More

    ಉರಿ ಬೇಸಿಗೆಯಲ್ಲಿ ತಂಪು ನೀಡುವ ಕರ್ಬೂಜ

    ಬಿಸಿಲಿನ ಝಳ ನಮ್ಮನ್ನು ತುಂಬಾ ಕಾಡಲು ಪ್ರಾರಂಭ ಮಾಡಿಬಿಟ್ಟಿದೆ. ಎಷ್ಟೇ ಫ್ಯಾನ್, ಎಸಿ ಬಳಕೆ ಮಾಡಿದರೂ ಒಳಗಿನಿಂದ ಕಾಡುತ್ತಿರುವ ಧಗೆ ನಮ್ಮನ್ನು ಸೊರಗಿಸುತ್ತಿದೆ. ಹಾಗಾಗಿ ಇಂದು ನಾವು ರುಚಿಕರವಾದ, ತುಂಬಾ ಒಳ್ಳೆಯ ಪೋಷಕಾಂಶಗಳನ್ನು ತುಂಬಿಕೊಂಡಿರುವ, ಅತ್ಯಂತ ತಂಪು ಗುಣವನ್ನು ಉರಿ ಬೇಸಿಗೆಯಲ್ಲಿ ತಂಪು ನೀಡುವ ಕರ್ಬೂಜಹೊಂದಿರುವ ಹಣ್ಣಾದ ಕರ್ಬೂಜದ ಬಗ್ಗೆ ತಿಳಿದುಕೊಳ್ಳೋಣ. ಆಯುರ್ವೇದದ ಪ್ರಕಾರ ಜೀರ್ಣಕ್ಕೆ ಸ್ವಲ್ಪ ಕಷ್ಟಕರವಾದ ಆದರೆ ತುಂಬಾ ಚೆನ್ನಾಗಿ ಸ್ನಿಗ್ಧ ಮತ್ತು ತಂಪು ಗುಣಗಳನ್ನು ಹೊಂದಿರುವ ಕರ್ಬೂಜ ವು ಪಿತ್ತ ಮತ್ತು ವಾತ ದೋಷಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಉರಿ ಬೇಸಿಗೆಯಲ್ಲಿ ಅತ್ಯಂತ ಸೂಕ್ತವಾದ ಹಣ್ಣು ಇದು. .ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಮೂತ್ರವನ್ನು ಹೆಚ್ಚಿಸುವ ಗುಣವನ್ನೂ ಹೊಂದಿದ್ದು ಮೂತ್ರಕೋಶದಲ್ಲಿ ಕಲ್ಲುಗಳು ಆಗುವುದು, ಮೂತ್ರದಂತಹ ತೊಂದರೆಗಳಾಗುವುದನ್ನು ಸುಲಭವಾಗಿ ತಪ್ಪಿಸುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಇದನ್ನು ಕೋಷ್ಠ ಶುದ್ದಿಕರ ಎಂದು ಕರೆದಿದ್ದಾರೆ. ಅಂದರೆ ನಮ್ಮ ಕರುಳನ್ನು ಕೂಡಾ ಶುದ್ಧ ಮಾಡುತ್ತದೆ ಎಂದರ್ಥ.

    ಭಾವ ಪ್ರಕಾಶ ನಿಘಂಟುವಿನಲ್ಲಿ ಇದಕ್ಕೆ ವೃಷ್ಯ ಗುಣ ಇದೆ ಎಂದು ಹೇಳಿದ್ದಾರೆ; ಅಂದರೆ ಇದಕ್ಕೆ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೂಡ ಇದೆ ಎಂದರ್ಥ. ಇದು ಮಲವಿಸರ್ಜನೆ ಸರಾಗವಾಗಿ ಆಗಲು ಸಹಾಯ ಮಾಡುವ ಕಾರಣದಿಂದ ಇದನ್ನು ಮಲಬದ್ಧತೆ ಇರುವವರು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಬಹುದು. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸುವಲ್ಲಿಯೂ ಇದು ಸಹಕಾರಿ. ಜೊತೆಗೆ ನಿಯಮಿತವಾಗಿ ಇದನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯವಾಗುತ್ತದೆ. ಎಷ್ಟೋ ಜನರಿಗೆ ಬೇಸಿಗೆಯ ಉಷ್ಣತೆಯ ಕಾರಣದಿಂದಾಗಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ತುಂಬಾ ಹೆಚ್ಚಾಗಿ ಆಗುತ್ತದೆ; ಅಂತಹ ಸಂದರ್ಭದಲ್ಲಿ ನಿತ್ಯವೂ ಖರ್ಬೂಜವನ್ನು ಸೇವಿಸಬೇಕು.

    ಬೀಜಗಳೂ ಉಪಕಾರಿ: ಕರ್ಬೂಜದ ಬೀಜಗಳು ಕೂಡ ಕಡಿಮೆ ಗುಣವನ್ನು ಹೊಂದಿಲ್ಲ; ಸುಮಾರು 8 ರಿಂದ 10 ಕರ್ಬೂಜದ ಬೀಜಗಳನ್ನು ಸೇವಿಸುವುದರಿಂದ ಮೂತ್ರದ ಸಮಸ್ಯೆಗಳು, ಕಫಕ್ಕೆ ಸಂಬಂಧಪಟ್ಟ ತೊಂದರೆಗಳು, ಹೊಟ್ಟೆಯಲ್ಲಿನ ಕ್ರಿಮಿಗೆ ಸಂಬಂಧಪಟ್ಟ ಸಮಸ್ಯೆಗಳಲ್ಲಿ ಸಹಾಯವಾಗುತ್ತದೆ. ಕರ್ಬೂಜದ ಹಣ್ಣಿನಲ್ಲಿ ತಾಮ್ರ, ಫಾಸ್ಪರಸ್, ಕಬ್ಬಿಣ, ವಿಟಮಿನ್ ಎ, ಬಿ1, ಬಿ2 ಮತ್ತು ವಿಟಮಿನ್ ಸಿ ಗಳು ಹೇರಳವಾಗಿವೆ. ಇದರಿಂದಾಗಿ ಬೇಸಿಗೆಯಲ್ಲಿ ದೌರ್ಬಲ್ಯದ ಸಮಸ್ಯೆಯನ್ನು ಅನುಭವಿಸುವವರು ಇದನ್ನು ಹೆಚ್ಚಾಗಿ ಉಪಯೋಗಿಸಬಹುದು. ಕರ್ಬೂಜದ ಇನ್ನೊಂದು ವಿಶೇಷ ಗುಣವೆಂದರೆ ಇದು ಕೇವಲ  ಮೂತ್ರಮಾರ್ಗ ಮತ್ತು ಹೊಟ್ಟೆಯನ್ನು ಶುದ್ದ ಮಾಡುವುದಷ್ಟೇ ಅಲ್ಲ ರಕ್ತ ಶುದ್ದಿಯನ್ನೂ ಮಾಡುತ್ತದೆ; ತನ್ಮೂಲಕ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

    ಚರ್ಮದ ತೇವಾಂಶವನ್ನು ಹೆಚ್ಚಿಸಿ ಸುಕ್ಕು ಗಟ್ಟುವುದು, ಬಿಸಿಲಿಗೆ ಹೋದಾಗ ಚರ್ಮ ಕಪ್ಪಾಗುವುದು ಮತ್ತು ಮುಖದ ಮೇಲಿನ ಬಂಗಿನಂತಹ ತೊಂದರೆಗಳನ್ನು ನಿವಾರಿಸುತ್ತದೆ. ಸ್ವಲ್ಪವೂ ಹುಳಿಯಿಲ್ಲದಿರುವ ಖರ್ಬೂಜದ ಹಣ್ಣಿನ ಮಿಲ್ಕ್ ಶೇಕ್ ಮಾಡಿ ಸೇವಿಸಬಹುದು. ಅದಕ್ಕೆ ಒಂದು ಲೋಟ ಹಾಲು, ಒಂದು ಲೋಟ ಕರ್ಬೂಜದ ತಿರುಳು ಮೂರ್ನಾಲ್ಕು ಮೆತ್ತನೆಯ, ಒಳ್ಳೆಯ ಗುಣಮಟ್ಟದ ಖರ್ಜೂರವನ್ನು ಹಾಕಿ ಮಿಕ್ಸಿ ಮಾಡಿ ಸೇವಿಸುವುದರಿಂದ ಬೇಸಿಗೆಯಲ್ಲಿ ದೇಹದ ಉಷ್ಣತೆ ಕಡಿಮೆಯಾಗುವುದಲ್ಲದೇ ದೈಹಿಕ ಶಕ್ತಿ ಕೂಡ ಹೆಚ್ಚುತ್ತದೆ. ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ಕರ್ಬೂಜದ ಹಣ್ಣನ್ನು ನಿತ್ಯವೂ ಸೇವಿಸಬಹುದು. ಆದರೆ ಇದನ್ನು ಸೇವಿಸುವಾಗ ಕಾರ್ಬೋಹೈಡ್ರೆಟ್ (ಅಕ್ಕಿ, ಗೋಧಿ, ರಾಗಿ, ಜೋಳ) ಸೇವನೆಯನ್ನು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು.
    ಈ ಬೇಸಿಗೆಯಲ್ಲಿ ಕರ್ಬೂಜವನ್ನು ಸರಿಯಾಗಿ ಬಳಸಿಕೊಂಡು ಉಷ್ಣತೆಯ ವಿರುದ್ಧ ಹೋರಾಡೋಣ ಮತ್ತು ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳೋಣ.

    (ಪ್ರತಿಕ್ರಿಯಿಸಿ: [email protected])

    ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts