More

    ಬಂಡವಾಳ ವೆಚ್ಚಕ್ಕೂ ಬರಗಾಲ!: ಪಂಚ ಗ್ಯಾರಂಟಿಗಳ ಹೊಡೆತ | ಶೇ.20ರಷ್ಟು ರಾಜ್ಯದ ಪ್ರಗತಿ ಕುಂಠಿತ

    | ಮೃತ್ಯುಂಜಯ ಕಪಗಲ್ ಬೆಂಗಳೂರು

    ಸ್ವಂತ ತೆರಿಗೆ ಸಂಗ್ರಹ ಗುರಿಯಲ್ಲಿ ಹಿನ್ನಡೆ, ಬರಗಾಲದ ಪ್ರಭಾವ, ಪಂಚ ಗ್ಯಾರಂಟಿಗಳ ವೆಚ್ಚದ ಹೊರೆಗಳೆಲ್ಲ ಒಟ್ಟಿಗೆ ಸೇರಿಕೊಂಡು ರಾಜ್ಯದ ಬಂಡವಾಳ ವೆಚ್ಚಕ್ಕೆ ಬರೆಯಿಟ್ಟಿವೆ. ಅಂದಾಜಿಸಿದ ಬಂಡವಾಳ ವೆಚ್ಚ ಸಾಧನೆಯಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿರುವ ಪರಿಣಾಮ ಅಭಿವೃದ್ಧಿಗೆ ಹಿನ್ನಡೆ ಆಗಿರುವ ವಿಚಾರ ಇದೀಗ ಬಯಲಾಗಿದೆ.

    ಬಂಡವಾಳ ವೆಚ್ಚವೇ ರಾಜ್ಯದ ಅಭಿವೃದ್ಧಿ, ಸಾರ್ವಜನಿಕ ಆಸ್ತಿ ಸೃಜನೆಗೆ ಮಾನದಂಡವಾಗಿದೆ. ಕಳೆದ ಆರ್ಥಿಕ ವರ್ಷದ (2023-24) ಪರಿಷ್ಕೃತ ಬಜೆಟ್​ನ ಪ್ರಕಾರ ಬಂಡವಾಳ ವೆಚ್ಚಕ್ಕೆ 54,374 ಕೋಟಿ ರೂ. ಮೀಸಲಿರಿಸಲಾಗಿತ್ತು. ಆರ್ಥಿಕ ವರ್ಷಾಂತ್ಯ ಮಾರ್ಚ್​ವರೆಗಿನ ಪ್ರಾಥಮಿಕ ಅಂದಾಜು ಲೆಕ್ಕದ ಪ್ರಕಾರ 45,878 ಕೋಟಿ ರೂ. ವೆಚ್ಚ ಸಾಧ್ಯವಾಗಿದೆ. ಸ್ವಂತ ತೆರಿಗೆ ಮೂಲಗಳಿಂದ ಒಟ್ಟು 2.05 ಲಕ್ಷ ಕೋಟಿ ರೂ. ಸಂಗ್ರಹದ ಗುರಿಯಿತ್ತು. ಇದರಲ್ಲಿ 3,300 ಕೋಟಿ ರೂ. ಕೊರತೆ ಉಂಟಾಗಿದ್ದರೆ, ಐದು ಗ್ಯಾರಂಟಿಗಳು, ಸಾಮಾಜಿಕ ಭದ್ರತೆ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳ ವೆಚ್ಚ 1.25 ಲಕ್ಷ ಕೋಟಿ ರೂ.ಗಳಾಗಿದೆ. ಅಲ್ಲದೆ, ಮುಂಗಾರು ಮಳೆ ವೈಫಲ್ಯದಿಂದ ಒಟ್ಟು 240 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತವಾಗಿವೆ. ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ, ಕುಡಿಯುವ ನೀರು,ಮೇವು ಹೆಚ್ಚುವರಿ ವೆಚ್ಚದ ಭಾರವೂ ಬೊಕ್ಕಸದ ಮೇಲೆ ಬಿದ್ದಿದೆ.

    ಅಭಿವೃದ್ಧಿಗೆ ತೊಡಕು: ಬಂಡವಾಳ ವೆಚ್ಚವನ್ನು ಅಳತೆ ಗೋಲಾಗಿಟ್ಟುಕೊಂಡರೆ ಶೇ.20ರಷ್ಟು ಪ್ರಗತಿ ಕುಂಠಿತವಾಗಿದೆ. ಇದು, ಮೂಲ ಸವಲತ್ತು ಸೃಜನೆ ಹಾಗೂ ಅಭಿವೃದ್ಧಿಯ ಮೇಲೂ ಅಡ್ಡಪರಿಣಾಮ ಬೀರುವುದು ಸಹಜ. ವಿವಿಧ ತೆರಿಗೆ ಸಂಗ್ರಹದ ಪ್ರಮಾಣ, ಅಭಿವೃದ್ಧಿ ಕಾಮಗಾರಿಗಳ ಬಿಲ್ ಪಾವತಿಯು ಆರ್ಥಿಕ ವರ್ಷದ ಕೊನೇ ತಿಂಗಳಾದ ಮಾರ್ಚ್​ನಲ್ಲಿ ಏರಿಕೆ ಸ್ವಾಭಾವಿಕ. ಆಯಾ ಆರ್ಥಿಕ ವರ್ಷದ ಜಮೆ-ಖರ್ಚು ಪಕ್ಕಾ ಮಾಡುವ ತಿಂಗಳದು ಎಂದು ಇಲಾಖೆ ಸಮಜಾಯಿಷಿ ನೀಡಿದೆ.

    ವಿಪಕ್ಷಗಳ ಆರೋಪಕ್ಕೆ ಪುಷ್ಟಿ: ಐದು ಗ್ಯಾರಂಟಿಗಳಿಂದಾಗಿ ಖಜಾನೆ ಖಾಲಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಿರಂತರ ಟೀಕಾಸ್ತ್ರ ಪ್ರಯೋಗಿಸುತ್ತಿವೆ. ಸರ್ಕಾರ ಬಂಡವಾಳ ವೆಚ್ಚವನ್ನು ವ್ಯಯಿಸುವ ರೀತಿಯ ಮೇಲೆ ರಾಜ್ಯದ ಅಭಿವೃದ್ಧಿ ಗತಿಯನ್ನು ಪರಿಗಣಿಸಲಾಗುತ್ತಿದೆ. ಈ ವೆಚ್ಚವೇ ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ತೀರಾ ಸೊರಗಿ ಶೇಕಡ 48ರಷ್ಟು ವಿನಿಯೋಗಿಸಿದ್ದು, ಪ್ರತಿಪಕ್ಷಗಳ ಟೀಕೆಗೆ ಪುಷ್ಠಿ ನೀಡುವಂತಿದೆ. ಕಳೆದ ಬಾರಿಯ 10 ತಿಂಗಳಿಗೆ ಹೋಲಿಸಿದರೆ ಬಂಡವಾಳ ವೆಚ್ಚ 2023-24ರಲ್ಲಿ ಶೇ.22ರಷ್ಟು ಕುಸಿತವಾಗಿರುವುದು ಸ್ಪಷ್ಟವಾಗಿದೆ.

    ಆರ್ಥಿಕ ತಜ್ಞರ ಕಳವಳ ಏನು?: ಬಂಡವಾಳ ವೆಚ್ಚಕ್ಕೆ ಅನುದಾನ ಕೊರತೆ ಉಂಟಾಗದಂತೆ ವಿತ್ತೀಯ ಕೊರತೆಯನ್ನು ಜಿಎಸ್​ಡಿಪಿಯ ಶೇ.3, ಒಟ್ಟು ಬಾಕಿಯಿರುವ ಸಾಲಗಳಲ್ಲಿ ಜಿಎಸ್​ಡಿಪಿಯ ಶ.25ರ ಒಳಗೆ ಕಾಯ್ದುಕೊಂಡು ಹೊಣೆ ನಿಭಾಯಿಸುತ್ತೇವೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ಬಂಡವಾಳ ವೆಚ್ಚವೇ ಹಿಮ್ಮುಖವಾಗಿ ದೂರಗಾಮಿ ಯೋಜನೆಗಳ ಅಂದಾಜು ವೆಚ್ಚ ಏರಿಕೆಗೆ ದಾರಿ ಮಾಡಿಕೊಡಲಿದೆ. ನೀರಾವರಿ, ಮೂಲ ಸವಲತ್ತು, ಸಾರ್ವಜನಿಕ ಆಸ್ತಿ ಸೃಜನೆ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಲಿದ್ದು, ರಾಜ್ಯದ ಪ್ರಗತಿಗೆ ಮಾರಕವಾಗಲಿದೆ ಎಂದು ಸಾಮಾಜಿಕ, ಆರ್ಥಿಕ ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.

    ಪ್ರಗತಿ ಕುಂಠಿತ: ಬಂಡವಾಳ ವೆಚ್ಚದಲ್ಲಿ ಮೊದಲ 10 ತಿಂಗಳು ಮಾಸಿಕ ಸರಾಸರಿ 3,200 ಕೋಟಿ ರೂ. ಸರ್ಕಾರ ವಿನಿಯೋಗಿಸಿದೆ. ಆದರೆ ಫೆಬ್ರವರಿಯಲ್ಲಿ 7,780 ಕೋಟಿ ರೂ., ಮಾರ್ಚ್​ನಲ್ಲಿ 11,630 ಕೋಟಿ ರೂ. ವಿನಿಯೋಗಿಸಿದೆ. ಬಂಡವಾಳ ವೆಚ್ಚವು ಕೇವಲ ಎರಡು ತಿಂಗಳಲ್ಲಿ ದುಪ್ಪಟ್ಟು ವಿನಿಯೋಗಿಸಿದ್ದರಲ್ಲಿ ಬಾಕಿ ಬಿಲ್ ಪಾವತಿ ಕಾರಣವೆಂದು ಆರ್ಥಿಕ ಇಲಾಖೆ ಮೂಲಗಳು ಹೇಳಿವೆ.

     

     

    ಮಾಜಿ ಡಿಸಿಎಂ ಮನೀಶ್ ಸಿಸೊಡಿಯಾ ಮತ್ತಷ್ಟು ದಿನ ಜೈಲಿನಲ್ಲೇ: 2ನೇ ಬಾರಿಗೆ ಜಾಮೀನು ಅರ್ಜಿ ವಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts