More

    ಕಾರ್ವಿುಕರ ಕಲ್ಯಾಣಕ್ಕೆ ಯೋಜನೆಗಳ ಬಲ

    ಪ್ರತಿ ವರ್ಷ ಮೇ ತಿಂಗಳ ಮೊದಲ ದಿನವನ್ನು ಅಂತಾರಾಷ್ಟ್ರೀಯ ಕಾರ್ವಿುಕರ ದಿನವನ್ನಾಗಿ ಆಚರಿಸಲಾಗುತ್ತದೆ. ಕಾರ್ವಿುಕ ವರ್ಗದ ಸಾಧನೆಗಳನ್ನು ಗೌರವಿಸುವುದು ಈ ಆಚರಣೆ ಹಿಂದಿನ ಉದ್ದೇಶವಾಗಿದ್ದು, ಕಾರ್ವಿುಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನೆಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ, ಅದರ ಸೌಲಭ್ಯ ಪಡೆಯುವುದೇಗೆ ಎಂಬುದು ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    | ಆರ್.ತುಳಸಿಕುಮಾರ್ ಬೆಂಗಳೂರು

    ದೇಶ ನಿರ್ವಣದ ಕಾರ್ಯದಲ್ಲಿ ಶ್ರಮಿಕ ವರ್ಗದವರ ಶ್ರಮ ಅಪಾರ. ದೈಹಿಕವಾಗಿ ಶ್ರಮಪಟ್ಟು ಬೆವರು ಹರಿಸಿ ದುಡಿಯುವ ವರ್ಗದವರ ಸಂಖ್ಯೆ ದೊಡ್ಡದಿದೆ. ಇಂತಹ ಶ್ರಮಜೀವಿಗಳ ಸಾಮಾಜಿಕ ಭದ್ರತೆ ಹಾಗೂ ಜೀವನ ಸುಧಾರಣೆಗೆ ಕೇಂದ್ರ ಸರ್ಕಾರ ರೂಪಿಸಿರುವ ‘ಇ-ಶ್ರಮ್ ಯೋಜನೆ ವರದಾನವಾಗಿದೆ.

    ಅಸಂಘಟಿತ ವಲಯಕ್ಕೆ ಸೇರಿದ ಕಾರ್ವಿುಕ ವರ್ಗದವರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಕಾರ್ಯಕ್ರಮಗಳು ಕಾಗದದ ಮೇಲಷ್ಟೇ ಕಾಣುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಲು ಇ-ಶ್ರಮ್ ಯೋಜನೆಯನ್ನು ಬಹು ವಿಸ್ತಾರವಾಗಿ ಜಾರಿಗೆ ತರಲಾಗಿದೆ. ದೇಶದಲ್ಲಿರುವ 45 ಕೋಟಿ ಅಸಂಘಟಿತರ ಪೈಕಿ ಸುಮಾರು 30 ಕೋಟಿ ಮಂದಿ ಇ-ಶ್ರಮ್ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

    ಈ-ಶ್ರಮ್ ಯೋಜನೆಗೆ ಕಟ್ಟಡ ನಿರ್ಮಾಣ ಕಾರ್ವಿುಕರು, ವಲಸೆ ಕಾರ್ವಿುಕರು, ಬೀದಿ ಬದಿ ವ್ಯಾಪಾರಿಗಳು, ಕೃಷಿ ಕಾರ್ವಿುಕರು, ಚಾಲಕರು, ಮನೆಗೆಲಸದವರು ಸೇರಿ 379 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸೇರ್ಪಡೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನ ಸಂಖ್ಯೆಯುಳ್ಳ ಕಾರ್ಡ್ ನೀಡಲಾಗಿದೆ. ಈ ಕಾರ್ಡ್​ನಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

    ರಾಜ್ಯ ಮಂಡಳಿಯಿಂದ ಸಪ್ತ ಯೋಜನೆ: ಕರ್ನಾಟಕದಲ್ಲಿ ಶ್ರಮಿಕ ವರ್ಗದವರಿಗಾಗಿ ರಾಜ್ಯ ಸರ್ಕಾರ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿವೆ. ಕಾರ್ವಿುಕರ ಮಕ್ಕಳ ಶೈಕ್ಷಣಿಕ ನೆರವು, ಆರೋಗ್ಯ ನೆರವು ಸಹಿತ 7 ಕಾರ್ಯಕ್ರಮಗಳನ್ನು ಕರ್ನಾಟಕ ಕಾರ್ವಿುಕರ ಕಲ್ಯಾಣ ಮಂಡಳಿಗೆ (ಕೆಎಲ್​ಡಬ್ಲ್ಯುಬಿ) ಅನುಷ್ಠಾನದ ಹೊಣೆ ವಹಿಸಲಾಗಿದೆ. ಮಾಸಿಕ 21 ಸಾವಿರ ರೂ.ಗಿಂತ ಕಡಿಮೆ ಮೊತ್ತವನ್ನು ಪಡೆಯುವ ಯಾವುದೇ ಕಾರ್ವಿುಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

    ವಾರ್ಷಿಕ ಶೈಕ್ಷಣಿಕ ನೆರವು: ಪ್ರೌಢಶಾಲೆ ವಿದ್ಯಾರ್ಥಿಗಳಿಗೆ 3 ಸಾವಿರ ರೂ., ಪಿಯುಸಿ/ಡಿಪ್ಲೊಮಾ/ಟಿಸಿಎಚ್ ವ್ಯಾಸಂಗದವರಿಗೆ 4 ಸಾವಿರ ರೂ., ಪದವಿಗೆ 5 ಸಾವಿರ ರೂ., ಪಿಜಿಗೆ 6,000 ಸಾವಿರ ರೂ., ವೈದ್ಯಕೀಯ/ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನೀಡಲಾಗುತ್ತದೆ.

    ವೈದ್ಯಕೀಯ ನೆರವು: ವೈದ್ಯಕೀಯ ನೆರವಾಗಿ ವಾರ್ಷಿಕವಾಗಿ ಗರಿಷ್ಠ 25 ಸಾವಿರ ರೂ. ನೀಡಲಾಗುತ್ತದೆ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ 1,000 ರೂ. ನೀಡಲಾಗುತ್ತದೆ. ಅಲ್ಲದೆ ಮಹಿಳಾ ಕಾರ್ವಿುಕರಿಗಾಗಿ ಹೆರಿಗೆ ಸೌಲಭ್ಯದ ನೆರವು ರೂಪದಲ್ಲಿ 10 ಸಾವಿರ ರೂ. ನೀಡಲಾಗುತ್ತದೆ.

    ಗಿಗ್ ಕಾರ್ವಿುಕರಿಗೆ ಸಾಮಾಜಿಕ ಭದ್ರತೆ: ಕೆಲಸದ ಕಾಯಂ ಇಲ್ಲದೆ ದುಡಿಯುತ್ತಿರುವ ಸಾರಿಗೆ ವಲಯದ ಅಸಂಘಟಿತ ಚಾಲಕರು ಹಾಗೂ ಇತರರಿಗೆ ಸಾಮಾಜಿಕ ಭದ್ರತೆ ಕಾರ್ಯಕ್ರಮ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಂದಾಜು 45 ಲಕ್ಷ ಇಂತಹ ಶ್ರಮಿಕರಿದ್ದು, ಅವರೆಲ್ಲರಿಗೂ ವೈದ್ಯಕೀಯ, ಶಿಕ್ಷಣ ಹಾಗೂ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವು ನೀಡುವ ಕಾರ್ಯಕ್ರಮ ಜಾರಿಗೊಳಿಸಲು ಕಾರ್ವಿುಕ ಇಲಾಖೆ ಸಿದ್ಧತೆ ನಡೆಸಿದೆ.

    ವಸತಿ ಸಮುಚ್ಚಯ: ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ವಿುಕರು ವಲಸೆ ಹೋಗುವ ಸ್ಥಳದಲ್ಲಿ ವಾಸ್ತವ್ಯ ಹೂಡಲು ಪರದಾಡುವುದುಂಟು. ಈ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರ ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಹೊಸ ಯೋಜನೆ ಪ್ರಕಟಿಸಿದೆ. ಈ ವರ್ಷ 10 ಜಿಲ್ಲೆಗಳಲ್ಲಿ ಇಂತಹ ವಸತಿ ಸಮುಚ್ಚಯಗಳನ್ನು ನಿರ್ವಿುಸಲು 100 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿದೆ.

    ಅಪಘಾತ ನೆರವು: ಕಾರ್ವಿುಕರೊಬ್ಬರು ಅಪಘಾತಕ್ಕೊಳ ಗಾದಲ್ಲಿ ಮೊದಲ ಮೂರು ತಿಂಗಳ ಅವಧಿಯೊಳಗೆ 10 ಸಾವಿರ ರೂ. ನೆರವು ನೀಡಲಾಗುತ್ತದೆ. ಕಾರ್ವಿುಕ ಮೃತನಾದರೆ ಅಂತ್ಯಕ್ರಿಯೆಗಾಗಿ ಅವರ ಕುಟುಂಬದವರಿಗೆ 10 ಸಾವಿರ ರೂ. ನೆರವು ಒದಗಿಸಲಾಗುತ್ತದೆ. ಈ ಸೌಲಭ್ಯ ಪಡೆದುಕೊಳ್ಳಲು 6 ತಿಂಗಳು ಅವಕಾಶವಿರಲಿದೆ.

    ಕಾರ್ವಿುಕ ದಿನಾಚರಣೆ ಏಕೆ?: ಮೇ 1, 1886ರಲ್ಲಿ ದಿನದ 15 ಗಂಟೆ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂದು ಬೇಡಿಕೆಯೊಂದಿಗೆ ಕಾರ್ವಿುಕರು ಅಮೆರಿಕದ ಚಿಕಾಗೋ ನಗರದಲ್ಲಿ ಪ್ರತಿಭಟನೆಗೆ ಮುಂದಾದರು. ಈ ಪ್ರತಿಭಟನೆಯ ಕಾವು ಜೋರಾಗಿದ್ದ ಕಾರಣ ಮೇ 4ರಂದು ಪೋಲಿಸರು ಕಾರ್ವಿುಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪ್ರತಿ ವರ್ಷ ಮೇ 1ರಂದು ಕಾರ್ವಿುಕ ದಿನವನ್ನಾಗಿ ಆಚರಿಸಬೇಕೆನ್ನುವ ಬೇಡಿಕೆ ಕೊನೆಗೂ ಈಡೇರಿತು. ಪ್ರತಿಭಟನೆಯ ಪರಿಣಾಮವಾಗಿ 1916ರಲ್ಲಿ ಅಮೆರಿಕ ಸರ್ಕಾರವು ಕೆಲಸದ ಅವಧಿಯನ್ನು ಕಡಿಮೆಗೊಳಿಸಿ 8 ಗಂಟೆಗಳ ಕೆಲಸ ಅವಧಿ ಹಾಗೂ ಕಾರ್ವಿುಕರ ದಿನವನ್ನಾಗಿ ಆಚರಿಸುವುದಕ್ಕೆ ಮುಂದಾಯಿತು. ಅಂದಿನಿಂದ ಪ್ರತಿ ವರ್ಷ ಮೇ 1 ರಂದು ಕಾರ್ವಿುಕರ ದಿನವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ 1923ನೇ ಇಸವಿಯ ಮೇ 1 ರಂದು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ಸ್ಥಾಪನೆಗೊಂಡ ದಿನದಿಂದ ಕಾರ್ವಿುಕರ ದಿನವನ್ನು ಆಚರಿಸಲಾಗುತ್ತಿದೆ.

    ವೈದ್ಯಕೀಯ ಶಿಬಿರ:

    . ಕಾರ್ವಿುಕ ಸಂಘಟನೆಗಳು ಆಯೋಜಿಸುವ ವೈದ್ಯಕೀಯ ಶಿಬಿರಗಳಿಗೆ 1 ಲಕ್ಷ ರೂ. ನೆರವು ದೊರೆಯಲಿದೆ

    . ಕ್ರೀಡಾಕೂಟಕ್ಕೆ ನೆರವು: ಕಾರ್ವಿುಕ ಸಂಘಟನೆಗಳು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವ ವಾರ್ಷಿಕ ಕ್ರೀಡಾ ಚಟುವಟಿಕೆಗೆ 1 ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುತ್ತದೆ.

    . ಪಿಂಚಣಿ ಸೌಲಭ್ಯ: ಕಟ್ಟಡ ನಿರ್ಮಾಣ ಕಾರ್ವಿುಕನೊಬ್ಬ 60 ವರ್ಷ ಪೂರೈಸಿದ ಬಳಿಕ ಆತನಿಗೆ ಮಾಸಿಕ ಪಿಂಚಣಿ ಪಡೆಯುವ ಅವಕಾಶ ಇದೆ. ಮಾಸಿಕ 3 ಸಾವಿರ ರೂ. ಪಿಂಚಣಿ ಮೊತ್ತವು ಮಂಡಳಿ ವತಿಯಿಂದಲೇ ಭರಿಸಲಾಗುತ್ತದೆ. ಪಿಂಚಣಿದಾರ ಮೃತನಾದಲ್ಲಿ ಆತನ ಪತ್ನಿ/ಪತಿ ಅಥವಾ ಅವಲಂಬಿತರಿಗೆ ಪಿಂಚಣಿ ಸಿಗಲಿದೆ.

    ಅಶ್ಲೀಲ ಚಿತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್: ಎಫ್​​ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts