ ಬಗ್ಗೆ ಆಲೋಚಿಸದೇ ಸಮಯ ಮುಂದಕ್ಕೆ ಹೋಗೋದೇ ಇಲ್ಲ. ‘ನಿನ್ನೆ 10,000 ಅಂತೆ, ಇವತ್ತಾಗಲೇ 11 ದಾಟಿತು, ಹದಿನೈದನ್ನ ಮುಟ್ಟೇ ಬಿಟ್ವಲ್ಲೋ. ಬೆಳಗಾವಿಯಲ್ಲಿ 40 ಅಂತೆ. ಮುಂಬೈ ಭಾಳ ಆಯ್ತಂತೆ…’ ಈ ಥರದ ಮಾತುಗಳನ್ನು ಅತ್ಯಂತ ಸಾಮಾನ್ಯರೂ ಆಡುವಂತಾಗಿದೆ. ಬಹುಶಃ ನಮ್ಮ ಕಾಲಘಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತ ಕರೊನಾಗಿಂತ ಮತ್ತೊಬ್ಬ ಸೆಲೆಬ್ರಿಟಿ ಇರಲು ಸಾಧ್ಯವೇ ಇಲ್ಲ. ಅಮೆರಿಕದ ಶ್ವೇತಭವನದಿಂದ ಹಿಡಿದು ಆಫ್ರಿಕಾದ ಕಾಡುಗಳವರೆಗೆ, ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಭದ್ರವಾದ ಕೋಣೆಗಳಿಂದ ಶುರುಮಾಡಿ ಭಾರತದ ಹೊಲದಲ್ಲಿ ದುಡಿಯುತ್ತಿರುವ ರೈತನವರೆಗೆ ಕರೊನಾ ಗೊತ್ತಿಲ್ಲದವರೇ ಇಲ್ಲ. ಇಡೀ ಜಗತ್ತನ್ನು ಅಲುಗಾಡದಂತೆ ಶಾಂತಸ್ಥಿತಿಗೆ ಒಂದು ವೈರಸ್ ಒಯ್ಯಿತಲ್ಲಾ ಎಂಬುದು ಮುಂದಿನ ಅನೇಕ ದಶಕಗಳ ಕಾಲ ಮನುಕುಲಕ್ಕೆ ಪಾಠವಾಗಿರಲಿದೆ ಅಥವಾ ಈ ರೀತಿಯ ಅನೇಕ ವೈರಸ್ಸುಗಳಿಗೆ ಇದು ಮುನ್ನುಡಿಯಾ ಎಂಬುದನ್ನೂ ಕಾದು ನೋಡಬೇಕಿದೆ. ಹಾಗೇನಾದರೂ ಆದರೆ ಮಾನವ ನಿಸ್ಸಂಶಯವಾಗಿ ತನ್ನ ಹಳೆಯ ಯುಗಕ್ಕೆ ಮರಳುವುದರಲ್ಲಿ ಅಚ್ಚರಿಯಿಲ್ಲ!

    ಇತ್ತೀಚೆಗೆ ರಾಹುಲ್ ಗಾಂಧಿ ಪತ್ರಕರ್ತರ ಮುಂದೆ ಬಂದು ಕರೊನಾ ಕುರಿತಂತೆ ಸಾಕಷ್ಟು ಮಾತಾಡಿದರು. ಕಾಂಗ್ರೆಸ್ಸಿನ ದುರದೃಷ್ಟವೇ ಸರಿ. ಅನೇಕ ಬುದ್ಧಿವಂತರ ನಡುವೆ ನಾಯಕತ್ವ ವಹಿಸಲು ಅದಕ್ಕೆ ಸಿಕ್ಕಿರೋದು ರಾಹುಲ್ ಮಾತ್ರ. ಏಕೆಂದರೆ ಅವರು ಹೇಳಿದ ವಿಚಾರಗಳನ್ನು ತಯಾರು ಮಾಡುವಲ್ಲಿ ಅನೇಕರು ಸೇರಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ ಅದನ್ನು ಪ್ರಸ್ತುತ ಪಡಿಸುವಲ್ಲಿ ರಾಹುಲ್ ಎಡವಿ, ಜಾರಿ, ಕುಸಿದು ಬಿದ್ದದ್ದು ಮಾತ್ರ ಎಂಥವರಿಗೂ ಅರಿವಾಗುವಂಥದ್ದು! ರಾಹುಲ್ ಗಾಂಧಿ ಹೇಳಿದ ಒಂದಷ್ಟು ವಿಚಾರಗಳನ್ನು ಮರುಪರಿಶೀಲಿಸಬೇಕಾದ ಅಗತ್ಯವಂತೂ ಖಂಡಿತ ಇದೆ. ಅದರಲ್ಲಿ ಅತ್ಯಂತ ಪ್ರಮುಖ ಎನಿಸುವಂಥದ್ದು ‘ಕರೊನಾ ತಡೆಗೆ ಲಾಕ್​ಡೌನ್ ಪರಿಹಾರವೇ?’ ಎಂಬುದು. ನಿಜಕ್ಕೂ ಯೋಚಿಸಲೇಬೇಕಾದ ಸಂಗತಿ. ಕರೊನಾ ಅಥವಾ ಯಾವುದೇ ವೈರಸ್​ಗಳು ಸಾಯುವುದು ಎನ್ನುವ ಪ್ರಶ್ನೆಯೇ ಇಲ್ಲ. ಕಾಲ ಪಕ್ವವಾದಾಗ ತನ್ನ ಸಾಮರ್ಥ್ಯವನ್ನು ಅದು ತೋರುತ್ತದೆ. ಅಲ್ಲಿಯವರೆಗೂ ವಾತಾವರಣದಲ್ಲಿ ಶಾಂತಸ್ಥಿತಿಯಲ್ಲೇ ಇರುತ್ತದೆ. ಕರೊನಾವೂ ಹಾಗೆಯೇ. ಎಷ್ಟು ದಿನ ಅದರ ತೆಕ್ಕೆಗೆ ನಾವು ಸಿಗುವುದಿಲ್ಲವೋ ಅಷ್ಟು ದಿನ ಅದು ಹಾಗೆಯೇ ಇರುತ್ತದೆ. ನಾವು ಅದರ ಕೈಗೆ ಸಿಕ್ಕೊಡನೆ ನಮ್ಮನ್ನು ನುಂಗುವ ತನ್ನ ಕೆಲಸ ಆರಂಭಿಸಿಬಿಡುತ್ತದೆ. ಹೀಗಾಗಿ ಲಾಕ್​ಡೌನ್ ಅನ್ನು 6 ತಿಂಗಳುಗಳ ಕಾಲ ಮುಂದುವರಿಸಿದರೂ ಅದಾದ ಮರುದಿನವೇ ಲಾಕ್​ಡೌನ್ ತೆರೆದುಕೊಂಡಾಗ ನಿಧಾನವಾಗಿ ಇದು ಮತ್ತೆ ಹರಡಲಾರಂಭಿಸುತ್ತದೆ. ಜಗತ್ತಿನ ಅನೇಕ ರಾಷ್ಟ್ರಗಳ ಉದಾಹರಣೆ ಇದಕ್ಕಿದೆ. ಮಾರ್ಚ್ ತಿಂಗಳಲ್ಲಿ ಸಿಂಗಾಪುರ ಕರೊನಾ ನಿಯಂತ್ರಣ ವಿಚಾರದಲ್ಲಿ ಪ್ರಭುತ್ವವನ್ನು ಮೆರೆದು ಅದನ್ನು ತನ್ನ ತೀರದಿಂದ ಆಚೆ ಇಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿತ್ತು. ಅರೆ ಲಾಕ್​ಡೌನ್​ಗೆ ಮನಸ್ಸು ಮಾಡಿ ಭಾರತದವರು ಮಾಡುತ್ತಿರುವಂತೆಯೇ ಕರೊನಾ ಪೀಡಿತರನ್ನು ಗುರುತಿಸಿ ಅವರಿಂದ ಹಬ್ಬಿರಬಹುದಾದವರನ್ನು ಪರೀಕ್ಷಿಸುವ ಕೆಲಸ ಮಾಡುತ್ತಲೇ ಹೋಯ್ತು. ಜಗತ್ತೆಲ್ಲ ಸಿಂಗಾಪುರದ ಕ್ರಮವನ್ನು ಹೆಮ್ಮೆಯಿಂದ ಹೊಗಳಿತು. ನಮ್ಮಲ್ಲೂ ಕೆಲವರು ಅದೇ ರಾಷ್ಟ್ರದ ಮಾದರಿಯನ್ನು ನಾವೂ ಅನುಸರಿಸಬೇಕಿತ್ತು ಎಂಬ ಸಲಹೆ ಕೊಡುವುದು ಮರೆಯಲಿಲ್ಲ. ಆದರೇನು?! ಏಪ್ರಿಲ್ ತಿಂಗಳಲ್ಲಿ ಸಿಂಗಾಪುರದ ವಲಸಿಗರು ಹೆಚ್ಚಾಗಿ ವಾಸಿಸುವ ಸ್ಥಳವೊಂದರ ಸೂಪರ್ ಮಾರ್ಕೆಟು ಈ ಚೀನಾ ವೈರಸ್​ನ ಕೇಂದ್ರವಾಗಿ ಪರಿಣಮಿಸಿತು. ಮುಸ್ತಫಾ ಸೆಂಟರ್​ಗೆ ಬಂದ ಜನ ಅಲ್ಲಿಂದ ರೋಗವನ್ನು ತಮ್ಮ-ತಮ್ಮ ಅಪಾರ್ಟ್​ವೆುಂಟ್​ಗಳಿಗೆ, ಬಂಧು-ಮಿತ್ರರಿಗೆ ಒಯ್ದರು. ಪರಿಣಾಮ ಏಕಾಕಿ ಅಲ್ಲಿ ಕರೊನಾ ಪೀಡಿತರ ಸಂಖ್ಯೆ ಹಿಂದೆಂದೂ ಕಾಣದಷ್ಟು ಮುಗಿಲುಮುಟ್ಟಿತು. ಒಂದೇ ದಿನಕ್ಕೆ 728 ಹೊಸ ಕೇಸುಗಳು ದಾಖಲಾದವು! ಮರು ಮಾತಾಡದೇ ಸಿಂಗಾಪುರ ಒಂದಿಡೀ ಪ್ರದೇಶವನ್ನೇ ಸೀಲ್​ಡೌನ್ ಮಾಡಿತು. ಆ ಮೂಲಕ ಸ್ಥಳೀಯರು ಅಲ್ಲಿಗೆ ಹೋಗದಂತೆ ತಡೆಯಿತು. ವಲಸಿಗರೇ ಇರುವಂತಹ ಆ ಜಾಗದಲ್ಲಿ ಊಟ-ತಿಂಡಿ ಉಚಿತವಾಗಿ ಪೂರೈಕೆ ಮಾಡಿತು. ಅವರ ಸಂಬಳಕ್ಕೂ ಕೊರತೆ ಮಾಡಲಿಲ್ಲ. ಹಾಗಂತ ಅಲ್ಲಿಗೇ ಸುಮ್ಮನಾಗದೇ ಸಾರ್ವಜನಿಕವಾಗಿ ಮಾಸ್ಕ್ ಹಾಕದವರಿಗೆ 300 ಡಾಲರ್ ದಂಡವನ್ನು ವಿಧಿಸಿತು. ಮಾಸ್ಕ್ ಧರಿಸದೇ ಎರಡನೇ ಬಾರಿ ಸಿಕ್ಕಿಬಿದ್ದರೆ ಜೈಲಿಗೇ ಅಟ್ಟುವ ಕಾನೂನು ತಂದಿತು!

    ಚೀನಾದ ಕಥೆಯೂ ಇದಕ್ಕಿಂತ ಭಿನ್ನವಲ್ಲ. ವುಹಾನ್ ಕೇಂದ್ರವಾಗಿ ಇರಿಸಿಕೊಂಡು ಹಬ್ಬಿದ ಈ ವೈರಸ್ಸು ತಾನು ಗೆದ್ದೆ ಎಂದು ರಾಷ್ಟ್ರ ಹೇಳಿಕೊಂಡ ಕೆಲವೇ ದಿನಗಳಲ್ಲಿ ಮತ್ತೆ ಆಕ್ರಮಿಸಲು ಶುರುಮಾಡಿತು. ಸಾವುಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಮತ್ತೆ ತಾಂಡವ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಹಾಗಂತ ಲಾಕ್​ಡೌನ್ ಮಾಡಲೇಬಾರದಾ? ಅದರ ಪರಿಣಾಮ ಏನಾಗುವುದು ಎಂಬುದಕ್ಕೆ ಅಮೆರಿಕವೇ ಉದಾಹರಣೆ! ಅಮೆರಿಕದಲ್ಲಿ ಅದಾಗಲೇ ಎಲ್ಲ ಲೆಕ್ಕಾಚಾರವನ್ನೂ ಮೀರಿದ ಭಯಾನಕ ಸಾವು-ನೋವುಗಳಾಗಿವೆ. ಅಮೆರಿಕದಲ್ಲಿ 2017-18ರಲ್ಲಿ ನ್ಯುಮೋನಿಯಾ ಕಾರಣಕ್ಕೆ 10 ಲಕ್ಷ ಜನರಿಗೆ 20 ರಿಂದ 25 ಜನ ಸಾವನ್ನಪ್ಪಿದರೆ ಕರೊನಾ ಅವೆಲ್ಲದರ ದಾಖಲೆಯನ್ನು ಮೀರಿಸಿ, ಅದಾಗಲೇ ಸರಾಸರಿ 40ರ ಬಲಿಯನ್ನು ಪಡೆಯುತ್ತಿದೆ. ಇದು ಅದಾಗಲೇ ಅಲ್ಲಿ ಹೃದ್ರೋಗಕ್ಕೆ ಸಾಯುವವರ ಸಂಖ್ಯೆಯನ್ನು ದಾಟಿ ದಾಪುಗಾಲು ಇಡುತ್ತಿದೆ. ಇದು ಯಾವುದೇ ಮುನ್ಸೂಚನೆಯನ್ನು ಗಣಿಸದಿದ್ದುದರ ಪರಿಣಾಮ. ಅಥವಾ ಸಮಯಕ್ಕೆ ತಕ್ಕಂತೆ ಲಾಕ್​ಡೌನ್ ಹೇರದ ಕಾರಣಕ್ಕೆ ಜನ ಅನುಭವಿಸಬೇಕಾಗಿರುವಂಥದ್ದು. ಇಂಗ್ಲೆಂಡೂ ಕೂಡ ಲಾಕ್​ಡೌನ್ ಮಾಡಲು ಹಿಂಜರಿದುದರ ಪರಿಣಾಮವಾಗಿ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಬೇಕಾಯ್ತು. ಇಟಲಿ, ಸ್ಪೇನ್, ಜರ್ಮನಿಗಳ ಕಥೆಯೂ ಅದೇ. ಜರ್ಮನಿಯಲ್ಲಂತೂ ಪ್ರಧಾನಿಯ ಮಾತಿಗೆ ಕವಡೆ ಕಿಮ್ಮತ್ತಿಲ್ಲದಂತೆ ಜನ ಅಡ್ಡಾಡಿಕೊಂಡೇ ಇದ್ದರಂತೆ! ಭಾರತದಲ್ಲಿ ಹಾಗಾಗಲಿಲ್ಲ. ಚೀನಾದ ರೋಗ ಹಬ್ಬುವಿಕೆಯಿಂದ ಪಾಠ ಕಲಿತ ಭಾರತ ಬಲುಬೇಗ ತನ್ನ ತಾನು ಲಾಕ್​ಡೌನ್ ಮಾಡಿಕೊಂಡಿತು. ಇತರೆಲ್ಲ ದೇಶಗಳಿಗಿಂತಲೂ ಲಾಕ್​ಡೌನ್ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗಿರುವ ದೇಶ ನಮ್ಮದ್ದೇ. 130 ಕೋಟಿ ಜನಸಂಖ್ಯೆ, ಹಲವು ಮತ-ಪಂಥಗಳು, ಲೆಕ್ಕ ಇಲ್ಲದಷ್ಟು ಭಾಷೆಗಳು, ವಿಭಿನ್ನ ಜನಜೀವನ-ಸಂಸ್ಕೃತಿ, ಬಡತನ ರೇಖೆಯ ಕೆಳಗಿರುವಂತಹ ಕೋಟ್ಯಂತರ ಜನ, ಆರ್ಥಿಕತೆಯನ್ನು 5 ಟ್ರಿಲಿಯನ್​ಗೇರಿಸಬೇಕೆಂದು ಕಾತರಿಸುತ್ತಿರುವ ಉದ್ಯಮಿಗಳು ಮತ್ತು ಸರ್ಕಾರ. ಇವೆಲ್ಲವೂ ಈ ದೇಶಕ್ಕೆ ಲಾಕ್​ಡೌನ್ ಹಾಕುವುದನ್ನು ತಡೆಯಲು ಸಾಕಷ್ಟು ಕಾರಣಗಳಾಗಿದ್ದವು. ದೇಶದ ಜನರ ಬದುಕನ್ನು ಎಲ್ಲದಕ್ಕಿಂತ ದೊಡ್ಡದೆಂದು ಗಣಿಸಿದ ನಾಯಕ ಮುಲಾಜಿಲ್ಲದೆ ಲಾಕ್​ಡೌನ್ ಹೇರಿಬಿಟ್ಟಿದ್ದರ ಪರಿಣಾಮವಾಗಿ ನಾವಿಂದು ನೆಮ್ಮದಿಯಿಂದ ಇದ್ದೇವೆ. ಅನೇಕ ಬಾರಿ ಈ ಚೀನಾ ವೈರಸ್ ಕುರಿತಂತೆ ಜಾಗತಿಕ ಚರ್ಚೆಗಳು ನಡೆಯುವಾಗ ಪಟ್ಟಿಯಲ್ಲಿ ಭಾರತದ ಹೆಸರೂ ಉಲ್ಲೇಖ ಆಗುವುದಿಲ್ಲ. ಏಕೆಂದರೆ ಅಷ್ಟು ಕಡಿಮೆ ಸಂಖ್ಯೆಯ ರೋಗಿಗಳನ್ನು ಭಾರತ ಹೊಂದಿದೆ. ಆದರೆ, ಈ ಲಾಕ್​ಡೌನ್ ತೆರೆಯುವ ಪ್ರಯತ್ನ ಮಾಡಲಿಲ್ಲವೆಂದರೆ ಬರು-ಬರುತ್ತ ಕಾಲವೂ ಭಯಂಕರವಾಗಲಿದೆ. ಉದ್ಯೋಗಗಳು ನಷ್ಟವಾಗುತ್ತವೆ, ಉದ್ದಿಮೆಗಳು ಹೊಸ ಸವಾಲಿಗೆ ಎದೆಯೊಡ್ಡಲು ಹೆದರಿಕೊಳ್ಳುತ್ತವೆ, ಈ ಸಂದರ್ಭಕ್ಕೋಸ್ಕರವೇ ಕಾಯುತ್ತಿರುವ ಕಮ್ಯುನಿಸ್ಟರು ತಮ್ಮ ಕಾರ್ವಿುಕ ಸಂಘಟನೆಗಳ ಮೂಲಕ ಬೆಂಕಿ ಹಚ್ಚಲೂ ಯತ್ನಿಸುತ್ತವೆ. ಹೀಗಾಗಿ ಬಹಳ ಕಾಲ ಲಾಕ್​ಡೌನ್ ಮುಂದುವರಿಸುವುದು ಸಾಧ್ಯವೇ ಇಲ್ಲ. ಅದನ್ನು ಕೊನೆಗಾಣಿಸಿ ದೇವರ ಮೇಲೆ ಭಾರ ಹಾಕಿ ಲಾಕ್​ಡೌನ್ ತೆರೆದೇ ಬಿಡಬೇಕು. ಆದರೆ ಆಗಲೂ ಸಮಾಜದಲ್ಲಿ ವ್ಯವಹಾರ ಮಾಡುವಾಗ ಮಾಸ್ಕ್ ಧರಿಸುವುದನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯದೇ ಹೋದರೆ ನಮ್ಮ ಕೆಲಸವನ್ನೂ ಮಾಡಿಕೊಳ್ಳುತ್ತ, ಕರೊನಾ ವೈರಸ್ಸನ್ನು ವಂಚಿಸುವುದು ನಮಗೆ ಸಾಧ್ಯವಾಗಬಹುದು. ಈಗ ಸಿಂಗಾಪುರ ಅದನ್ನೇ ಪ್ರಯತ್ನಿಸುತ್ತಿದೆ. ಮೇ 3ರ ನಂತರ ನಮ್ಮ ಪ್ರಯತ್ನವೂ ಅದೇ ಆಗಿರಲಿದೆ. ಅಂದರೆ ರಾಹುಲ್ ಹೇಳಿದಂತೆ ಲಾಕ್​ಡೌನ್ ಈ ರೋಗವನ್ನು ಎದುರಿಸಲು ಪರಿಹಾರವಲ್ಲ ನಿಜ, ಆದರೆ ತಕ್ಷಣಕ್ಕೆ ಆಗುವ ಸಾವು-ನೋವುಗಳನ್ನು ತಡೆಗಟ್ಟಲು ಅತ್ಯಂತ ಪ್ರಭಾವಿ ಮಾಧ್ಯಮ ಎಂಬುದಂತೂ ಹೌದು. ಹೀಗಾಗಿಯೇ ಭಾರತ ಇಟ್ಟ ಹೆಜ್ಜೆ ಜಗತ್ತಿನ ಎಲ್ಲ ರಾಷ್ಟ್ರಗಳಿಂದಲೂ ಪ್ರಶಂಸಿಸಲ್ಪಡುತ್ತಿದೆ!

    ಇದೇ ಪತ್ರಿಕಾಗೋಷ್ಠಿಯಲ್ಲಿ ರಾಹುಲ್, ಕರೊನಾಕ್ಕೆ ಪರಿಹಾರ ಹೆಚ್ಚು ಪರೀಕ್ಷೆ ಮಾಡುವುದು ಮತ್ತು ಹೆಚ್ಚು ಜನರನ್ನು ಕ್ವಾರೆಂಟೈನ್​ನಲ್ಲಿ ಇಡುವುದೊಂದೇ ಎಂದು ಹೇಳಿದ್ದಾರೆ. ಈ ಹಿಂದೆ ಪಿ.ಚಿದಂಬರಂ ಕೂಡ ಅದನ್ನೇ ಹೇಳಿದ್ದರು. ಟೆಸ್ಟಿಂಗ್ ಕಿಟ್ ಬಳಸಿ ಒಬ್ಬನಿಗೆ ಕರೊನಾ ಬಂದಿರುವ ಕುರಿತಂತೆ ಪರೀಕ್ಷೆ ನಡೆಸಬೇಕಾದಲ್ಲಿ ಸುಮಾರು -ಠಿ; 5000ವರೆಗೂ ಖರ್ಚು ಬರಬಹುದೆಂದು ಅಂದಾಜು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ಅಷ್ಟೂ ಪ್ರಜೆಗಳ ಪರೀಕ್ಷೆಗೆ ನಿಲ್ಲುವುದು ಎಂದರೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯಿಸುವುದು ಎಂದರ್ಥ. ಹೀಗಾಗಿಯೇ ಭಾರತ ಕರೊನಾ ಪರೀಕ್ಷೆಗೆ ವೈಜ್ಞಾನಿಕ ಮಾದರಿಯನ್ನು ಬಳಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಒಬ್ಬನಿಗೆ ಕರೊನಾ ಬಂತೆಂದರೆ ಆತ ಅದನ್ನು ಸುಮಾರು 400 ಜನರಿಗೆ ಹರಡಿಸಬಲ್ಲ. ಹೀಗಾಗಿ ಪರೀಕ್ಷೆ ನಡೆಸಿ ಆಯಾ ವ್ಯಕ್ತಿಗಳನ್ನು ಕ್ವಾರೆಂಟೈನ್ ಮಾಡಿಬಿಡುವುದು ಸಿಂಗಾಪುರ, ಸ್ಪೇನ್, ಇಟಲಿ ಇಂತಹ ರಾಷ್ಟ್ರಗಳಿಗೆ ಸುಲಭವಾಗಬಹುದೇನೋ. ಆದರೆ ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಇದು ಸುಲಭವಾಗಿ ಆಗುವಂತಹ ಮಾತಲ್ಲ.

    ತಬ್ಲಿಘಿ ಕಾರ್ಯಕ್ರಮಕ್ಕೆ ಹೋಗಿಬಂದವರು ಪರೀಕ್ಷೆ ಮಾಡಿಕೊಳ್ಳಲೇ ಹಿಂದೇಟು ಹಾಕುತ್ತಿರುವಾಗ ಇನ್ನು ಸಮಾಜದ ಪ್ರತಿಯೊಬ್ಬರನ್ನೂ ಹಾಗೆ ಕರೆ-ಕರೆದು ಪರೀಕ್ಷೆ ನಡೆಸುವುದು ಸುಲಭದ ಸಂಗತಿಯೇ ಅಲ್ಲ. ಆದರೂ ಒಟ್ಟಾರೆ ಜನಸಮೂಹದ ನಡುವಿನಿಂದ ಅಲ್ಲಲ್ಲಿ ವ್ಯಕ್ತಿಗಳ ನಮೂನೆಯನ್ನು ಪಡಕೊಂಡು ಪರೀಕ್ಷೆ ನಡೆಸುವ ಕಾರ್ಯ ಗುಜರಾತ್​ನಲ್ಲಿ ಆರಂಭವಾಗಿದೆ. ಬರಲಿರುವ ದಿನಗಳಲ್ಲಿ ಅದನ್ನು ದೇಶಕ್ಕೆಲ್ಲ ವಿಸ್ತರಿಸಿ ಕರೊನಾ ಸಾಮುದಾಯಿಕವಾಗಿ ಎಷ್ಟು ಹಬ್ಬಿದೆ ಎಂಬುದನ್ನು ಅಂದಾಜಿಸಲಾಗುತ್ತದೆ. ಕಳೆದ ಒಂದು ವಾರದಲ್ಲಿ ಹಬ್ಬುವಿಕೆಯ ವೇಗವೂ ಕಡಿಮೆ ಆಗಿರುವುದು ಖುಷಿ ಕೊಡುವ ಸಂಗತಿ. ಮೊದಲು ಏಳು ದಿನಗಳಿಗೆ ದ್ವಿಗುಣಗೊಳ್ಳುತ್ತಿದ್ದ ಪೀಡಿತರ ಸಂಖ್ಯೆ ತಬ್ಲಿಘಿ ಕೊಡುಗೆಯಿಂದಾಗಿ ನಾಲ್ಕು ದಿನಕ್ಕೆ ಬಂದುಬಿಟ್ಟಿತ್ತು. ಈಗ ಮತ್ತೆ ಅದು ಆರು ದಿನದತ್ತ ಹೊರಳಿದೆ. ಇವೆಲ್ಲವೂ ಒಳ್ಳೆಯ ಬೆಳವಣಿಗೆಗಳೇ.

    ಇಷ್ಟರ ನಡುವೆಯೂ ಆತಂಕವಂತೂ ಖಂಡಿತ ಕಾಡುತ್ತಿದೆ. ಲಾಕ್​ಡೌನ್ ತೆರವಿನೊಂದಿಗೆ ಇಷ್ಟು ದಿನ ಅವ್ಯಕ್ತವಾಗಿಯೇ ತಾಂಡವನೃತ್ಯ ಮಾಡುತ್ತಿರುವ ಕರೊನಾ ವ್ಯಕ್ತವಾಗಲಾರಂಭಿಸುವುದೇ? ಅಥವಾ ಈ ದೇಶದ ಬಿಸಿಲುಗಾಲದ ಬೇಗೆಯನ್ನು ತಾಳಲಾಗದೇ ಅದರ ಹಬ್ಬುವಿಕೆಯ ದರ ಕಡಿಮೆಯಾಗುತ್ತಲೇ ಹೋಗುವುದೇ? ಹಾಗೇನಾದರೂ ಇದರ ವಿಸ್ತಾರ ಕಡಿಮೆಯಾಯಿತೆಂದೆನಿಸಿದರೆ ರಾಹುಲ್ ಮತ್ತೊಂದು ಪತ್ರಿಕಾಗೋಷ್ಠಿ ನಡೆಸಿ ನರೇಂದ್ರ ಮೋದಿ ಲಾಕ್​ಡೌನ್ ಅನ್ನು ಅನಗತ್ಯವಾಗಿ ದೇಶದ ಮೇಲೆ ಹೇರಿದರು ಎಂದು ಆರೋಪಿಸಲೂ ಹಿಂದೆ-ಮುಂದೆ ನೋಡುವುದಿಲ್ಲ. ಒಟ್ಟಾರೆ ಸ್ಥಿತಿ ಇನ್ನೂ ಅಯೋಮಯವಾಗಿದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts